ಕೊಪ್ಪಳ
‘ದಕ್ಷಿಣ ಭಾರತದ ಕುಂಭಮೇಳ’ ಎಂದು ಪ್ರಸಿದ್ದವಾಗಿರುವ ಕೊಪ್ಪಳದ ಗವಿಮಠದ ಜಾತ್ರೆಯ ಮಹಾ ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಮಹಾಸಂಗಮದೊಂದಿಗೆ ಸಂಭ್ರಮದಿಂದ ನೆರವೇರಿತು.
ವಿವಿಧ ಜಿಲ್ಲೆ, ನೆರೆರಾಜ್ಯಗಳಿಂದಲೂ ಸಾಗರೋಪಾದಿಯಲ್ಲಿ ಬಂದಿದ್ದ ಭಕ್ತರು ಗವಿಸಿದ್ಧೇಶ್ವರ ಗದ್ದುಗೆಯ ದರ್ಶನ ಪಡೆದು ಮಹಾದಾಸೋಹ ಸವಿದ ಬಳಿಕ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾದರು.
ಕಳೆದ ಬಾರಿಗಿಂತ ಹೆಚ್ಚಿನ ಮಟ್ಟದಲ್ಲಿ ಅಂದಾಜು 6 ಲಕ್ಷಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮೇಘಾಲಯ ರಾಜ್ಯದ ರಾಜ್ಯಪಾಲರಾಗಿರುವ ಕೊಪ್ಪಳ ಜಿಲ್ಲೆಯವರೇ ಆದ ಎಚ್. ವಿಜಯಶಂಕರ ಅವರು, ಬಸವಪಟ ಆರೋಹಣ ಮಾಡುವ ಮೂಲಕ ಚಾಲನೆ ರಥೋತ್ಸವಕ್ಕೆ ಚಾಲನೆ ನೀಡಿದರು.
ಪ್ರತಿ ವರ್ಷದಂತೆ ಈ ವರ್ಷದ ಜಾತ್ರೆಯಲ್ಲಿ ಗವಿಶ್ರೀಗಳು ಬಾಳೆ ಹಣ್ಣು ಎಸೆಯದಂತೆ ಭಕ್ತಾಧಿಗಳಲ್ಲಿ ಮನವಿ ಮಾಡಿದ್ದರಿಂದ ಜಿಲ್ಲೆಯಲ್ಲದೇ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳು ಉತ್ತತ್ತಿ ಎಸೆದು ಪುನೀತರಾದರು.
“ದೇಶದಲ್ಲಿ ದಸರಾ ವೈಭವ ನೋಡಲು ಮೈಸೂರಿಗೆ ಬರಬೇಕು. ಜಾತ್ರಾ ಮಹೋತ್ಸವದ ವೈಭವ ನೋಡಬೇಕೆಂದರೇ ಕೊಪ್ಪಳಕ್ಕೆ ಬರಲೇಬೇಕು. ಇಂತಹ ಮಹಾಜಾತ್ರೆ ನಾನೆಂದು ನೋಡಿಲ್ಲ,” ಎಂದು ವಿಜಯಶಂಕರ ಹೇಳಿದರು.
ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಮಾತನಾಡಿ, ನಿಮ್ಮನ್ನು ಇಲ್ಲಿಗೆ ಯಾರು ಕರೆ ತಂದಿಲ್ಲ. ನೀವು ಭಕ್ತಿಯಿಂದ ಬಂದವರು. ಗವಿಸಿದ್ದಪ್ಪಜ್ಜನ ಆರ್ಶೀವಾದ ನಿಮ್ಮ ಮೇಲೆ ಸದಾ ಇರಲಿದೆ ಎಂದು ಆಶಿಸಿದರು.
ಕಾಗಿನೆಲೆ ಪೀಠದ ಶ್ರೀಗಳು ಮಾತನಾಡಿ ದಕ್ಷಿಣ ಭಾರತದ ಕುಂಭ ಮೇಳ ನೋಡಲು ಕೊಪ್ಪಳಕ್ಕೆ ಬರಬೇಕು ಎಂದರು.
ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಶಾಸಕರಾದ ಬಿ.ಸಿ.ಪಾಟೀಲ್, ಜನಾರ್ದನರೆಡ್ಡಿ, ಶರಣಗೌಡ ಕಂದಕೂರ, ರಾಘವೇಂದ್ರ ಹಿಟ್ನಾಳ್, ಬಸನಗೌಡ ತುರುವಿಹಾಳ, ಹೇಮಲತಾ ನಾಯಕ್, ಶಶೀಲ್ ನಮೋಶಿ, ಬಸನಗೌಡ ಬಾದರ್ಲಿ, ಮಹೇಶ ಟೆಂಗಿನಕಾಯಿ, ಮಾಜಿ ಸಚಿವ ಅಮರೇಗೌಡ ಭಯ್ಯಾಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಕೆ.ವಿರುಪಾಕ್ಷಪ್ಪ, ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸ್ಗುರು, ಕೆ.ಶರಣಪ್ಪ, ಪ್ರತಾಪಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ನವೀನ ಗುಳಗಣ್ಣನವರ್, ವಿರುಪಾಕ್ಷಪ್ಪ ಸಿಂಗನಾಳ, ಬಸವರಾಜ ಕ್ಯಾವಟರ್, ಕೆ.ಎಂ.ಸಯ್ಯದ್, ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ಬಳ್ಳಾರಿ ವಿಭಾಗದ ಸರಕಾರಿ ಅಭಿಯೋಜಕ ಬಿ.ಎಸ್.ಪಾಟೀಲ್ ತಾವರಗೇರಾ, ಜಿಲ್ಲಾಧಿಕಾರಿ ಸುರೇಶ ಇಟ್ನಾಳ್, ಜಿಪಂ ಸಿಇಒ ವರ್ಣಿತ ನೇಗಿ, ಐಜಿಪಿ ವರ್ತಿಕಾ ಕಾಟಿಯಾರ, ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ, ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ, ಮುಖಂಡರಾದ ಅಮರೇಶ ಕರಡಿ, ಬಂಗಾರು ಹನುಮಂತು ಸೇರಿದಂತೆ ಇತರರು ಇದ್ದರು.
