ಗುಳೇದಗುಡ್ಡ:
ಬಸವ ಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಸಿದ್ದಪ್ಪ ಮಲ್ಲಪ್ಪ ಇದ್ದಲಗಿ ಅವರ ಮನೆಯಲ್ಲಿ ನಡೆಯಿತು. ಅಂದು ಆಯ್ದುಕೊಂಡ ವಚನ:
ಲಿಂಗವಿರದೆ ಸೀಮೆಯ ಕಲ್ಲಿನಲ್ಲಿ
ಲಿಂಗವಿರದೆ ಪಶುವಿನ ತೊಡೆಯಲ್ಲಿ
ಕಲ್ಲ ತಕ್ಕೊಂಡು ಮೆಳೆಯ ಮೇಲೆ ಇಟ್ಟಡೆ
ಆ ಕಲ್ಲು ಮೆಳೆಯಲ್ಲಿ ಸಿಕ್ಕಿದಡೆ
ಆ ಮೇಳೆ ಭಕ್ತನಾಗಬಲ್ಲುದೆ?
ಇದು ಕಾರಣ ಸತ್ಯ, ಸಹಜ, ಸದ್ಭಾವ
ಸದ್ವರ್ತನೆ ಉಳ್ಳಡೆ ಸದ್ಭಕ್ತ
ಇಲ್ಲದಿದ್ದಡೆ ಆ ಮೆಳೆಯೊಳಗೆ ಸಿಕ್ಕಿದಾ ಕಲ್ಲಿನಂತೆ
ಕಾಣಾ ಕೂಡಲಸಂಗಮದೇವಾ
ಬಸವಣ್ಣನವರ ಈ ವಚನವನ್ನು ಪ್ರೊ. ಶ್ರೀಕಾಂತ ಗಡೇದ ಅವರು ನಿರ್ವಚನಗೈಯುತ್ತ, ಅಪ್ಪ ಬಸವಣ್ಣನವರು ಈ ವಚನದಲ್ಲಿ ನಿಜವಾದ ಸದ್ಭಕ್ತನ ವರ್ತನೆ ಹೇಗಿರಬೇಕು ಎಂಬುದನ್ನು ತಿಳಿಸಿದ್ದಾರೆ. ಲಿಂಗವೆಂಬುದು ಅರುಹಿನ ಕುರುಹು ಅದು ಕೇವಲ ಅಲಂಕಾರಕ್ಕಾಗಿ ಧರಿಸಿದ ವಸ್ತುವಲ್ಲ, ತನ್ನನ್ನು ತಾನು ಅರಿತುಕೊಳ್ಳಲು ನೀಡಿದ ಸಾಧನ.
ಯಾವುದೇ ವ್ಯಕ್ತಿ ಲಿಂಗ ಧರಿಸಿದ ಮಾತ್ರಕ್ಕೆ ಭಕ್ತನಾಗಲಾರ. ಅದಕ್ಕೆ ಅನುಗುಣವಾದ ಲಿಂಗ ಗುಣಗಳನ್ನು ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೇವಲ ಡಾಂಭಿಕವಾಗುತ್ತದೆ. ತೋರಿಕೆಗಾಗಿ ಕಟ್ಟಿಕೊಂಡ ಲಿಂಗ ಯಾವ ಫಲವನ್ನು ನೀಡದು. ಮೆಳೆಯಲ್ಲಿ ಸಿಕ್ಕಿಕೊಂಡ ಕಲ್ಲಿನಂತೆ, ಆ ಭಕ್ತನ ಹಾಗೂ ಲಿಂಗದ ಇರುವಿಕೆಯಾಗುತ್ತದೆ ಎಂದು ವಿವರಿಸಿದರು.
ಮಹಾಲಿಂಗಪ್ಪ ಕರನಂದಿ ಅವರು ಇದೇ ವಚನವನ್ನು ಇನ್ನೂ ವಿಸ್ತೃತವಾಗಿ ವಿಸ್ತರಿಸಿ ಹೇಳಿದರು. ಹೊಟ್ಟೆಯ ಮೇಲೆ ಕಟ್ಟಿಕೊಂಡ ಓಗರದಂತೆ ಮೆಳೆಯಲ್ಲಿ ಸಿಕ್ಕಿದ ಕಲ್ಲಿನಂತೆ ಭಕ್ತನ ಲಿಂಗದ ಮೇಲೆ ಧರಿಸಿದ ಲಿಂಗದ ಸ್ಥಿತಿಯಾಗಬಾರದು. ಅದು ತನ್ನ ಅರುಹಿನ ಕುರುವಾಗಬೇಕು. ಲಿಂಗಧಾರಿಯಾಗಿ ಅದಕ್ಕೆ ತಕ್ಕ ಆಚರಣೆಯೂ ಅವಶ್ಯಕವಾಗಿದೆ. ಅದಿಲ್ಲದಿದ್ದರೆ ಲಿಂಗಧಾರಣ ವ್ಯರ್ಥವಾಗುತ್ತದೆ.

ಸಾಮಾನ್ಯವಾದ ಸೀಮೆಯ ಕಲ್ಲಿನಲ್ಲಿ, ಪಶುವಿನ ತೊಡೆಯಲ್ಲಿ ಕಾಣಬರುವ ಲಿಂಗಕ್ಕೂ ಸದ್ವರ್ತನೆ, ಸದ್ಭಾವ ಇಲ್ಲದ ಲಿಂಗಕ್ಕೂ ಯಾವ ವ್ಯತ್ಯಾಸವಿಲ್ಲ. ಅವೆಲ್ಲ ವ್ಯರ್ಥವಾದವುಗಳೇ ಸೈ. ಒಬ್ಬ ಭಕ್ತನಾಗಿ ಎದೆಯ ಮೇಲೆ ಲಿಂಗಧರಿಸಿಕೊಂಡು ಕೇವಲ ಲಾಂಛನ ಧಾರಿಯಾದ ಮಾತ್ರಕ್ಕೆ ಏನೂ ಉಪಯೋಗವಿಲ್ಲ. ಆ ಲಿಂಗಕ್ಕೆ ನಿಷ್ಠನಾಗಿ ಬದುಕಬೇಕು. ಲಿಂಗಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಂದರೆ ಆತ ಸದ್ಭಕ್ತನಾಗುತ್ತಾನೆ. ಇಲ್ಲವಾದರೆ ಲಿಂಗಗುಣರಹಿತನಾದ ವ್ಯಕ್ತಿ ಕಲ್ಲ ಸಿಕ್ಕಿಹಾಕಿಕೊಂಡ ಮೆಳೆಯಂತೆ ಆಗುತ್ತಾನೆ. ಆತ ಭಕ್ತನಾಗಲಾರ ಮತ್ತು ಆತನಿಗೆ ಲಿಂಗ ನೀಡಿದಾತ ಗುರುವಾಗಲಾರ ಎಂದು ಡಾ. ಗಿರೀಶ ಅವರು ಅಭಿಪ್ರಾಯ ಪಟ್ಟರು.
ಇದೇ ವಚನದ ನಿರ್ವಚನವನ್ನ ಸಮಾರೋಪ ಮಾಡಿದ ಮುರಿಗೇಶ ಶೇಖಾ ಅವರು, ತನ್ನನ್ನು ಶಿವನನ್ನಾಗಿ ಮಾಡುವ ಇಷ್ಟಲಿಂಗದ ಮಹತ್ವವನ್ನು ಅರಿಯದೆ, ಅದಕ್ಕೆ ಬೇಕಾದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳದೆ ಕೇವಲ ತೋರಿಕೆಗಾಗಿ ಇಷ್ಟಲಿಂಗಧಾರಿಯಾದರೆ ಏನೂ ಅರ್ಥವಿಲ್ಲ. ಎಲ್ಲವೂ ವ್ಯರ್ಥವಾಗುತ್ತದೆ ಎಂದರು.
ಮುಂದುವರೆದು ಭಕ್ತ ಹಾಗೂ ಗುರುವಿನ ಸಂಬಂಧವನ್ನು ಸೂಕ್ಷ್ಮವಾಗಿ ಈ ವಚನದಲ್ಲಿ ಹೇಳಲಾಗಿದೆ. ಲಿಂಗದ ರೂಪವನ್ನು ಲಿಂಗದ ಆಕಾರಗಳನ್ನು ಎಲ್ಲೆಲ್ಲಿಯೂ ಕಾಣಬಹುದು. ತನಗಿಂತ ಭಿನ್ನವಾದ ಸ್ಥಾವರ ಲಿಂಗದ ರೂಪಗಳನ್ನು ಅಲ್ಲಲ್ಲಿ ಕಾಣಬಹುದು. ಆದರೆ ತನ್ನನ್ನು ತನ್ನ ಮೂಲ ಸ್ವರೂಪಕ್ಕೆ ಕರೆದೊಯ್ಯುವ ಲಿಂಗದ ಮೇಲೆ ಧರಿಸುವ ಇಷ್ಟಲಿಂಗದ ಪರಿಕಲ್ಪನೆಯೇ ಬೇರೆಯಾಗಿದೆ.

ಸೀಮೆಯನ್ನು ಗುರುತಿಸುವ ಅಳತೆ ಕಲ್ಲಿನ ಮೇಲೆಯೂ ಲಿಂಗಮುದ್ರೆಯಿದೆ. ದೇವರ ಗೂಳಿ ಎಂದು ಗುರುತಿಸಿಕೊಳ್ಳುವ ಪಶುವಿನ ಚಪ್ಪೆಯ (ತೊಡೆಯ) ಮೇಲೆಯೂ ಲಿಂಗ ಮುದ್ರೆ ಇದೆ. ಆದರೆ, ಇವೆರಡೂ ಲಿಂಗವೆನ್ನಿಸಿಕೊಳ್ಳುವುದಿಲ್ಲ. ಹಾಗೆಯೇ ಆ ಕಲ್ಲು ಮತ್ತು ಪಶುಗಳು ಲಿಂಗಮುದ್ರೆ ಹೊಂದಿದ್ದರೂ ಭಕ್ತ ಎನಿಸಿಕೊಳ್ಳುವುದಿಲ್ಲ. ಅಂತೆಯೇ ಮೆಳೆ ಪೊದೆಯೊಂದರಲ್ಲಿ ಸಿಕ್ಕಿದ ಲಿಂಗವೂ ಇಷ್ಠಲಿಂಗವಾಗದು ಆ ಮೆಳೆ ಭಕ್ತನಾಗಲಾರದು. ಕಾರಣ ಅಲ್ಲಿ ಲಿಂಗ, ಭಕ್ತ ಸಂಬಂಧವಿಲ್ಲ. ಗುರುವಿನ ಹಸ್ತ ಮಸ್ತಕ ಸಂಯೋಗದಿಂದ ಶಿಷ್ಯನನ್ನು ಗುರುವನ್ನೇ ಆಗಿಸುವ ಅಂಗವನ್ನು ಲಿಂಗವನ್ನೇ ಆಗಿಸುವ ಯಾವ ಶಕ್ತಿಯೂ ಅಲ್ಲಿ ಇಲ್ಲ. ಹಾಗಾಗಿ ಆ ಸೀಮೆಯ ಕಲ್ಲು ಮತ್ತು ಪಶುಗಳು ಸದ್ಭಕ್ತನಾಗಲು ಸಾಧ್ಯವಿಲ್ಲ.
ಲಿಂಗಧಾರಣೆ ಎಂಬುದು ಕೇವಲ ತೋರಿಕೆಗಾಗಿ ಅಲ್ಲ ಅದು ಅನುಸಂಧಾನಕ್ಕಾಗಿ. ಅಂಗದ ಆರು ಇಂದ್ರಿಯಗಳ ಮುಂಬಾಗಿಲಲ್ಲಿದ್ದು, ದುರ್ಗುಣಗಳನ್ನು ಸದ್ಗುಣಗಳನ್ನಾಗಿಸಿ ಆಚಾರಲಿಂಗ, ಗುರುಲಿಂಗಾದಿಯಾಗಿ ಅಂಗವನ್ನು ಭಕ್ತನಿಂದ ಐಕ್ಯನನ್ನಾಗಿಸುವ ಮಹಾ ಸಾಧನ. ಸದಾ ಲಿಂಗದ ಮೇಲಿದ್ದು ಮಹಾಲಿಂಗದತ್ತ ಸಾಗುವ ಮಹಾಮಾರ್ಗ. ಅದನ್ನು ಧರಿಸಿದಾತ ಮಹಾ ಸತ್ಯದ ನಿಲುವನ್ನರಿಯಬೇಕು. ತನ್ನೆಲ್ಲಿ ಬೇಧಭಾವ ತೊರೆದು ಸಹಜನಾಗಿರಬೇಕು. ಆತನು ವರ್ತನೆಯಿಂದ ಶರಣನೇ ಆಗಬೇಕು ಅಂದರೆ ಆತ ಸದ್ಭಕ್ತನಾಗುತ್ತಾನೆಯೇ ವಿನಃ ಲಿಂಗ ಧರಿಸಿದ ಮಾತ್ರಕ್ಕೆ ಭಕ್ತನಾಗಲಾರ. ಅರಿಯದ ವ್ಯಕ್ತಿ ಭಕ್ತನಲ್ಲ. ಅರಿಸಿಕೊಳ್ಳದ ವಸ್ತು ಲಿಂಗವಲ್ಲ. ಲಿಂಗದೊಂದಿಗೆ ಸತ್ಯ, ಸಹಜ, ಸದ್ವರ್ತನೆ ಸದ್ಭಾವ ಇದ್ದಾತ ಮಾತ್ರ ಸದ್ಭಕ್ತನಾಗುತ್ತಾನೆ ಎಂದು ಅಪ್ಪ ಬಸವಣ್ಣನವರು ಸ್ಪಷ್ಟವಾಗಿ ಈ ವಚನದಲ್ಲಿ ತಿಳಿಸಿದ್ದಾರೆ ಎಂದು ಶೇಖಾ ಅವರು ವಿವರಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶೇಖಾ ಅವರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು . ಮಹಾಮನೆಗೆ ಆಗಮಿಸಿದ ಶರಣ-ಶರಣೆಯರನ್ನು ಸಂಘಕರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿ ಆಡಿ, ಶರಣು ಸಮರ್ಪಿಸಿದರು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು.
ಮಹಾಮನೆಯಲ್ಲಿ ಕುಟುಂಬದ ಬಂಧುಗಳಲ್ಲದೆ ಪಾಂಡಪ್ಪ ಕಳಸಾ, ಪುತ್ರಪ್ಪ ಬೀಳಗಿ ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
