ಶರಣ ಪರಂಪರೆಯಿಂದ ಕಳಚಿಕೊಳ್ಳುತ್ತಿರುವ ಕೊಂಗಳ್ಳಿ ಬೆಟ್ಟ

ಮಳವಳ್ಳಿ

ದಕ್ಷಿಣ ಕರ್ನಾಟಕದ ತುದಿಯಲ್ಲಿರುವ ಶರಣ ಕ್ಷೇತ್ರವೆಂದರೆ ಮಹದೇಶ್ವರ ಬೆಟ್ಟ. ಮಹದೇಶ್ವರರು ಅಪ್ಪಟ್ಟ ಬಸವ ತತ್ವದ ಜಂಗಮರಾಗಿದ್ದರೂ ಅವರ ಹೆಸರಿನಲ್ಲಿರುವ ಈ ಕ್ಷೇತ್ರ ಇಂದು ಶರಣ ಪರಂಪರೆಯಿಂದ ಬಹು ದೂರ ಹೋಗಿ ವೈದಿಕತೆಯನ್ನು ಮೈಗೂಡಿಸಿಕೊಂಡಿದೆ.

ಇದೇ ಪ್ರದೇಶದಲ್ಲಿರುವ ಕೊಂಗಳ್ಳಿ ಬೆಟ್ಟವೂ ಕೂಡ ಅದೇ ಜಾಡಿನಲ್ಲಿ ಸಾಗಿರುವುದು ವಿಷಾದದ ಸಂಗತಿ. ಬಸವ ಅನುಯಾಯಿಗಳು ಈಗ ಎಚ್ಛೆತ್ತುಕೊಳ್ಳದಿದ್ದರೆ ಈ ಎರಡೂ ಕ್ಷೇತ್ರಗಳಲ್ಲಿ ಕೆಲವೇ ವರ್ಷಗಳಲ್ಲಿ ಶರಣ ಪರಂಪರೆಯ ಎಲ್ಲಾ ಕುರುಹುಗಳೂ ಮಾಯವಾಗುವ ಸಾಧ್ಯತೆಯಿದೆ.

ಕೊಂಗಳ್ಳಿ ಬೆಟ್ಟ ಚಾಮರಾಜನಗರದಿಂದ 37 ಕಿಮಿ ದೂರದಲ್ಲಿದೆ. ಆದರೆ ಇದು ಇರುವುದು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ. ಅದು ಮಹದೇಶ್ವರರ ಸಮಕಾಲೀನರಾಗಿದ್ದ ಮಲ್ಲಿಕಾರ್ಜುನ ಶಿವಯೋಗಿಗಳ ಕ್ಷೇತ್ರವಾಗಿತ್ತು. ಮಲ್ಲಿಕಾರ್ಜುನ ಶಿವಯೋಗಿಗಳು ಶಿವಯೋಗ ಸಾಧನೆ ಮಾಡಿದ್ದರು. ಮಹದೇಶ್ವರರಂತೆಯೇ ಕಾಡುಗಳಲ್ಲಿದ್ದ ಬುಡಕಟ್ಟು ಜನರಿಗೆ ಬಸವ ತತ್ವ ತಲುಪಿಸಲು ಶ್ರಮಿಸಿದರು. ಅವರು ಐಕ್ಯವಾಗಿದ್ದು ಇಲ್ಲಿಯೇ, ಅವರ ಹೆಸರಿನಲ್ಲಿ ಒಂದು ದೇವಸ್ಥಾನ ಕೂಡ ಇದೆ.

ಈ ದೇವಸ್ಥಾನ ಶಿಥಿಲವಾಗಿತ್ತು, ಕಳೆದ ಎರಡು ಮೂರು ವರ್ಷಗಳಿಂದ ಅದರ ಜೀರ್ಣೋದ್ದಾರ ಕೆಲಸ ನಡೆದಿದ್ದು, ಈಗ ಹೊಸ ಗೋಪುರ, ಕಳಸ ಬಂದಿದೆ. ಇದರ ಉದ್ಘಾಟನೆ ಇದೆ ತಿಂಗಳ 11ರಂದು ಸುಮಾರು 25,000 ಜನ ಸೇರುವ ಬ್ರಹತ್ ಕಾರ್ಯಕ್ರಮದಲ್ಲಿ ನಡೆಯಲಿದೆ.

ನಾವು ಮತ್ತು ಮೈಸೂರಿನ ಅಭಿಷೇಕ್ ಶರಣರು ನವೆಂಬರ್ 1ರಂದು ಇದನ್ನು ನೋಡಲು ಹೋಗಿದ್ದೆವು. ಅಲ್ಲಿ ಮಹದೇಶ್ವರ ಸ್ವಾಮಿಯವರ, ಮಲ್ಲಿಕಾರ್ಜುನ ಸ್ವಾಮಿಯವರ ಹೊಸ ಪ್ರತಿಮೆಗಳನ್ನು ಮಾಡಿದ್ದಾರೆ. ಆದರೆ ಅವುಗಳ ಮೇಲೆ ಇಷ್ಟಲಿಂಗವೇ ಕಾಣಿಸಲಿಲ್ಲ. ಇದು ಶರಣ ಪರಂಪರೆಗೆ ಅಪಚಾರವೆಂದು ತಕ್ಷಣ ಪ್ರತಿಭಟಿಸಿದೆವು.

ಅಲ್ಲಿ ದೇವಸ್ಥಾನ ಸಮಿತಿಯವರ ಜೊತೆ ಮಾತನಾಡಿದೆವು. ನಂತರ ಚಾಮರಾಜ ನಗರದ ವೀರಶೈವ ಮಹಾಸಭಾದ ಅಧ್ಯಕ್ಷ ನಂದೀಶ್ ಅವರ ಜೊತೆ ಮತ್ತು JLM ಅಧ್ಯಕ್ಷ ಕೆಂಪನಪುರ ಮಹದೇವಸ್ವಾಮಿ ಅವರ ಜೊತೆ ಕೂಡ ಮಾತನಾಡಿದೆವು. ಸಮಿತಿಯವರು ಸ್ಪಂದಿಸಿ ಲೋಪವನ್ನು ಸದ್ಯದಲ್ಲಿಯೇ ಸರಿಪಡಿಸುವುದಾಗಿ ಹೇಳಿದ್ದಾರೆ.

ಇದು ಕೊಂಗಳ್ಳಿ ಬೆಟ್ಟದಲ್ಲಿ ಶರಣ ಪರಂಪರೆಗೆ ವಿರುದ್ಧವಾಗಿ ನಡೆಯುತ್ತಿರುವ ಸೂಚನೆಯಷ್ಟೇ.

ನಮಗೆ ನೆನಪಿರುವ ಹಾಗೆ ಹಳೆಯ ದೇವಸ್ಥಾನದಲ್ಲಿ ಸಾಧಾರಣ ಗೋಪುರವಿತ್ತು. ಈಗ ಅಲ್ಲೆಲ್ಲ ಕೆತ್ತನೆಯಾಗಿದೆ, ಶಿವ ಪಾರ್ವತಿ, ಗಣಪತಿ ಮುಂತಾದ ದೇವರುಗಳ ಪ್ರತಿಮೆಗಳನ್ನು ತಂದು ಕೂರಿಸಿದ್ದಾರೆ. ಆದರೆ ಇಲ್ಲಿ ಮಹದೇಶ್ವರ ಮತ್ತು ಮಲ್ಲಿಕಾರ್ಜುನರ ಬಿಟ್ಟರೆ ಬಸವಣ್ಣನವರೂ ಸೇರಿದಂತೆ ಬೇರೆ ಯಾವ ಶರಣರ ಪ್ರತಿಮೆಯಿಲ್ಲ. ಇರುವ ಇಬ್ಬರು ಶರಣರ ಪ್ರತಿಮೆ ತೆಗೆದುಬಿಟ್ಟರೆ ಇದು ಶರಣ ಕ್ಷೇತ್ರವನ್ನು ಎನ್ನಲು ಯಾವುದೇ ಕುರುಹಿಲ್ಲ. ಅವರಿಬ್ಬರ ಮೇಲೂ ಇಷ್ಟಲಿಂಗವಿಲ್ಲ!

ಕೊಂಗಳ್ಳಿ ಬೆಟ್ಟಕ್ಕೆ ಇನ್ನೊಂದು ಕುಖ್ಯಾತಿಯಿದೆ. ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಮಲ್ಲಿಕಾರ್ಜುನರು ವಿರಕ್ತರಾಗಿದ್ದರಿಂದ ಮಹಿಳೆಯರು ಹೋಗಬಾರದೆಂಬ ನಂಬಿಕೆ ಉಳಿದುಕೊಂಡು ಬಂದಿದೆ.

Share This Article
1 Comment
  • ನಿಮ್ಮ ಗಣಾಚಾರದ ನಡೆ ಸರಿಯಾಗಿದ್ದು ಮುಂದಿನ ಕ್ರಿಯಾಯೋಜನೆಯ ಬಗ್ಗೆ ನಮಗೆ ತಿಳಿಸಿ ಅಣ್ಣ

Leave a Reply

Your email address will not be published. Required fields are marked *

ಲೇಖಕರು ಸಂಚಾರಿ ಜಂಗಮರು +91 8123676900