ಯುವಕರು ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಲಿ: ಶಾಂತಲಿಂಗ ಶ್ರೀ

ನರಗುಂದ

ಮೊಬೈಲ್ ಹಾಗೂ ಅಲಂಕಾರಿಕ ಅಂಗಡಿಗಳಲ್ಲಿ ಸಾಲು ನಿಲ್ಲುವ ಯುವಸಮುದಾಯ ಪುಸ್ತಕದಂಗಡಿಯ ಕಡೆಗೆ ಮುಖ ಮಾಡಬೇಕು. ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಬಗೆಯ ಅತ್ಯದ್ಭುತ ಗ್ರಂಥಗಳಿವೆ ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು. ನವೀನ ತಂತ್ರಜ್ಞಾನದ ಆಗಮನದಿಂದಾಗಿ ಇಂದು ಎಲ್ಲರಲ್ಲಿಯೂ ಓದುವ ಹವ್ಯಾಸ ಕಡಿಮೆಯಾಗಿ ಜ್ಞಾನದ ಕೊರತೆ ಕಾಡುತ್ತಿದೆ, ಮೊಬೈಲ್ ಹಾಗೂ ಲ್ಯಾಪಟಾಪ್‌ಗಳು ಪುಸ್ತಕಗಳನ್ನು ನುಂಗುತ್ತಿವೆ ಎಂದು ಪೂಜ್ಯ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಪಂಚದ ಇತಿಹಾಸ ಮತ್ತು ಭವಿಷ್ಯಗಳ ಸೇತುವೆಯಾಗಿ ಪುಸ್ತಕಗಳು ಪ್ರಮುಖ ಪಾತ್ರವಹಿಸುತ್ತವೆ. ಪುಸ್ತಕಗಳನ್ನು ಖರೀದಿಸಿ ಓದುವ ಮೂಲಕ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ತಗೆದುಕೊಂಡು ಹೋಗಬೇಕು. ಆ ಶಕ್ತಿ ಇಂದಿನ ಯುವ ಸಮುದಾಯಕ್ಕಿದೆ, ಓದು ದೈವದತ್ತ ವರವಾಗಿದೆ ಅದು ಮಾನವನಿಗೆ ಮಾತ್ರ ಸೀಮಿತವಾಗಿದೆ ಕಾರಣ ಜ್ಞಾನವನ್ನು ಸಂಪಾದಿಸಿದ ವ್ಯಕ್ತಿ ಎಲ್ಲವನ್ನು ಜಯಿಸಬಲ್ಲ ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರದ ಶ್ರೀನಗರದ ಪಹಲ್ಗಾಮ್‌ದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ ಇಬ್ಬರು ಕನ್ನಡಿಗರು ಸೇರಿ ೨೬ ಜನರನ್ನು ದುರುದ್ದೇಶದಿಂದ ಪ್ರತ್ಯೇಕವಾದಿ ಉಗ್ರಗಾಮಿಗಳು ಹತ್ಯೆ ಮಾಡಿರುವುದು ಖಂಡನೀಯ ಹೇಯ ಕೃತ್ಯವಾಗಿದೆ. ಉಗ್ರಗಾಮಿಗಳ ದುಷ್ಟ ಸಂಚಿಗೆ ಬಲಿಯಾದ ಕುಟುಂಬಸ್ಥರಿಗೆ ಈ ಮೂಲಕ ಸಾಂತ್ವನವನ್ನು ಹೇಳುತ್ತೇನೆ. ಉಗ್ರಗಾಮಿಗಳ ಹೇಯ ಕೃತ್ಯಕ್ಕೆ ಪ್ರತಿಯಾಗಿ ಭಾರತ ಸರಕಾರ ಆದಷ್ಟು ಬೇಗ ಅವರ ವಿರುದ್ದ ಕ್ರಮ ತಗೆದುಕೊಳ್ಳಬೇಕು ಎಂದು ಪೂಜ್ಯ ಶಾಂತಲಿಂಗ ಶ್ರೀಗಳು ಇದೇ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ.ಸಾ.ಪ. ಕಾರ್ಯದರ್ಶಿ ಪ್ರೊ.ಆರ್. ಕೆ. ಐನಾಪೂರ ಮಾತನಾಡಿ, ಪುಸ್ತಕಕ್ಕಿಂತ ಉತ್ತಮವಾದ ಗೆಳೆಯ ಬೇರೊಬ್ಬರಿಲ್ಲ. ಅದು ಒಂಟಿತನವನ್ನು ದೂರ ಮಾಡುವುದರ ಜೊತೆಗೆ ದುಶ್ಚಟಗಳ ನಿರ್ಮೂಲನೆಗೆ ಪ್ರಬಲವಾದ ಅಸ್ತ್ರವಾಗಿದೆ. ಒಂದು ಪುಸ್ತಕ ನೂರು ಗೆಳೆಯರಿಗೆ ಸಮ, ಹೀಗಾಗಿ ಪ್ರತಿಯೊಬ್ಬರು ಕನ್ನಡ ಪುಸ್ತಕವನ್ನು ಓದುವ ಮೂಲಕ ಉತ್ತಮ ಜ್ಞಾನವಂತರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರೊ. ಆರ್. ಬಿ. ಚಿನಿವಾಲರ, ವೀರಯ್ಯ ಸಾಲಿಮಠ, ಮಹಾಂತೇಶ ಹಿರೇಮಠ, ಮಂಜುನಾಥ ಹಿರೇಮಠ ಪ್ರಮುಖರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *