ಬೆಳಗಾವಿ
ಶೋಷಣೆಗೆ ಒಳಗಾಗಿದ್ದ ಹಡಪದ ಸಮಾಜದ ಅಪ್ಪಣ್ಣನವರನ್ನೇ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡು, ತುಳಿತಕ್ಕೊಳಗಾದ ಸಮಾಜವನ್ನು ಎತ್ತುವ ಮೂಲಕ 12ನೇ ಶತಮಾನದಲ್ಲಿ ಬಸವಣ್ಣನವರು ಕ್ರಾಂತಿಯನ್ನೇ ಮಾಡಿದರು. ಇಂದಿನ ಸಂಘಟನೆಗಳಲ್ಲಿ ಒಬ್ಬ ಕಾರ್ಯದರ್ಶಿ ಸ್ಥಾನ ಎಷ್ಟು ಮಹತ್ವದ್ದು ಎನ್ನುವುದಕ್ಕೆ ಹಡಪದ ಅಪ್ಪಣ್ಣನವರೇ ನಿದರ್ಶನ ಎಂದು ಸಾಹಿತಿ ಮತ್ತು ಶಿಕ್ಷಕರಾದ ಡಾ. ಗಜಾನನ ಸೊಗಲನ್ನವರ ಹೇಳಿದರು.
ಅವರು ರವಿವಾರ ಲಿಂಗಾಯತ ಸಂಘಟನೆ ವತಿಯಿಂದ ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಹಮ್ಮಿಕೊಂಡ ‘ಹಡಪದ ಅಪ್ಪಣ್ಣನವರ ಜಯಂತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವ ಸಮಾಜದ ವ್ಯಕ್ತಿಯ ಮುಖ ಮುಂಜಾನೆ ನೋಡಿದರೆ ಅಪಶಕುನವೆಂದು ಅಂದಿನ ಜಡ ಸಮಾಜ ಭಾವಿಸಿತ್ತೋ, ಅಂತಹ ಸಮಾಜದ ಅಪ್ಪಣ್ಣನವರು ಕಾಯಕ ನಿಷ್ಠೆಯ ಮೂಲಕ ಅಚ್ಚುಕಟ್ಟಾಗಿ ಕಾರ್ಯದರ್ಶಿ ಸ್ಥಾನವನ್ನು ನಿರ್ವಹಿಸಿ, ತಾವು ಅಪಶಕುನವಲ್ಲ, ಶುಭಶಕುನವೆಂದು ಸಾಧಿಸಿ ತೋರಿಸಿದರು. ಜಗತ್ತಿಗೆ ಶರಣರ ವಚನ ಸಾಹಿತ್ಯ ಪಸರಿಸುವಲ್ಲಿ ಹಡಪದ ಅಪ್ಪಣ್ಣನವರ ಸೇವೆಯು ಅನನ್ಯವಾಗಿದೆ.
ಜಾಡ್ಯ-ಮೌಡ್ಯ ಬಿಟ್ಟು, ನಡೆ-ನುಡಿ, ಕ್ರಿಯೆ-ಆಚಾರ-ವಿಚಾರಗಳನ್ನು ಶುದ್ಧವಾಗಿ ಇರಿಸಿಕೊಂಡು ಜೀವನ ಸಾಗಿಸಿದ ಅಪ್ಪಣ್ಣನವರ ಕ್ರಿಯಾಶೀಲ ಮನೋಭಾವ ನಿಜಕ್ಕೂ ಮಾದರಿಯಾಗಿದೆ. ಇಂತಹ ನಿಲುವನ್ನು ಅವರ ವಚನಗಳಲ್ಲಿ ನಾವು ಕಾಣಬಹುದು ಎಂದು ಅಪ್ಪಣ್ಣನವರ ಹಲವಾರು ವಚನಗಳನ್ನು ವಿಶ್ಲೇಷಿಸಿದರು.
ಇದೇ ಸಂದರ್ಭದಲ್ಲಿ ಅಕ್ಕಮಹಾದೇವಿ ತೆಗ್ಗಿ, ಜಾಹ್ನವಿ ಘೋಪ೯ಡೆ, ಜಯಶ್ರೀ ಚಾವಲಗಿ, ಆನಂದ ಕರಕಿ, ವಿ.ಕೆ. ಪಾಟೀಲ, ಮುಂತಾದವರು ಅಪ್ಪಣ್ಣನವರ ವಚನಗಳನ್ನು ವಿಶ್ಲೇಷಣೆ ಮಾಡಿದರು.

ಶರಣೆ ಮಂಗಳಾ ಕಾಗತಿಕರ ದಾಸೋಹ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆನಂದ ಕರ್ಕಿ, ಸದಾಶಿವ ದೇವರಮನಿ, ಸುವಣಾ೯ ಗುಡಸ, ಸುಜಾತಾ ಮತ್ತಿಕಟ್ಟಿ, ಕಮಲಾ ಗಣಾಚಾರಿ, ಶೋಭಾ ದೇಯನ್ನವರ, ನಂದಾ ಬಗಲಿ, ವಿದ್ಯಾ ಕರಕಿ, ಶಾಂತಾ ಕಂಬಿ, ಮಹಾದೇವಿ ಘಾಟೆ, ಬಸವರಾಜ ಕರಡಿಮಠ, ಮಹಾದೇವ ಕೆಂಪಿಗೌಡರ, ಸುನೀಲ ಸಾಣಿಕೊಪ್ಪ, ಶಿವಾನಂದ ತಲ್ಲೂರ, ಬಸವರಾಜ ಬಿಜ್ಜರಗಿ, ಶೇಖರ ವಾಲಿ ಇಟಗಿ, ಮ.ಬಿ. ಕಾಡೆ, ಬಸವರಾಜ ಮತ್ತಿಕಟ್ಟಿ, ಶಿವಾನಂದ ಲಾಳಸಂಗಿ, ಸುರೇಶ ನರಗುಂದ, ಸುವರ್ಣ ತಿಗಡಿ, ಬಾಬು ತಿಗಡಿ, ಮಹಾಂತೇಶ ಮೆಣಸಿನಕಾಯಿ, ಗುರುಸಿದ್ದಪ್ಪ ರೇವಣ್ಣವರ, ಬಸವರಾಜ ಮತ್ತಿಕೊಪ್ಪ, ಶಿವಾನಂದ ನಾಯಕ, ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.
ಆರಂಭದಲ್ಲಿ ಮಹಾದೇವಿ ಅರಳಿ ವಚನ ಪ್ರಾರ್ಥನೆ ನಡೆಸಿಕೊಟ್ಟರು. ಸಂಗಮೇಶ ಅರಳಿ ಸ್ವಾಗತಿಸಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.