ಬಸವಕಲ್ಯಾಣ:
ಷಟಸ್ಥಲ ಸಿದ್ಧಾಂತದ ಆಧಾರದ ಮೇಲೆ ವಚನಗಳನ್ನು ರಚಿಸಿ, ಲಿಂಗಾಯತ ಧರ್ಮಕ್ಕೆ ಚೌಕಟ್ಟನ್ನು ನೀಡಿ, ವೈಚಾರಿಕ ವೈಜ್ಞಾನಿಕ ತಾತ್ವಿಕ ನೆಲೆಗಟ್ಟನ್ನು ಒದಗಿಸಿದವರು ಶರಣ ಚೆನ್ನಬಸವಣ್ಣನವರು ಎಂದು ಶರಣು ಶರಣಾರ್ಥಿ ಸಮಾವೇಶ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆದ ಶರಣು ಶರಣಾರ್ಥಿ ಸಮಾವೇಶ ಹಾಗೂ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಜಯಂತಿಯ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿ, ವಯಸ್ಸಿನಲ್ಲಿ ಹಿರಿಯರಾಗಿದ್ದ ಸೊಲ್ಲಾಪೂರದ ಸಿದ್ಧರಾಮೇಶ್ವರರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು.
ಅನುಭವ ಮಂಟಪದಲ್ಲಿ ಪ್ರತಿಯೊಂದು ವಚನಗಳಿಗೆ ಅಂತಿಮವಾಗಿ ಒಪ್ಪಿಗೆಯನ್ನು ಕೊಡುವ ಜವಾಬ್ದಾರಿ ಚೆನ್ನಬಸವಣ್ಣನವರದ್ದಾಗಿತ್ತು. ಅಲ್ಲಮಪ್ರಭುದೇವರ ನಂತರ ಶೂನ್ಯಪೀಠದ ಅಧ್ಯಕ್ಷರಾಗಿ ಅನುಭವ ಗೋಷ್ಟಿಗಳಿಗೆ ಚೈತನ್ಯ ತುಂಬಿದರು. ಕಿರಿಯ ವಯಸ್ಸಿನಲ್ಲಿ ಹಿರಿಯ ಸ್ಥಾನ ತುಂಬಿದ್ದು ಅವರ ಸಾಧನೆಯ ಸತ್ಪಲ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ಚೆನ್ನಬಸವಣ್ಣನವರ ಬದುಕು ಮತ್ತು ವಚನಗಳು ಎಲ್ಲರಿಗೂ ಹೆಗ್ಗುರುತು ಆಗಬೇಕಾಗಿದೆ ಎಂದು ನುಡಿದರು.
ನೀಲಾಂಬಿಕಾ ಶಿವಯೋಗಾಶ್ರಮದ ಪೂಜ್ಯ ಗಾಯತ್ರಿ ತಾಯಿ ನೇತೃತ್ವ ವಹಿಸಿಕೊಂಡು ಮಾತನಾಡಿ, ಬಸವಣ್ಣನವರು ಕಲ್ಯಾಣ ಕ್ರಾಂತಿ ಸಮಯದಲ್ಲಿ ಲಿಂಗಾಯತ ಧರ್ಮದ ತತ್ವಗಳನ್ನು ರಕ್ಷಿಸಲು ಚೆನ್ನಬಸವಣ್ಣನವರಿಗೆ ಜವಾಬ್ದಾರಿ ನೀಡಿದರು. ಮಾನವ ದೇಹದ ರಚನೆ ಕಾರ್ಯ ನಿರ್ವಹಣೆ ಬಗ್ಗೆ ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ. ಚೆನ್ನಬಸವಣ್ಣನವರು ಸ್ವಯಂಭೂ ಜ್ಞಾನಿಗಳಾಗಿದ್ದರು ಎಂದು ಅಲ್ಲಮಪ್ರಭುದೇವರು ತಮ್ಮ ವಚನಗಳಲ್ಲಿ ಹೇಳಿದ್ದಾರೆ. ಜ್ಞಾನಕ್ಕೆ ಹಿರಿಯರು ಕಿರಿಯರು ಎಂಬುದು ಇರುವುದಿಲ್ಲ.
ಚೆನ್ನಬಸವಣ್ಣನವರು ಹಿರಿದಾದ ಜ್ಞಾನ ಹೊಂದಿದ್ದರು. ಆಕಳ ಹಾಲಿನಲ್ಲಿ ತುಪ್ಪವಿದೆ. ಆ ಹಾಲಿಗೆ ಸಂಸ್ಕಾರ ನೀಡಿದಾಗ ತುಪ್ಪವಾಗುವಂತೆ ನಾವು ಸಂಸ್ಕಾರದಿಂದ ದೈವತ್ವಕ್ಕೆ ಏರಬಹುದು ಎಂದು ಶರಣರು ವಚನಗಳಲ್ಲಿ ಹೇಳಿದ್ದಾರೆ ಎಂದರು.

ಕಲ್ಬುರ್ಗಿ ಚಂದ್ರಕಾಂತ ಪಾಟೀಲ ಡಿಎಡ್,ಬಿಎಡ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ರಾಮಚಂದ್ರ ಶರಣಪ್ಪ ಬಸವಜ್ಯೋತಿ ಪ್ರಜ್ವಲಿಸಿ ಮಾತನಾಡಿ, ವಚನಗಳಲ್ಲಿ ವೈಚಾರಿಕ ಚಿಂತನೆ ಒಳಗೊಂಡಿದೆ. ಕಾಯಕ ದಾಸೋಹ, ಸಾಮಾಜಿಕ ಸಮಾನತೆಯಂತಹ ತತ್ವಗಳು ವಚನ ಸಾಹಿತ್ಯದ ಪ್ರಮುಖ ಭಾಗಗಳಾಗಿವೆ ಎಂದರು.
ಬಸವಕಲ್ಯಾಣ ಮಹಾವಿದ್ಯಾಲಯ ಪ್ರಾಧ್ಯಾಪಕ ಮನೋಜಕುಮಾರ ಕೆರಳ್ಳಿ ಮಾತನಾಡಿ, ಚೆನ್ನಬಸವಣ್ಣನವರು ಪ್ರಾಯದಿಂದ ಕಿರಿಯರಾದರು ವ್ಯಕ್ತಪಡಿಸುತ್ತಿದ್ದ ವಿಚಾರ ಸಾಮಾನ್ಯವಾಗಿರಲಿಲ್ಲ. ತಾಯಿಯ ಗರ್ಭದಲ್ಲಿದ್ದಾಗಲೇ ಒಳ್ಳೆಯ ಸಂಸ್ಕಾರದಿಂದ ಅಪರಿಮಿತ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು.
ನಿವೃತ್ತ ಶಿಕ್ಷಕ ಭೋಜಪ್ಪ ಪಾಟೀಲ ಮಾತನಾಡಿದರು. ಹರಳಯ್ಯ ಸಮಾಜದ ಮುಖಂಡ ಗೋವಿಂದ ಕಾಂಬಳೆ ಧ್ವಜಾರೋಹಣಗೈದರೆ, ನಿವೃತ್ತ ಶಿಕ್ಷಕ ಶಿವಕುಮಾರ ಬಿರಾದಾರ ಸ್ವಾಗತಿಸಿದರು. ತೊಗಲೂರಿನ ಜಯಲಕ್ಷ್ಮೀ ಮತ್ತು ಮಹಾದೇವ ಭಜನಾ ಮಂಡಳದವರು ವಚನ ಭಜನೆ ನಡೆಸಿಕೊಟ್ಟರು. ಅಕ್ಕನ ಬಳಗದ ಶರಣೆಯರು ವಚನ ಪ್ರಾರ್ಥನೆ ಮಾಡಿದರು. ರೇಣುಕಾ ಹೋಗ್ತಾಪೂರೆ ನಿರೂಪಿಸಿದರು.
