“ಅಂದು ಕೈಗೊಳ್ಳುವ ನಿರ್ಣಯ ಸಸ್ಪೆನ್ಸ ಇದೆ, ಅಂದೇ ತಿಳಿಸುತ್ತೇವೆ.”
ಕೂಡಲಸಂಗಮ :

ಬಸವ ಸಂಸ್ಕೃತಿ ಅಭಿಯಾನ ಯಶಸ್ಸಿನ ಹಿನ್ನೆಲೆಯಲ್ಲಿ ನವೆಂಬರ್ ೧೧ ರಂದು ಕೂಡಲಸಂಗಮದಲ್ಲಿ ಲಿಂಗಾಯತ ಮಠಾಧೀಶರ ಔತಣಕೂಟವನ್ನು ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೂಜ್ಯ ಮಹಾದೇಶ್ವರ ಸ್ವಾಮೀಜಿ ಹೇಳಿದರು.
ಗುರುವಾರ ಕೂಡಲಸಂಗಮ ಬಸವಧರ್ಮ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಪರ ಇರುವ, ಬಸವತತ್ವದ ಸ್ವಾಮೀಜಿಗಳು ಈ ಔತಣಕೂಟದಲ್ಲಿ ಭಾಗವಹಿಸುವರು. 250ಕ್ಕೂ ಅಧಿಕ ಮಠಾಧೀಶರು ಈ ಸಭೆಗೆ ಬರುವರು. ಅಂದೇ ಮುಂದಿನ ಕಾರ್ಯಕ್ರಮದ ರೂಪರೇಷೆಗಳನ್ನು ಚರ್ಚಿಸಲಾಗುವುದು.
“ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ, ಸಾಣೇಹಳ್ಳಿ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ನಿಜಗುಣಾನಂದ ಸ್ವಾಮೀಜಿ ಮುಂತಾದ ಶ್ರೀಗಳು ಭಾಗವಹಿಸುವರು. ಅಂದು ಕೈಗೊಳ್ಳುವ ನಿರ್ಣಯ ಸಸ್ಪೆನ್ಸ ಇದೆ, ಅಂದೇ ತಿಳಿಸುತ್ತೇವೆ,” ಎಂದರು.
“ಕನ್ನೇರಿ ಶ್ರೀಗಳು ಹೇಳ್ತಾರೆ ಬಸವತತ್ವದ ಮಠಾಧೀಶರು ವಿಭೂತಿ ಧರಿಸೋದಿಲ್ಲ ಅಂತ. ನಾವು ಎಲ್ಲರೂ ವಿಭೂತಿ ಧಾರಣೆ ಮಾಡಿಕೊಳ್ಳುವವರೆ ಅವರ ಹಾಗೆ ಕುಂಕುಮ ಹಚ್ಚಿಕೊಳ್ಳೋದಿಲ್ಲ. ಲಿಂಗಾಯತ ಮಠಾಧೀಶರ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈದಿರುವುದು ತಪ್ಪು. ಯಾವ ಮಠಾಧೀಶರು ಅಂತಹ ಶಬ್ದ ಬಳಸಬಾರದು,” ಎಂದು ಹೇಳಿದರು.
 
							 
			     
			
 
                                