ಕೊಪ್ಪಳ
ನಾನು ಎಂಬುದನ್ನು ಬಿಟ್ಟು ನಾವು ಎನ್ನುವುದನ್ನು ಕಲಿಸಿದವರು ಬಸವಾದಿ ಶರಣರು. ನಾನು ಎಂಬುದು ಹೋದರೆ ನಾವೇ ದೇವಸ್ವರೂಪರಾಗಬಹುದು. ನಮ್ಮ ಜೀವನವನ್ನು ದೈವೀಕರಣಗೊಳಿಸಲು ಸದ್ಭಕ್ತರ ಸಂಗದಲ್ಲಿದ್ದು, ಬಸವಾದಿ ಶರಣರ ನುಡಿಗಳನ್ನು ಆಲಿಸಿ-ಪಾಲಿಸುವುದನ್ನು ನಿತ್ಯ ಅನುಸರಿಸಬೇಕೆಂದು ಶರಣತತ್ವ ಚಿಂತಕರು ಮತ್ತು ಅನುಭಾವಿಗಳಾದ ಡಾ. ಸಂಗಮೇಶ ಕಲಹಾಳ ನುಡಿದರು.
ಅವರು ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಸಂಘಟಿಸಿರುವ 13ನೇ ಸಾಲಿನ ವಚನ ಶ್ರಾವಣ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶ್ರಾವಣಮಾಸದ 30 ದಿನಗಳ ಪರ್ಯಂತರ ದಿನಕ್ಕೊಬ್ಬರು ದಾಸೋಹಿಗಳ ಮನೆಯಲ್ಲಿ ದಿನಕ್ಕೊಬ್ಬರು ಅನುಭಾವ ಮಾಡುವುದಾಗಿ ತಿಳಿಸಿದರು. ಸುಮಾರು 35 ವರ್ಷಗಳ ಹಿಂದೆ ಲಿಂ. ಡಾ. ಬಸಯ್ಯ ಸಸಿಮಠ, ಬಸವರಾಜಪ್ಪ ಬನ್ನಿಕೊಪ್ಪ, ಪಂಪಾಪತಿ ಹೊನ್ನಳ್ಳಿ, ಎಲ್. ಹೆಚ್. ಪಾಟೀಲ, ಬಸನಗೌಡ ಪೋಲೀಸಪಾಟೀಲ ಮತ್ತಿತರ ಹಿರಿಯರು ಬಸವಬೀಜ ಬಿತ್ತಿ ಹೋಗಿದ್ದರ ಪರಿಣಾಮವಾಗಿ ಇಂದು ಬಸವತತ್ವ ನಿಷ್ಠಾವಂತ ಕುಟುಂಬಗಳು ಹೆಮ್ಮರವಾಗಿ ಬೆಳೆದಿವೆ. ಈ ಬಸವತತ್ವ ಪ್ರಸಾರ ಜನರಿಂದ ಜನರಿಗೆ, ಊರಿಂದ ಊರಿಗೆ ಹಬ್ಬಲೆಂದು ಹಾರೈಸಿದರು.
ಶ್ರಾವಣಮಾಸದ ಬ್ಯಾನರನ್ನು ಟಣಕನಕಲ್ಲ ಗ್ರಾಮದ ರಾಷ್ಟ್ರೀಯ ಬಸವದಳ ಅಧ್ಯಕ್ಷ ಪರಪ್ಪ ಗೊಂದಿಹೊಸಳ್ಳಿ ಬಿಡುಗಡೆ ಮಾಡಿದರು.

ಶ್ರಾವಣಮಾಸದ 30 ದಿನಗಳ ವೇಳಾಪಟ್ಟಿಯನ್ನು ಶರಣ ಶಿವಬಸಯ್ಯ ವೀರಾಪೂರ ಬಿಡುಗಡೆ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಜಿಲ್ಲಾಧ್ಯಕ್ಷೆ ಶರಣೆ ಅರ್ಚನಾ ಸಸಿಮಠರವರು “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು” ಕುರಿತು ಅನುಭಾವ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವದಳ, ಟಣಕನಕಲ್ಲ ಇವರು ಮಾಸಿಕವಾಗಿ ಸಂಘಟಿಸುತ್ತ ಬಂದಿರುವ 27 ನೇ ಶರಣ ಸಂಗಮ – ಅರಿವು ಆಚಾರ ಅನುಭಾವ ಕಾರ್ಯಕ್ರಮದ ಅಂಗವಾಗಿ ಬಾಲಶರಣೆ ಗವಿಸಿದ್ದಮ್ಮ ದೇವಪ್ಪ ಪೋಲೀಸಪಾಟೀಲ ಇವರು “ಸೃಷ್ಟಿ ಉತ್ಪತ್ತಿ, ದೇವರ ಪರಿಕಲ್ಪನೆ ಮತ್ತು ಇಷ್ಟಲಿಂಗಕ್ರಿಯಾ ವಿಧಾನ” ಕುರಿತು ಅನುಭಾವ ನೀಡಿದರು.
ಬಾಲಶರಣೆ ಸುನಂದಾ ಶಿವಪ್ಪ ಹೊಸೂರು, ಬಾಲಶರಣ ರೋಹಿತ ಶೇಖರ ಇಂಗಳದಾಳ, ಬಾಲಶರಣೆ ಪ್ರಗತಿ ಗವಿಸಿದ್ದಪ್ಪ ಬಿಸರಳ್ಳಿ, ಬಾಲಶರಣೆ ರಾಜೇಶ್ವರಿ ಫಕೀರಪ್ಪ ಬಿಸರಳ್ಳಿ ಇವರುಗಳು ವಚನ ವಿಶ್ಲೇಷಣೆ ಮಾಡಿದರು. ಶರಣೆ ಈರಮ್ಮ ಕೊಳ್ಳಿ ಮತ್ತು ಶರಣೆ ಬಸಮ್ಮ ವೀರಾಪೂರ ವಚನಗಾಯನ ಮಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳದ ಬಸವತತ್ವ ಅನುಯಾಯಿಗಳಾದ ಶರಣ ಸಿ. ಎಂ. ವಿರೂಪಾಕ್ಷಿಯವರು ವಹಿಸಿದ್ದರು. ಟಣಕನಕಲ್ಲ ದುರ್ಗಾದೇವಿ ಮಹಿಳಾ ಮಂಡಳಿಯವರು ಪ್ರಸಾದ ದಾಸೋಹ ಸೇವೆ ಮಾಡಿದರು.
ಶಿವಬಸಯ್ಯ ವೀರಾಪೂರ ಇವರು ಕಾರ್ಯಕ್ರಮ ನಿರ್ವಹಿಸಿದರು.