ಲಿಂಗಾಯತ ಧರ್ಮ ಸನಾತನ ಧರ್ಮದ ಭಾಗವಲ್ಲ: ಧನ್ನೂರ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ

ಲಿಂಗಾಯತ ಧರ್ಮ ಸನಾತನ ಧರ್ಮದ ಭಾಗವಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಹೇಳಿದರು.

ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ಗ್ರಾಮ ಘಟಕದ ವತಿಯಿಂದ ಈಚೆಗೆ ಆಯೋಜಿಸಿದ್ದ ಅಲ್ಲಮಪ್ರಭು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸನಾತನ ಧರ್ಮದಲ್ಲಿ ಇರುವ ಅಸಮಾನತೆ, ಮೌಢ್ಯತೆ, ಕಂದಾಚಾರಗಳನ್ನು ಅಲ್ಲಗಳೆದು ಬಸವಣ್ಣನವರು ವೈಚಾರಿಕವಾದ ಹೊಸ ಲಿಂಗಾಯತ ಧರ್ಮ ಕಟ್ಟಿದರು. ಲಿಂಗಾಯತ ವಿನೂತನ, ನಿತ್ಯ ನೂತನ ಧರ್ಮವಾಗಿದೆ ಎಂದು ತಿಳಿಸಿದರು.

ಲಿಂಗಾಯತಕ್ಕೆ ಸನಾತನ ಧರ್ಮದೊಂದಿಗೆ ಜೋಡಿಸುವ ಪ್ರಯತ್ನಗಳು ನಡೆದಿವೆ. ಲಿಂಗಾಯತರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಬಸವಣ್ಣನವರು ಲಿಂಗಾಯತ ಧರ್ಮ ಕೊಟ್ಟರೂ ಸ್ವತಃ ಎಲ್ಲೂ ಧರ್ಮ ಗುರುವೆಂದು ಹೇಳಿಕೊಂಡಿಲ್ಲ. ನಾನೊಬ್ಬ ಭಕ್ತ ಎಂದೇ ಹೇಳಿ ಔದರ್ಯ ಮೆರೆದಿದ್ದಾರೆ ಎಂದು ತಿಳಿಸಿದರು.

ವಿಶ್ವದ ಮೊಟ್ಟ ಮೊದಲ ಸಂಸತ್ತಾದ 12ನೇ ಶತಮಾನದ ಬಸವಕಲ್ಯಾಣದ ಅನುಭವ ಮಂಟಪದ ಪ್ರಥಮ ಪೀಠಾಧ್ಯಕ್ಷ ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಮಹಾಮಹಿಮ ಸಂಗನಬಸವಣ್ಣ ಎನಗೆಯೂ ಗುರು, ನಿಮಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಎಂದು ಹೇಳಿದ್ದಾರೆ. ಬಸವಣ್ಣನವರನ್ನು ಗುರುವೆಂದು ಒಪ್ಪದವರು ಅಲ್ಲಮಪ್ರಭುದೇವರ ವಚನ ಓದಬೇಕು. ಆ ಮೂಲಕ ಧರ್ಮ ಗುರುವಿನ ಕುರಿತ ತಮ್ಮ ಗೊಂದಲ ನಿವಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಸವ ಭಕ್ತರೆಲ್ಲರೂ ಸೇರಿ ಗ್ರಾಮದಲ್ಲಿ ಮಾದರಿ ಬಸವ ಮಂಟಪ ನಿರ್ಮಿಸಿರುವುದು ಶ್ಲಾಘನೀಯ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ಮಾತೆ ಮಹಾದೇವಿ ಅವರು ರಚಿಸಿದ ಸಾಮೂಹಿಕ ಪ್ರಾರ್ಥನೆ ಪುಸ್ತಕ ಬಿಡುಗಡೆ ಮಾಡಲಾಯಿತು.

ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾರುತಿ ಚಾಂಬೋಳ ಅವರನ್ನು ಸನ್ಮಾನಿಸಲಾಯಿತು.

ನಿಕಿತಾ ಪಾಪಡೆ ಹಾಗೂ ಸಿಂಚನಾ ಬಿರಾದಾರ ಪ್ರಾರ್ಥನೆ ನಡೆಸಿಕೊಟ್ಟರು. ಭಕ್ತಿಶ್ರೀ ತುಪ್ಪದ ವಚನ ಗಾಯನ ಮಾಡಿದರು.

ಪಾರಮ್ಮ ಮಾರುತೆಪ್ಪ ಪಾಪಡೆ ಗುರು ಪೂಜೆಗೈದರು. ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಗ್ರಾಮ ಘಟಕದ ಅಧ್ಯಕ್ಷ ಅಶೋಕ ಶಂಭು ಅಧ್ಯಕ್ಷತೆ ವಹಿಸಿದ್ದರು.

ಲಿಂಗಾಯತ ಸಮಾಜದ ಜಿಲ್ಲಾ ಅಧ್ಯಕ್ಷ ಕುಶಾಲರಾವ್ ಪಾಟೀಲ ಗಾದಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಶರಗಾರ, ರಾಷ್ಟ್ರೀಯ ಬಸವ ದಳದ ಬೀದರ ನಗರ ಘಟಕದ ಅಧ್ಯಕ್ಷ ವಿವೇಕಾನಂದ ಧನ್ನೂರ, ಬೀದರ ತಾಲ್ಲೂಕು ಘಟಕದ ಅಧ್ಯಕ್ಷ ಸಂಜುಕುಮಾರ ಪಾಟೀಲ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಗಣೇಶ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಶಿವಾನಂದ ಕುಂಬಾರ, ಪ್ರಮುಖರಾದ ಮಲ್ಲಿಕಾರ್ಜುನ ಶಂಭು, ಬಸವರಾಜ ಖ್ಯಾಮಾ ಉಪಸ್ಥಿತರಿದ್ದರು.

ರವಿ ಪಾಪಡೆ ಸ್ವಾಗತಿಸಿದರು. ಸಿದ್ರಾಮ ಶೆಟಕಾರ್ ನಿರೂಪಿಸಿದರು. ರವಿ ಶಂಭು ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/FEOgQepEXSP8R5OtHvcD7O

Share This Article
1 Comment
  • ಅಲ್ಲಮಪ್ರಭು ದೇವರ ಜಯಂತಿ ಕಾರ್ಯಕ್ರಮ ತುಂಬ ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮಕ್ಕೆ ಬಂದ ಎಲ್ಲಾ ಅತಿಥಿಗಳಿಗೂ ಈ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಶರಣ ಶರಣೆಯರಿಗೂ ತುಂಬು ಹೃದಯದ ಧನ್ಯವಾದಗಳು ಎಲ್ಲರಿಗೂ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *