ಕುಂಭಮೇಳ ಭಾಗ್ಯ: ವಚನಗಳನ್ನು ಸುಟ್ಟವರಿಂದ ಬಂದಿರುವ ಆಹ್ವಾನ (ಅಳಗುಂಡಿ ಅಂದಾನಯ್ಯ)

ಬಸವ ಮೀಡಿಯಾ
ಬಸವ ಮೀಡಿಯಾ

ಬೆಳಗಾವಿ

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಅಳಗುಂಡಿ ಅಂದಾನಯ್ಯ ಅವರ ಪ್ರತಿಕ್ರಿಯೆ.

1 .ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು?

ಭಾರತದಲ್ಲಿ, ವಿಭಿನ್ನತೆ ಹಾಗೂ ವಿಶಿಷ್ಟತೆಯುಳ್ಳ ತತ್ವಾಚರಣೆಯಲ್ಲಿ ಶೃದ್ಧೆ ನಂಬಿಕೆ ಇರುವಂತಹ ಅನೇಕ ಪಂಥ ಪಂಗಡಗಳ ಸಮುಚ್ಚಯವಿರುವ ಧರ್ಮಗಳಿದ್ದು, ಅಂಥವುಗಳಲ್ಲಿ ಈ ಲಿಂಗಾಯತ ಧರ್ಮವೂ ಒಂದು. ಅಂದು ಶ್ರೇಣೀಕೃತ ವೈದಿಕ ವ್ಯವಸ್ಥೆಯ ನಿರಾಕರಿಸಿದ ಬಸವಣ್ಣ; ಅಲ್ಲಮಾದಿ ಶರಣರ ಒಡಗೂಡಿ ಸ್ವಾನುಭವದ ಕಾಯಕ ಪ್ರಜ್ಞೆ ಜೊತೆಗೆ ದಾಸೋಹದ ನೆಲೆಗಟ್ಟಲ್ಲಿ ಕಟ್ಟಿದಂತಹ ಲಿಂಗಾಯತ ಧರ್ಮದ ಪ್ರಖರ ವೈಚಾರಿಕತೆಯ ಆಚರಣೆಯನ್ನು ಅಂದೇ ಸಹಿಸದ ವೈದಿಕರಾದಿ ಪುರೋಹಿತಶಾಹಿ ಪಟ್ಟಭದ್ರರು ವಿಶ್ವಪ್ರಜ್ಞೆಯುಳ್ಳ ಲಿಂಗಾಯತ ಧರ್ಮದ ಶರಣರನ್ನ ಬೆನ್ನಟ್ಟಿ ಓಡಿಸಿ ಅವರ ತತ್ವ ಸಿದ್ಧಾಂತಗಳ ಬೀಜ ಸ್ವರೂಪವಾಗಿದ್ದ ವಚನಗಳನ್ನು ಸುಟ್ಟು ಹಾಕಿದ ಕ್ರೌರ್ಯದ ಚರಿತ್ರೆ ಯನ್ನು ಕಾಲಾಂತರದಲ್ಲಿ ತಿದ್ದುವ ತಿರುಚುವಂಥ ಕೆಲಸ ಇಂದಿಗೂ ಮುಂದುವರಿದ ಭಾಗವೇ ಈ ಕುಂಭಮೇಳದ ಆಹ್ವಾನದ ಉದ್ದೇಶ ಇದ್ದೀತು!

ಬಹುಸಂಖ್ಯಾತ ಲಿಂಗಾಯತರಲ್ಲಿ ವೈದಿಕಾಚರಣೆ ಉಳ್ಳ ವೀರಶೈವ ಮಠಾಧೀಶರನ್ನ ಬಳಸಿಕೊಂಡು ತಮ್ಮ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಕಸುವನ್ನು ತುಂಬಿ ಈ ಕುಂಭ ಮೇಳವನ್ನು ಇನ್ನೂ ಬೃಹತ್ ಸ್ವರೂಪದಲ್ಲಿ ಜಗತ್ತಿಗೆ ತೋರಿಸುವುದೂ ಅವರ ಮುಖ್ಯ ಉದ್ದೇಶ ಇರಬಹುದು ಎನಿಸುತ್ತದೆ.

2 ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ ಯಾರಿಗೆ ಬರುತ್ತದೆ?

ಇದನ್ನು ಖಚಿತವಾಗಿ ಹೀಗೀಗೇ ಎಂದು ಖಂಡಿತಾ ಹೇಳಲಾಗದು. ಊಹಿಸಿ ಹೇಳುವುದಾದರೆ; ಕೆಲ ಅಳಿಮನದ ಲಿಂಗಾಯತ ಮಠಾಧೀಶರಿಗೆ ಮತ್ತು ಹಸಿದ ವೀರಶೈವ ಮಠಾಧೀಶರಿಗೆ ಕಪ್ಪು ಕಾಣಿಕೆಯನ್ನ ಯಥೇಚ್ಛವಾಗಿ ನೀಡುವ ಆಮಿಷಕ್ಕೆ ಬಲಿ ಹಾಕಬಹುದು. ರಾಜಕಾರಣಿಗಳಿಗೆ; ಅಧಿಕಾರದ ಹಾಗೂ ಹಣದಾಶೆಯ ಜೊತೆಗೆ ಕೇಸ್ ಗೀಸ್ ಇದ್ದರೆ ಅವನ್ನು ರದ್ದುಪಡಿಸುವ ಭರವಸೆಯ ಆಶೆ ತೋರಿಸಲೂ ಬಹುದು. ಮುಖಂಡರಿಗೆ ತತ್ವಚಿಂತಕರಿಗೆ ಹಾಗೂ ಪ್ರಮುಖ ಲೇಖಕರಿಗೆ; ಅಧಿಕಾರ ಪ್ರಶಸ್ತಿ ಪದವಿ ನಗದು ಪುರಸ್ಕಾರಗಳಂತಹ ಕ್ಷುದ್ರ ಆಮಿಷಗಳಿಗೆ ಕಟ್ಟಿ ಹಾಕಲೂ ಬಹುದೇನೋ!

3 .ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?

ಬಹುತೇಕ ಈಗೀಗ ನಿಜವಾದ ಲಿಂಗಾಯತರಿಗೆ ಸತ್ಯದ ಅರಿವಂತೂ ನಿಜಕ್ಕೂ ಮೂಡುತ್ತಲಿದೆ. ಆದರೆ ತೀರಾ ಹಳೆಯ ತಲೆಮಾರಿನ ಹಿರಿಯರಿಗೆ ಮತ್ತು ಹೊಸ ತಲೆಮಾರಿನ ಪಡ್ಡೆ ಹುಡುಗರಿಗೆ ಮಾತ್ರ, ಬಸವಾದಿ ಶರಣರ ಹಾಗೂ ವಚನಗಳ ಜೊತೆಗೆ ನಿಜ ಲಿಂಗಾಯತದ ರಕ್ತಸಿಕ್ತ ಚರಿತ್ರೆಯ ಅರಿವೇ ಇಲ್ಲ. ಈ ಕಾರಣಕ್ಕೆ ವೈದಿಕಾದಿ ವೀರಶೈವರ ಸುಳ್ಳು ಮಾತುಗಳ ಜಾಲದಲ್ಲಿ ಬಿದ್ದು ಒದ್ದಾಡುತ್ತ ವೀರಶೈವ ಲಿಂಗಾಯತ ಒಂದು ಎಂದು ಹಿರಿಕರು ಹೇಳಿದ್ರೆ, ಪಡ್ಡೆ ಹುಡುಗರೋ ಹಿಂದೂ ಧರ್ಮದ ಒಂದೇ ರಾಷ್ಟ್ರದ ಸಮೂಹ ನಸೆಯಲ್ಲಿ ಕೇಸರಿ ರಿಬ್ಬನ್ ತಲೆಗೆ ಕಟ್ಟಿ ಕುಣಿದು ಕುಪ್ಪಳಿಸುತ್ತಿದ್ದಾರೆ!

ಈ ಎಲ್ಲಾ ವೈರುಧ್ಯಗಳನ್ನು ಸಹಿಸಿ, ಈಗಾಗಲೇ “ಲಿಂಗಾಯತಕೆ ಸ್ವತಂತ್ರ ಧರ್ಮದ ಸಂವಿಧಾನಿಕ ಮಾನ್ಯತೆಯ ಹೋರಾಟ” ದಲ್ಲಿ ತೊಡಗಿದಂತೆ ಇಡೀ ಲಿಂಗಾಯತ ಸಮುದಾಯವೇ ಒಂದಾಗಿ ಬೀದಿಗೆ ಬರುವಂತೆ ಮಾಡಲು; ಲಿಂಗಾಯತದ ಮಠಾಧೀಶರು, ಪ್ರಜ್ಞಾವಂತ ಶರಣ ಚಿಂತಕರು, ಬಸವಾದಿ ಶರಣರ ಹೆಸರಿನ ಸಂಘಟನೆಗಳು ಮಹಿಳೆಯರು ಮತ್ತು ಯುವಕರು ಜೊತೆಯಲ್ಲಿ ಜಾಗೃತಿಯನ್ನು ಮೂಡಿಸಿಕೊಂಡರೆ ಮಾತ್ರ ಇಂಥ ಹುನ್ನಾರಗಳನ್ನು ಹಿಮ್ಮೆಟ್ಟಿಸಿ ಬಸವ ಬೆಳಗಿನಲ್ಲಿ ಬಾಳಬಹುದಾಗಿದೆ.

4 .ನಿಮ್ಮ ವೈಯುಕ್ತಿಕ ಪ್ರತಿಕ್ರಿಯೆ ಏನು? ನೀವು ಏನು ಮಾಡುತ್ತೀರಿ?

ಇವೆಲ್ಲಾ ಸಂಗತಿಗಳು ಈಗ ನಮ್ಮ ಸುತ್ತ ಮುತ್ತಲ ಬದುಕಿನಲ್ಲಿ ಯಾವ ಎಗ್ಗಿಲ್ಲದೇ ನಡೆಯುತ್ತಿರಲು ನನ್ನ ಪ್ರತಿಕ್ರಿಯೆ; ವಿಷಾದ, ಖೇದ, ಅಸಹಾಯಕ ವಿಷಣ್ಣತೆ ಜೊತೆಗೆ ನಿಜವಾದ ಲಿಂಗಾಯತರೆಲ್ಲ ಒಗ್ಗಟ್ಟಾಗಿ ಎದ್ದೇಳಲಿ ಶರಣರ ತತ್ವ ಸಿದ್ಧಾಂತಗಳ ರಕ್ಷಣೆಗೆ ನಿಲ್ಲಲಿ ಹಾಗೆ ಜಗದ ಜನಮಾನಸದಲ್ಲಿ ಶರಣರು ಬಿತ್ತಿ ಬೆಳೆದ ಬೆಳಕಿನ ದೀಪವ ಹಚ್ಚಲಿ ಎಂದು ಆಶಿಸುತ್ತೇನೆ. ವಯಕ್ತಿಕವಾಗಿ ವಚನಗಳ ಓದಿ ದಿನಕ್ಕೊಂದು ವಚನ ಅನುಸಂಧಾನ ಮಾಡಿ ಜನಮಾನಸಕ್ಕೆ ಶರಣರನ್ನು ಮತ್ತು ವಚನಗಳನ್ನು ಮುಟ್ಟಿಸುವ ಕಾಯಕದಲ್ಲಿ ನಿರಂತರ ತೊಡಗುತ್ತ ಲಿಂಗಾಯತರಲ್ಲಿ ನಿತ್ಯವೂ ಅರಿವು ಆಚರಣೆಯ ಜಾಗೃತಿ ಮೂಡಿಸಲು ಇಂತಹ ಬರವಣಿಗೆಯಲ್ಲಿ ತೊಡಗಿ ಶ್ರಮಿಸುತ್ತೇನೆ.

Share This Article
2 Comments

Leave a Reply

Your email address will not be published. Required fields are marked *