ಭಾಲ್ಕಿ:
ಬಸವಬಾಗೇವಾಡಿ ತಾಲೂಕಿನ ಇಂಗಳೇಶ್ವರ ವಿರಕ್ತಮಠದ ಲಿಂಗೈಕ್ಯ ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳವರಿಗೆ ಭಾಲ್ಕಿಯ ಶ್ರೀಮಠದಲ್ಲಿ ಸಭೆ ಮಾಡಿ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಶ್ರದ್ಧಾಂಜಲಿ ಸಭೆಯ ಸಾನಿಧ್ಯವಹಿಸಿ ಪೂಜ್ಯ ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಬಸವತತ್ವದ ಬಗ್ಗೆ ಅಪಾರ ನಿಷ್ಠೆ ಹೊಂದಿದ್ದವರಾಗಿದ್ದರು.
ಇಂಗಳೇಶ್ವರದಲ್ಲಿ ವಚನ ಮಂಟಪ ನಿರ್ಮಿಸಿ ವಿಶ್ವಗುರು ಬಸವಣ್ಣನವರ ವಚನಗಳನ್ನು ಕಲ್ಲಿನ ಮೇಲೆ ಕೆತ್ತನೆ ಮಾಡಿರುವುದು ಐತಿಹಾಸಿಕ ಕಾರ್ಯವಾಗಿದೆ. ಭಕ್ತರಿಂದ ದಾಸೋಹ ರೂಪದಲ್ಲಿ ಹಣವನ್ನು ಸಂಗ್ರಹಿಸಿ, ಪೂಜ್ಯರು ಈ ಕಾರ್ಯ ಮಾಡಿದರು.

ಶ್ರೀಮಠಕ್ಕೆ ಯಾರೇ ಆಗಮಿಸಿದರು ಅವರಿಗೆ ತಾವೇ ಸ್ವತಃ ಪ್ರಸಾದ ಬಡಿಸಿ, ಸಂತೃಪ್ತಿ ಪಡೆಯುತ್ತಿದ್ದರು. ವಚನಗಳ ಕುರಿತು ಅಪಾರ ಭಕ್ತಿ ಹೊಂದಿರುವ ಪೂಜ್ಯರು ಮಾಡಿದ ಕಾರ್ಯ ನಿಜಕ್ಕೂ ಅರ್ಥಪೂರ್ಣವಾದದ್ದು.
ಪೂಜ್ಯರು 98 ವರ್ಷಗಳು ಸಾರ್ಥಕವಾಗಿ ಬದುಕಿ ಸಾವಿರಾರು ಭಕ್ತರ ಬಾಳಿಗೆ ಬೆಳಕಾಗಿದ್ದಾರೆ. ಅವರ ಅಗಲಿಕೆ ನಮಗೆ ತುಂಬಲಾರದ ನಷ್ಟವಾಗಿದೆ ಎಂದು ಪಟ್ಟದ್ದೇವರು ಹೇಳಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು, ತಿಪ್ಪೇರುದ್ರ ಮಹಾಸ್ವಾಮಿಗಳು, ಪ್ರಭುಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು.
ಕಾಶಿನಾಥ ಗಂದಿಗೂಡೆ ದಂಪತಿ, ಸಂಗಮೇಶ ಬಿರಾದಾರ, ರಾಜು ಜುಬರೆ, ಶಿವಪುತ್ರ ಹಾಲಕುಡೆ, ಶಿವಪುತ್ರ ದಾಬಶೆಟ್ಟಿ, ಶರಣು ತೆಲಗಾಣಿ, ವೀರೇಶ ಹುಮನಾಬಾದೆ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
