ಜನವರಿ 13, 14 ರಂದು ಪಾಲ್ಗೊಳ್ಳಲು ಚನ್ನಬಸವಾನಂದ ಶ್ರೀ ಕರೆ
ಹುಬ್ಬಳ್ಳಿ:
ಇದೇ ತಿಂಗಳ 13 ಮತ್ತು 14ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ನಾಲ್ಕನೇ ಸ್ವಾಭಿಮಾನಿ ಶರಣ ಮೇಳ ಜರುಗಲಿದ್ದು, ಕ್ಷೇತ್ರದ ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಸ್ವಾಭಿಮಾನಿ ಶರಣ ಮೇಳ ಉತ್ಸವ ಸಮಿತಿ ಅಧ್ಯಕ್ಷ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಹುಬ್ಬಳ್ಳಿ ಮಹಾನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೂಜ್ಯರು, 2026ರ ಗೋಡೆ ದಿನದರ್ಶಿಕೆಯನ್ನು ಹುನಗುಂದ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬಿಡುಗಡೆ ಮಾಡಲಿದ್ದಾರೆ.
ಷಟಸ್ಥಲ ಧ್ವಜಾರೋಹಣವನ್ನು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾಡಲಿದ್ದು, ಮಹಾರಾಷ್ಟ್ರದ ಲಿಂಗಾಯತ ಸಮಾಜದ ಮುಖಂಡ ಮಿಲಿಂದ್ ಸಾಕರ್ಪೆ ಜೇಬಿನ ದಿನದರ್ಶಿಕೆ ಆವೃತ್ತಿ ಹಾಗೂ ಬೀದರ ವಿ.ವಿ. ಸಿಂಡಿಕೇಟ್ ಸದಸ್ಯ ನಾಗಭೂಷಣ ಕಮಠಾಣೆ “ಲಿಂಗಾಯತ ಧರ್ಮ ಸಾರ” ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಮೇಳದ ಸಾನಿಧ್ಯವನ್ನು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ, ಸಮ್ಮುಖವನ್ನು ಮಾತೆ ಸತ್ಯಾದೇವಿ, ಪೂಜ್ಯ ಜಯಬಸವಾನಂದ ಸ್ವಾಮೀಜಿ ಚಿಕ್ಕಮಗಳೂರು ಸೇರಿದಂತೆ ನಾಡಿನ ಹಲವು ಪೂಜ್ಯರು ಪಾಲ್ಗೊಳ್ಳಲಿದ್ದಾರೆ.

ಅಂದು ಸಾಯಂಕಾಲ. 6 ಗಂಟೆಗೆ ಅನುಭಾವಗೋಷ್ಠಿ ಜರುಗಲಿದ್ದು, ಉದ್ಘಾಟನೆ ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ ನೆರವೇರಿಸಲಿದ್ದು, ಅಧ್ಯಕ್ಷತೆ ಶಾಸಕ ವಿಜಯಾನಂದ ಕಾಶಪ್ಪನವರ ವಹಿಸಲಿದ್ದಾರೆ. ಧ್ವಜಾರೋಹಣ ಹುನಗುಂದ ತಹಶೀಲ್ದಾರ ಪ್ರದೀಪ ಹಿರೇಮಠ ಮಾಡಲಿದ್ದಾರೆ. ಅನುಭಾವ ಹಿರಿಯ ರೈಲ್ವೆ ಅಭಿಯಂತರ ಸಚ್ಚಿದಾನಂದ ಚಟ್ನಳ್ಳಿ, ನಿವೃತ್ತ ಕೆಎಎಸ್ ಅಧಿಕಾರಿ ಎಸ್. ದಿವಾಕರ ನೀಡಲಿದ್ದಾರೆ.
ಜನವೆರಿ. 14 ರಂದು ಬೆ. 10 ಗಂಟೆಗೆ ಲಿಂಗಾಯತ ಧರ್ಮ ಸಂಸ್ಥಾಪನಾ ದಿನಾಚರಣೆ ಜರುಗಲಿದ್ದು, ಧ್ವಜಾರೋಹಣ ಕಮಲಮ್ಮ ಮುರುಗೇಶ ನಿರಾಣಿ ಮಾಡಲಿದ್ದಾರೆ. ಸರ್ವ ಪೂಜ್ಯರಿಂದ ಉದ್ಘಾಟನೆ ನೆರವೇರಲಿದ್ದು, ಅಂದು ಸಮುದಾಯದ ಪ್ರಾರ್ಥನೆ, ಸಾಮೂಹಿಕ ಇಷ್ಟಲಿಂಗ ಪೂಜೆ, ವಚನ ಪಠಣ, ಶರಣ ವೃತಧಾರಿಗಳಿಗೆ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ಕಡೆಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಶರಣರು ಪಾಲ್ಗೊಳ್ಳಲಿದ್ದಾರೆ. ಆಗಮಿಸುವ ಭಕ್ತರಿಗೆ ವಸತಿ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಪೂಜ್ಯ ಸ್ವಾಮೀಜಿ ಕೋರಿದ್ದಾರೆ.
ಫಕೀರಪ್ಪ ಬೇವಿನಗಿಡದ, ಸೂರ್ಯಕಾಂತ ಶೀಲವಂತ, ಅಶೋಕ ಶೀಲವಂತ, ವೈ.ಎಸ್. ನಂದ್ಯಣ್ಣವರ, ಸಿ.ಎನ್. ಕೂಸಪ್ಪನವರ, ಗಿರಿಜಮ್ಮ ಮಂಡ್ಯಾಳ, ಮಲ್ಲಿಕಾರ್ಜುನ ಹನಗಂಡಿ, ಸಂತೋಷ ಕೋಲಕಾರ ಸೇರಿದಂತೆ ಹಲವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
