ಚಾಮರಾಜನಗರ: ನಂಜದೇವನಪುರ ಗ್ರಾಮದಲ್ಲಿ ಮೊದಲ ಬಾರಿಗೆ ನಿಜಾಚರಣೆ ಗುರುಪ್ರವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಚಾಮರಾಜನಗರ :

ತಾಲೂಕಿನ ನಂಜೇದೇವನಪುರ ಗ್ರಾಮದ ನಿವೃತ್ತ ಶಿಕ್ಷಕರಾದ ರೇವಣ್ಣ ಮತ್ತು ವಸಂತಕುಮಾರಿ ಶರಣ ದಂಪತಿಗಳ ಹೊಸಮನೆಯ ಗುರುಪ್ರವೇಶ ಈಚೆಗೆ ಇಷ್ಟಲಿಂಗ ಪೂಜೆಯೊಂದಿಗೆ ನಡೆಯಿತು.

ಗ್ರಾಮದಲ್ಲಿ ಮೊದಲ ಬಾರಿಗೆ ಲಿಂಗಾಯತ ಧರ್ಮ ಸಂಸ್ಕಾರಗಳೊಂದಿಗೆ ಹೊಸ ಮನೆಯ ಪ್ರವೇಶ ಮಾಡಿ ಮಾದರಿ ದಂಪತಿ ಎನಿಸಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಸಂಬಂಧಿಕರು, ಬಸವಭಕ್ತರು ಹಾಜರಿದ್ದು, ಮೆಚ್ಚುಗೆಯೊಂದಿಗೆ ಸಹಕಾರ ನೀಡಿದರು.

ಮೂಡಗುರು ವಿರಕ್ತಮಠದ ಪೂಜ್ಯ ಇಮ್ಮಡಿ ಉದ್ಧಾನಸ್ವಾಮಿಗಳ ಸಾನಿಧ್ಯ ವಹಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಗ್ರಾಮದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಆವರಣದವರೆಗೆ ಷಟಸ್ಥಲ ಧ್ವಜಗಳು, ಶರಣರ ವಚನಗಳ ಕಟ್ಟುಗಳ ಹೊತ್ತು ಮೆರವಣಿಗೆ ನಡೆಸಲಾಯಿತು.

ಮೆರವಣಿಗೆಯಲ್ಲಿ ಬಸವಾದಿ ಶರಣರಿಗೆ ಜಯಘೋಷ ಮಾಡುತ್ತಾ, ವಚನಗಳ ವಡಪು ಹೇಳುತ್ತ ಗ್ರಾಮದ ಬೀದಿಗಳಲ್ಲಿ ಭಕ್ತಿ ಭಾವದಿಂದ ಸಾಗಿ ಶರಣ ಸಂದೇಶ ಸಾರಲಾಯಿತು. ಅರಿವು ಮೂಡಿಸಲಾಯಿತು.

ನೂತನ ಮನೆಯ ಮುಂಭಾಗದಲ್ಲಿ ಷಟಸ್ಥಲ ದ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ದೇಶದ ಬಗ್ಗೆ ಶಿಕ್ಷಕರಾದ ನಂದೀಶ್ವರ ಅವರು ಮಾತನಾಡಿದರು.

ಸ್ವಾಮೀಜಿಯವರ ನೇತೃತ್ವದಲ್ಲಿ ಕುಟುಂಬಸ್ಥರು, ಬಸವಭಕ್ತರು ವಚನ ಸಂಪುಟ ತಲೆಮೇಲೆ ಹೊತ್ತುಕೊಂಡು ಮನೆಯ ಒಳಗಡೆ ಪ್ರವೇಶ ನಡೆಸಿದರು. ಮನೆಯಲ್ಲಿ ಎಲ್ಲರೂ ಬಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಶುಭಕೋರಲಾಯಿತು.

ಇದೇ ಸಂದರ್ಭದಲ್ಲಿ ನಡೆದ ಅನುಭಾವ ಕಾರ್ಯಕ್ರಮದಲ್ಲಿ ನಂಜನಗೂಡಿನ ಕಾಸು ನಂಜಪ್ಪನವರು, ಜನರು ಕಂದಾಚಾರ, ಮೌಡ್ಯಾಚರಣೆ ಬಿಟ್ಟು ಶರಣರ ಚಿಂತನೆಗಳನ್ನ ಅಳವಡಿಸಿಕೊಂಡು, ಅವರ ಮಾರ್ಗದಲ್ಲಿ ಸಾಗಬೇಕು.

ಪ್ರತಿಯೊಬ್ಬರು ಸರಳವಾಗಿ ಸಾಲಮುಕ್ತ, ಆರೋಗ್ಯವಂತ ಜೀವನವನ್ನು ನಡೆಸಲು ಶರಣರ ಚಿಂತನೆಗಳು ಬಹಳ ಉಪಯೋಗವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಶರಣರ ಚಿಂತನೆಯಂತೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಂತೋಷದ ಜೀವನವನ್ನು ನಡೆಸುವಂತೆ ಹೇಳಿದರು.

ವಿಶ್ವ ಬಸವ ಸೇನೆಯ ಅಧ್ಯಕ್ಷರಾದ ಬಸವಯೋಗೇಶ ಮಾತನಾಡಿ, ಗ್ರಾಮದಲ್ಲಿ ಪ್ರಥಮ ಬಾರಿಗೆ ಇಂತಹ ಉತ್ತಮ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತೋಷ ತಂದಿದೆ. ಕಾರ್ಯಕ್ರಮಕ್ಕೆ ಪೂರ್ವ ತಯಾರಿಯಂತೆ ರೇವಣ್ಣ ಮತ್ತು ವಸಂತಕುಮಾರಿ ಅವರು ವಿಷಯಗಳನ್ನು ತಿಳಿದುಕೊಂಡು ಸಂತೋಷದಿಂದ ಕಾರ್ಯ ನೆರವೇರಿಸಿರುವುದು ಬಹಳ ಸಂತೋಷ ಉಂಟುಮಾಡಿದೆ. ಬಸವಾದಿ ಶರಣರ ಆಶೀರ್ವಾದ ಅವರಿಗಿರಲಿ ಎಂದು ಶುಭಕೋರಿದರು.

ಕಾರ್ಯಕ್ರಮದ ಆಯೋಜನೆ ಕುರಿತು ರೇವಣ್ಣ ಮತ್ತು ವಸಂತಕುಮಾರಿ ಅವರು ಸಹ ತಮ್ಮ ಅನಿಸಿಕೆ ಹಂಚಿಕೊಂಡು ಖುಷಿಪಟ್ಟರು.

ಹಲವಾರು ಬಸವಭಕ್ತರು ಕಾರ್ಯಕ್ರಮ ಬಹಳ ಇಷ್ಟವಾಯಿತು. ಯಾವುದೇ ಗೊಂದಲ, ಗಡಿಬಿಡಿ ಇಲ್ಲದೆ ಸರಳ, ಅರ್ಥಪೂರ್ಣ, ಭಕ್ತಿಪೂರ್ಣವಾಗಿ ಈ ನಡೆದಿರುವುದು ನಮಗೆಲ್ಲ ಸಂತೋಷ ತಂದಿದೆ. ನಾವು ಕೂಡ ಮುಂದೆ ಈ ರೀತಿಯ ಕಾರ್ಯಕ್ರಮಗಳು ನಮ್ಮ ಮನೆಯಲ್ಲಿ ಆಚರಣೆ ಮಾಡಲು ಸಿದ್ಧರಿದ್ದೇವೆ ಎಂಬ ಮಾತು ಆಡಿದರು.

ಕಾರ್ಯಕ್ರಮದಲ್ಲಿ ಮಾದಪ್ಪಣ್ಣ ಹಾಗೂ ಶರಣೆ ಸತ್ಯಕ್ಕ ವಚನ ಬಳಗದವರು ವಚನ ಗಾಯನ ನಡೆಸಿದರು. ವಿಶ್ವ ಬಸವ ಸೇನೆ(ರಿ )ಹಲವು ಪದಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಸುತ್ತಮುತ್ತಲಿನ ಬಸವಭಕ್ತರು ಸಹ ಆಗಮಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *