ಅಂತರಂಗದ ಪ್ರಾಣಲಿಂಗ ಕರಸ್ಥಲದ ಜ್ಯೋತಿಯಾಗಿ ನಿಲ್ಲಬೇಕು: ಡಾ. ದಯಾನಂದ ನೂಲಿ

ರಾಯಚೂರು :

ನಗರದ ಬಸವ ಕೇಂದ್ರದಲ್ಲಿ ಶಿವರಾತ್ರಿ ಅಂಗವಾಗಿ ಹಮ್ಮಿಕೊಳ್ಳಲಾದ ‘ಲಿಂಗಾನುಸಂಧಾನ’ ಕಾರ್ಯಾಗಾರದ ಎರಡನೇ ದಿನ ಶನಿವಾರ ಖ್ಯಾತ ವೈದ್ಯರು ಹಾಗೂ ಶರಣ ಚಿಂತಕರಾದ ಡಾ.ದಯಾನಂದ ನೂಲಿ ಅವರು ವಿಶೇಷ ಚಿಂತನ ನೀಡಿದರು.

ಚಿಂತನದಲ್ಲಿ ಅವರು ಷಟ್‌ಸ್ಥಳ ಮಾರ್ಗವನ್ನು ವಿವರಿಸಿ, ಲಿಂಗ–ಅಂಗ ಸಮರಸತೆಯಿಂದ ಲಿಂಗೈಕ್ಯ ಸ್ಥಲವನ್ನು ಮುಟ್ಟಲು ಸುಜ್ಞಾನೋದಯ ಅಗತ್ಯವೆಂದು ಹೇಳಿದರು.

ಅಂತರಂಗದಲ್ಲಿ ನಡೆಯುವ ಭಾವಪೂಜೆ ಮತ್ತು ಪ್ರಾಣಪೂಜೆ ಹೊರಗೆ ಕರಸ್ಥಲದಲ್ಲಿ ಜ್ಯೋತಿಯಂತೆ ಪ್ರತ್ಯಕ್ಷವಾಗಬೇಕು. ಅಂತರಂಗದ ಪ್ರಾಣಲಿಂಗವು ಕರ್ಮೇಂದ್ರಿಯಗಳ ಶ್ರೇಷ್ಠವಾದ ಕರಸ್ಥಲಕ್ಕೆ ಬಂದು “ಕರಸ್ಥಲದ ಜ್ಯೋತಿ”ಯಾಗಿ ನಿಲ್ಲಬೇಕು ಎಂದು ಅವರು ವಿವರಿಸಿದರು.

ಅರಿವಿನ ಅನುಭವವು ಕಣ್ಣಿಗೆ ಎದುರಾಗಿ ಕಂಡು, ಗುರುವಿನಲ್ಲಿ ನೆಲೆಸಿ ಕ್ರಿಯಾನುಭವದ ಮೂಲಕ ಬದುಕಿನಲ್ಲಿ ಮೈಗೂಡಬೇಕು ಎಂದರು. ಬಾಹ್ಯ ಕ್ರಿಯಾಪೂಜೆ ಅಂತರಂಗವನ್ನು ಸ್ಪರ್ಶಿಸಿ, ಅಂತರಂಗದಿಂದ ಆಕಾಶದಂತೆ ವ್ಯಾಪಿಸಬೇಕು. ಹೀಗೆ ಮಾನವನು ಕರಸ್ಥಲದ ಮೂಲಕ ದಿವ್ಯ ಪರಿಪೂರ್ಣ ಪರಸ್ಥಲವನ್ನು ಮುಟ್ಟಬೇಕು. ಪರಸ್ಥಲವನ್ನು ಸದಾ ಕರಸ್ಥಲದಲ್ಲೇ ಧರಿಸಬೇಕು ಎಂದು ತಿಳಿಸಿದರು.

ಪ್ರತ್ಯಕ್ಷ ಲಿಂಗದ ಅನುಭವವಿಲ್ಲದೆ ಕೇವಲ ಕಲ್ಪನೆಗಳಲ್ಲಿ ತೃಪ್ತಿಪಡುವುದರಿಂದ ಪ್ರಯೋಜನವಿಲ್ಲ. “ಲಿಂಗ ಕಂಡು ನಂಬಬೇಕು; ನಿರಾಕಾರ ಲಿಂಗಕ್ಕೆ ಸಕಾರ ಲಿಂಗವೇ ಗದ್ವಾರ”ಎಂದು ಹೇಳಿ, ಸ್ಕ್ರೀನ್ ಮುಖಾಂತರ ಪ್ರಾತ್ಯಕ್ಷತೆ ತೋರಿಸಿ ವಿಷಯವನ್ನು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಪ್ರಸಾದ ದಾಸೋಹಿಗಳಾದ ಸೋಲಾಪುರದ ಅಶೋಕ ಕರಪೆ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಅಮರೇಗೌಡ ಪಾಟೀಲ ನಡೆಸಿಕೊಟ್ಟರು. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಬಸವಾಸಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *