ಬಸವಕಲ್ಯಾಣ
ಲಿಂಗಪೂಜೆಯು ಕೇವಲ ಧಾರ್ಮಿಕ ಆಚರಣೆಯಾಗಿರದೆ ನಮ್ಮ ಮೆದುಳಿನ ನರಮಂಡಲವನ್ನು ಸದೃಢಗೊಳಿಸಿ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ತಿಳಿಸಿದರು.
ಮುಡಬಿ ಗ್ರಾಮದಲ್ಲಿ ದಸರಾ ನಿಮಿತ್ತ ಹಮ್ಮಿಕೊಂಡ ಅಕ್ಕನ ಆಧ್ಯಾತ್ಮಿಕ ಪ್ರವಚನದ ಜೊತೆಗೆ ಮನೆ ಮನೆಗೆ ಹಮ್ಮಿಕೊಂಡ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಶಿವ ಸಂಸ್ಕೃತಿಯಲ್ಲಿ ಧಾರ್ಮಿಕವಾಗಿ ಸ್ಥಾವರ ಲಿಂಗಪೂಜೆಗೊಳ್ಳುತ್ತಿದ್ದವು. ಆದರೆ 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಬ್ರಹ್ಮಾಂಡದಲ್ಲಿ ಪಿಂಡಾಂಡವಿದೆ ಎಂದು ವ್ಯಾಖ್ಯಾನ ಮಾಡಿ ಬ್ರಹ್ಮಾಂಡ ಸ್ವರೂಪವಾದ, ಎಂಟು ರಸಾಯನ ವಸ್ತುಗಳಿಂದ ತಯಾರಿಸಲ್ಪಟ್ಟ ಕಪ್ಪುವರ್ಣದ ಇಷ್ಟಲಿಂಗವನ್ನು ಕಂಡುಹಿಡಿದರು.
ದೇವನ ಸಾಕಾರ ಕುರುಹು ಎಂದು ಹೇಳಿ ಅದನ್ನು ಚುಳುಕಾಗಿಸಿ, ಮೊದಲು ತಾವು ಅಂಗೈಯಲ್ಲಿಟ್ಟುಕೊಂಡು ಪೂಜಿಸಿ ಪ್ರಾರ್ಥಿಸಿ ಧ್ಯಾನಿಸಿದರು. ನಂತರ ಈ ತತ್ವವನ್ನು ಎಲ್ಲರೂ ತಿಳಿಸಿ ಯಾವುದೇ ಜಾತಿ ಮತ ಪಂಥ ಪಂಗಡ ಭೇದವಿಲ್ಲದೆ ಆಚರಿಸಬಹುದೆಂದು ಎಲ್ಲರಿಗೂ ಲಿಂಗ ದೀಕ್ಷ ಸಂಸ್ಕಾರ ನೀಡಿ ಪೂಜೆಯನ್ನು ಜಾರಿಗೆ ತಂದರು. ಇದು ಕೇವಲ ಪೂಜೆಗೆ ಸೀಮಿತವಾಗಿಸದೆ, ವೈಚಾರಿಕವಾಗಿ ವೈಜ್ಞಾನಿಕವಾಗಿ ಪೂಜಿಸಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದೆಂದು ಜಾಗೃತಿ ಮೂಡಿಸಿದರು. ಈ ಸಿದ್ಧಾಂತಕ್ಕೆ ಮಾರು ಹೋದ ಹಾರುವರಿಂದ ಹಿಡಿದು ನಿಮ್ನ ವರ್ಗದವರು ದೀಕ್ಷೆ ಪಡೆದುಕೊಂಡು ಇಷ್ಟಲಿಂಗಯೋಗದ ಸದುಪಯೋಗ ಮಾಡಿಕೊಂಡರು ಎಂದು ಪೂಜ್ಯರು ಮಾರ್ಮಕವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಬುರಾವ ಬಿರಾದಾರ, ಭೀಮರಾವ ಬಿರಾದರ, ಶ್ರೀನಾಥ ಕಣಜಿ, ಶಿವರಾಜ ಬಿರಾದರ, ಹಣಮಂತ ಬಿರಾದಾರ, ಬಸವರಾಜ ಮೂಲಗೆ, ಸುಮಿತ್ರ ದಾವಣಗಾವೆ, ರೇಣುಕಾ ಮಾಮಾ, ಜ್ಯೋತಿ ಹುಮನಾಬಾದ ಉಪಸ್ಥಿತರಿದ್ದರು.