ಬೈಲಹೊಂಗಲ:
ಮಾನವ ಸಂಸ್ಕೃತಿಯ ಮೂಲಬೇರು ತಾಯಿ. ಕುಟುಂಬವೇ ರೆಂಬೆ-ಕೊಂಬೆ, ಹೂವು, ಮಿಡಿ, ಹಣ್ಣು. ಮನೆಯೇ ಮೊದಲ ಪಾಠಶಾಲೆ, ತಾಯಿ ಮೊದಲು ಗುರು ಎಂಬಂತೆ ಧರ್ಮದ ಮೂಲ ನೆಲೆ ಕುಟುಂಬ ಆಗಿದೆ.
ತಂದೆ ತಾಯಿಗಳು ತಮ್ಮ ಧರ್ಮದ ಆಚಾರ ವಿಚಾರಗಳನ್ನು ತಪ್ಪದೇ ತಾವು ಪಾಲಿಸಿ ಮಕ್ಕಳಿಗೂ ಪಾಲಿಸುವಂತೆ ಹೇಳಿದಾಗ ಒಂದು ಧರ್ಮ, ಸಂಸ್ಕಾರ ಬೆಳೆಯಲು ಸಾಧ್ಯ ಎಂದು ಪತ್ರಿ ಬಸವೇಶ್ವರ ಅನುಭವ ಮಂಟಪದ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಹೇಳಿದರು.

ಪಟ್ಟಣದ ವಿದ್ಯಾನಗರದ ಗಿರಿಜಕ್ಕ ಬಸವರಾಜ ಗದಗ ದಂಪತಿಗಳ ಹೊಸಮನೆಯ ಗುರುಪ್ರವೇಶ ನೇರವೆರಿಸಿ, ಲಿಂಗಾಯತ ಧರ್ಮದ ನಿಜಾಚಾರಣೆಗಳಾದ ಬಸವ ಗುರುಪೂಜೆ, ಇಷ್ಟಲಿಂಗ ಪೂಜೆ, ಇಷ್ಟಲಿಂಗ ದೀಕ್ಷೆ, ಜಂಗಮ ಪೂಜೆ ನೆರವೇರಿಸಿ ಅವುಗಳ ಮಹತ್ವವನ್ನು ತಿಳಿಸಿದರು.
ಗದಗ ದಂಪತಿಗಳಾದಿಯಾಗಿ ಕುಟುಂಬ ಸದಸ್ಯರೆಲ್ಲರೂ ಲಿಂಗದೀಕ್ಷೆ ಪಡೆದುಕೊಂಡು, ಸಮಾರಂಭಕ್ಕೆ ಆಗಮಿಸಿದ ಸರ್ವರಿಗೂ ಕೊಡಿಸಿ, ಎಲ್ಲರೂ ಕೂಡಿ ಇಷ್ಟಲಿಂಗ ಪೂಜೆ ಮಾಡಿಕೊಂಡು ಲಿಂಗಾಯತ ಧರ್ಮದ ಹೆಮ್ಮೆ ಮೆರೆದರು.


ಖ್ಯಾತ ಹೃದಯ ರೋಗತಜ್ಞ ಡಾ. ಮಹಾಂತೇಶ ಗದಗ, ಸ್ತ್ರೀರೋಗ ತಜ್ಞೆ ಡಾ. ಸುಷ್ಮಾ ಗದಗ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಖ್ಯಾತ ವಕೀಲ ಸಿದಣ್ಣ ಗದಗ ಈ ಸಂದರ್ಭದಲ್ಲಿ ಅನುಭಾವ ನೀಡುತ್ತ, ಲಿಂಗಾಯತರು ಮೌಡ್ಯಾಚರಣೆಗಳಿಂದ ಹೊರಬಂದು ನಿಜಾಚರಣೆಗಳನ್ನು ಅಳವಡಿಸಿಕೊಂಡು ಶ್ರೇಷ್ಠತೆ ಮೆರೆಯಬೇಕೆಂದು ಮನವಿ ಮಾಡಿದರು.
ರಾಮದುರ್ಗದ ಖ್ಯಾತ ನೇತ್ರತಜ್ಞೆ ಡಾ. ವಿದ್ಯಾ, ಎಲುವು ಕೀಲುಗಳ ತಜ್ಞ ಡಾ. ಮೃತ್ಯುಂಜಯ ತಡಹಾಳ ದಂಪತಿಗಳು ಹಾಗೂ ಮಗಳು ಲಿಂಗದ ವೈಜ್ಞಾನಿಕ ರಹಸ್ಯ ತಿಳಿದುಕೊಂಡು ಲಿಂಗದೀಕ್ಷೆ ಪಡೆದರು.
ಜಾಗತಿಕ ಲಿಂಗಾಯತ ಮಹಾಸಭಾ, ಕದಳಿ ಮಹಿಳಾ ವೇದಿಕೆ, ಪತ್ರಿ ಬಸವೇಶ್ವರ ಅನುಭವ ಮಂಟಪದ ಅಜಗಣ್ಣ ಹಾಗೂ ಮುಕ್ತಾಯಕ್ಕ ಬಳಗದ ನೂರಾರು ಸದಸ್ಯರು ಉಪಸ್ಥಿತರಿದ್ದು, ನಿಜಾಚರಣೆಯ ಗುರುಪ್ರವೇಶ ಯಶಸ್ವಿಗೊಳಿಸಿದರು. ಬಂದವರೆಲ್ಲ ಸಂತಸಪಟ್ಟು, ಶುಭಹಾರೈಸಿ ಪ್ರಸಾದ ಸ್ವೀಕರಿಸಿದರು.
