ಕುಂಭಮೇಳ ಭಾಗ್ಯ: ಲಿಂಗಾಯತರನ್ನು ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿ (ನಿವೇದಿತಾ ಡಿ.ಪಿ.)

ಬಸವ ಮೀಡಿಯಾ
ಬಸವ ಮೀಡಿಯಾ

ನಾಗನೂರು

ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣ ತತ್ವ ಚಿಂತಕಿ ನಿವೇದಿತಾ ಡಿ.ಪಿ. ಅವರ ಪ್ರತಿಕ್ರಿಯೆ.

280
RSSನವರು ಕುಂಭಮೇಳಕ್ಕೆ ಲಿಂಗಾಯತರಿಗೆ ವಿಶೇಷ ಅಹ್ವಾನ ನೀಡಿರುವುದರ ಉದ್ದೇಶ

ಕುಂಭಮೇಳಕ್ಕೆ ಆಹ್ವಾನ, ಅದರಲ್ಲೂ ಲಿಂಗಾಯತರಿಗೆ ವಿಶೇಷ ಆಹ್ವಾನ ಎಂಬುದೇ ಅಚ್ಚರಿಯ ಸಂಗತಿ. ಪುರಾಣದ ಆಧಾರದ ಮೇಲೆ ನಡೆಯುವ ಒಂದು ಧಾರ್ಮಿಕ ಉತ್ಸವವೇ ಕುಂಭಮೇಳ. ಧರ್ಮಗುರು ಬಸವಣ್ಣನವರು ಹೊಸದಾಗಿ ಆವಿಷ್ಕರಿಸಿದ ಧರ್ಮದ ಕುಡಿಗಳೇ ಲಿಂಗಾಯತರು.

“ಪುರಾಣವೆಂಬುದೊಂದು ಪುಂಡರ ಗೋಷ್ಠಿ” ಎಂಬ ಬಸವಗುರುವಿನ ವಚನದಂತೆ ಲಿಂಗಾಯತರಾದವರು ಪುರಾಣಗಳನ್ನು ಒಪ್ಪದವರು. ಅಷ್ಟೇ ಅಲ್ಲಾ ಕುಂಭಮೇಳದಲ್ಲಿ ಪುಣ್ಯಸ್ನಾನದ ಪರಿಕಲ್ಪನೆ ಇದೆ. ಅಲ್ಲಿನ ನದಿಗಳಲ್ಲಿ ಮಿಂದರೆ ಪಾಪ ಹೋಗುವುದೆಂಬ ನಂಬಿಕೆ. ಲಿಂಗಾಯತರು ಇದರಿಂದ ಹೊರಗಿದ್ದವರು.

“ಮೀಪರೆ ಪೋಪರೆ ಪಾಪವದು ಕೆಸರೇ?” ಎಂಬ ಸರ್ವಜ್ಞನ ವಚನ ಹಾಗೂ

“ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ,
ಬತ್ತುವ ಜಲವ ಒಣಗುವ ಮರವ
ನೆಚ್ಚಿದವರು ನಿಮ್ಮನೆತ್ತ ಬಲ್ಲರಯ್ಯಾ? ಕೂಡಲಸಂಗಮದೇವಾ”

ಎಂಬ ಗುರು ಬಸವಣ್ಣನವರ ವಚನ ನಾವು ಕುಂಭಮೇಳದಲ್ಲಿ ಭಾಗವಹಿಸದಂತೆ ಎಚ್ಚರಿಸುತ್ತವೆ. ಇಷ್ಟಾಗಿಯೂ ಭಾಗವಹಿಸಿದರೆ ಅದು ಧರ್ಮಗುರುವಿಗೆ ಎಸಗಿದ ದ್ರೋಹವಾಗುತ್ತದೆ. ಅಲ್ಲಿ ಹೋಗಿ ಪಾಪ ಕಳೆದುಕೊಳ್ಳುವ ಅಜ್ಞಾನದ ಭರದಲ್ಲಿ, ಈ ಕರ್ಮವನ್ನು ಹೊತ್ತುಕೊಳ್ಳಬೇಕಾಗುತ್ತದೆ. ಆದ್ದರಿಂದ ಲಿಂಗಾಯರು ಬಹಳ ಎಚ್ಚರದಿಂದ ಈ ಸಮಯವನ್ನು ನಿಭಾಯಿಸಬೇಕಿದೆ.

ಮೊದಲು ‘ವಚನದರ್ಶನ’ ನಂತರ ‘ಶರಣರ ಶಕ್ತಿ’ ಇವಾಗ ಕುಂಭಮೇಳ. ಹಂತ ಹಂತವಾಗಿ ಲಿಂಗಾಯರನ್ನು ಮತಾಂತರಗೊಳಿಸುವ ಪ್ರಕ್ರಿಯೆ. ಗುರುಬಸವಣ್ಣನವರ ಹೆಸರನ್ನು ಉಚ್ಛರಿಸದವರ ಬಾಯಲ್ಲಿ ಸದ್ಯಕ್ಕೆ ಅವರ ವಚನಗಳೇ ನಲಿದಾಡುತ್ತಿವೆ. ಕಾರಣ ನಮ್ಮ ದಾರಿಯಲ್ಲಿಯೇ ಬಂದು ನಮ್ಮನ್ನು ಅವರ ದಾರಿಗೆ ಕರೆದುಕೊಂಡು ಹೋಗುವ ಹುನ್ನಾರ ಎಂಬುದು ಇದರಲ್ಲಿ ಸ್ಪಷ್ಟವಾಗಿದೆ. ನಾವೆಲ್ಲಾ ಒಂದು ಎಂಬುವ ಅವರ ಘೋಷವಾಕ್ಯದಲ್ಲಿ ಲಿಂಗಾಯತರನ್ನೆಲ್ಲ ಹಿಂದಿಕ್ಕುವ ಧೃಢ ನಿರ್ಧಾರವಿದೆ.

ಹೀಗಿರುವಾಗ ಅವರು ಕುಂಭಮೇಳಕ್ಕೆ ಯಾವ ರೂಪದಲ್ಲಾದರೂ ಆಹ್ವಾನವನ್ನು ಹೊತ್ತು ಬರಬಹುದು. ಹೆಚ್ಚಾಗಿ ಸ್ಥಾನಕ್ಕಾಗಿ ಆಸೆ ಪಡುವ ಕಾವಿಧಾರಿಗಳು, ಜಾತಿ ಹೆಸರಿನಲ್ಲಿ ತಮ್ಮ ಕಾರ್ಯಸಾಧನೆ ಮಾಡುತ್ತಿರುವ ರಾಜಕಾರಣಿಗಳಿಗೆ, ಹಾಗೂ ವೀರಶೈವ-ಲಿಂಗಾಯತ ಒಂದೇ ಎಂಬ ಅಶಿಕ್ಷಿತ ಲಿಂಗಾಯತರು. ಈ ಮೇಲಿನವರೆಲ್ಲಾ ಅವರ Main Target ಎಂದು ಹೇಳಬಹುದು

ಇಷ್ಟು ವರ್ಷಗಳಲ್ಲಿ ಇಲ್ಲದ ಆಹ್ವಾನ ಈಗೇಕೆ ಎಂಬ ಪ್ರಶ್ನೆ ಲಿಂಗಾಯತರಲ್ಲಿ ಬಂದರೆ‌ ಇದಕ್ಕೆ ಪರಿಹಾರ ದೊರೆಯುತ್ತದೆ.
ಕಾರಣ ಇಷ್ಟೇ. ಲಿಂಗಾಯತರು ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವುದು. ಕರ್ನಾಟಕದ ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು. ಲಿಂಗಾಯತರಲ್ಲಿ ಹೆಚ್ಚುತ್ತಿರುವ ಧರ್ಮಪ್ರಜ್ಞೆ. ಇವುಗಳನ್ನೆಲ್ಲ ಹಿಂದಿಕ್ಕಲು ಅಷ್ಟೇ ಅಲ್ಲದೇ ಲಿಂಗಾಯತರನ್ನೇ ಲಿಂಗಾಯತರ ವಿರುದ್ಧ ಎತ್ತಿಕಟ್ಟುವ ಪಿತೂರಿ ಈ ಆಹ್ವಾನದಲ್ಲಿದೆ.‌ ಇದನ್ನು ಸದ್ಯದ ಡಿಜಿಟಲೀಕರಣದ ಭಾಷೆಯಲ್ಲಿ SCAM ಎಂದು ಕರೆಯಬಹುದು. ಬ್ಯಾಂಕಿನ ಹೆಸರಿನಲ್ಲಿ ಆಗುವ ಸ್ಕ್ಯಾಮ್ ಗಳು ನಮ್ಮ ಖಾತೆಯನ್ನು ಖಾಲಿ ಮಾಡಿದರೆ, ಇದು ಲಿಂಗಾಯತರ ಅಸ್ತಿತ್ವವನ್ನೇ ಅಲುಗಾಡಿಸುವ ಸ್ಕ್ಯಾಮ್ ಆಗಿದೆ.

ಹೀಗಿರುವಾಗ ಲಿಂಗಾಯತರು ಏನು ಮಾಡಬೇಕು ಎಂದರೆ, ಯಾವುದೇ ಕಾರಣಕ್ಕೂ ಕುಂಭಮೇಳದ ಆಹ್ವಾನವನ್ನು ಒಪ್ಪಿಕೊಳ್ಳದೇ ನಿರ್ದಾಕ್ಷಿಣ್ಯವಾಗಿ ಅದನ್ನು ತಿರಸ್ಕರಿಸಬೇಕು. ಇಷ್ಟೆಲ್ಲಾ ಮಾಡುವ ಅವರು ನಮ್ಮ ಮನವೊಲಿಸುವಲ್ಲಿ ಶತಾಯ ಗತಾಯ ಪ್ರಯತ್ನ ಮಾಡುತ್ತಾರೆ. ಆದರೂ ಧರ್ಮನಿಷ್ಠರಾದ ನಾವು ನಮ್ಮ ಧರ್ಮದ ಕಾನೂನಿಗೆ ಬದ್ಧರಾಗಿರಬೇಕೇ ಹೊರತು, ಬೇರೆಯವರ ಆಮಿಷಕ್ಕೆ ಒಳಗಾಗಬಾರದು.

ಶರಣ ಬಂಧುಗಳೇ, ನಮ್ಮ ಧರ್ಮದ ಉಳಿವಿಗಾಗಿ ಹೋರಾಡುವ ಸತ್ವಪರೀಕ್ಷೆಯ ಕಾಲ ಬಂದಿದೆ, ಅದನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ನಾವು ಸಮಾಜಕ್ಕೆ ಲಿಂಗಾಯತರು ಎಂದರೆ ಯಾರು ಎನ್ನುವ ನಿಜವಾದ ಚಿತ್ರಣವನ್ನು ಮನದಟ್ಟು ಮಾಡಬೇಕಿದೆ.

ಲೇಖಕರು ನಾಗನೂರಿನ ಗುರುಬಸವ ಮಠದ ಕಾರ್ಯದರ್ಶಿಯಾಗಿ ಬಸವ ತತ್ವ ಪ್ರಚಾರ ಮಾಡುತ್ತಿದ್ದಾರೆ

Share This Article
6 Comments
  • ಸತ್ಯವನ್ನ ಲಿಂಗಾಯತರು ಅರಿಯಬೇಕಿದೆ. ಲಿಂಗಾಯತರು
    ಯಾವುದೇ ಪಕ್ಷವಿರಲಿ ನಮ್ಮ ಲಿಂಗಾಯತ ತತ್ವಸಿದ್ದಾಂತಗಳನ್ನ ತಿಳಿದು ಕುತಂತ್ರಗಳ ವಿರುದ್ಧ ಎಚ್ಚರವಹಿಸಬೇಕಿದೆ .ಒಬ್ಬ ಸಂಶೋಧಕರು ಹೇಳುವಂತೆ *ಲಿಂಗಾಯತರು ನಿಧಿಯ ಮೇಲೆ ನಿಂತ ಬಿಕ್ಷುಕರು* ಅಂದರೆ ಬಸವಾದಿಪ್ರಮಥರು ನೀಡಿರುವ ಅಮೂಲ್ಯವಾದ ವಿಚಾರಗಳು ನಿಧಿಯಂತೆ ಆದರೆ ಅವುಗಳ ಅರಿಯದೆ ಬೇರೆ ಯಾರದೋ ಕುತಂತ್ರಗಳ ವಿಚಾರಕ್ಕೆ ಮಾರು ಹೋಗಿ ಊರು ಊರು ಸುತ್ತುತ್ತಾ ಬಸವಾದಿಪ್ರಮಥರ ವಿಚಾರ ನಿಧಿಯ ಮರೆತು ಬಿಕ್ಷುಕರಂತಾಗಿದ್ದೇವೆ..
    ಆದ್ದರಿಂದ ಕುಂಭಮೇಳದ ಅವಶ್ಯಕತೆ ಲಿಂಗವಂತರಿಗೆ ಬೇಕಾಗಿಲ್ಲ

  • ಶರಣು ಶರಣಾರ್ಥಿ ನಿಮ್ಮ ಮಾತು 100ಕ್ಕೆ 100 ಸರಿಯಾಗಿದೆ

  • ಯಾರೂ ಹೋಗಬಾರದು.. ಸ್ನಾನ ಮಾಡಿ ಪಾಪ ಕಳೆದು ಕೊಳ್ಳುವ ಕಲ್ಪನೆಯೇ ಮೂರ್ಖತನದ ಪರಮಾವಧಿ.
    ಬರೀ ಮೌಡ್ಯ.

  • ಕೆಲವು ಜಾತಿ ಲಿಂಗಾಯತ ಮಠಾಧಿಪತಿಗಳು ಮತ್ತು ರಾಜಕಾರಣಿಗಳು
    ಲಿಂಗಾಯತರನ್ನು ವೈದಿಕರ ಗುಲಾಮರಾಗಿ ನೂಕತಾ ಇದ್ಧಾರೆ…

  • ಕಂಡ ಕಂಡ ನೀರಲ್ಲಿ ಮುಳುಗಿ, ಮರವ ಸುತ್ತಿ, ಕಲ್ಲು ಕಟ್ಟಿಗೆ ಮೂರ್ತಿ ದೇವರುಗಳ ದರ್ಶನಕ್ಕೆ ಹೋಗಿ ಕೈ ಮುಗಿಯುವ ಮೂರ್ಖರಿಗೆ ಬದಲಾಗಲು ಶತಮಾನಗಳೇ ಬೇಕೆನೋ ವಚನಗಳು ಓದಿದರು, ಕೇಳಿದರು ಬುದ್ಧಿಗೇಡಿಗಳ ತಲೆ ಹಾಗೂ ಮನಸ್ಸಿಗೆ ತಟ್ಟುತ್ತಿಲ್ಲ. ನಿಜ ಲಿಂಗಾಯತರೇ ಏಳಿ ಎದ್ದೇಳಿ ಬದಲಾಗಿ. ಬಸವಣ್ಣನವರ ವಚನಗಳ ಭಾವಾರ್ಥ ತಿಳಿದು ಆಚಾರವಂತರಾಗೋಣವೇ ಜೈ ಶ್ರೀ ಗುರು ಬಸವಣ್ಣ 💐🙏🙏🙏🙏

Leave a Reply

Your email address will not be published. Required fields are marked *