ಕಾಯಕಯೋಗಿ ಡಾ. ಶಿವಬಸವ ಸ್ವಾಮೀಜಿಯ ಜಯಂತಿ ಮಹೋತ್ಸವ

ಬೆಳಗಾವಿ :

ಕ್ರೋಧ, ದ್ವೇಷ ಮತ್ತು ನಕಾರಾತ್ಮಕ ವಿಚಾರಗಳಿಂದ ದೂರವಿದ್ದು ಮನಸ್ಸಿಗೆ ಉತ್ತಮ ಆಹಾರ ನೀಡಿದಾಗ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ದೆಹಲಿಯ ಡಾ. ಮೋಹಿತ ದಯಾಳ ಗುಪ್ತಾ ಹೇಳಿದರು.

ಶಿವಬಸವ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ, ಶನಿವಾರ ಕಾಯಕಯೋಗಿ ಮಹಾಪ್ರಸಾದಿ ಪೂಜ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿಮಠದಿಂದ ನೀಡಲಾದ “ಆತ್ಮಸ್ವಾಸ್ಥ್ಯಶ್ರೀ ಪ್ರಶಸ್ತಿ” ಸ್ವೀಕರಿಸಿ ಮಾತನಾಡಿದರು.

ಮಾನಸಿಕ, ದೈಹಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಸ್ಥಿತಿ ಸರಿಯಿದ್ದಾಗ ಮಾತ್ರ ಉತ್ತಮ ಆರೋಗ್ಯ, ಪ್ರೇಮ ಸ್ನೇಹ ಕಲ್ಯಾಣಮಯ ಭಾವನೆ ಬರಲು ಸಾಧ್ಯ. ಅದರಿಂದ ಮಾತ್ರ ಉತ್ತಮ ಜೀವನ ಸಾಧ್ಯ.

ದಿನ ಬೆಳಗಾದರೆ ಮೊಬೈಲನಿಂದ ದಿನ ಆರಂಭಿಸುವ ಬದಲು ತಪಸ್ಸಿನಿಂದ ಪ್ರಾರಂಭಿಸೋಣ. ಅಂದರೆ ಧ್ಯಾನದಿಂದ ಪ್ರಾರಂಭಿಸೋಣ. ಉತ್ತಮವಾದ ಜೀವನಕ್ಕೆ ಉತ್ತಮವಾದ ಸಹಯೋಗ ಇರಬೇಕು, ಉತ್ತಮವಾದ ಸಹಯೋಗದಿಂದ ಉತ್ತಮವಾದ ಸಂಸ್ಕಾರ ಲಭ್ಯವಾಗುತ್ತದೆ. ಉತ್ತಮವಾದ ಸಂಸ್ಕಾರದಿಂದ ಉತ್ತಮವಾದ ಪರಿಸರ ನಿರ್ಮಾಣವಾಗುತ್ತದೆ. ಆತ್ಮ ಪರಿಶುದ್ಧವಾಗುತ್ತದೆ ಆಗ ನಮ್ಮ ಜೀವನವು ಕೂಡ ಉತ್ತಮವಾಗುತ್ತದೆ.

ಇನ್ನೊಬ್ಬರನ್ನು ಪ್ರೇಮದಿಂದ ಕಾಣುವಂತಾಗಬೇಕು. ದ್ವೇಷರಹಿತವಾದ ಭಾವನೆಯನ್ನು ಹೊಂದಿರಬೇಕು. ಅಧ್ಯಾತ್ಮದ ದಾರಿಯನ್ನು ನಾವು ಆಯ್ದುಕೊಳ್ಳಬೇಕು ಆಗ ದೇವರನ್ನು ಕಾಣಲು ಸಾಧ್ಯ. ಅಂತಹ ಜೀವನವನ್ನು ರೂಪಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು ಎಂದವರು ಹೇಳಿದರು.

ಡೊಳ್ಳು ಬಾರಿಸುವ ಮೂಲಕ ಬೆಳಗಾವಿ ಸಂಸದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,ಕೆಎಲ್ ಇ ಸೊಸೈಟಿ ಪ್ರಾರಂಭವಾಗಿದ್ದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿತು.

ಕೆಎಲ್ಇ ಶಿಕ್ಷಣ ನೀಡಿದರೆ, ಶಿವಬಸವ ಶ್ರೀಗಳು ಆಶ್ರಯ ಹಾಗೂ ಅನ್ನ ನೀಡುವ ಕೆಲಸ ಮಾಡಿದ್ರು. ಬಂಗಲೆ ಬಾಡಿಗೆ ಪಡೆದು ಅನ್ನದಾಸೋಹ ಆರಂಭಿಸಿದರು‌. ಭಕ್ತಾದಿಗಳ ಕಡೆ ಜೋಳಿಗೆ ಹಾಕಿಕೊಂಡು ಹೋಗಿ ದಾಸೋಹ ಪಡೆದರು.

ಪ್ರಸಾದ ನಿಲಯದಲ್ಲಿ ಜಾತ್ಯಾತಿವಾಗಿ ಎಲ್ಲರೂ ಇದ್ದರು‌. ದೇಶದ ಸ್ವಾತಂತ್ರ‍್ಯ ಹೋರಾಟದ ಸಂದರ್ಭದಲ್ಲಿ. ಮೊದಲಿಗೆ ಗಾಂಧಿಯವರು ಬಂದಾಗ ಶಿವಬಸವ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದರು. ಆಗ ಬ್ರಿಟಿಷರ ಕಣ್ಣು ಶ್ರೀಗಳ ಮೇಲೆ ಬಿತ್ತು, ಆದರೂ ಶ್ರೀಗಳು ಹೋರಾಟ ನಿಲ್ಲಿಸಲಿಲ್ಲ‌. ಹಿಂದಿನ ಶ್ರೀಗಳು ಮತ್ತು ಇಂದಿನ ಶ್ರೀಗಳು ನೇತೃತ್ವದಲ್ಲಿ ನಾಗನೂರು ಮಠ ಜಾಗೃತಿ ಸ್ಥಳವಾಗಿದೆ‌ ಎಂದವರು ಹೇಳಿದರು.ಕಾರ್ಯಕ್ರಮದ ಸಾನಿಧ್ಯವನ್ನು ಬೆಳಗಾವಿ ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ಮಂಡ್ಯ ಜಿಲ್ಲೆ ಶಿವಬಸವ ಮಹಾಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಬಸವಕಲ್ಯಾಣದ ಬಸವ ದೇವರು, ಸಮ್ಮುಖವನ್ನು ಜಾಗೀರಜಾಡಲದಿನ್ನಿಯ ವೀರಭದ್ರ ಸ್ವಾಮಿಗಳು, ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮೀಜಿಯವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬೆಳ್ಳೇರಿಯ ಶ್ರೀ. ಬಸವಾನಂದ ಮಹಾಸ್ವಾಮಿಗಳಿಗೆ ಶ್ರೀಮಠದಿಂದ ಗೌರವ ಸನ್ಮಾನವನ್ನು ನೀಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತೆಳಗಿನಹಟ್ಟಿಯ ಸನ್ನಿಂಗಪ್ಪಾ  ಮುಶೆನ್ನಗೋಳ ಮತ್ತು ಬೆಳಗಾವಿಯ ಪುಂಡಲೀಕ  ವಾಷ್ಠರ(ಶಾಸ್ತ್ರಿ) ಅವರನ್ನು  ಶ್ರೀ ಮಠದ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.

ಶ್ರೀಮಠದಿಂದ ಕೊಡ ಮಾಡಲಾಗುವ “ಕನ್ನಡ ನುಡಿಶ್ರೀ” ಪ್ರಶಸ್ತಿಯನ್ನು ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಅಧ್ಯಕ್ಷ ಶಂಕರ ಹೂಗಾರ ಮತ್ತು ಗೋವಾದ ಕನ್ನಡ ಹೋರಾಟಗಾರ ಸಿದ್ದಣ್ಣ ಮೇಟಿ ಅವರುಗಳಿಗೆ ಪ್ರಶಸ್ತಿಪ್ರದಾನ ಮಾಡಿ ಗೌರವಿಸಲಾಯಿತು.

ಶ್ರೀಮಠದಿಂದ ಕೊಡ ಮಾಡುವ ಅತ್ಯುತ್ತಮ ಸಾಧಕ ವಿದ್ಯಾರ್ಥಿನಿ ಬಾಲಯೋಗಿನಿ ಪ್ರಶಸ್ತಿಯನ್ನು ಈ ಬಾರಿ ಬಾಳೆಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಪ್ರಾಜೆಕ್ತಾ ದಳವಾಯಿ ಇವರಿಗೆ ನೀಡಿ ಸನ್ಮಾನಿಸಲಾಯಿತು.

ಡಾ. ಎಚ್. ಬಿ. ರಾಜಶೇಖರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಪಾಟೀಲ ಮತ್ತು ಎ.ಕೆ. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಅನಿಲ ಬೆನಕೆ , ಸಂಜಯ ಪಾಟೀಲ, ಎಂ.ಬಿ. ಬನ್ನೂರ, ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ, ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಚನ ಪಠಣ:

ನಾಗನೂರು ರುದ್ರಾಕ್ಷಿಮಠದ ಪ್ರಭುದೇವ ಸಭಾಗೃಹದಲ್ಲಿ ಶನಿವಾರ ಬೆಳಿಗ್ಗೆ  ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ವಚನ ಪಠಣ ಕಾರ್ಯಕ್ರಮ ಜರುಗಿತು.

ನವ್ಹೆಂಬರ 29 ರಿಂದ ಡಿಸೆಂಬರ್ 8 ರ ವರೆಗೆ ಜರುಗುತ್ತಿರುವ ಕಾಯಕಯೋಗಿ, ಮಹಾಪ್ರಸಾದಿ ಪೂಜ್ಯ ಶಿವಬಸವ ಮಹಾಸ್ವಾಮಿಗಳವರ 136ನೇ ಜಯಂತಿ ಮಹೋತ್ಸವದ ಅಂಗವಾಗಿ ಪ್ರವಚನ, ಸಾಧಕರಿಗೆ ಪ್ರಶಸ್ತಿ, ಉಪನ್ಯಾಸ ಹಾಗೂ ಪೂಜ್ಯರ ಆಶಿರ್ವಚನ ಕಾರ್ಯಕ್ರಮಗಳು ಜರುಗುತ್ತಲಿವೆ.

ವಚನ ಪಠಣ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸಿದ್ದರು. ಐದು ದಿನಗಳ ಕಾಲ ಪ್ರವಚನ ಪ್ರಸ್ತುತಪಡಿಸಿದ ಬಸವನಾಂದ ಮಹಾಸ್ವಾಮಿಗಳು ಹಾಗೂ ವಿವಿಧ ಮಠಗಳ  ಮಠಾಧೀಶರು, ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬಸವ ಭಕ್ತರು ಮತ್ತು ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳು ವಚನ ಪಠಣದಲ್ಲಿ ಭಾಗವಹಿಸಿದ್ದರು.

ಸಂಚಾರಿ ಗುರುಬಸವ ಬಳಗದ ಮಹಾಂತೇಶ ತೋರಣಗಟ್ಟಿ ಹಾಗೂ ರಾಜಶೇಖರ ಪಾಟೀಲ ವಚನ ಪಠಣ ಬೋಧಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *