ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯಿಂದ ದೂರು, ಪ್ರತಿ ದೂರು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು/ವಿಜಯಪುರ

ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ದೂರು ಪ್ರತಿದೂರು ದಾಖಲಾಗಿದೆಯೆಂದು ಮಾಧ್ಯಮಗಳು ವರದಿ ಮಾಡಿವೆ.

ಬಸವಜಯ ಮೃತ್ಯುಂಜಯ ಸ್ವಾಮೀಜಿ ದೈಹಿಕವಾಗಿ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ಮಂಗಳವಾರ ದೂರು ನೀಡಿದ್ದಾರೆ.

‘ಸ್ವಾಮೀಜಿ ನನ್ನ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದು ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ಸ್ವಾಮೀಜಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸಂತ್ರಸ್ತೆಯು ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ಮುಂಚೆ ಏಪ್ರಿಲ್ 4ರಂದು ಜಯಮೃತ್ಯುಂಜಯ ಸ್ವಾಮೀಜಿ ಇದೇ ಮಹಿಳೆ ಸೇರಿದಂತೆ ನಾಲ್ಕು ವ್ಯಕ್ತಿಗಳ ವಿರುದ್ಧ ವಿಜಯಪುರದ ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿರುವ ಬೆಂಗಳೂರು ಮೂಲದ ಮಹಿಳೆ ಸೇರಿ ನಾಲ್ವರು ಮೂರು ಕೋಟಿ ಹಣಕ್ಕೆ ನನ್ನಲ್ಲಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಪ್ರಚಾರ ಮಾಡುತ್ತೇವೆ. ಅತ್ಯಾಚಾರದ ದೂರು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ,’ ಎಂದು ಆರೋಪಿಸಿದ್ದಾರೆ.

ಇನ್ಸ್‌ಪೆಕ್ಟರ್ ರಾಯಗೊಂಡ ಜಾನಾರ ಅವರು ಸ್ವಾಮೀಜಿಯಿಂದ ದೂರು ಸ್ವೀಕರಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಸ್ವಾಮೀಜಿ ನೀಡಿರುವ ದೂರಿನ ವಿವರ

“ಸುಮಾರು 2-3 ವರ್ಷಗಳ ಹಿಂದೆ ಬೆಂಗಳೂರಿನ ಮಹಿಳೆ ನನ್ನ ಭೇಟಿಯಾಗಿದ್ದಳು. ತಾನು ಲಿಂಗಾಯತ ಸಮುದಾಯದವಳು. ನಾನು ಒಂದು ಫೌಂಡೇಶನ್’ ಮೂಲಕ ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ ಎಂದು ಹೇಳಿಕೊಂಡಿದ್ದಳು. ಪಂಚಮಸಾಲಿ ಮೀಸಲಾತಿ ಹೋರಾಟಕ್ಕೂ ಸಾಥ್ ನೀಡುವುದಾಗಿ ನಂಬಿಸಿದ್ದಳು.

ಕಾಲಕ್ರಮೇಣ ತನ್ನ ಫೌಂಡೇಶನ್‌ಗೆ ಹಣ ನೀಡಬೇಕೆಂದು ಪೀಡಿಸಲು ಶುರುಮಾಡಿದಳು. ಆದರೆ ಸ್ವಾಮೀಜಿ ಹಣ ನೀಡಲು ನಿರಾಕರಿಸಿದಾಗ, ರಾಜಕೀಯ ವ್ಯಕ್ತಿಗಳೊಂದಿಗೆ ಸೇರಿ ತೇಜೋವಧೆ ಮಾಡುವ ಸಂಚು ರೂಪಿಸಿದಳು.

ಕಳೆದ ಫೆಬ್ರವರಿ 11 ರಂದು ವಿಜಯಪುರ ತಾಲೂಕಿನ ಕಗ್ಗೋಡ ಬಳಿ ಸ್ವಾಮೀಜಿ ಅವರ ಕಾರನ್ನು ಅಡ್ಡಗಟ್ಟಿದ ಈ ತಂಡ, ಹಣಕ್ಕಾಗಿ ಬೆದರಿಸಿ ಕಾರಿನ ಗ್ಲಾಸಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬೆಂಗಾವಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.

ಸ್ವಾಮೀಜಿಯವರ ಶಿಷ್ಯ ರಾಜಕುಮಾರ್ ಸಿ.ಎಂ. ಎಂಬುವವರ ಮೊಬೈಲ್‌ಗೆ ಕರೆ ಮಾಡಿದ ಮಹಿಳೆ, 3 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಅತ್ಯಾಚಾರದ ರದ ಕೇಸ್ ದಾಖಲಿಸುವುದಾಗಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಮತ್ತು ನನ್ನ ಘನತೆಗೆ ಕುಂದು ತರಲು ಈ ಪಿತೂರಿ ನಡೆಸಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಸಿಟಿ ಸಿವಿಲ್ ನ್ಯಾಯಾಲಯದಿಂದ ಅಪಪ್ರಚಾರ ಮಾಡದಂತೆ ತಡೆಯಾಜ್ಞೆ ತರಲಾಗಿದೆ. ಆದರೂ ಖಾಸಗಿ ವಾಹಿನಿಗಳಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಸ್ವಾಮೀಜಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಮಹಿಳೆ ನೀಡಿರುವ ದೂರಿನ ವಿವರ

ರಕ್ಷಣೆ ಕೋರಿ ಸಂತ್ರಸ್ತೆಯು ರಾಜ್ಯ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ನೀಡಿರುವ ದೂರಿನ ವಿವರ:

“ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ದೈಹಿಕ ಮತ್ತು ಮಾನಸಿಕವಾಗಿ ಲೈಂಗಿಕ ಶೋಷಣೆ ಹಾಗೂ ನನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಪಡಿಸ್ತಿರುವ ಮತ್ತು ಕಿರುಕುಳ ನೀಡುತ್ತಿರುವ ಕುರಿತು ದೂರು ನೀಡುತ್ತಿದ್ದೇನೆ.

ಕೂಡಲ ಸಂಗಮದ ಮಹಾಪೀಠದ ಪೀಠಾಧಿಪತಿಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಭಕ್ತೆ ನಾನು. ಬೆಂಗಳೂರಿಗೆ ಬಂದಾಗ ಹಲವು ಬಾರಿ ಭೇಟಿಯಾಗಿ ಮಾತನಾಡಿ ಅವರ ಹೋರಾಟಕ್ಕೆ ನಾನು ಸಾಥ್ ನೀಡಿದ್ದೆ. ಹೀಗೆ ಪರಿಚಯವಾಗಿದ್ದ ಸ್ವಾಮೀಜಿಯವರು ಅವರು ನನ್ನನ್ನು ಮಠಕ್ಕೆ ಕರೆಸಿ ಪ್ರಸಾದ ಕೊಡುತ್ತೇನೆ ಎಂದು ಹೇಳಿದರು.

ನನ್ನ ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ನನ್ನೊಂದಿಗೆ ಲೋಕಭಿರಾಮವಾಗಿ ಮಾತನಾಡುತ್ತಾ ಅಸಭ್ಯವಾದ ಪದಗಳನ್ನು ಬಳಸಿ, ಮೈಕೈ ಮುಟ್ಟುತ್ತ ನನ್ನೊಂದಿಗೆ ದೈಹಿಕವಾಗಿ ತಪ್ಪಾಗಿ ವರ್ತಿಸಿದ್ದಾರೆ. ಆ ಸಮಯದಲ್ಲಿ ನನ್ನ ತಿಳುವಳಿಕೆಯಿಲ್ಲದೇ ನನ್ನ ಮೇಲೆ ಅವರು ನಡೆಸಿರುವ ಲೈಂಗಿಕ ದೌರ್ಜನ್ಯದ ಖಾಸಗಿ ವಿಡಿಯೋವನ್ನು ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನು ಬಳಸಿ ಅವರೀಗ ನನ್ನನ್ನು ಬ್ಲಾಕ್​ ಮೇಲ್ ಮಾಡುತ್ತಿದ್ದು, ಪ್ರತಿ ರಾತ್ರಿ ಫೋನ್ ಮಾಡಿ ಬೆತ್ತಲೆ ವಿಡಿಯೋ ಕಾಲ್ ಮಾಡು. ಇಲ್ಲದಿದ್ದರೆ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಈ ಕಾರಣದಿಂದ ನನಗೆ ಭಯ ಹಾಗೂ ಮಾನಸಿಕ ಒತ್ತಡ ಹಾಗೂ ಅವಮಾನ ಉಂಟಾಗಿದೆ,” ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಆಯೋಗದ ಪ್ರತಿಕ್ರಿಯೆ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್‌ ಆಯುಕ್ತರು ಮತ್ತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದು, “ಪ್ರಕರಣವನ್ನು ಕೂಡಲೇ ಪರಿಶೀಲಿಸಿ, ಸಂತ್ರಸ್ತೆಗೆ ಅಗತ್ಯವಿರುವ ಕಾನೂನುಬದ್ಧ ನ್ಯಾಯ ಹಾಗೂ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಅದಕ್ಕಾಗಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು” ಎಂದು ಸೂಚಿಸಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಸ್ವಾಮೀಜಿಯವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಆಯೋಗವು ಒತ್ತಾಯಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡುತ್ತ ಚೌಧರಿ 15 ದಿನಗಳ ಒಳಗೆ ಪೊಲೀಸ್ ವರದಿ ಬರಲಿದೆ ಎಂದು ಹೇಳಿದರು.

ಲೈಂಗಿಕ ದೌರ್ಜನ್ಯ ವಿವಾದದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ

ಪೀಠದ ಹೆಸರು ಕೆಡದಿರಲಿ ಎಂದು ಅವರನ್ನು ಹೊರಹಾಕಿದ್ದೆವು: ಕಾಶಪ್ಪನವರ

ದೂರು ಪ್ರತಿದೂರು ವಿವಾದಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ‌ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯೆ ನೀಡಿದ್ದಾರೆ.

‘ಪಂಚಮಸಾಲಿ ಪೀಠದ ಹೆಸರು ಕೆಡದಿರಲಿ ಎಂದು ಸ್ವಾಮೀಜಿ ಅವರನ್ನು ಹೊರಹಾಕಿದ್ದೆವು. ಪ್ರತ್ಯೇಕ ಪೀಠ ಮಾಡುತ್ತೇವೆ ಎಂದು ಕರೆದೊಯ್ದವರು ಈಗ ಉತ್ತರಿಸಬೇಕು’ ಎಂದು ಬಾಗಲಕೋಟೆಯಲ್ಲಿ ಮಾಧ್ಯಮಗಳಿಗೆ ಮಂಗಳವಾರ ಹೇಳಿದರು.

‘ಅನ್ಯಾಯ ಆದ ಮಹಿಳೆ ನ್ಯಾಯ ಕೇಳುವುದು ಸಹಜ. ಚಾರಿತ್ರ್ಯ ಸ್ವಚ್ಛ ಇದ್ದರೆ ಸ್ವಾಮೀಜಿ ಏಕೆ ಕೋರ್ಟ್‌ನಿಂದ ತಡೆಯಾಜ್ಞೆ ತಂದರು’ ಎಂದು ಪ್ರಶ್ನಿಸಿದರು ‘ನಮ್ಮ ಪೀಠ ಬಸವಣ್ಣವರ ಐಕ್ಯ ಸ್ಥಳದಲ್ಲಿದೆ. ಆ ಕ್ಷೇತ್ರ ಅಪವಿತ್ರ ಆಗಬಾರದು ಎಂದು ಸಮುದಾಯದ ಮುಖಂಡರ ಗಮನಕ್ಕೆ ತಂದಿದ್ದೆ’ ಎಂದರು.

‘ಭಕ್ತರು ಕಾವಿ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಯಾವ ತತ್ವದ ಆಧಾರದ ಮೇಲೆ ಪೀಠಕ್ಕೆ ಬಂದಿದ್ದರೊ ಅದನ್ನು ಮಾಡಲಿಲ್ಲ. ಬೈ–ಲಾದಲ್ಲಿದ್ದ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಹೊರಹಾಕುವ ಕಠಿಣ ನಿರ್ಧಾರವನ್ನು ಟ್ರಸ್ಟ್‌ ತೆಗೆದುಕೊಂಡಿತು’ ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
2 Comments
  • ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಸ್ವಾಮಿಜಿ ತಪ್ಪಿತಸ್ಥರು ಎಂದಾದಲ್ಲಿ ಪೀಠವವನ್ನು ತ್ಯಜಿಸಲಿ. ಇಂತಹ ಗಂಭೀರವಾದ ಆರೋಪ ಬಂದಿರುವುದರಿಂದ ಮಠ, ಪೀಠ ಗಳನ್ನು ತನಿಖೆ ಮುಗಿಯುವ ತನಕ ತ್ಯಜಿಸಲಿ.

  • ತನಿಖೆ ಯಾಗಬೇಕು ಪೂಜ್ಯ ಸ್ವಾಮೀಜಿಯವರ ತಪ್ಪಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಆದರೆ ತಪ್ಪು ದೂರು ನೀಡಿದ್ದರೇ ಅವರಿಗೂ ಶಿಕ್ಷೆಯಗಲಿ. ಎಂದು ಎಲ್ಲರು ಹೇಳುವದು ಸಹಜ ಇಬ್ಬರು ಒಂದೇಸಮಾಜದವರು.ಸಮಾಜಕ್ಕೆ ಆಗುತ್ತಿರುವ ಕಳಂಕ? ಈ ಕುರಿತು ಮಾತನಾಡುವವರು ಯಾರು

Leave a Reply

Your email address will not be published. Required fields are marked *