ಗುಳೇದಗುಡ್ಡ:
ಬಸವ ಕೇಂದ್ರದ ವತಿಯಿಂದ ಶನಿವಾರ, ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶರಣ ಮಲ್ಲಪ್ಪ ತಮ್ಮಣ್ಣೆಪ್ಪ ಅರುಟಗಿ ಅವರ ಮನೆಯಲ್ಲಿ ಜರುಗಿತು. ಹಾಗೂ ಇದೇ ಸಂದರ್ಭದಲ್ಲಿ ವೀರಗಣಾಚಾರಿ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಆಚರಿಸಲಾಯಿತು.
ಅಂದು ವಚನ ವಿಶ್ಲೇಷಣೆಗಾಗಿ ಆಯ್ದುಕೊಂಡ ವಚನ ಹೀಗಿದೆ –
ಮಾಡುವ ಭಕ್ತಂಗೆ ಒಲಿದ ದೇವಂಗೆ
ಭೇದವುಂಟೆ ಅಯ್ಯಾ?
ಕಾಯದೊಳಗೆ ಕಾಯವಾಗಿಪ್ಪ
ಪ್ರಾಣದೊಳಗೆ ಪ್ರಾಣವಾಗಿಪ್ಪ
ಅರಿದಿಹೆನೆಂದಡೆ ತಾನೆಯಾಗಿಪ್ಪ
ಅರಸಿ ಬಯಸಿದಡೆ ನಡೆದುಬಹನು
ಕಲಿದೇವರ ದೇವನ ಬರವನೀಗಳೆ
ತೋರಿ ಕೊಟ್ಟಹೆನು ಕೇಳಾ
ಸಂಗನಬಸವಣ್ಣ
ಪ್ರಾರಂಭದಲ್ಲಿ ಮಡಿವಾಳ ಮಾಚಿದೇವರ ಸಂಕ್ಷಿಪ್ತ ಚರಿತ್ರೆಯನ್ನು ಪ್ರೊ. ಶ್ರೀಕಾಂತ ಗಡೇದ ಅವರು ಪರಿಚಯಿಸುತ್ತ, ಈಗಿನ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಮಾಚಿದೇವರು ಜನಿಸಿದರು. ಅವರು ಕಲಿದೇವರದೇವ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ.
ಕಲ್ಯಾಣದ ಕ್ರಾಂತಿಯ ನಂತರ ವಚನ ಕಟ್ಟುಗಳನ್ನು ಸಂರಕ್ಷಿಸಿದ ಖ್ಯಾತಿ ಇವರದು. ಇವರ ಖ್ಯಾತಿಯನ್ನು ನೋಡುವುದಾದರೆ ಐತಿಹಾಸಿಕ ವ್ಯಕ್ತಿಯಾದ ಇವರನ್ನು ಪೌರಾಣಿಕ ವ್ಯಕ್ತಿಯನ್ನಾಗಿ ಪುರಾಣಗಳನ್ನು ಬರೆದಿದ್ದುದೇ ಸಾಕ್ಷಿ. ಬಟ್ಟೆ ತೊಳೆಯುವ ಕಾಯಕವನ್ನು ಆಯ್ದುಕೊಂಡಿದ್ದ ಇವರು, ವೀರಘಂಟೆ ಮಾಚಿದೇವನೆಂದೂ, ವೀರಗಣಾಚಾರಿಯೆಂದೂ, ವೀರಭದ್ರನ ಅವತಾರಿಯೆಂದೂ ಚಿತ್ರಿಸಲ್ಪಟ್ಟಿದ್ದಾನೆ.

ನೇರ, ನಿಷ್ಠುರ ಶೈಲಿಯ ಇವರ ವಚನಗಳು ತುಂಬ ತಾತ್ವಿಕವಾಗಿವೆ. ಅರಸುತನ ಮೇಲಲ್ಲ ಅಗಸುತನ ಕೀಳಲ್ಲ ಎಂಬ ಅವರ ಉಕ್ತಿಗಳು ಅವರ ವ್ಯಕ್ತಿತ್ವವನ್ನು ನಿರೂಪಿಸುತ್ತವೆ. ಮಾಚಿದೇವರು ಕೇವಲ ವಚನಗಳನ್ನು ರಚಿಸಲಿಲ್ಲ. ಅವುಗಳನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಒದಗಿಸಿ ಕೊಡುವ ಕೆಲಸವನ್ನು ಮಾಡಿದರು ಎಂದು ಹೇಳಿದರು.
ನಂತರ ಪ್ರೊ. ಸುರೇಶ ರಾಜನಾಳ ಅವರು ವಚನದ ನಿರ್ವಚಗೈಯುತ್ತ, ನಮ್ಮ ಭಕ್ತಿಗೆ ದೇವನು ಒಲಿಯುತ್ತಾನೆ. ದೇವನನ್ನು ಅರಿತಡೆ ತಾನೇ ದೇವರಾಗುತ್ತಾನೆ. ಸಕ್ಕರೆ ಹಾಗೂ ನೀರನ್ನು ಬೆರೆಸಿದರೆ ಅವೆರಡೂ ಒಂದೇ ಆಗುವಂತೆ ಭಕ್ತ-ದೇವರು ಒಂದೇ ಆಗುತ್ತಾರೆ. ಮಾಡುವ ಭಕ್ತ ಒಲಿದ ದೇವರುಗಳು ಮೇಲ್ನೋಟಕ್ಕೆ ಭಿನ್ನವಾಗಿ ಕಂಡರೂ ಮೂಲತಃ ಅವೆರಡೂ ಒಂದೇ ಆಗಿವೆ ಎಂದು ಹೇಳಿದರು.
ಡಾ. ಗಿರೀಶ ನೀಲಕಂಠಮಠ ಅವರು ಈ ವಚನದ ಆಳಕ್ಕಿಳಿದು ಚರ್ಚಿಸುತ್ತ, ಮನುಷ್ಯ ಕ್ರಮಿಸುತ್ತ ಹೋದಂತೆ ತಾನೇ ದೇವನಾಗುತ್ತಾನೆ. ಬಹಳ ಪೂರ್ವಕಾಲದಿಂದಲೂ ಜೀವ, ಈಶ್ವರ, ಪ್ರಕೃತಿ ಕುರಿತಂತೆ ಚರ್ಚೆ ನಡೆಯುತ್ತಲೇ ಬಂದಿದೆ. ವಿಚಾರಿಸಿ ನೋಡಿದರೆ ಇವೆಲ್ಲ ಒಂದೇ ಆಗಿವೆ. ಮುಕ್ತಿಯನ್ನು ನಾಲ್ಕು ತೆರನಾಗಿ ಗುರುತಿಸುತ್ತ ಬಂದ ನಮ್ಮ ಹಿಂದಿನ ಹಿರಿಯರನ್ನು ನಮ್ಮ ಶರಣರು ಒಪ್ಪಲಿಲ್ಲ. ಅವರು ಸಮರಸ, ಐಕ್ಯ ಸ್ಥಿತಿಯನ್ನು ಒಪ್ಪಿದರು.

ಜೀವಿಗೆ ಮಾಯದ ಪೊರೆ ಆವರಿಸಿದಾಗ ಅದು ಸಂಸಾರವೆನಿಸುತ್ತದೆ. ಇಲ್ಲಿ ಭಕ್ತನೆ ದೇವನಾಗಿದ್ದಾನೆ. ಕೊಡುವ-ತೆಗೆದುಕೊಳ್ಳುವ ಖರ್ಚಿನ ದೇವರನ್ನು ಶರಣರು ಒಪ್ಪಲಿಲ್ಲ. ಲಿಂಗತತ್ವವನ್ನು ಅಳವಡಿಸಿಕೊಂಡರೆ ತಾನೇ ದೇವನಾಗುತ್ತಾನೆ. ಸಾಗರದಲ್ಲಿನ ಮೀನಿನ ಮರಿ ಸಾಗರವೆಂದರೇನು ಎಂದು ಹುಡುಕಲು ಹೋರಟಾಗ, ಹಿರಿಯ ಮೀನು ಕಿರಿಯ ಮೀನಿಗೆ ʻನೀನೀಗ ಯಾವುದರಲ್ಲಿದ್ದೆಯೋ, ಯಾವುದು ನಿನಗೆ ಆಶ್ರಯ ಕೊಟ್ಟಿದೆಯೋ ಅದೇ ಸಾಗರʼ ಎಂದು ತಿಳಿಸಿದ ದೃಷ್ಟಾಂತವನ್ನು ಬಳಸಿಕೊಂಡು, ನಾವಾದರೂ ನಮಗೆ ಹತ್ತಿರುವ ಕಳಂಕವನ್ನು ತೆಗೆದು ಹಾಕಿದರೆ ತಾನೇ ಶುದ್ಧ ಚೈತನ್ಯನಾಗುತ್ತಾನೆ. ಇದೇ ಲಿಂಗಾಂಗದ ಸಾಮರಸ್ಯ. ಇದೇ ಲಿಂಗಾಂಗ ಸಾಮರಸ್ಯ ಎಂದು ಮುಂತಾಗಿ ವಿವರಿಸಿದರು.
ನಂತರದಲ್ಲಿ ಅನುಭಾವಿಗಳಾದ ಶರಣ ಸಿದ್ಧಲಿಂಗಪ್ಪ ಬರಗುಂಡಿಯವರು ಮಾತನಾಡುತ್ತ, ಇಲ್ಲಿಯ ವಚನವನ್ನು ಎರಡು ಕೋನಗಳಿಂದ ಅರ್ಥೈಸಲು ಸಾಧ್ಯವಿದೆ. ಇಲ್ಲಿಯವರೆಗೂ ಮಾತನಾಡಿದ ಅನುಭಾವಿಗಳು ವಚನದ ತಾತ್ವಿಕ ವಿಚಾರವನ್ನು ಚಿಂತಿಸಿದರೆ, ಶೂನ್ಯ ಸಂಪಾದನೆಕಾರರ ಪ್ರಕಾರ, ಅಲ್ಲಮಪ್ರಭುದೇವರು ಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸುವ ವಿವರಣೆ ಇದೆ. ಸಕಲ ಶರಣರು ಭಕ್ತರಾದರೆ ಮಹಾಜಂಗಮ ಪ್ರಭುದೇವರು ಸಾಕ್ಷಾತ್ ಲಿಂಗಸ್ವರೂಪರೇ ಆಗಿದ್ದಾರೆ. ಅವರು ಕಾಯದೊಳಗೆ ಕಾಯವಾಗಿ ಪ್ರಾಣದೊಳಗೆ ಪ್ರಾಣವಾಗಿದ್ದಾರೆ. ಸಾಸಿವೆಯ ಮೇಲೆ ಸಾಗರ ಹರಿದು ಬರುವಂತೆ ಶರಣ ಗಣದ ಅಪೇಕ್ಷೆ ಮೇರೆಗೆ ಕಲ್ಯಾಣಕ್ಕೆ ಬರುತ್ತಾರೆ ಇದರಲ್ಲಿ ಏನೂ ವ್ಯತ್ಯಾಸವಿಲ್ಲವೆಂದು ಈ ವಚನ ತಿಳಿಸುತ್ತದೆ ಎಂದು ಸಮಾರೋಪಗೊಳಿಸಿದರು.

ಶರಣ ರಾಚಣ್ಣ ಕೆರೂರ ಅವರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ, ಶರಣರ ವಚನ ಮಂಗಲದೊಂದಿಗೆ ಮುಕ್ತಾಯವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.
ಕಾರ್ಯಕ್ರಮದಲ್ಲಿ ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ಬಸಯ್ಯ ಕಂಬಾಳಿಮಠ, ಕುಮಾರ ಅರುಟಗಿ, ರಾಚಣ್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಶ್ರೀದೇವಿ ಶೇಖಾ, ಬಸವರಾಜ ಖಂಡಿ, ಬಸವರಾಜ ಕಲ್ಯಾಣಿ, ಈರಣ್ಣ ಶಿವಪ್ಪ ಚಾರಖಾನಿ, ಗಣೇಶ ಅರುಟಗಿ, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು, ಮೊದಲಾದವರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ನೀಲಕಂಠಮಠ, ಪ್ರೊ. ಚಂದ್ರಶೇಖರ ಹೆಗಡೆ, ಬಸಯ್ಯ ಭಂಡಾರಿ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
