‘ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ, ಎಂ.ಎಂ.ಕಲಬುರ್ಗಿ ಲಿಂಗಾಯತ ಧರ್ಮ ಉಳಿಸಿದರು’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ಶುಕ್ರವಾರದಿಂದ ಮೂರು ದಿನಗಳ 23ನೇ ಕಲ್ಯಾಣ ಪರ್ವದ ಧರ್ಮ ಚಿಂತನ ಗೋಷ್ಠಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಕಲಬುರಗಿಯ ಖ್ಯಾತ ಚಿಂತಕ ಆರ್.ಕೆ. ಹುಡಗಿ ತಮ್ಮ ಅನುಭಾವ ನೀಡಿ ಲಿಂಗಾಯತ ಧರ್ಮ ಉಳಿಸಿದಕ್ಕಾಗಿ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಎಂ.ಎಂ.ಕಲಬುರ್ಗಿ ಅವರ ನೆನಪು ಅಜರಾಮರ ಆಗಿರಲಿದೆ.

ದುಡಿಯುವ ವರ್ಗದವರಿಂದ ಸೃಷ್ಟಿಯಾದ ವೈಚಾರಿಕ ನೆಲೆಯ ಬಸವಧರ್ಮವು ಜಗತ್ತು ಆಳಬಲ್ಲದು ಎಂಬ ಭಯದಿಂದ ಇದರ ದಮನಕ್ಕೆ ಯತ್ನಿಸಲಾಗಿದೆ. ಈಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದರಿಂದ, ವಚನ ದರ್ಶನ ಗ್ರಂಥ ರಚಿಸಿ ಇಲ್ಲಸಲ್ಲದನ್ನು ಪ್ರಚಾರ ಮಾಡಲಾಗುತ್ತಿದೆ.

ಈಗಲೂ ರಾಜ್ಯ ಸರ್ಕಾರ ಲಿಂಗಾಯತ ಧರ್ಮ ಮಾನ್ಯತೆಗೆ ಯತ್ನಿಸಿದ್ದರಿಂದ ಕೇಂದ್ರ ಅದನ್ನು ನಿರಾಕರಿಸಿತು, ಎಂದರು.

ಬಸವಕಲ್ಯಾಣ ಕಲ್ಯಾಣದಲ್ಲಿ ಕ್ರಾಂತಿ ನಡೆಸಿದ ಶರಣರು ವಿಶ್ವಕ್ಕೆ ವಚನ ಸಾಹಿತ್ಯ ನೀಡುವ ಮೂಲಕ ಮಾನವೀಯತೆಯನ್ನು ಬಿತ್ತಿದ್ದಾರೆ. ವಚನಗಳಲ್ಲಿನ ಅಡಗಿರುವ ಮೌಲ್ಯಗಳನ್ನು ಅರಿಯಬೇಕು ಎಂದು ಕೂಡಲಸಂಗಮ ಬಸವ ಧರ್ಮಪೀಠದ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಗಂಗಾದೇವಿ ಹೇಳಿದರು.

ಲಿಂ.ಡಾ.ಮಾತೆ ಮಹಾದೇವಿ ಅವರು ವಿಶ್ವದ ಜನರು ಕಲ್ಯಾಣಕ್ಕೆ ಬರಬೇಕು ಬಸವ ತತ್ವ, ವಚನ ಸಾಹಿತ್ಯ ವಿಶ್ವದ ಜನರಿಗೆ ತಿಳಿಯುವಂತಾಗಬೇಕು ಎಂಬ ದೃಷ್ಟಿಯಿಂದಾಗಿ ಬಸವಕಲ್ಯಾಣದಲ್ಲಿ 108 ಅಡಿ ಬಸವ ಪುತ್ಥಳಿ ನಿರ್ಮಿಸಿದ್ದಾರೆ. ಅಲ್ಲದೆ, ಬೆಂಗಳೂರಿನ ಕುಂಬಳಗೂಡಿನಲ್ಲಿ 112 ಅಡಿ ಬಸವ ಪುತ್ಥಳಿ ನಿರ್ಮಿಸಲು ಸಂಕಲ್ಪ ಮಾಡಿದ್ದರು. ಹೀಗಾಗಿ ಆ ಕಾರ್ಯ ಮುಂದೆ ಸಾಗಬೇಕಾದರೆ ಬಸವ ಭಕ್ತರು ತನು, ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಸ್ವಾಮೀಜಿ ಮಾತನಾಡಿ, ಇಂದು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕು ಎಂದು ಹೋರಾಟಗಳು ನಡೆದವು ಆದರೆ ಕೆಲವರ ಕುತಂತ್ರದಿಂದಾಗಿ ಇದಕ್ಕೆ ಹಿನ್ನಡೆಯಾಗಿದೆ ಎಂದರು.

ಈ ವೇಳೆ ಬೇಲೂರನ ಶಿವಕುಮಾರ ಸ್ವಾಮೀಜಿ, ಸಂಜಯ ಮಾಕಲ, ವಿಜಯಕುಮಾರ ಪಟ್ಟೆ, ಶಿವಕುಮಾರ ಸ್ವಾಮಿ ಮಾತನಾಡಿದರು. ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟನೆ ಮಾಡಿದರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಧ್ವಜಾರೋಹಣ ನೆರವೇರಿಸಿದರು. ಹಾಗೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಬಸವಗುರು ಪೂಜೆ ನೆರವೇರಿಸಿದರು.

ವೇದಿಕೆಯಲ್ಲಿ ಜಗದ್ಗುರು ಬಸವಕುಮಾರ ಸ್ವಾಮೀಜಿ, ಸದ್ಗುರು ಅನಿಮಿಷಾನಂದ ಸ್ವಾಮೀಜಿ, ಶಂಕ್ರೆಪ್ಪ ಪಾಟೀಲ್, ಸುಧೀರ ಕಾಡಾದಿ, ಬಾಬು ವಾಲಿ, ಸುರೇಶ ಚನಶೆಟ್ಟಿ, ಎಸ್‌ಬಿ ಜೋಡಹಳ್ಳಿ, ರಮೇಶ ಮಠಪತಿ, ಸಿಎಸ್ ಗಣಾಚಾರಿ, ಸಿಎಸ್‌ ಪಾಟೀಲ್, ಚನ್ನಬಸವ ಹಂಗರಗಿ, ಜೈರಾಜ ಬುಕ್ಕಾ, ಮಹಾಲಿಂಗಪ್ಪ ಬೆಲ್ದಾಳೆ ಸೇರಿದಂತೆ ಮತ್ತಿತರಿದ್ದರು. ಶ್ರೀಕಾಂತ ಭುರಾಳೆ ಸ್ವಾಗತಿಸಿ ಜೆ.ಕೆ ಸ್ವಾಮಿ ಹಾಗೂ ಸುರೇಶ ಸ್ವಾಮಿ ನಿರೂಪಿಸಿದರು. ವಿಶಾಲ ಪಾಟೀಲ್
ವಂದಿಸಿದರು.

Share This Article
Leave a comment

Leave a Reply

Your email address will not be published. Required fields are marked *