ಬೆಂಗಳೂರು
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಪೂಜ್ಯ ಚನ್ನಬಸವಾನಂದ ಸ್ವಾಮೀಜಿ ಪ್ರತಿಕ್ರಿಯೆ.
ಇತ್ತೀಚೆಗೆ ಲಿಂಗಾಯತರನ್ನು ಕುಂಭಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಯುವ ನಿರ್ಣಯವನ್ನು ಆರ್ ಎಸ್ ಎಸ್ ತೆಗೆದುಕೊಂಡಿರುವುದು ಅತ್ಯಂತ ದುರ್ದೈವದ ಸಂಗತಿ. ಜಾಗೃತಗೊಳ್ಳುತ್ತಿರುವ ಲಿಂಗಾಯತರನ್ನು ಮೂಢನಂಬಿಕೆಗೆ ದೂಡಿ ವೈದಿಕರನ್ನಾಗಿಸುವುದೇ ಇವರ ಕುತಂತ್ರವಾಗಿದೆ. ಇದಕ್ಕೆ ಯಾವ ಲಿಂಗಾಯತರೂ ಬಲಿಯಾಗಬಾರದು. ಲಿಂಗಾಯತರನ್ನು ಮೂಢನಂಬಿಕೆಗೆ ತಳ್ಳಿ, ವೈದಿಕೀಕರಣಗೊಳಿಸಿ, ಲಿಂಗಾಯತ ಸ್ವತಂತ್ರ ಧರ್ಮವಲ್ಲ ಎಂದು ಬಿಂಬಿಸುವ ದುರುದ್ದೇಶ ಆರ್ ಎಸ್ ಎಸ್ ಸಂಘಟನೆಗೆ ಇದೆ.
ನಮಗೆ ಲಿಂಗವುಂಟು, ನಮಗೆ ಲಿಂಗವಂತರೆಂಬರು ಎಂಬ ವೀರಗಣಾಚಾರಿ ಮಡಿವಾಳ ಮಾಚಿದೇವರ ವಚನವಾಣಿಯಂತೆ ನಾವು ಲಿಂಗಾಯತರಾಗಿ ಪ್ರಗತಿಪರ ವಿಚಾರದವರಾಗಿಯೇ ಉಳಿಯಬೇಕು. ಲಿಂಗಾಯತ ಧರ್ಮದಲ್ಲಿ ಕುಂಭಮೇಳದಂತಹ ಅಂಧಶ್ರದ್ದೆಗೆ ಅವಕಾಶವಿಲ್ಲ. ಗುರು ಲಿಂಗ ಜಂಗಮದ ಹೊರತು ಹರಿಯುವ ನೀರನ್ನು, ಉರಿವ ಬೆಂಕಿಯನ್ನು ಪೂಜಿಸುವುದಾಗಲಿ, ನೀರಿನಲ್ಲಿ ಮುಳುಗಿದರೆ ಪುಣ್ಯ ಬರುವುದೆಂಬ ವಿಚಾರವಾಗಲಿ, ಬಸವಪ್ರಣೀತ ಲಿಂಗಾಯತ ಧರ್ಮಕ್ಕೆ ವಿರುದ್ಧವಾದದ್ದು.
ಭಕ್ತಿಯ ಜಲದಲ್ಲಿ ಮೈ ತೊಳೆದು, ಜ್ಞಾನದ ವಸ್ತ್ರವ ಧರಿಸಿ, ತತ್ವದ ಜ್ಯೋತಿಯನ್ನು ಹಿಡಿದು ಆತ್ಮ ಸಾಕ್ಷಾತ್ಕಾರದ ಅನುಭವ ಪಡೆಯುವ ಸ್ವತಂತ್ರ ಧರ್ಮ ಲಿಂಗಾಯತ. ಈ ಧರ್ಮದ ಅನುಯಾಯಿಗಳಾಗಿ, ಸ್ವತಂತ್ರ ವಿಚಾರವಾದಿ ಗುರು ಬಸವಣ್ಣನವರ ವಾರಸುದಾರರಾಗಿ, ಗಾಂಜಾ ಸೇದುವ ಬಾಬಾಗಳ ಕಾಲನ್ನು ತಲೆ ಮೇಲೆ ಇಟ್ಟುಕೊಂಡು ಸ್ನಾನ ಮಾಡಿ ಬರುವ ಮೌಢ್ಯತೆಯ ಕೆಲಸವನ್ನು ಲಿಂಗಾಯತ ಬಾಂಧವರು ಮಾಡಬಾರದು.
ಲೇಖಕರು ಪೀಠಾಧ್ಯಕ್ಷರು, ಶ್ರೀ ಚನ್ನಬಸವೇಶ್ವರ ಜ್ಞಾನಪೀಠ ಬಸವಗಂಗೋತ್ರಿ, ಬೆಂಗಳೂರು
ಅರ್ಥಪೂರ್ಣ ಮಾತುಗಳು. ಎಲ್ಲಾ ಮಠಾಧಿಷರುಗಳು ಈ ನಿಟ್ಟಿನಲ್ಲಿ ಚಿಂತಿಸಲಿ.
ಬಸವಣ್ಣ ಅವರ ತತ್ವ ಎಲ್ಲ ಮಠಾಧೀಶರು ಮಾಡಿದ್ರೆ ತುಂಬಾ ಒಳ್ಳೆದು
ಅರ್ಥಗರ್ಭಿತವಾದ ಮಾತುಗಳು, ಅಣ್ಣ ಬಸವಣ್ಣನವರ ತತ್ವಗಳು ಸರ್ವಕಾಲಿಕ ಹಾಗೂ ಪ್ರಗತಿಶೀಲವಾಗಿದ್ದು, ಇಡೀ ಮಾನವ ಕುಲಕ್ಕೆ ಶ್ರೇಷ್ಠತೆಯನ್ನು ಪ್ರಧಾನ ಮಾಡುವುದು.
ಪ್ರತಿ ಲಿಂಗಾಯತ ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಕ್ರುಅಶೀಲವಾದರೆ! ಬಸವ ತತ್ವಗಳು ವಿಶ್ವಮಾನ್ಯವಾಗುವದು ನಿಸ್ಸಂಶಯ..
ಶರಣು ಶರಣಾರ್ಥಿಗಳು..
ಪೂಜ್ಯ ಚೆನ್ನಬಸವಾನಂದ ಸ್ವಾಮಿಜಿ ಅವರು, ಮಠಾಧೀಶರೆಲ್ಲರೂ ಪಾಲಿಸಬೆಕಾದಂತಹ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ಅನಂತ ಶರಣಾರ್ಥಿಗಳು.🙏🙏
ಅದೆಷ್ಟೋ ಲಿಂಗಾಯತರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ, ವೈದಿಕರ ಗುಲಾಮರಂತೆಯೇ ವರ್ತಿಸುತ್ತಿದ್ದಾರೆ. ಬರೀ ಹೇಳ್ಕೊಳ್ಳೋಕೆ ಲಿಂಗಾಯತರು, ಮಡಿ, ಮೈಲಿಗೆ, ಜಾತಿ ತಾರತಮ್ಯ ಚಾಚೂ ತಪ್ಪದೇ ಆಚರಿಸುತ್ತಾರೆ.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಎಲ್ಲಿಗೆ ಬಂತು ?
ಸತ್ಯವಾದ ಮಾತು ಖಾರವಾದ ಮಾತುಗಳು ಸ್ವಾಮೀಜಿ.
ಶಿಕ್ಷಣದ ಹೆಸರಿನಲ್ಲಿ ಕೆಲವರು ಅಂಗಡಿ ತೆರೆದಿದ್ದಾರೆ.
ಬಸವ ಭಾವಚಿತ್ರ ಬಳಸಿ ಅವರವರನ್ನು ಕಂಡರೆ ಅವರವರಂತೆ ಹಾಡಿ ಸನ್ಮಾನಿಸಿ ಹಣ ಸಂಪಾದನೆ ಮಾಡುವ ಸ್ವಾಮಿಗಳು ಇದನ್ನು ಅರ್ಥ ಮಾಡಿಕೊಳ್ಳುವುದು ಒಳಿತು.
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಭಾಗವಹಿಸಿದ ಸ್ವಾಮೀಜಿಗಳು ಉಲ್ಟಾ ಹೊಡೆದಿದ್ದಾರೆ. ಮೀಸಲಾತಿಯ ಬೆನ್ನು ಹತ್ತಿದ್ದಾರೆ. ಮಠಾಧೀಶರ ಒಕ್ಕೂಟದ ವ್ಯವಸ್ಥೆ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಇತ್ಯಾದಿ ಸಂಸ್ಥೆಗಳಿದ್ದರೂ, ಸ್ವತಂತ್ರ ಧರ್ಮದ ಮಾನ್ಯತೆಯ ಹೋರಾಟದ ಬಗ್ಗೆ ಮೌನ ವಹಿಸಿವೆ. ಅಂದರೆ ಹೋರಾಟದ ಕಾವು ತಣ್ಣಗಾಗಿದೆ ಎಂದರ್ಥ. ಬಸವ ಧರ್ಮ ಪೀಠದ ಲಿಂ.ಮಾತಾಜಿ ಯವರು ಎಲ್ಲಾ ಮಠಾಧೀಶರನ್ನು ಸಂಪರ್ಕಿಸಿ ಹೋರಾಟದ ಮುಂದಾಳತ್ವ ವಹಿಸಿದ್ದರು. ಅವರಂತೆ ಈಗ ಯಾರೂ ಮುಂದಾಗುತ್ತಿಲ್ಲ. ಇದು ಲಿಂಗಾಯತ ಸಮಾಜದ ದುರ್ದೈವ.
🙏🙏🙏👍