ಆಳಂದ
ಗುರು ಶಿಷ್ಯರ ಸಂಬಂಧ ನಿಸ್ವಾರ್ಥತೆ ಮತ್ತು ಅನೋನ್ಯತೆಯ ಸಂಬಂಧವಾಗಿದೆ. ಗುರುವಾದವನು ಶಿಷ್ಯನಲ್ಲಿರುವ ಅಜ್ಞಾನ ಹಾಗೂ ತಾಪತ್ರಯಗಳನ್ನು ದೂರ ಮಾಡಬೇಕು, ಶಿಷ್ಯರು ಮತ್ತು ಸಮಾಜವನ್ನು ಮೌಢ್ಯತೆಗಳಿಂದ ಹೊರತಂದು, ಶರಣರ ಕಾಯಕ ದಾಸೋಹ ತತ್ವವನ್ನು ಬೆಳೆಸಬೇಕು. ಸಕಲ ಜೀವಾತ್ಮರಿಗೆ ಲೇಸು ಬಯಸಿ, ದಯವೇ ಧರ್ಮವೆಂದು ಹೇಳಿ ಅವರಲ್ಲಿರುವ ಭಯವನ್ನು ದೂರ ಮಾಡಬೇಕು. ಇವನಾರವ ಎಂದೆನಿಸದೆ ಇವ ನಮ್ಮವ ಎಂದೆನಿಸುವ ಮಾನವ ಬಂಧುತ್ವದ ವಿಚಾರಗಳನ್ನು ಭಕ್ತರಿಗೆ, ಶಿಷ್ಯರಿಗೆ ಬೋಧಿಸಬೇಕು, ಅಂಥವರು ಮಾತ್ರ ನಿಜವಾದ ಗುರುಗಳು ಎಂದು ಪೂಜ್ಯ ಕೊರಣೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ತೋಂಟದ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆ ನಿಮಿತ್ಯ ಶರಣ ಸಂಗಮ, ಪರಿಸರ ದಿನಾಚರಣೆ, ಶಾಲಾ ಪ್ರಾರಂಭೋತ್ಸವ ಹಾಗೂ ವಿವಿಧ ಕಾಯಕ ಜೀವಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಹೇಗೆ ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆಯೋ ಅದಕ್ಕಿಂತಲೂ ಮುಖ್ಯವಾಗಿ ವೃಕ್ಷೋ ರಕ್ಷತಿ ರಕ್ಷಿತಃ ಅಂದರೆ, ಧರ್ಮವನ್ನು ನಾವು ಮನುಷ್ಯರಿಗಾಗಿ ರಕ್ಷಿಸಿದರೆ, ನಿಸರ್ಗವನ್ನು ಸಕಲ ಜೀವಾತ್ಮರಿಗಾಗಿ ರಕ್ಷಿಸುವಂತಹದು, ಅದರ ರಕ್ಷಣೆಯೇ ವೃಕ್ಷಗಳ ರಕ್ಷಣೆ ಅದುವೇ ನಮ್ಮ ಜೀವನಾಡಿ, ಪರಿಸರವೇ ಪ್ರಾಣ ಪ್ರತಿಯೊಬ್ಬರು ಇನ್ನು ಮುಂದೆ ಗಿಡಗಳ ರಕ್ಷಣೆ ಮಾಡದೇ ಹೋದರೆ ಬದುಕು ಕಷ್ಟಕರವಾಗುವುದು ಎಂದು, ಗುರುಗಳಾದ ಲಿಂಗೈಕ್ಯ ಪೂಜ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಪರಿಸರ ಪ್ರೇಮಿಗಳಾಗಿದ್ದರಿಂದಲೇ ಕಪ್ಪತಗುಡ್ಡವನ್ನು ಗಣಿಗಾರಿಕೆಯಿಂದ ರಕ್ಷಿಸಿದರು. ಲಕ್ಷ ಲಕ್ಷ ಗಿಡಗಳನ್ನು ಅವರು ಬೆಳೆಸಿದರು, ಉಳಿಸಿದರು. ಅವರ ಪ್ರೇರಣೆಯಂತೆಯೇ ಇವತ್ತಿನ ದಿನ ನಾವು ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ 100 ಗಿಡಗಳನ್ನು ನೆಡುವ ಮುಖಾಂತರ ಗುರುವಂದನೆ ಸಲ್ಲಿಸಿದ್ದೇವೆ.
ಇತ್ತೀಚಿಗೆ ಲಿಂಗಾಯತ ಧರ್ಮದಲ್ಲಿರುವಂತಹ ವಿವಿಧ ಕಾಯಕ ಸಮುದಾಯದ ಲಿಂಗವಂತ ಜನರನ್ನು ನಾವು ದೂರ ಮಾಡುತ್ತಿದ್ದೇವೆ, ಇದು ಶರಣರ ಕಂಡ ಕನಸಿಗೆ ಬಹುದೊಡ್ಡ ಹಾನಿ ಉಂಟು ಮಾಡುತ್ತಿದೆ. ಕಾರಣ ಸಮಸ್ತ ಮಠಾಧೀಶರು ಮತ್ತು ಲಿಂಗಾಯತರೆಂದೆನಿಸಿಕೊಂಡವರು, ಮೇಲ್ವರ್ಗದವರೆಂದು ಹೇಳಿಕೊಳ್ಳುವ ಜನ ಕಾಯಕ ಶರಣರ ಸಮುದಾಯಗಳನ್ನು ಗೌರವಿಸದೆ ಹೋದರೆ, ಬಸವಾದಿ ಶರಣರು ಕಟ್ಟಿರುವಂತಹ ಮಹಾಮನೆ ಒಡೆದು ಹೋಗುತ್ತದೆ, ಕಾರಣ ನಾವೆಲ್ಲರೂ ಅದನ್ನು ತಪ್ಪಿಸುವುದಕ್ಕಾಗಿ ಸಕಲ ಕಾಯಕ ಜೀವಿಗಳೊಡನೆ ಮೃದುವಂತಿಕೆಯ ಒಡನಾಟವನ್ನು ಬೆಳೆಸಿಕೊಳ್ಳಬೇಕು. ಆ ನಿಮಿತ್ಯವಾಗಿ ಇಂದು ನಮ್ಮ ಅನುಭವ ಮಂಟಪದಲ್ಲಿ ವಿವಿಧ ಕಾಯಕ ಜೀವಿಗಳಿಗೆ ಸನ್ಮಾನಿಸಿ ಇವ ನಮ್ಮವ ಎನ್ನುವ ಸಂದೇಶವನ್ನು ಸಾರಲಾಯಿತು ಎಂದು ಸ್ವಾಮೀಜಿ ಹೇಳಿದರು.

ಜಗದೀಶ ಕೋರೆ, ಗಂಗಾಧರ ಕುಂಬಾರ, ಆರೀಫ್ ಲೇಂಗಟ್ಟೆ, ಪಾಂಡುರಂಗ ಮೊದಲೆ, ಏಕನಾಥ ಏಟೆ, ಶಂಕರ ಶಿವಶರಣಪ್ಪ, ಶ್ರೀ ಕೃಷ್ಣ ಪಾತ್ರ, ಮನೋಹರ ದಳವಿ, ಎಸ್.ಬಿ. ಪಾಟೀಲ್ ತಡಕಲ್ ಈ ಎಲ್ಲ ಕಾಯಕಜೀವಿ ಶರಣರನ್ನು ಗೌರವಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಗುರುಶರಣ ಪಾಟೀಲ ಕೊರಳ್ಳಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಲ್ಲಿನಾಥ ಯಲಶೆಟ್ಟಿ ಮಾತನಾಡಿದರು. ಶರಣೆ ಆಶಾಲತಾ ಮಠಪತಿ, ಡಾ. ಅಭಿನಂದನ್ ಬೇಡಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಸಿದ್ದರಾಮಪ್ಪ ಪೊಲೀಸ್ ಪಾಟೀಲ ವೇದಿಕೆ ಯಲ್ಲಿದ್ದರು. ಸುಭಾಷ ಪಾಟೀಲ ಶರಣು ಸಮರ್ಪಣೆ ಮಾಡಿದರು.
ಅನುಭವ ಮಂಟಪ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಮುಖ್ಯಗುರುಗಳು, ಶಿಕ್ಷಕರು, ಪಾಲಕರು ಮತ್ತು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.