ಬಸವ ಧರ್ಮ ಪೀಠಾರೋಹಣ ಮುಖ್ಯ ಆಕರ್ಷಣೆ, ರಸಪ್ರಶ್ನೆ ಕಾರ್ಯಕ್ರಮ ಈ ಬಾರಿಯ ವಿಶೇಷತೆ
ಬೆಂಗಳೂರು:
ಕೂಡಲಸಂಗಮ ಸುಕ್ಷೇತ್ರದಲ್ಲಿ ಜನವರಿ 12, 13 ಮತ್ತು 14ರಂದು ನಡೆಯಲಿರುವ ಐತಿಹಾಸಿಕ 39ನೇ ಶರಣ ಮೇಳಕ್ಕೆ ಭರದ ಸಿದ್ಧತೆಗಳು ನಡೆದಿವೆ. ಈ ಶರಣ ಮೇಳದ ಮುಖ್ಯ ಆಕರ್ಷಣೆಯಾಗಿ “ಬಸವ ಧರ್ಮ ಪೀಠಾರೋಹಣ” ಕಾರ್ಯಕ್ರಮ ನಡೆಯಲಿದ್ದು, ಇದು ಶರಣ ಸಂಸ್ಕೃತಿ ಮತ್ತು ಬಸವ ಧರ್ಮದ ಚಿಂತನೆಗೆ ಹೊಸ ಆಯಾಮ ನೀಡಲಿದೆ.
ಶರಣ ಮೇಳವು ಲಿಂಗಾಯತ ಧರ್ಮಿಯರ ಪವಿತ್ರ ಸಮಾವೇಶವಾಗಿದ್ದು, ಯಾವುದೇ ಜಾತಿ, ಮತ, ಪಂಥ, ಪಂಗಡಗಳ ಭೇದವಿಲ್ಲದೆ ಕಳೆದ 38 ವರ್ಷಗಳಿಂದ ನಿರಂತರವಾಗಿ ನಡೆಯುತ್ತಾ ಬಂದಿದೆ.

ಶರಣ ಮೇಳವು ಮಾನವನ ಅಂತರಂಗ ಮತ್ತು ಬಹಿರಂಗವನ್ನು ಶುದ್ಧೀಕರಿಸುವ ಆಧ್ಯಾತ್ಮಿಕ ಸಮಾವೇಶವಾಗಿದ್ದು, ಬಸವ ತತ್ತ್ವದ ಆಳವಾದ ಅನುಭವವನ್ನು ನೀಡುತ್ತದೆ.
ಶರಣ ಮೇಳದಲ್ಲಿ ನಡೆಯುವ ಭವ್ಯ ಪಥ ಸಂಚಲನ ಕಾರ್ಯಕ್ರಮವು ನೋಡುಗರ ಮನಸೆಳೆಯುವಂತಿದ್ದು, ಶರಣ ಸಂಸ್ಕೃತಿಯ ಶಿಸ್ತಿನ ಪ್ರದರ್ಶನವಾಗಿ ಶರಣ ಮೇಳದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಸಮಾವೇಶದಲ್ಲಿ ಕಾಯಕ, ದಾಸೋಹ ಮತ್ತು ಸಮಾನತೆ ಎಂಬ ಬಸವ ತತ್ತ್ವಗಳೇ ಕೇಂದ್ರಬಿಂದು ಆಗಿರುತ್ತವೆ.
ಬಸವ ಧರ್ಮದ ತತ್ತ್ವ, ವಚನ ಪರಂಪರೆ ಹಾಗೂ ಸಮಾನತೆಯ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಈ ಬಸವ ಧರ್ಮ ಪೀಠಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಶರಣ ಮೇಳದ ಅಂಗವಾಗಿ ಈ ಬಾರಿ “ವಚನ ದುಂದುಭಿ”ರಸಪ್ರಶ್ನೆ ಕಾರ್ಯಕ್ರಮವೂ ವಿಶೇಷ ಆಕರ್ಷಣೆಯಾಗಿದ್ದು, ಟಿವಿ ಮಾಧ್ಯಮದ ಜನಪ್ರಿಯ ಕಾರ್ಯಕ್ರಮಗಳಾದ “ಕನ್ನಡದ ಕೋಟ್ಯಾಧಿಪತಿ”ಮತ್ತು “ಥಟ್ ಅಂತ ಹೇಳಿ”ಮಾದರಿಯಲ್ಲಿ ರೂಪಿಸಲಾಗಿದೆ. ಪ್ರಶ್ನೆಗಳಿಗೆ ತಕ್ಷಣ ಉತ್ತರಿಸುವ ವಿನೂತನ ವ್ಯವಸ್ಥೆ ಈ ರಸಪ್ರಶ್ನೆಯ ವಿಶೇಷತೆಯಾಗಿದೆ. ಶರಣ ಸಾಹಿತ್ಯ, ಬಸವ ತತ್ತ್ವ ಹಾಗೂ ಲಿಂಗಾಯತ ಪರಂಪರೆಯ ಕುರಿತ ಪ್ರಶ್ನೆಗಳು ಇದರಲ್ಲಿ ಒಳಗೊಂಡಿರಲಿವೆ.
ಈ ರಸಪ್ರಶ್ನೆ ಕಾರ್ಯಕ್ರಮಕ್ಕೆ ಎಲ್ಲಾ ಶರಣ ಬಂಧುಗಳಿಗೆ ಮುಕ್ತ ಆಹ್ವಾನ ನೀಡಲಾಗಿದ್ದು,
🔸 ಪ್ರಥಮ ಬಹುಮಾನ – ₹10,000
🔸 ದ್ವಿತೀಯ ಬಹುಮಾನ – ₹5,000
ಎಂದು ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ, 39ನೇ ಶರಣ ಮೇಳವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ತಮ್ಮ ತನು ಮನ ಧನ, ಸಮಯ ಪ್ರಾಣ ಅಭಿಮಾನದ ನಿಷ್ಠೆಯನ್ನು ನಿರಂತರವಾಗಿ ನೀಡಿದ 9 ಜನ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ “ವಿಶೇಷ ಕಾರ್ಯಕರ್ತ ಪ್ರಶಸ್ತಿ”ನೀಡಿ ಗೌರವಿಸಲಾಗುವುದು.

ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ದೇಶದ ನಾನಾ ಭಾಗಗಳಿಂದ ಶರಣರು ಈ ಪವಿತ್ರ ಸಮಾವೇಶದಲ್ಲಿ ಭಾಗವಹಿಸಿ ಬಸವಾಮೃತವನ್ನು ಸವಿಯಲಿದ್ದಾರೆ.
ಶರಣ ಮೇಳ ಕಾರ್ಯಕ್ರಮ ವಿವರ:
* ಜನವರಿ 12 – ರಾಷ್ಟ್ರೀಯ ಬಸವ ದಳ ಅಧಿವೇಶನ
* ಜನವರಿ 13 – ಬಸವ ಧರ್ಮ ಪೀಠಾರೋಹಣ
* ಜನವರಿ 14 – ಲಿಂಗಾಯತ ಧರ್ಮ ಸಂಸ್ಥಾಪನ ದಿನ ಹಾಗೂ ಸಮುದಾಯ ಪ್ರಾರ್ಥನೆ.
ಶರಣ ಬಂಧುಗಳು, ಬಸವ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶರಣ ಮೇಳವನ್ನು ಯಶಸ್ವಿಗೊಳಿಸುವಂತೆ ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜೀರ್ಗೆ ಪ್ರಾರ್ಥಿಸಿದ್ದಾರೆ.

