ಬೆಳಗಾವಿ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಸಿದ ಆರೋಪದಡಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಇಂದು ಸಂಜೆ ಹಿರೇಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ಪರಿಷತ್ ಕಲಾಪದಲ್ಲಿ ಮಧ್ಯಾಹ್ನ 1 ಗಂಟೆಗೆ ಸಿ.ಟಿ.ರವಿ ಅವರು, ಆಕ್ಷೇಪಾರ್ಹ ಹೇಳಿಕೆ ನೀಡಿದ್ದಲ್ಲದೇ ನನ್ನ ಕಡೆ ನುಗ್ಗಿ ಅಶ್ಲೀಲ ರೀತಿ ಸನ್ನೆ ಮಾಡಿದರು ಎಂದು ಆರೋಪಿಸಿ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಸಿ.ಟಿ.ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಮಾತು, ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸುವರ್ಣ ವಿಧಾನ ಸೌಧದ ಮೆಟ್ಟಿಲ ಮೇಲೆ ಬಿಜೆಪಿಯ ಇತರೆ ಸದಸ್ಯರೊಂದಿಗೆ ಕುಳಿತು ಸಿ.ಟಿ.ರವಿ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಸಿ.ಟಿ.ರವಿ ಅವರನ್ನು ಬಂಧಿಸಲು ಮುಂದಾದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ, ಹೊತ್ತುಕೊಂಡು ಪೊಲೀಸ್ ವಾಹನದೊಳಗೆ ಸೇರಿಸಿ ಕರೆದುಕೊಂಡು ಹೋದರು.
ಪೊಲೀಸರು ಸಿ.ಟಿ.ರವಿ ಅವರನ್ನು ಹೊತ್ತುಕೊಂಡೇ ತಮ್ಮ ವಾಹನದಲ್ಲಿ ಕರೆದೊಯ್ಯುತ್ತಿರುವ ಚಿತ್ರಗಳು ವೈರಲ್ ಆಗಿವೆ.
ವಿಷಯ ತಿಳಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸುವರ್ಣ ವಿಧಾನಸೌಧಕ್ಕೆ ನುಗ್ಗಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಪ್ರಯತ್ನಿಸಿ, ಅವಾಚ್ಯ ಪದಗಳಿಂದ ನಿಂದಿಸಿದರು. ಅವರಿಂದ ತಪ್ಪಿಕೊಂಡು ಓಡುತ್ತಿರುವ ಸಿ.ಟಿ.ರವಿ ವಿಡಿಯೋ ವೈರಲ್ ಆಗಿದೆ.
ಹಲ್ಲೆಯ ಘಟನೆ ಖಂಡಿಸಿ ಬಿಜೆಪಿ ನಾಯಕರು ಸೌಧದ ಮುಂಭಾಗ ಪ್ರತಿಭಟಿಸಿದರು.
ಸಿ.ಟಿ.ರವಿ ನನ್ನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಪರಿಷತ್ ಸಭಾಪತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದ್ದಾರೆ.
ಲಿಂಗಾಯತ ಶಾಸಕ ಸಂಸದರು ಪಕ್ಷಾತೀತವಾಗಿ ಖಂಡಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲೂ ಇವರಿಗೂ ಅದೇ ಗತಿ ಬರಬಹುದು…ಕರ್ನಾಟಕದ ಗೌರವಾನ್ವಿತ ಮಹಿಳೆಯರು ಪ್ರತಿಯೊಬ್ಬರು ಖಂಡಿಸಲೇಬೇಕು…ಇಲ್ಲದಿದ್ದಲ್ಲಿ ಮಹಿಳೆಯರ ಕುಲಕ್ಕೆ ಅವಮಾನ…ಸಿ.ಟಿ.ರವಿ ಹಾಗು ಬಿಜೆಪಿಯ ಕೆಲ ಜನಪ್ರತಿನಿಧಿಗಳಿಗೆ ಈ ದೇಶದ ಹೆಣ್ಣಿನ ಮೇಲೆ ಗೌರವವಿಲ್ಲ ಎನ್ನುವುದಕ್ಕೆ ಇದೆ ಸಾಕ್ಷಿ