ಬೀದರ:
ಕೊರಳಲ್ಲಿರುವ ಲಿಂಗವನ್ನು ಗೂಟಕ್ಕೆ ನೇತುಹಾಕಿ ಕೇವಲ ಶಿವರಾತ್ರಿಗೊಮ್ಮೆ ಪೂಜಿಸದೆ ಪ್ರತಿನಿತ್ಯ ಲಿಂಗವ ಪೂಜಿಸಬೇಕೆಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷರಾದ ಪೂಜ್ಯ ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ನಗರದ ಬಸವಮಂಟಪದಲ್ಲಿ ಮುಂಜಾನೆ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ ವತಿಯಿಂದ ಆಯೋಜಿಸಿದ ಸಾಮೂಹಿಕ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ತೋರಿಸುತ್ತ ಮಾತನಾಡಿದರು.
ಇಷ್ಟಲಿಂಗ ಪೂಜೆಯಿಂದ ದೀರ್ಘಕಾಲಿನ ಕಾಯಿಲೆಗಳು ನಿಯಂತ್ರಣದಲ್ಲಿರುವುದರ ಜೊತೆಗೆ ಮಾನಸಿಕ ನೆಮ್ಮದಿ ಲಭಿಸುತ್ತದೆ. ಆತ್ಮಾನಂದದ ಅನುಭವ, ಧನಾತ್ಮಕ ವಿಚಾರಗಳನ್ನು ವೃದ್ಧಿಸುತ್ತದೆ. ಲಿಂಗವು ಸೃಷ್ಟಿಕರ್ತನ ಕುರುಹಾಗಿದ್ದು, ನಮಗೆ ಅನ್ನ ಅರಿವೆ ಆಶ್ರಯ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ನಿತ್ಯವೂ ಲಿಂಗಪೂಜೆ ಮಾಡಬೇಕೆಂದು ಪ್ರತಿಪಾದಿಸಿದರು.

ಬಸವಮಂಟಪದ ಪೂಜ್ಯ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ, 12 ನೇ ಶತಮಾನದಲ್ಲಿ “ವಿಶ್ವಗುರು ಬಸವಣ್ಣ”ನವರು ನೀಡಿದ ಇಷ್ಟಲಿಂಗವು ಸರ್ವಶರಣರಿಗೆ ಪ್ರಾಣವಾಗಿತ್ತು. ಲಿಂಗಪೂಜೆಯ ನಂತರ ತೀರ್ಥಪ್ರಸಾದ ಪಡೆದು ಕೊಂಡ ನಂತರವೇ ಕಾಯಕ ದಾಸೋಹ ಮಾಡುತಿದ್ದರು.
ಇಷ್ಟಲಿಂಗ ವೈಜ್ಞಾನಿಕ ಹಿನ್ನೆಲೆ ಹೊಂದಿದೆ. ತ್ರಾಟಕ ಯೋಗದಿಂದ ಕಣ್ಣಿನ ಕಾಂತಿ ವೃದ್ಧಿಸುವುದರ ಜೊತೆಗೆ ಮನಸ್ಸು ಪ್ರಶಾಂತವಾಗಿರುತ್ತದೆ ಎಂದರು.
ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಬಿರಾದಾರ ಧ್ವಜಾರೋಹಣ ನೆರವೇರಿಸಿದರು. ಪ್ರೊ.ವೀರಶೆಟ್ಟಿ ಮೈಲೂರಕರ್ ಬಸವಪೂಜೆ ನೆರವೇರಿಸಿ, ದಾಸೋಹ ಮಾಡಿದರು.
ವೇದಿಕೆ ಮೇಲೆ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಪಶುವೈದ್ಯಕೀಯ ವಿ.ವಿ.ನಿವೃತ್ತ ಡೀನ್ ಡಾ.ಸುರೇಶ ಪಾಟೀಲ, ಉದ್ಯಮಿ ನಾಗಶೆಟ್ಟಿ ದಾಡಗಿ, ಡಾ.ವೀರಶೆಟ್ಟಿ ಮೈಲೂರಕರ್, ಶಿವಶರಣಪ್ಪ ಪಾಟೀಲ ಹಾರೂರಗೇರಿ, ನಿರ್ಮಲಾ ನಿಲಂಗೆ, ಶಿವಕುಮಾರ ಪಾರಾ, ನ್ಯಾಯವಾದಿ ಅಶೋಕ ಮಾನೂರೆ, ಬಸವರಾಜ ಲಾಧಾ, ಬಸವರಾಜ ಸಂಗಮದ, ಮನ್ಮಥಯ್ಯ ಸ್ವಾಮಿ, ಗಣಪತಿ ಬಿರಾದಾರ, ಶ್ರೀನಾಥ ಕೋರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಲಿಂಗಾಯತ ಧರ್ಮ ಮಹಾಪೀಠದ ಕಾರ್ಯಯೋಜನೆಯ ಭಿತ್ತಿಪತ್ರ ಹಾಗೂ ಗಂಗಾವತಿಯಲ್ಲಿ ಮಾ.22 ರಂದು ನಡೆಯಲಿರುವ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಲಾಯಿತು.
ಕಲ್ಯಾಣರಾವ ಬಂಬುಳಗಿ ವಚನ ಗಾಯನ ಮಾಡಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಸತೀಶ ಪಾಟೀಲ ನಿರೂಪಿಸಿದರೆ ಬಸವಕುಮಾರ ಚಟನಳ್ಳಿ ವಂದಿಸಿದರು.
