ಲಿಂಗಾಯತ ಅಪ್ಪಟ ಕನ್ನಡಿಗರ, ಕನ್ನಡದ ಧರ್ಮ: ಬಸವಪ್ರಭು ಸ್ವಾಮೀಜಿ

ದಾವಣಗೆರೆ:

ಕನ್ನಡ ನೆಲದಲ್ಲಿ ಕನ್ನಡವೇ ಮಾತೃಭಾಷೆಯಾಗಿ ಉದಯಿಸಿದ ಧರ್ಮ ಯಾವುದಾದರೂ ಇದ್ದರೆ ಅದು ಲಿಂಗಾಯತ ಧರ್ಮ. ಅದು ಅಪ್ಪಟ ಕನ್ನಡಿಗರ ಧರ್ಮವಾಗಿದೆ ಎಂದು ವಿರಕ್ತಮಠದ ಪೂಜ್ಯ ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗ ಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಅವಿರಳಜ್ಞಾನಿ ಚೆನ್ನಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಕನ್ನಡದಲ್ಲಿ ಶರಣರು ವಚನಗಳನ್ನು ರಚಿಸಿ ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ. ಹಿಂದಿ, ಇಂಗ್ಲೀಷ್ ಭಾಷೆಗಳ ಅತಿಯಾದ ಹೇರಿಕೆಯಿಂದ ಕನ್ನಡ ಭಾಷೆಯ ಅವನತಿ ಹಾದಿಯನ್ನು ಹಿಡಿಯುತ್ತದೆ ಎಂಬ ಭಯವು ಕಾಡುತ್ತದೆ.

ಹಿಂದಿ, ಇಂಗ್ಲೀಷ್ ಭಾಷೆಗಳನ್ನು ಕಲಿತರೆ ಮಾತ್ರ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂಬ ಭ್ರಮೆಯಲ್ಲಿ ಕೆಲ ಜನಗಳು ಬದುಕುತ್ತಿದ್ದಾರೆ ಇದು ತಪ್ಪು. ಮಾತೃಭಾಷೆಯನ್ನು ಎಲ್ಲರೂ ಪ್ರೀತಿಸಿ ಬಳಸುವಂತಾಗಬೇಕು. ಕನ್ನಡ ‘ಅನ್ನ’ದ ಭಾಷೆ ಎಂದರು.

ಬಸವಾದಿ ಶರಣ ಚನ್ನಬಸವಣ್ಣನವರನ್ನು ಕುರಿತು ಉಪನ್ಯಾಸವನ್ನು ನೀಡಿದ ಎಂ. ಬಿ. ನಾಗರಾಜ ಕಾಕನೂರ ಅವರು, ಚನ್ನಬಸವಣ್ಣನವರು ಬದುಕಿದ ಕಾಲ ಅಲ್ಪವಾದರೂ ಅವರ ಸಾಧನೆ ಬಹಳ ಅತ್ಯುನ್ನತವಾದದ್ದು. ಅನುಭವ ಮಂಟಪದಲ್ಲಿ ಅತ್ಯಂತ ಹಿರಿಯರು, ಜ್ಞಾನಿಗಳು ಇದ್ದರೂ ಅಲ್ಲಿ ಚೆನ್ನಬಸವಣ್ಣನವರ ಪಾತ್ರ ಬಹಳ ಮುಖ್ಯವಾಗಿತ್ತು.

ಮತ್ತು ಅಲ್ಲಮಪ್ರಭುಗಳು ಕಲ್ಯಾಣವನ್ನು ಪ್ರವೇಶಿಸಿದಾಗ ಅವರೊಡನೆ ಸಂಭಾಷಿಸಿದ ಕೆಲವು ವಚನಗಳನ್ನು ಮತ್ತು ಅಕ್ಕಮಹಾದೇವಿಯವರು ಅನುಭವ ಮಂಟಪವನ್ನು ಪ್ರವೇಶಿಸಿದಾಗ ಅವರನ್ನು ಪರೀಕ್ಷಿಸಿದ ವಚನಗಳನ್ನು ಸಭೆಯಲ್ಲಿ ಹಂಚಿಕೊಂಡರು. ಚನ್ನಬಸವಣ್ಣನವರು ಬಸವಣ್ಣನವರ ಅಕ್ಕನ ಮಗನಾಗಿದ್ದರು ಎಂದು ತಿಳಿಸಿದರು.

ಕನ್ನಡ ನಾಡು ನುಡಿಯ ಕುರಿತು ಉಪನ್ಯಾಸಕರಾದ ಬಂಕಾಪುರ ಚನ್ನಬಸಪ್ಪನವರು ಮಾತನಾಡಿ, ಕನ್ನಡ ಕೇವಲ ಸಾಹಿತಿಗಳು, ಕವಿಗಳಂದಲ್ಲದೆ ಕುರಿ ಕಾಯುವವನು, ದನ ಮೇಯಿಸುವಂತಹವರು ಕೂಡ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಉದಾಹರಣೆಗಳು ನಮ್ಮಲ್ಲಿ ಅನೇಕ ಇವೆ.

ಆದ್ದರಿಂದ ಕನ್ನಡ ಭಾಷೆಯನ್ನು ಆಡಳಿತದಲ್ಲಿ, ಶಿಕ್ಷಣದಲ್ಲಿ ಎಲ್ಲ ಕಡೆಗಳಲ್ಲಿ ಬಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳುತ್ತಾ, ಗೋಕಾಕ್ ಚಳುವಳಿಯಿಂದ ಇಲ್ಲಿಯವರೆಗಿನ ಘಟನೆಗಳನ್ನು ಮೆಲಕು ಹಾಕಿದರು.

ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರಾದ ಎಮ್. ಶಿವಕುಮಾರ ಅವರು ವಹಿಸಿ ಮಾತನಾಡಿದರು.

ಸಭೆಯಲ್ಲಿ ಬಸವ ಬಳಗದ ಅಧ್ಯಕ್ಷರಾದ ಹುಚ್ಚಪ್ಪ ಗುರುಗಳು, ಆವರಗೆರೆ ರುದ್ರಮುನಿ, ಮೆಳ್ಳಕಟ್ಟೆ ಎಂ.ಎಸ್. ನಾಗರಾಜಪ್ಪ, ಎನ್.ಎಸ್. ರಾಜು, ಸೋಗಿ ಶಾಂತಕುಮಾರ, ಬಸವನಾಳ ಮರಳುಸಿದ್ದಯ್ಯ ಮತ್ತಿತರರು ಶರಣ ಶರಣೆಯರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *