ಕೃಷಿ ವಿಜ್ಞಾನವನ್ನು ಅಂದೇ ಸಂಶೋಧಿಸಿದ್ದ ಶರಣರು : ಡಾ. ಎಸ್.ಎಸ್. ಅಂಗಡಿ

ಬಸವ ಮೀಡಿಯಾ
ಬಸವ ಮೀಡಿಯಾ

ಕೃಷಿಯನ್ನು ಗೌರವಿಸಿದ್ದ ಬಸವಾದಿ ಶರಣರು

ಕಲಬುರ್ಗಿ:

ಬಸವಾದಿ ಶರಣರು ಕೃಷಿ ಕಾಯಕಕ್ಕೆ ಮಹತ್ವದ ಗೌರವ ಸಲ್ಲಿಸಿದ್ದಾರೆ. ಗುರುಪೂಜೆಗಾಗಿ ಬೇಸಾಯ ಮಾಡಿ ಸಂಪಾದಿಸುತ್ತೇನೆ ಎಂದಿದ್ದಾರೆ ಎಂದು ಸಂಶೋಧಕರು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಎಸ್. ಎಸ್. ಅಂಗಡಿ ಅವರು ಹೇಳಿದರು.

ಬಸವ ಸಮಿತಿ ಅನುಭಾವ ಮಂಟಪ , ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಲಿಂಗೈಕ್ಯ ಸುಮಿತ್ರಾಬಾಯಿ  ಸಿದ್ರಾಮಪ್ಪ ಅಂಗಡಿ   ಸ್ಮರಣಾರ್ಥ ಜರುಗಿದ ಅರಿವಿನ ಮನೆ 890ನೆಯ ದತ್ತಿ ಕಾರ್ಯಕ್ರಮದಲ್ಲಿ  ಅನುಭಾವ ನೀಡಿದರು.

12ನೇ ಶತಮಾನದಲ್ಲಿ ಕೃಷಿ ವ್ಯಾಪಾರವಾಗಿರಲಿಲ್ಲ ಅದು ಜೀವತಕ್ಕೆ ಬೇಕಾದ ಅವಶ್ಯಕತೆಯಾಗಿತ್ತು. ಅಂದು ನೈಸರ್ಗಿಕ ಕೃಷಿ, ಸಾವಯವ ಕೃಷಿ ಪದ್ಧತಿಗಳು ಜಾರಿಯಲ್ಲಿದ್ದವು.

ಇಂದು ಭಾರತಕ್ಕೆ ತನ್ನ 81 ಕೋಟಿ ಜನರಿಗೆ ಉಚಿತ ಧಾನ್ಯ ವಿತರಿಸುವ ಶಕ್ತಿ ಬಂದಿದೆ. ಕೃಷಿ ಒಂದು ಕಲೆ ಒಂದು ವಿಜ್ಞಾನವಾಗಿದೆ. ಮಾರ್ಚ್ 1ನೇ ತಾರೀಕು ವಿಶ್ವ ಸಮಾನತೆಯ ದಿನ ಎಂದು ಘೋಷಿಸಲಾಗಿದೆ. ಆದರೆ ಬಸವಣ್ಣನವರು 12ನೇ ಶತಮಾನದಲ್ಲಿಯೇ ಇವ ನಮ್ಮವನೆಂದಿನಿಸಯ್ಯ ಎನ್ನುವ ಮೂಲಕ ಮಾನವ ಸಮಾನತೆಯನ್ನು ಸಾರಿದ್ದಾರೆ.

ಮಾಗಿ ದಿನಗಳಲ್ಲಿ ಬೇಸಾಯ ಮಾಡಿದರೆ ಒಳ್ಳೆಯದೆಂದು ಬಸವಣ್ಣನವರು ತಮ್ಮ ವಚನದಲ್ಲಿ ಹೇಳುತ್ತಾರೆ. ಅಲ್ಲಮಪ್ರಭು  ಹೇಳಿದಂತೆ ತನುವ ತೋಟವ ಮಾಡಿ ಎಂಬ ವಚನದಲ್ಲಿ ಬದುಕಿಗೂ ಬೇಸಾಯಕ್ಕೂ ಹೋಲಿಸಿದ್ದಾರೆ. ಸೊಡ್ಡಲ ಬಾಚರಸರು ಹದವ ನೋಡಿ ಹರಗು ಎನ್ನುವ ಮೂಲಕ ದೇಹ ಮತ್ತು ಬೇಸಾಯದ ಕುರಿತು ಹೇಳಿದ್ದಾರೆ.

ಹೆಚ್ಚು ತೇವಾಂಶ ಇರುವ ಭೂಮಿಗೆ ಬಸಿಗಾಲುವೆ ತೋಡಬೇಕು. ಇಲ್ಲದಿದ್ದರೆ ಬೆಳೆ ಹಾಳಾಗುತ್ತದೆ ಎಂದು ಬಸವಣ್ಣನವರು ಸೂಚಿಸುತ್ತಾರೆ. ಬೀಜ ಭೂಮಿಗೆ ಬಿತ್ತಿದಾಗ ಅದನ್ನು ಕುಂಟೆಯಿಂದ ಮುಚ್ಚಬೇಕು ಅಂದಾಗ ಮಾತ್ರ ತೇವಾಂಶ ಹಿಡಿಯುತ್ತದೆ, 15 ದಿನ ಮಳೆ ಬಾರದಿದ್ದರೂ ಬೀಜ ಮೊಳಕೆ ಒಡೆಯುತ್ತದೆ ಎಂದು ಅಲ್ಲಮಪ್ರಭುಗಳು ಸಲಹೆ ನೀಡುತ್ತಾರೆ. ನೀರಿನ ಸಮರ್ಪಕ ಬಳಕೆಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ಶರಣರು ತಿಳಿಸಿದ್ದಾರೆ.

ಒಕ್ಕಲಿಗ ಮುದ್ದಣ್ಣ ಬೆಳೆಗೆ ಅದರ ಬೆಳವಣಿಗೆಯ ಹಂತ ಹಂತವಾಗಿ ನೀರು ಉಣಿಸಬೇಕೆಂದು ನಿರ್ದೇಶಿಸುತ್ತಾರೆ. ಸಿರಿಧಾನ್ಯಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲವೆಂದು ಶರಣರು ಸಾರಿದ್ದಾರೆ. ಇಂದು ಕೃಷಿ ವಿಜ್ಞಾನಿಗಳು ಸಂಶೋಧಿಸಿದ ಬಹುತೇಕ ವಿಷಯಗಳು ಶರಣರೇ ಹೇಳಿದ್ದಾರೆ ಎಂಬುದು ವಿಸ್ಮಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ, ಡಾ. ವೀರಣ್ಣ ದಂಡೆ,  ದತ್ತಿ ದಾಸೋಹಿಗಳಾದ  ಡಾ. ಜಯಶ್ರೀ ದಂಡೆ, ಉದ್ಯಮಿ  ರಾಜೇಂದ್ರ ಕೂಬಾ, ಕಾರ್ಯದರ್ಶಿ ಡಾ. ಆನಂದ ಸಿದ್ಧಾಮಣಿ, ಡಾ.ಕೆ. ಎಸ್. ವಾಲಿ, ಶರಣಗೌಡ ಪಾಟೀಲ ಪಾಳ, ಉದ್ದಂಡಯ್ಯ ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *