‘ಅಪ್ಪ ಮದ್ಯವ್ಯಸನಿ ಆಗಿದ್ದು, ಬೇಸತ್ತ ತಾಯಿ ತವರು ಮನೆ ಸೇರಿದ್ದಾರೆ. 6ನೇ ತರಗತಿ ಓದುತ್ತಿದ್ದೇನೆ. ಶಾಲೆ ಬಿಟ್ಟು ತಾಯಿ ಜತೆಗೆ ಹೋಗಲು ಆಗುತ್ತಿಲ್ಲ.’
ಬೆಳಗಾವಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮದ್ಯವ್ಯಸನಿ ತಂದೆಯಿಂದ ತೊಂದರೆಗೆ ಒಳಗಾಗಿದ್ದ ಬಾಲಕಿಯೊಬ್ಬಳನ್ನು ಶುಕ್ರವಾರ ರಕ್ಷಿಸಿ, ಆಕೆಯ ಕಲಿಕೆಗೆ ಹಾಸ್ಟೆಲ್ ವ್ಯವಸ್ಥೆ ಮಾಡಿದರು.
ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಗೆ 12 ವರ್ಷದ ಬಾಲಕಿ ಬಂದು ಸಮಸ್ಯೆ ಹೇಳಿ ಕಣ್ಣೀರು ಹಾಕಿದಳು. ಬಾಲಕಿಯ ಜೊತೆಗೆ ಅವಳ ಅಜ್ಜಿಯೂ ಪರಿಸ್ಥಿತಿ ಮನವರಿಕೆ ಮಾಡಿದರು.
ಹಿರೇಬಾಗೇವಾಡಿಯವಳಾದ ಬಾಲಕಿಯ ತಂದೆ ನಿತ್ಯ ಕುಡಿದು ಬಂದು ಬಾಲಕಿಗೆ ಮತ್ತು ಆಕೆಯ ತಾಯಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ತಾಯಿ ತವರು ಮನೆ ಸೇರಿದಳು. ಆದರೆ, ಅಲ್ಲಿನ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ ಓದು ಬಿಟ್ಟು ಹೋಗಲು ಒಪ್ಪಲಿಲ್ಲ. ಆದರೆ ತಂದೆಯ ಹಿಂಸೆಯನ್ನು ಸಹಿಸುವುದೂ ಸಾಧ್ಯವಿರಲಿಲ್ಲ.
‘ಅಪ್ಪ ಮದ್ಯವ್ಯಸನಿ ಆಗಿದ್ದು, ಅವ್ವನಿಗೆ ನಿತ್ಯವೂ ಹಿಂಸೆ ಕೊಡುತ್ತಿದ್ದ. ಬೇಸತ್ತ ತಾಯಿ ತವರು ಮನೆ ಸೇರಿದ್ದಾರೆ. ಹಿರೇಬಾಗೇವಾಡಿಯ ಖಾಸಗಿ ಶಾಲೆಯಲ್ಲಿ ನಾನು 6ನೇ ತರಗತಿ ಓದುತ್ತಿದ್ದೇನೆ. ಶಾಲೆ ಬಿಟ್ಟು ತಾಯಿ ಜತೆಗೆ ಹೋಗಲು ಆಗುತ್ತಿಲ್ಲ. ಎಲ್ಲಿಯಾದರೂ ಹಾಸ್ಟೆಲ್ ಸೌಲಭ್ಯ ಕಲ್ಪಿಸಿ’ ಎಂದು ಬಾಲಕಿ ಕೋರಿದಳು.
ಹಾಗಾಗಿ ಸಚಿವೆ ಅವರ ಬಳಿ ಹೋದರೆ ಏನಾದರೂ ಪರಿಹಾರ ಸಿಗಬಹುದು ಎಂದು ಅಜ್ಜಿಯನ್ನು ಕರೆದುಕೊಂಡು ಬಂದಿದ್ದಳು.
ತಕ್ಷಣ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ನಾಗರಾಜ ಅವರಿಗೆ ಕರೆ ಮಾಡಿದ ಲಕ್ಷ್ಮೀ ಹೆಬ್ಬಾಳಕರ್, ತಮ್ಮ ಇಲಾಖೆಯ ಸವದತ್ತಿ ಬಾಲಕಿಯರ ವಸತಿ ನಿಲಯದಲ್ಲಿ ಬಾಲಕಿ ಉಳಿದುಕೊಳ್ಳಲು ಮತ್ತು ವಿದ್ಯಾಭ್ಯಾಸ ಮುಂದುವರಿಸಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಬಾಲಕಿಗೆ ಅಗತ್ಯವಾದ ಬಟ್ಟೆ ಮತ್ತಿತರ ವಸ್ತುಗಳನ್ನು ಖರೀದಿಸಲು ಆರ್ಥಿಕ ನೆರವನ್ನೂ ಸಚಿವರು ಒದಗಿಸಿದರು. ಈ ಬಾಲಕಿ ನನ್ನ ಮಗಳಿದ್ದಂತೆ, ಅವಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಬಾಲಕಿಯನ್ನು ಸಂತೈಸಿದ ಲಕ್ಷ್ಮೀ ಹೆಬ್ಬಾಳಕರ್, ನಿನ್ನ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ಉತ್ತಮವಾಗಿ ಓದಿ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಹಾರೈಸಿದರು.
ತಮ್ಮ ಸೇವೆಯಲ್ಲಿ ಬಸವ ತತ್ವ ಉಳಿಸಿದ ಕಿತಿ೯ ತಮ್ಮದಾಗಿದೆ ತಮಗೆ ಗುರು ಬಸವ ತಂದೆ ಒಳಿತು ಮಾಡಲಿ