ಧರ್ಮ ಕಾಲಂನಲ್ಲಿ ಲಿಂಗಾಯತ ಬರೆಯಿಸಿ : ಪಂಚಮಸಾಲಿ ಟ್ರಸ್ಟನ ನಿರ್ಣಯ

ನಮ್ಮದು ಬಸವತತ್ವದ ಪೀಠ; ಸ್ವತಂತ್ರ ಧರ್ಮ ನಮ್ಮ ಗುರಿ; ವೀರಶೈವ ಒಳಪಂಗಡ

ಕೂಡಲಸಂಗಮ

ನಾಳೆಯಿಂದ ನಡೆಯುತ್ತಿರುವ ಜನಗಣತಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಜನ ಧರ್ಮ ಕಾಲಂ ನಲ್ಲಿ ‘ಲಿಂಗಾಯತ’, ಜಾತಿ ಕಾಲಂನಲ್ಲಿ ಪಂಚಮಸಾಲಿ ಎಂದು ಮಾತ್ರ ಬರೆಸಬೇಕು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಭಾನುವಾರ ನಡೆದ ಟ್ರಸ್ಟ್ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದು, ಸಮಾಜದ ಜನ ಜನಗಣತಿಯಲ್ಲಿ ಟ್ರಸ್ಟ್ ಸೂಚಿಸಿದಂತೆ ಬರೆಸಬೇಕು.

ಬಸವಜಯಮೃತ್ಯುಂಜಯ ಸ್ವಾಮೀಜಿ ಧರ್ಮ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಪಂಚಮಸಾಲಿ ಬರೆಸುವಂತೆ ಕರೆಕೊಟ್ಟಿರುವುದು ಸಮಾಜದ ಜನರಲ್ಲಿ ಗೊಂದಲ ಉಂಟುಮಾಡಿತ್ತು.

ಗೊಂದಲಗಳ ನಿವಾರಣೆಗಾಗಿ ಇಂದು ಟ್ರಸ್ಟ್ ಸಭೆ ಕೈಗೊಂಡು ಟ್ರಸ್ಟನ ಎಲ್ಲ ಧರ್ಮದರ್ಶಿಗಳು, ಸಮಾಜದ ಮುಖಂಡರು ಸೇರಿಕೊಂಡು ಚರ್ಚಿಸಿ, ಸಮಾಜ ಬಾಂಧವರು ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸುವಂತೆ ನಿರ್ಣಯ ಕೈಗೊಂಡಿದೆ. ಎಲ್ಲರೂ ಅದೇ ರೀತಿ ಬರೆಸಬೇಕು ಎಂದರು.

ನಮ್ಮ ಪೀಠ ಬಸವತತ್ವ, ಸಿದ್ದಾಂತದ ಮೇಲೆ ನಡೆಯುತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಪಡೆಯುವುದೇ ನಮ್ಮ ಗುರಿ. ವೀರಶೈವ ಎನ್ನುವುದು ಲಿಂಗಾಯತದ ಒಂದು ಒಳಪಂಗಡವಾಗಿದೆ. ಲಿಂಗಾಯತದಲ್ಲಿ ೧೧೨ ಒಳಪಂಗಡಗಳು ಬರುವವು.

ಹಿಂದೂ ಎಂದು ಬರೆಸುವುದರಿಂದ ಯಾವ ಸೌಲಭ್ಯಗಳು ನಮಗೆ ದೊರೆಯುವುದಿಲ್ಲ. ಲಿಂಗಾಯತ ಎಂದು ಬರೆಸಿದರೆ ಮಾತ್ರ ಸೌಲಭ್ಯಗಳು ದೊರೆಯುತ್ತವೆ ಎಂದರು.

ಹುನಗುಂದದ ನ್ಯಾಯವಾದಿ ಮಹಾಂತೇಶ ಅವಾರಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನ ಬಾಗಲಕೋಟೆಯಲ್ಲಿ ನಡೆದಾಗ ಬಸವಜಯಮೃತ್ಯುಂಜಯ ಸ್ವಾಮೀಜಿ ಎಲ್ಲ ಮಠಾಧೀಶರಿಗೆ ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ಪಂಚಮಸಾಲಿ ಬರೆಸುವ ಭರವಸೆ ನೀಡಿ, ಹಿಂದೂ ಬರೆಸುವಂತೆ ಕರೆ ಕೊಟ್ಟಿರುವುದನ್ನು ಸಮಾಜದ ಜನರಿಗೆ ನೋವು ಉಂಟುಮಾಡಿದೆ, ಈ ಕಾರ್ಯವನ್ನು ಖಂಡಿಸುತ್ತೇವೆ.

ನಮ್ಮ ಸಮಾಜಕ್ಕೆ ಪ್ರಚಾರಪ್ರಿಯ ಸ್ವಾಮೀಜಿ ಬೇಕಾಗಿಲ್ಲ, ಸಮಾಜದ ಹಿತ ಕಾಪಾಡುವವರು ಬೇಕು. ರಾಜಕಾರಣೀಗಳ ರಕ್ಷಣೆ ಮಾಡುವ ಸ್ವಾಮೀಜಿ ಅಗತ್ಯ ಇಲ್ಲ, ರಾಜಕಾರಣಿಗಳು ಅವರ ರಕ್ಷಣೆ ಅವರು ಮಾಡಿಕೊಳ್ಳುತ್ತಾರೆ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ರಕ್ಷಿಸುವವರು ಬೇಕು ಎಂದರು.

ಸಭೆಯಲ್ಲಿ ಟ್ರಸ್ಟನ ೨೦ಕ್ಕೂ ಅಧಿಕ ಧರ್ಮದರ್ಶಿಗಳು, ಮುಖಂಡರು, ವಿವಿಧ ಜಿಲ್ಲೆಯ ಸಮಾಜದ ಮುಖಂಡರು ಇದ್ದರು.

ಆರಂಭದಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಕಾರ್ಯಕಾರಿಣಿ ಸಭೆಯನ್ನು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
2 Comments
  • ಸನ್ಮಾನ್ಯ ವಿಜಯಾನಂದ ಕಾಶಪ್ಪನವರು ಶಾಸಕರು ಹುನಗುಂದ ಮತ ಮತಕ್ಷೇತ್ರ ಇವರಿಗೆ ಮಾನ್ಯರೇ ತಾವು 19-9-2025 ರಂದು ಲಿಂಗಾಯತ ಲಿಂಗಾಯತ ಏಕತಾ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಎನ್ನುವ ವೇದಿಕೆಯಲ್ಲಿ ನೀವು ಭಾಗಿಯಾಗಿದ್ದೀರಿ ಅವರು ಅಲ್ಲಿ ಅವರು ಹಿಂದೂ ವೀರಶೈವ ಲಿಂಗಾಯತ ಎಂದು ಬರೆಸಿ ಎಂದು ಹೇಳಿದ್ದಾರಲ್ಲಾ ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು? ಪಂಚಪೀಠಾಧೀಶ್ವರರು ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆ ಕೊಡಬಾರದೆಂದು ನಾವೇ ಹೇಳಿದ್ದೇವೆ ಎಂದು ಬಹಿರಂಗವಾಗಿ ದಾವಣಗೆರೆಯಲ್ಲಿ ಹೇಳಿದ್ದಾರೆ .ಅವರು ಬಸವಣ್ಣನವರ ವಿರೋಧಿಗಳು ಅವರು ಬಸವಣ್ಣ ನಮ್ಮ ಶಿಷ್ಯ ಎಂದು ಸುಳ್ಳು ಹೇಳುವವರ ಜೊತೆ ವೇದಿಕೆ ಹಂಚಿಕೊಂಡು ಇಲ್ಲಿ ಬಂದು ಬಸವ ಜಪ ಮಾಡುತ್ತಿದ್ದೀರಿ ನಿಮ್ಮ ಉದ್ದೇಶವೇನು?. ಅಲ್ಲೊಂದು ಮಾತು.ಇಲ್ಲಿ ಬಂದು ಇಲ್ಲೊಂದು ಮಾತು.ನಿಮ್ಮ ಶ್ರೀಮತಿ ವೀಣಾ ಕಾಶಪ್ಪನವರ ಅಖಿಲ ಭಾರತ ವೀರಶೈವ ಮಹಾಸಭೆಯ ಯಾವುದೊ ಒಂದು ಹುದ್ದೆಯಲ್ಲಿ ಇದ್ದಾರೆ ಇದು ಸರಿಯೇ.ವೀರಶೈವ ಮತ್ತು ಲಿಂಗಾಯತ ಒಂದೇನಾ ? ಇದಕ್ಕೆ ಮೊದಲು ಉತ್ತರ ಹೇಳಿ. ನಿಮ್ಮ ನೀತಿ ಗೊತ್ತಾಗಲಿ ನಿಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವಾ? ಪಂಚಮಸಾಲಿ ಪೀಠದ ಇಬ್ಬರು ಜಗದ್ಗುರುಗಳು ಅವರಲ್ಲಿಯೂ ಸಹ ದ್ವಂದ್ವ ನಿಲುವು ತಾಳಿದ್ದಾರೆ ಮೃತ್ಯುಂಜಯ ಸ್ವಾಮೀಜಿ ಅವರೊಬ್ಬರೇ ಹೇಳಿಲ್ಲವಲ್ಲಾ ಹರಿಹರ ಪೀಠದವರು ಸಹ ಹೇಳಿದ್ದಾರಲ್ಲ.ಇಬ್ಬರು ಸ್ವಾಮಿಗಳಿಗೂ ಒಂದೇ ಕ್ರಮ ಆಗಬೇಕಲ್ವಾ.ಮೃತ್ಯುಂಜಯ ಸ್ವಾಮಿಗಳ ಮೇಲೆ ಅಷ್ಟೇ ಏಕೆ ಕ್ರಮ. ವಿಜಯಾನಂದ ಕಾಶಪ್ಪನವರು ಬಸವಣ್ಣನವರನ್ನು ಒಪ್ಪುವರು. ವೀಣಾ ಕಾಶಪ್ಪನವರ ಪಂಚಾಚಾರ್ಯ ಜಗದ್ಗುರುಗಳನ್ನು ಒಪ್ಪುವರು ಇದು ಸರಿಯೇ ? ಹಾಗಾದರೆ ಇದರಲ್ಲಿ ಕಾಶಪ್ಪನವರ ವೈಯಕ್ತಿಕ ದ್ವೇಷದಿಂದ ಪಂಚಮಸಾಲಿ ಸಮಾಜದ ಅಧ್ಯಕ್ಷ ಪದವಿಯ ದುರುಪಯೋಗ ಎನ್ನಬಹುದೇ? ದಯವಿಟ್ಟು ಉತ್ತರಿಸಿ..

  • ರಾಜಕೀಯ ಡೊಂಬರಾಟ..? ಇದರಲ್ಲಿ ಜಾತಿ ಯಾಕೆ ಬೇಕು..?
    ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿದರೆ ಸಾಕು…
    ಸಾಮಾಜಿಕ ಎಂದು.. ಜಾತಿ ಉಲ್ಲೇಖ ಸರಕಾರಕ್ಕೆ ಏಕೈ ಬೇಕು..?
    ಮೀಸಲಾತಿಗಳನ್ನು ಕೊಡಲು ಸರ್ಕಾರಕ್ಕೆ ಜಾತಿಯ ಪ್ರಾಮುಖ್ಯತೆ ಏಕೆ ಬೇಕು..?
    ನಿಜವಾದ ಆರ್ಥಿಕವಾಗಿ ಹಿಂದುಳಿದವನಿಗೆ ಸಾಮಾಜಿಕ ನ್ಯಾಯ ಸಿಗಲಿ.. ಆದರೆ.. ಜಾತಿ ಆಧಾರದಲ್ಲಿ ನ್ಯಾಯ ಒದಗಿಸಿಕೊಡುವುದು ಸರಕಾರದ ದೊಡ್ಡ ತಪ್ಪು.

Leave a Reply

Your email address will not be published. Required fields are marked *