ಕೊಪ್ಪಳ
ಜಗತ್ತಿಗೆ ಸಂಸತ್ತು ಪರಿಕಲ್ಪನೆಯನ್ನು ನೀಡಿದವರು ಜಗಜ್ಯೋತಿ ಬಸವಣ್ಣನವರು ಎಂದು ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.
ಅವರು ಬುಧವಾರ ಕೊಪ್ಪಳ ನಗರದ ಶ್ರೀ ಗವಿಮಠದ ಆವರಣದಲ್ಲಿ ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತ, ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತಿವೆ ಅಂದರೆ, 12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವದ ಮೊದಲ ಸಂಸತ್ತನ್ನು ಸ್ಥಾಪನೆ ಮಾಡಿರುವುದೇ ಮುಖ್ಯ ಕಾರಣ. ಇದಕ್ಕಾಗಿ ಅವರನ್ನು ಜಗಜ್ಯೋತಿ ಬಸವಣ್ಣ ಎಂದು ಕರೆಯಲಾಗುತ್ತಿದೆ ಎಂದರು.

ಬಸವಣ್ಣನವರು ಸಮಾನತೆಯ ಜತೆಗೆ ಎಲ್ಲರೂ ಶ್ರಮಪಡಬೇಕು, ಶ್ರಮದ ಫಲವನ್ನ ಸಮಾನವಾಗಿ ಹಂಚಿಕೊಳ್ಳಬೇಕು ಎನ್ನುವುದನ್ನು ಸಹ ಸಮಾಜಕ್ಕೆ ತಿಳಿಸಿ ಕೊಟ್ಟಿದ್ದಾರೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳಲ್ಲಿ ಶಾಂತಿಗಾಗಿ, ಸಂಸ್ಕ್ರತಿಯಲ್ಲಿ ಜಗತ್ತಿಗೆ ಮೊದಲನೆಯ ಸ್ಥಾನದಲ್ಲಿ ಬರುವಂತ ರಾಷ್ಟ್ರ ಅಂದರೆ ಭಾರತ. ನಮ್ಮ ದೇಶವು ಸಂಸ್ಕೃತಿಯಲ್ಲಿ ಅಷ್ಟೊಂದು ಶ್ರೇಷ್ಠವಾಗಿದೆ. ಇಂತಹ ಸಂಸ್ಕೃತಿಗೆ ಬುನಾದಿ ಹಾಕಿದವರು ಬಸವಣ್ಣನವರು. ಇದಕ್ಕಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುತ್ತೇವೆ. ನಾವೆಲ್ಲರೂ ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡುವುದರ ಜತೆಗೆ ಸಮ ಸಮಾಜವನ್ನು ನಿರ್ಮಾಣ ಮಾಡುವಂತಹ ಕೆಲಸ ಮಾಡೋಣ ಎಂದು ಹೇಳಿದರು.

ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಜಗಜ್ಯೋತಿ ಬಸವೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ವಿಶ್ವಮಾನವತೆ ಹಾಗೂ ವಿಶ್ವಪ್ರಜ್ಞೆಯ ಮೂಲಕ 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಠಿಸಿದರು. ಬಸವಣ್ಣನವರ ಬದುಕು, ವಚನಗಳನ್ನು ಬರಿ ಮಾತುಗಳಲ್ಲಿ ವಿಜೃಂಭಿಸದೇ ಅಕ್ಷರಶಃ ಅವುಗಳನ್ನು ನಮ್ಮ ನಡೆ-ನುಡಿಯೊಳಗೆ ಒಂದಾಗಿಸಿಕೊಂಡು ಬದುಕನ್ನು ಸಾಗಿಸಿದರೆ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಂಡ ಸಮಾನತೆಯ ಸಮಾಜವನ್ನು ನಾವೆಲ್ಲರೂ ನಿರ್ಮಿಸಬಹುದು.

ಬಸವ ಜಯಂತಿಯು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಬೇಕು. ಈ ಬಗ್ಗೆ ಕರ್ನಾಟಕ ರಾಜ್ಯದ ಎಲ್ಲಾ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಥಣಿ ತಾಲ್ಲೂಕಿನ ಜನವಾಡದ ಅಲ್ಲಮಪ್ರಭು ಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ಧಾರವಾಡದ ಕೆ.ಎಲ್.ಇ. – ಮೃತ್ಯುಂಜಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ಯಲಿಗಾರ ಅವರು ಬಸವ ಚಿಂತನೆಗಳ ಕುರಿತು ಮಾತನಾಡಿದರು.

ಬಸವ ಕಾರುಣ್ಯ ಪ್ರಶಸ್ತಿ ಪ್ರದಾನ:
ಕಾರ್ಯಕ್ರಮದಲ್ಲಿ ಕೊಪ್ಪಳ ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ವತಿಯಿಂದ ಕಾಯಕ ಜೀವಿಗಳಾದ ಜಯಶ್ರೀ ಗುಳಗಣ್ಣವರ ಹಾಗೂ ಬಸವನಗೌಡ ಅವರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಬಿಜಕಲ್ಲನ ಶಿವಲಿಂಗ ಮಹಾಸ್ವಾಮಿಗಳು, ಬಸವ ಸಮಾಜದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಭಾಗ್ಯನಗರದ ಶ್ರೀ ಗುರುಕೃಪಾ ಕಲಾಸಂಘದ ಶಕುಂತಲಾ ಬೆನ್ನಾಳ ಹಾಗೂ ಸಂಗಡಿಗರು ವಚನ ಸಂಗೀತ ಹಾಗೂ ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ಪುತ್ಥಳಿಗೆ ಮಾಲಾರ್ಪಣೆ:
ಬಸವ ಜಯಂತ್ಯೋತ್ಸವ ಅಂಗವಾಗಿ ನಗರದ ಹೊಸಪೇಟೆ ರಸ್ತೆಯ ಶಿವಶಾಂತವೀರ ನಗರದಲ್ಲಿರುವ ನಗರಸಭೆಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಮಹನೀಯರ ಪುತ್ಥಳಿಗೆ ಹಾಗೂ ನಗರದ ಬಸವೇಶ್ವರ ವೃತ್ತದ (ಗಂಜ್ ಸರ್ಕಲ್) ಬಸವೇಶ್ವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಳಿನ್ ಅತುಲ್, ಮಾಜಿ ಸಂಸದ ಸಂಗಣ್ಣ ಕರಡಿ, ಲಿಂಗಾಯತ ಮತ್ತು ಬಸವಪರ ಸಂಘಟನೆಗಳ ಪ್ರಮುಖರಾದ ಹನುಮಂತ ಕಲ್ಮಂಗಿ, ಶಿವಕುಮಾರ ಕುಕನೂರ, ರಾಜೇಶ ಸಸಿಮಠ, ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ಪ ಕೊಪ್ಪಳ, ಅರ್ಚನಾ ಸಸಿಮಠ, ಗಾಳೆಪ್ಪ ಕಡೆಮನಿ, ಶಿವಬಸಯ್ಯ ವೀರಾಪುರ, ಗುಡದಪ್ಪ ಹಡಪದ, ಶರಣಮ್ಮ ಕಲ್ಮಂಗಿ, ಶರಣಬಸನಗೌಡ ಪಾಟೀಲ, ಶೇಖರ ಇಂಗಳದಾಳ, ಬಾಪುಗೌಡ ಪಾಟೀಲ, ಸೌಮ್ಯ ನಾಲ್ವಾಡ, ಅಧಿಕಾರಿ ವರ್ಗದವರು, ಮತ್ತಿತರರು ಉಪಸ್ಥಿತರಿದ್ದರು.