ನಂಜನಗೂಡು:
ಪಟ್ಟಣದ ಜೆಎಸ್ಎಸ್ ಮಂಗಲ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಶ್ರೀ ಮಲ್ಲನಮೂಲೆ ಲಿಂಗೈಕ್ಯ ಪೂಜ್ಯ ಚೆನ್ನಬಸವ ಸ್ವಾಮೀಜಿ ಸ್ಮರಣೋತ್ಸವ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಮಲ್ಲನಮೂಲೆ ಚೆನ್ನಬಸವ ಸ್ವಾಮೀಜಿ ಕಾಯಕ-ದಾಸೋಹದ ತತ್ವವನ್ನು ತಮ್ಮ ಆಚರಣೆಯಲ್ಲಿ ಅಳವಡಿಸಿಕೊಂಡಿದ್ದರು, ಭಕ್ತರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆಂದು ತಿಳಿಸಿದರು.

ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರೀಗಳು ತಮ್ಮದೇ ಆದ ಛಾಪು ಮೂಡಿಸಿದ್ದರು. ಜಾತಿ, ಧರ್ಮಾತೀತವಾಗಿ ಭಕ್ತರನ್ನು ಹೊಂದಿದ್ದರು, ಯಾವುದೇ ತಪ್ಪು ಕಂಡು ಬಂದಾಗ ನಿಷ್ಟುರತೆಯಿಂದ ಎಚ್ಚರಿಸುತ್ತಿದ್ದರು. ಅವರು ಕಾರ್ತಿಕ ಮಾಸದ 3ನೇ ಸೋಮವಾರವೇ ದೇಹಾಂತ್ಯ ಮಾಡುವ ಇಂಗಿತ ಹೊಂದಿದ್ದು, ಅದನ್ನು ಆಪ್ತರ ಜೊತೆಗೂ ಹಂಚಿಕೊಂಡಿದ್ದರು ಎಂದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಸದಾಶಿವಮೂರ್ತಿ ನುಡಿನಮನ ಸಲ್ಲಿಸಿದರು. ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿದರು.

ದೇವನೂರು ಗುರುಮಲ್ಲೇಶ್ವರ ಮಠಾಧ್ಯಕ್ಷ ಮಹಾಂತ ಸ್ವಾಮೀಜಿ, ಹುಲ್ಲಹಳ್ಳಿ ವಿರಕ್ತಮಠಾಧ್ಯಕ್ಷ ಚೆನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ, ಶಿರಮಳ್ಳಿ ಮಠಾಧ್ಯಕ್ಷ ಇಮ್ಮಡಿ ಮುರುಗಿ ಸ್ವಾಮೀಜಿ, ನಾಗ ರಾಜೇಂದ್ರ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಎಸ್.ಎಂ. ಕೆಂಪಣ್ಣ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಧ್ಯಕ್ಷ ಎಸ್. ಮಹದೇವಯ್ಯ, ಮಲ್ಲನಮೂಲೆಯ ನಿಯೋಜಿತ ಪೀಠಾಧ್ಯಕ್ಷ ಇಮ್ಮಡಿ ಸಿದ್ದಲಿಂಗ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ, ಗುರುಸ್ವಾಮಿ, ಮುಖಂಡರಾದ ಶಿವಪ್ಪದೇವರು, ಮಹೇಶ, ಬಿ.ಎಸ್. ಮಹದೇವಪ್ಪ, ಶಿವರುದ್ರ, ಗುರುಮಲ್ಲಪ್ಪ, ಎಪಿಎಂಸಿ ಮಾಜಿ ಸದಸ್ಯ ಗುರುಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಮಹದೇವಸ್ವಾಮಿ, ನಂದಿನಿ, ಕೋಮಲ, ಮಹದೇವ ಪ್ರಸಾದ ಮತ್ತಿತರರು ಭಾಗವಹಿಸಿದ್ದರು.
