ಕೋಮು ಸೌಹಾರ್ದತೆ ಸಾರುವ ಶಿರೋಳದ ರೊಟ್ಟಿ ಜಾತ್ರೆ: ತೋಂಟದ ಸಿದ್ದರಾಮ ಶ್ರೀ

‘ಈ ಜಾತ್ರೆ ಶುರು ಮಾಡಿದವರು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು. ಅವರ ಶಾಖಾ ಮಠಗಳಲ್ಲಿ ಭಾವೈಕ್ಯತೆ ಸಾರುವ ಸಲುವಾಗಿ ಇಂತಹ ಜಾತ್ರೆಗಳನ್ನು ಹುಟ್ಟು ಹಾಕಿದರು.’

ಶಿರೋಳ

“ಜಾತಿ, ಮತ, ಪಂಥ ಬೇಧವನ್ನು ಹೊಡೆದೋಡಿಸಿ, ಕೋಮು ಸೌಹಾರ್ದತೆ ಹಾಗೂ ಭಾವೈಕ್ಯತೆ ಸಾರುವ ಸಲುವಾಗಿ ಶಿರೋಳ ಶ್ರೀ ತೋಂಟದಾರ್ಯ ಮಠದ “ರೊಟ್ಟಿ ಜಾತ್ರೆ” ಪ್ರತಿ ವರ್ಷ ಸಾಂಗವಾಗಿ ನಡೆದುಕೊಂಡು ಬರುತ್ತಿದೆ ಎಂದು ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಶಿರೋಳ ತೋಂಟದಾರ್ಯ ಮಠದಲ್ಲಿ ಭಾನುವಾರ ರಾತ್ರಿ ನಡೆದ ಜಾತ್ರೆ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ರೊಟ್ಟಿಗಳು ಶಿರೋಳ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಎಲ್ಲ ಜಾತಿ ಜನಾಂಗದವರ ಮಹಿಳೆಯರಿಂದ ತಯಾರಾಗಿರುತ್ತವೆ ಹಾಗೂ ಈ ರೊಟ್ಟಿಗಳನ್ನು ಎಲ್ಲ ಜನಾಂಗದವರು ಒಂದೇ ಅವಧಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಊಟ ಮಾಡುತ್ತಾರೆ‌, ಇದರಿಂದ ನಮಗೆಲ್ಲಾ ಸಿಗುವ ಸಂದೇಶವೇನೆಂದರೆ ಜಾತಿ ಬೇಧಭಾವಿಲ್ಲದ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆಯನ್ನು ಇದು ಸಾರುತ್ತದೆ.

ಈ ಜಾತ್ರೆ ಸೃಷ್ಠಿ ಮಾಡಿದವರು ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು. ಅವರು ಮಠದಲ್ಲಿ ಎಲ್ಲ ಜಾತಿ-ಜನಾಂಗದವರಿಗೆ ಮುಕ್ತ ಅವಕಾಶವನ್ನು ನೀಡಿದರು. ಹಾಗೂ ಅವರ ಶಾಖಾ ಮಠಗಳಲ್ಲಿ ಭಾವೈಕ್ಯತೆ ಸಾರುವ ಸಲುವಾಗಿ ಇಂತಹ ಜಾತ್ರೆಗಳನ್ನು ಹುಟ್ಟು ಹಾಕಿದರು. ಶ್ರೀಗಳ ಇಂತಹ ಕಾರ್ಯಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಅವರಿಗೆ ರಾಷ್ಟ್ರೀಯ ಕೋಮು ಸೌಹಾರ್ದತೆ ಪ್ರಶಸ್ತಿ ನೀಡಿ ಗೌರವಿಸಿತು ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆದ ಜಾತ್ರೆಯು, ಶನಿವಾರದಂದು ಸಾಯಂಕಾಲ ಪೂಜ್ಯ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಮತ್ತು ಪೂಜ್ಯಶ್ರೀ ಶಾಂತಲಿಂಗ ಸ್ವಾಮಿಗಳವರ ಹಾಗೂ ಪೂಜ್ಯಶ್ರೀ ಪ್ರಭು ಮಹಾಂತಸ್ವಾಮಿಗಳವರ ಸಮ್ಮುಖತ್ವದಲ್ಲಿ ಶ್ರೀ ತೋಂಟದಾರ್ಯರ ರಥೋತ್ಸವ ಹಾಗೂ ಪುರಾಣ ಮಂಗಲೋತ್ಸವ ಕಾರ್ಯಕ್ರಮ ಜರುಗಿತು. ಮಾಜಿ ಸಚಿವ ಬಿ.ಆರ್. ಯಾವಗಲ್ಲ ಮುಖ್ಯಅತಿಥಿಗಳಾಗಿದ್ದರು. ಅತಿಥಿಗಳಾಗಿ ಎಸ್.ಕೆ. ಪಾಟೀಲ, ಬಿ.ಎನ್. ಪಾಟೀಲ, ಎಂ.ಎಫ್. ಆಡೀನ, ಬಸವರೆಡ್ಡಿ ಹಂಚಿನಾಳ, ಅನೀಲ ಧರೆಣ್ಣವರ ಮತ್ತು ಎಸ್.ಆರ್. ಪಾಟೀಲ ಭಾಗವಹಿಸಿದದ್ದರು. ಸಂಜಯ ಜಂಗಿಣ ಹಾಗೂ ಶೋಭಾ ಕುಬಕಡ್ಡಿ ಇವರನ್ನು ಸನ್ಮಾನಿಸಲಾಯಿತು.

ರವಿವಾರದಂದು ಲಿಂಗೈಕ್ಯ ಪೂಜ್ಯಶ್ರೀ ಗುರುಬಸವ ಮಹಾಸ್ವಾಮಿಗಳವರ ಜೀವನ ಚರಿತ್ರೆ ಕುರಿತಾದ :ಕನ್ನಡ ಜಂಗಮ” ಗ್ರಂಥ ಲೋಕಾರ್ಪಣೆ ಹಾಗೂ ತೋಂಟದಾರ್ಯ ವಿದ್ಯಾಪೀಠದ ಶಿರೋಳದ ಶ್ರೀ ಜಗದ್ಗುರು ತೊಂಟದಾರ್ಯ ಆಂಗ್ಲ ಮಾದ್ಯಮ ಶಾಲೆ ನೂತನ ಕಟ್ಟಡದ ಶಂಕು ಸ್ಥಾಪನೆ ಹಾಗೂ ಗುರುಬಸವ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ಉದ್ಘಾಟನಾ ಸಮಾರಂಭದ ನಾಮಫಲಕ ಅನಾವರಣ ಕಾರ್ಯಕ್ರಮ ಜರುಗಿತು. ಸಂಸದ ಪಿ.ಸಿ. ಗದ್ದಿಗೌಡ್ರ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ನರಗುಂದ ಶಾಸಕ ಸಿ.ಸಿ.ಪಾಟೀಲ, ವಿಜಯಪುರ ಶಾಸಕ ಬಸನಗೌಡಪಾಟೀಲ ಯತ್ನಾಳ ಹಾಗೂ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ, ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಭಾಗವಹಿಸಿದ್ದರು. ಪ್ರಕಾಶ ಗಿರಿಮಲ್ಲನವರ ಅವರ ‘ಕನ್ನಡ ಜಂಗಮ’ ಗ್ರಂಥ ಲೋಕಾರ್ಪಣೆಗೊಂಡಿತು. ಪ್ರಭಾವತಿ ಮಾಸ್ತಮರಡಿ, ಸಂತೋಷ ವಸ್ತ್ರದ, ಪ್ರಕಾಶ ಗಿರಿಮಲ್ಲನವರ, ಸಿದ್ದಲಿಂಗಯ್ಯ ಕಲ್ಲಾಪೂರಹಿರೇಮಠ ಮತ್ತು ವೀರಣ್ಣ ಮರೆಗುಂದಿ ಅವರನ್ನು ಸನ್ಮಾನಿಸಲಾಯಿತು.

ಸೋಮವಾರದಂದು ಬೆಳಿಗ್ಗೆ ನರಗುಂದ ತಾಲೂಕ ಘಟಕ, ಶಿರೋಳ ಗ್ರಾಮ ಘಟಕ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಹಾಗೂ ಶ್ರೀಗುರುಬಸವ ಜನಕಲ್ಯಾಣ ಸಂಸ್ಥೆ, ಶಿರೋಳ ಇವರ ಸಹಯೋಗದಲ್ಲಿ “ವಚನ ಓದುವ(ಅರ್ಥ ವಿವರಣೆ) ಸ್ಪರ್ಧೆ” ಜರುಗಿತು ಇದರಲ್ಲಿ ೭೦ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಪೂಜ್ಯಶ್ರೀ ಶಾಂತಲಿಂಗ ಸ್ವಾಮಿಗಳವರ ಸಾನಿಧ್ಯದಲ್ಲಿ ಜರುಗಿತು. ಸಾಯಂಕಾಲ ಸಕಲ ವಾದ್ಯ ವೈಭವಗಳೊಂದಿಗೆ ಲಘು ರಥೋತ್ಸವ ಜರುಗಿತು ಹಾಗೂ ಸಂಜೆ ಚೇತನ ಗೆಳೆಯರ ಬಳಗ ಶಿರೋಳ ಇವರು ಆಯೋಜಿಸಿದ ಭಕ್ತಿ, ಭಾವಗೀತೆಯುಳ್ಳ ರಸ ಮಂಜರಿ ಕಾರ್ಯಕ್ರಮವು ಹಾಗೂ ಸಂಮಾನ ಕಾರ್ಯಕ್ರಮ ಜರುಗಿತು.

ಮೂರು ದಿನಗಳ ಕಾರ್ಯಕ್ರಮಗಳು ಗದುಗಿನ ಪೂಜ್ಯ ಜಗದ್ಗುರು ಡಾ. ತೊಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸನ್ನಿಧಾನದಲ್ಲಿ ಹಾಗೂ ಶಿರೋಳ ತೋಂಟದಾರ್ಯಮಠದ ಪೂಜ್ಯಶ್ರೀ ಶಾಂತಲಿಂಗ ಸ್ವಾಮಿಗಳವರ ಸಮ್ಮುಖದಲ್ಲಿ ಹಾಗೂ ೨೦೨೫ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಧ್ಯಕ್ಷ ಶಿವಾನಂದ ಎಲಿಬಳ್ಳಿ, ಉಪಾಧ್ಯಕ್ಷ ಶಿವಾನಂದ ಶೀಪ್ರಿ, ಕಾರ್ಯದರ್ಶಿ ಬಸವರಾಜ ಕುರಿ ಹಾಗೂ ಸಹಕಾರ್ಯದರ್ಶಿ ಪರಶುರಾಮ ಮಡಿವಾಳರ ಹಾಗೂ ಎಲ್ಲ ಪದಾಧಿಖಾರಿಗಳ ಉಪಸ್ಥಿತಿಯಲ್ಲಿ ಜರುಗಿದವು.

ರೊಟ್ಟಿ ಜಾತ್ರೆಯ ಅಂಗವಾಗಿ ಕೃಷಿ ಪ್ರಾತ್ಯಕ್ಷಿಕೆ, ಜಾನುವಾರು ಪ್ರದರ್ಶನ, ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ, ಸಂಗ್ರಾಣಿಕಲ್ಲು ಸಿಡಿ ಹೊಡೆಯುವುದು ಮತ್ತು ಪುರುಷ, ಮಹಿಳೆಯರ ಕುಸ್ತಿ ಸ್ಪರ್ಧೆಗಳು ಜರುಗಿದವು.

ಮಠದ ಸಕಲ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಜನರು ಪಾಲ್ಗೊಂಡು ಜಾತ್ರಾ ಮಹೋತ್ಸವವನ್ವು ಅದ್ದೂರಿಯಾಗಿ ನೆರವೇರಿಸಿದರು.

Share This Article
Leave a comment

Leave a Reply

Your email address will not be published. Required fields are marked *