ಲಿಂಗಾಯತ ಧರ್ಮದ ಬೇರುಗಳು ವೇದ ಮತ್ತು ಆಗಮಗಳಲ್ಲಿವೆ ಎಂಬ ಕೆಲವು ವಿದ್ವಾಂಸರ ವಾದ ನಿರಾಧಾರಿತ, ಅಸತ್ಯ. ಲಿಂಗಾಯತ ಧರ್ಮದ ಅಧ್ಯಯನವನ್ನು ಪರಿಣಾಮಕಾರಿಯಾಗಿ, ಅಧಿಕೃತವಾಗಿ ಮತ್ತು ಸಂಪೂರ್ಣವಾಗಿ ಮಾಡಬೇಕೆನ್ನುವವರು ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಮತ್ತು ಬಸವೋತ್ತರ ಕಾಲದವರ ವಚನಗಳನ್ನು ಅವಲಂಬಿಸಬೇಕು.
ವಚನವನ್ನು ಒಂದು ವಿಶಿಷ್ಟ ರೀತಿಯ ಗದ್ಯ ಎಂದು ವರ್ಣಿಸಬಹುದಾದರೂ ಅದು ಗದ್ಯ ಮತ್ತು ಪದ್ಯಗಳ ಒಂದು ಹದವಾದ ಮಿಶ್ರಣ ಎಂದು ವರ್ಣಿಸುವುದು ಸೂಕ್ತ. ಹಲವು ಸಂದರ್ಭಗಳಲ್ಲಿ ನಾವು ಅದರಲ್ಲಿ ಗದ್ಯದ ಸರಳತೆ ಮತ್ತು ಸ್ಪಷ್ಟತೆಯನ್ನೂ ಪದ್ಯದ ಲಾಲಿತ್ಯ ಮತ್ತು ಸೌಂದರ್ಯವನ್ನೂ ಕಾಣಬಹುದು. ಆದರೆ ವಚನಗಳಲ್ಲಿ ಪದ್ಯದ ಛಂದೋಬದ್ಧತೆ ಇಲ್ಲ. ವಚನಗಳನ್ನು ಗೀತ ಅಥವಾ ‘ಗೀತ ಮಾತು’ ಎಂದು ಕೆಲವು ವಚನಕಾರರು ಕರೆದಿರುವುದನ್ನು ನೋಡಿದರೆ ಅವುಗಳಲ್ಲಿ ಕೆಲವನ್ನು ರಾಗಬದ್ಧವಾಗಿ ಹಾಡುತ್ತಿದ್ದರು ಎಂದು ನಾವು ತೀರ್ಮಾನಿಸಬಹುದು. ಆದರೂ ಅವು ಖಂಡಿತವಾಗಿಯೂ ಪದ್ಯಗಳಲ್ಲ.
ಶ್ರೇಷ್ಠ ಕವಿತಾ ಸಾಮರ್ಥ್ಯವನ್ನು ಹೊಂದಿದ್ದ ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರು ಲಿಂಗಾಯತಧರ್ಮದ ಸಿದ್ಧಾಂತಗಳನ್ನು ವ್ಯಕ್ತಪಡಿಸಲು ಶ್ರೇಷ್ಠ ಮಟ್ಟದ ಕಾವ್ಯಗಳನ್ನು ರಚಿಸಬಹುದಾಗಿತ್ತು. ಒಂದು ವೇಳೆ ಅವರು ಹಾಗೆ ರಚಿಸಿದ್ದರೆ ಅವು ಕೆಲವು ಜನರಿಗೆ ಮಾತ್ರ ಮುಟ್ಟುತ್ತಿದ್ದವು; ಆಗ ಲಿಂಗಾಯತಧರ್ಮದ ಸಿದ್ಧಾಂತಗಳು ಎಲ್ಲರನ್ನೂ ಮುಟ್ಟಬೇಕು ಎಂಬ ಉದ್ದೇಶ ವಿಫಲವಾಗುತ್ತಿತ್ತು. ಲಿಂಗಾಯತಧರ್ಮದ ಸಂಸ್ಥಾಪಕರಾದ ಬಸವಣ್ಣನವರೂ ಇತರ ವಚನಕಾರರೂ ತಮ್ಮ ಸಿದ್ಧಾಂತಗಳನ್ನು ಪ್ರಚುರಪಡಿಸಲು ಸಂಸ್ಕೃತವನ್ನಾಗಲಿ, ಛಂದೋಬದ್ಧ ಕನ್ನಡ ಕಾವ್ಯರೂಪವನ್ನಾಗಲಿ ಬಳಸಿಕೊಳ್ಳಲಿಲ್ಲ. ಏಕೆಂದರೆ ಅವರ ಅನುಯಾಯಿಗಳಲ್ಲಿ ಬಹಳಷ್ಟು ಜನ ಅನಕ್ಷರಸ್ಥರಾಗಿದ್ದ ರೈತರು, ಕುಂಬಾರರು, ನೇಕಾರರು, ಚಮ್ಮಾರರು, ಗಾಣಿಗರು, ಮೇದಾರರು ಮುಂತಾದವರಿದ್ದರು. ಅವರೆಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಸರಳ ಕನ್ನಡ ಭಾಷೆಯನ್ನೇ ಅವರು ಬಳಸಬೇಕಾಗಿತ್ತು.
ಸರಳ ಕನ್ನಡದ ವಚನಗಳ ಆಳವಾದ ಪ್ರಭಾವಕ್ಕೆ ಒಳಗಾದ ಜನಸಾಮಾನ್ಯರು ಅವುಗಳ ಸಿದ್ಧಾಂತವನ್ನು ಅರ್ಥ ಮಾಡಿಕೊಂಡರಲ್ಲದೆ, ಅವುಗಳನ್ನು ಅನುಸರಿಸಲೂ ಪ್ರಾರಂಭಿಸಿದರು. ಇದರ ಪರಿಣಾಮವಾಗಿ ವಚನಕಾರರು ತಮ್ಮ ಜೀವನವನ್ನು ಸುಧಾರಿಸಿಕೊಂಡರಲ್ಲದೆ ವಚನಗಳನ್ನು ಬರೆದು ತಮ್ಮ ಸ್ನೇಹಿತರ ಮತ್ತು ಸಂಬಂಧಿಕರ ಜೀವನವನ್ನೂ ಸುಧಾರಿಸಿದರು.
ಕನ್ನಡದಲ್ಲಿ, ಅದರಲ್ಲೂ ಗದ್ಯದಲ್ಲಿ, ಬರೆಯುವ ಸ್ವಾತಂತ್ರ್ಯ ಸಿಕ್ಕಿದ ಕೂಡಲೇ ಜನರು ಅದುವರೆಗೂ ಅದುಮಿಟ್ಟ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ವಚನಗಳನ್ನು ಬರೆಯತೊಡಗಿದರು. ಇದರ ಪರಿಣಾಮ ಬಹಳ ಅದ್ಭುತವಾಗಿತ್ತು – ಸುಮಾರು ಮೂವತ್ತು ವಚನಕಾರ್ತಿಯರೂ ಸೇರಿದಂತೆ 360 ಜನ ವಚನಕಾರರು ವಚನಗಳನ್ನು ರಚಿಸಿದರು. ಅವರಲ್ಲಿ ಬಸವಣ್ಣ ಚೆನ್ನಬಸವಣ್ಣನವರಂತಹ ಮೇಲ್ಜಾತಿಯವರೂ ಇದ್ದರು, ಅಲ್ಲಮಪ್ರಭು, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಒಕ್ಕಲಿಗ ಮುದ್ದಣ್ಣ ಮುಂತಾದ ಕೆಳಜಾತಿಯವರೂ ಇದ್ದರು. ಪ್ರಪಂಚದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಷ್ಟೊಂದು ಜನ ಒಟ್ಟಿಗೆ ಸಾಹಿತ್ಯವನ್ನು ಸೃಷ್ಟಿಸಿದರು – ಎಲ್ಲರೂ ಸೇರಿ ಒಂದು ಹೊಸ ರಸ್ತೆಯನ್ನು ನಿರ್ಮಾಣ ಮಾಡಿದಂತೆ; ಪ್ರಪಂಚದ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಕುಂಬಾರರು, ಬಡಗಿಗಳು, ವೇಶ್ಯೆಯರು, ನೇಕಾರರು, ಚಮ್ಮಾರರು ಮುಂತಾದ ಕೆಳ ಜಾತಿಯವರು ಬರಹಗಾರರಾದರು.
ಈಗ ಸಿಕ್ಕಿರುವ ಸುಮಾರು 23 ಸಾವಿರ ವಚನಗಳಲ್ಲಿ ಸುಮಾರು 12 ಸಾವಿರ ವಚನಗಳು ಬಸವಣ್ಣನವರ ಕಾಲದಲ್ಲಿಯೇ ರಚಿಸಲ್ಪಟ್ಟವು ಎಂಬುದು ಗಮನಾರ್ಹ ವಿಷಯ. ಉಳಿದ ಸುಮಾರು 11000 ವಚನಗಳು 15ನೆಯ ಶತಮಾನದಿಂದೀಚೆಗೆ ಬರೆಯಲ್ಪಟ್ಟವು.
ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ವಚನಗಳನ್ನೇ ಒಂದು ಸೂಕ್ತ ಮಾಧ್ಯಮವನ್ನಾಗಿ ಮಾಡಿಕೊಳ್ಳಲು ಬಸವಣ್ಣ ಮತ್ತು ಇತರರಿಗೆ ಒಂದು ಸೂಕ್ತ ಕಾರಣವಿತ್ತು. ತಮ್ಮ ವಾದಗಳ ಮೂಲಕ ವಿರೋಧಿಗಳ ನಿಲುವನ್ನು ಖಂಡಿಸಲು ಮತ್ತು ತಮ್ಮ ವಾದಗಳನ್ನು ಮಂಡಿಸಲು ಛಂದೋಬದ್ಧ ಕಾವ್ಯಗಳಿಗಿಂತ ವಚನವೇ ಹೆಚ್ಚು ಸೂಕ್ತ ಎಂಬುದೇ ಆ ಕಾರಣ.
ಬಸವಪೂರ್ವದ ಕವಿಗಳು ತಮಗೆ ಆಶ್ರಯ ನೀಡುತ್ತಿದ್ದ ರಾಜ ಮತ್ತು ರಾಣಿಯರ ಚಾರಿತ್ರಿಕ ಅಂಶಗಳನ್ನು ಬಚ್ಚಿಟ್ಟು ಅವರನ್ನು ಅತಿರಂಜಿತವಾಗಿ ವರ್ಣಿಸುತ್ತಿದ್ದರು. ವಚನಕಾರರು ಈ ಪದ್ಧತಿಯನ್ನು ಸಂಪೂರ್ಣ ಕೈಬಿಟ್ಟರಲ್ಲದೆ ರಾಜಾಶ್ರಯದಿಂದ ದೂರವಿದ್ದು, ಧರ್ಮ, ದರ್ಶನ, ನೀತಿ, ಅನುಭಾವ ಮತ್ತು ಶರಣರ ಚರಿತ್ರೆಗಳ ಹೊರತು ಮತ್ತೇನನ್ನೂ ಬರೆಯಲಿಲ್ಲ. ಅವರ ಬರವಣಿಗೆಗಳಲ್ಲಿ ಜನರ ಜೀವನದಲ್ಲಿ ಧಾರ್ಮಿಕ, ನೈತಿಕ ಮತ್ತು ಸಾಮಾಜಿಕ ಸುಧಾರಣೆ ತರುವ ಉದ್ದೇಶವಿತ್ತು. ಡಾ.ಎಸ್.ಸಿ. ನಂದಿಮಠರವರ ಪ್ರಕಾರ ಒಂದು ದಾರ್ಶನಿಕ ಅಥವಾ ಧಾರ್ಮಿಕ ಪಂಥವನ್ನು ಸೃಷ್ಟಿಸುವುದು ವಚನಕಾರರ ಪ್ರಥಮ ಉದ್ದೇಶವಾಗಿರದೆ, ಆಗಿನ ಕಾಲದಲ್ಲಿದ್ದ ಸಾಮಾಜಿಕ ಮತ್ತು ಧಾರ್ಮಿಕ ನ್ಯೂನತೆಗಳನ್ನು ತೋರಿಸಿ ಕೊಡುವುದೇ ಆಗಿತ್ತು. ಡಾ.ನಂದಿಮಠರವರ ಅಭಿಪ್ರಾಯ ತಪ್ಪು ಎಂಬುದು ಈಗ ಅರಿವಾಗಿದೆ.
ಬಿಜ್ಜಳನ ಕೊಲೆಯಾದ ನಂತರ ಬಸವಣ್ಣ ಮತ್ತು ಅವರ ಸಹೋದ್ಯೋಗಿಗಳು ವಚನಗಳ ಕಟ್ಟುಗಳ ಸಮೇತ ವಿವಿಧ ದಿಕ್ಕುಗಳಲ್ಲಿ ಚದುರಿ ಹೋದರು; ಆದರೆ, ಅನೇಕ ವಚನಗಳನ್ನು ಸಂಪ್ರದಾಯವಾದಿಗಳು ನಾಶ ಮಾಡಿರಲು ಸಾಧ್ಯ. ವಚನಕಾರರಲ್ಲಿ ಅತ್ಯಂತ ಪ್ರಭಾವಿಗಳೆನಿಸಿದ ಕೆಲವರನ್ನು ಇಲ್ಲಿ ಉದಾಹರಿಸಬಹುದು.
ಬಸವಣ್ಣ
ಲಿಂಗಾಯತ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಿತ್ಯಸೂರ್ಯರಾಗಿ ಬೆಳಗುತ್ತಿದ್ದ ಬಸವಣ್ಣ, ಬಸವ, ಸಂಗನಬಸವ, ಬಸವರಾಜ, ಬಸವೇಶ್ವರ ಮುಂತಾಗಿ ಕರೆಯಲ್ಪಡುತ್ತಿದ್ದ ಬಸವಣ್ಣ, ಲಿಂಗಾಯತ ಚಳುವಳಿಯ ಸಂಸ್ಥಾಪಕರೂ ಮುಖಂಡರೂ ಆಗಿದ್ದರು. ತಮ್ಮ ಅದ್ಭುತ, ಆಕರ್ಷಕ ವ್ಯಕ್ತಿತ್ವದಿಂದಾಗಿ ಅವರು ಸಮಕಾಲೀನ ಹಾಗೂ ಅನಂತರದ ವಚನಕಾರರಿಗೂ, ಕವಿಗಳು ಮತ್ತು ಗ್ರಂಥಕರ್ತೃಗಳಿಗೂ ಪ್ರಿಯರಾಗಿದ್ದರು.
ಇಂದೂ ಅವರ ಅಭಿಮಾನಿಗಳ ಸಂಖ್ಯೆ ಅನಂತವಾಗಿ ಬೆಳೆಯುತ್ತಲೇ ಇದೆ.
ದುರದೃಷ್ಟವಶಾತ್, ಈಗ ಸಿಕ್ಕಿರುವ ಆಧಾರಗಳ ಮೇಲೆ ಅವರ ಜೀವನ ಚರಿತ್ರೆಯನ್ನು ಮರು ನಿರ್ಮಾಣ ಮಾಡುವುದು ಬಹಳ ಕಷ್ಟವಾಗಿದೆ. ಅವರ ಒಡನಾಡಿಗಳಿಗೆ ಅವರು ಲಿಂಗಾಯತ ಧರ್ಮದ ಸಂಸ್ಥಾಪಕರು, ಸಮಾಜ ಸುಧಾರಕರು, ನಿಷ್ಠಾವಂತ ಶಿವಭಕ್ತರು, ದಯಾವಂತರು, ಆದರೂ ಧೈರ್ಯದಿಂದ, ಪರಾಕ್ರಮದಿಂದ ಸಂಪ್ರದಾಯದೊಂದಿಗೆ ಹೋರಾಡುವವರು ಎಂಬುದು ಖಚಿತವಾಗಿ ಗೊತ್ತಿತ್ತು. ಆದರೆ ಬಸವೋತ್ತರ ಕಾಲದ ಕವಿಗಳು ಬಸವಣ್ಣನವರ ಜೀವನಚರಿತ್ರೆಯಲ್ಲಿ ಅತಿರಂಜಿತ ವರ್ಣನೆ, ಪವಾಡ ಮತ್ತು ಪೌರಾಣಿಕ ಘಟನೆಗಳನ್ನು ತುಂಬಿದರೇ ಹೊರತು, ಅವರ ಜೀವನದ ಮುಖ್ಯ, ನೈಜ, ಚಾರಿತ್ರಿಕ ಅಂಶಗಳನ್ನು ಕುರಿತು ಬರೆಯಲಿಲ್ಲ.
ಈ ಕವಿಗಳು ಪ್ರಯೋಗಿಸಿದ ಉತ್ಪ್ರೇಕ್ಷೆ ಮತ್ತು ಅನಾವಶ್ಯಕ ಪವಾಡಗಳನ್ನು ನಿರ್ಲಕ್ಷಿಸಿಯೂ ನಾವು ಕೆಲವು ಚಾರಿತ್ರಿಕ ಅಂಶಗಳನ್ನು ನಿರೂಪಿಸಬಹುದು. ಅರ್ಜುನವಾಡದಲ್ಲಿ ಸಿಕ್ಕಿರುವ ಒಂದು ಶಾಸನದ ಪ್ರಕಾರ ಮಾದರಸ ಬಸವಣ್ಣನವರ ತಂದೆ. ಬಸವಣ್ಣನವರ ಹೆಂಡತಿಯಾದ ಗಂಗಾಂಬಿಕೆಯ ಪ್ರಕಾರ, ಮಾದಲಾಂಬಿಕೆ ಬಸವಣ್ಣನವರ ತಾಯಿ. ಮಾದರಸ ಮತ್ತು ಮಾದಲಾಂಬಿಕೆಯರೇ ಬಸವಣ್ಣನವರ ತಂದೆತಾಯಿ ಎಂಬುದನ್ನು ಘಟ್ಟಿವಾಳಯ್ಯ, ಮಡಿವಾಳ ಮಾಚಯ್ಯ, ಮುಂತಾದ ಸಮಕಾಲೀನ ವಚನಕಾರರು ಒಪ್ಪಿಕೊಂಡಿದ್ದಾರೆ.
ಶೈವ ಬ್ರ್ರಾಹ್ಮಣರಾಗಿದ್ದ ಈ ತಂದೆ ತಾಯಿ ಈಗ ವಿಜಯಪುರ ಜಿಲ್ಲೆಯಲ್ಲಿರುವ ಬಾಗೇವಾಡಿ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಮಾದಲಾಂಬಿಕೆಯ ತವರೂರು ಹತ್ತಿರದಲ್ಲಿಯೇ ಇರುವ ಇಂಗಳೇಶ್ವರ ಎಂಬ ಸಣ್ಣ ಹಳ್ಳಿಯಲ್ಲಿ ಬಸವೇಶ್ವರರು ಜನಿಸಿದರು. ಅವರು ಹುಟ್ಟಿದ ದಿನಾಂಕದ ಬಗೆಗೆ ಗ್ರಂಥಕರ್ತೃಗಳಲ್ಲಿ ಏಕಾಭಿಪ್ರಾಯವಿಲ್ಲ. ಅನೇಕರು ಬಸವಣ್ಣ ಕ್ರಿಸ್ತಶಕ 1131 ರಲ್ಲಿ ಜನಿಸಿದರು ಮತ್ತು 36 ಜೀವಿಸಿದರು ಎಂದು ನಂಬುತ್ತಾರೆ; ಆದರೆ ಪ್ರಸಿದ್ಧ ಇತಿಹಾಸಕಾರರಾದ ಡಾ. ಜಿ. ಬಿ. ದೇಸಾಯಿಯವರು ಪುರಾಣಗಳಲ್ಲಿ ಉಕ್ತವಾಗಿರುವ ಅನೇಕ ಹಿಂದೂ ಪಂಚಾಂಗ ಮತ್ತು ಬಸವಣ್ಣನವರ ಸಾಧನೆಗಳನ್ನು ಅಭ್ಯಸಿಸಿ, 1131ಕ್ಕಿಂತ ಮೊದಲೇ (ಪ್ರಾಯಶಃ 1105/6ರಲ್ಲಿ) ಬಸವಣ್ಣನವರ ಜನನವಾಗಿರಬೇಕು ಎಂದು ತೀರ್ಮಾನಿಸುತ್ತಾರೆ. ಅವರ ಪ್ರಕಾರ ಬಸವಣ್ಣ 60 ವರ್ಷಕ್ಕಿಂತ ಹೆಚ್ಚು ವರ್ಷ ಬದುಕಿದ್ದರು. ಆದರೆ ಬಹಳಷ್ಟು ಸಂಶೋಧಕರು ಬಸವಣ್ಣನವರು ಕ್ರಿಸ್ತಶಕ 1167 ರಲ್ಲಿ ಲಿಂಗೈಕ್ಯವಾದರೆಂದು ನಂಬುತ್ತಾರೆ.
ಬಸವಣ್ಣನವರಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲನೆಯ ಹೆಂಡತಿ ಗಂಗಾಂಬಿಕಾ ಬಿಜ್ಜಳನ ಮಂತ್ರಿಯಾಗಿದ್ದ ಬಲದೇವನ ಮಗಳು; ಎರಡನೆಯ ನೀಲಾಂಬಿಕೆ ಬಿಜ್ಜಳನ ಸಾಕು ತಂಗಿಯಾಗಿದ್ದಳು. ಬಸವಣ್ಣನವರಿಗೆ ದೇವರಾಜ ಎಂಬ ಅಣ್ಣನೂ, ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡ ಒಬ್ಬ ಮಗನೂ ಇದ್ದರು. ನಾಗಮ್ಮ ಅವರ ಅಕ್ಕ.
ಹರಿಹರನ ಪ್ರಕಾರ ಬಸವಣ್ಣ ಹದಿನಾರನೆ ವಯಸ್ಸಿನಲ್ಲಿ ವೈದಿಕ ಕರ್ಮಾಚರಣೆಯೂ ನಿಷ್ಠಾಭಕ್ತಿಯೂ ಒಟ್ಟಿಗೆ ಇರಲಾರವು ಎಂಬುದನ್ನು ಮನಗಂಡು ಬ್ರಾಹ್ಮಣ್ಯದ ಸಂಕೇತವಾಗಿದ್ದ ತಮ್ಮ ಜನಿವಾರವನ್ನು ಹರಿದು ಹಾಕಿ ನಾಗಮ್ಮನೊಡನೆ ಕೃಷ್ಣ ಮತ್ತು ಮಲಪ್ರಭಾ ನದಿಗಳು ಕೂಡುವ ಕೂಡಲಸಂಗಮಕ್ಕೆ ಬಂದು ನೆಲೆಸಿದರು. ಅಲ್ಲಿ ವೇದ, ಉಪನಿಷತ್ತು, ಪುರಾಣ, ಆಗಮಗಳನ್ನು ಒಬ್ಬ ಗುರುವಿನಿಂದ ಕಲಿತರು ಮತ್ತು ಅಲ್ಲಿಯೇ ಇದ್ದ ಸ್ಥಾವರಲಿಂಗವನ್ನು ಪ್ರತಿದಿನವೂ ಪೂಜಿಸುತ್ತಿದ್ದರು.
ಪ್ರಾಯಶಃ 1132ರಲ್ಲಿ ಬಸವಣ್ಣನವರು ಈಗ ಮಹಾರಾಷ್ಟ್ರದಲ್ಲಿರುವ ಮಂಗಳವೇಢೆಗೆ ಬಂದು ಬಿಜ್ಜಳನ ಆಸ್ಥಾನದ ಆರ್ಥಿಕ ವ್ಯವಸ್ಥೆಯಲ್ಲಿ ಕರಣಿಕನಾಗಿ ಕೆಲಸಕ್ಕೆ ಸೇರಿದರು. ಆಗ ಬಿಜ್ಜಳನು ಮೂರನೆಯ ತೈಲಪನ ಸಾಮಂತನಾಗಿದ್ದನು. ಮುಂದೆ ಮೂರನೇ ತೈಲಪನನ್ನು ಬಿಜ್ಜಳನು ಕೊಲ್ಲಿಸಿ (1132ರಲ್ಲಿ?) ತಾನೇ ಸಿಂಹಾಸನವನ್ನು ಆಕ್ರಮಿಸಿಕೊಂಡನು. ಅಲ್ಲದೆ, ಈಗ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಎಂಬ ಹೆಸರಿನ ಕಲ್ಯಾಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು, ಅಲ್ಲಿಗೆ ಬಂದು ನೆಲೆಸಿದನು; ಜೊತೆಯಲ್ಲಿ ಬಸವಣ್ಣನವರನ್ನು ಕರೆದುಕೊಂಡು ಬಂದನು. ಕೇವಲ ಭಂಡಾರಿಯಾಗಿದ್ದ ಬಸವಣ್ಣನವರು ಕಲ್ಯಾಣಕ್ಕೆ ಬಂದಮೇಲೆ ಆರ್ಥಿಕ ಮಂತ್ರಿಯಾದರು.
ಬಸವಣ್ಣನವರು ಮಂಗಳವೇಢೆಯಲ್ಲಿದ್ದಾಗಲೇ ಸಾಂಪ್ರದಾಯಿಕ ಸಮಾಜೋ-ಧಾರ್ಮಿಕ ವ್ಯವಸ್ಥೆಯ ವಿರುದ್ಧ ಕ್ರಾಂತಿಧ್ವನಿ ಎತ್ತಿದ್ದರು. ಅವರು ಕಲ್ಯಾಣಕ್ಕೆ ಬಂದಮೇಲೆ ಅದು ಮತ್ತಷ್ಟು ಶಕ್ತಿಯನ್ನೂ ತೀವ್ರತೆಯನ್ನೂ ಪಡೆಯಿತು. ಅವರು ಗುರುಗಳ ಬೋಧನೆಯಲ್ಲಿನ ಉನ್ನತ ಆದರ್ಶಗಳಿಗೂ ಅವರ ವಾಸ್ತವಿಕ ಆಚರಣೆಗೂ ಇರುವ ವ್ಯತ್ಯಾಸವನ್ನೂ ನೋವಿನಿಂದ ಮನಗಂಡರು. ಅದ್ವೈತದ ಉನ್ನತ ಆದರ್ಶಗಳನ್ನು ಬೋಧಿಸುತ್ತಿದ್ದ ಉಚ್ಚ ಜಾತಿಯವರು ಶೂದ್ರರನ್ನೂ ಪಂಚಮರನ್ನೂ ಹೇಗೆ ಹೀನಾಯವಾಗಿ ಕಾಣುತ್ತಿದ್ದರೆಂಬುದನ್ನು ಕಂಡರು. ಮನುಷ್ಯ-ಮನುಷ್ಯರಲ್ಲಿರುವ ತಾರತಮ್ಯ ಕೆಳಜಾತಿಯವರ ಮೂಕ ವೇದನೆಯನ್ನು ಕಂಡು ನೊಂದುಕೊಂಡರು. ಬ್ರಾಹ್ಮಣರು ಹೇಗೆ ತಮ್ಮ ಪಾಂಡಿತ್ಯವನ್ನೂ ಕೆಳಜಾತಿಯವರ ಮುಗ್ಧತೆಯನ್ನೂ ದುರುಪಯೋಗಪಡಿಸಿಕೊಂಡರು ಎಂಬುದನ್ನು ಮನಗಂಡರು.
ಇಂಥ ಘಟನೆಗಳನ್ನು ಹೆಚ್ಚು ಹೆಚ್ಚು ನೋಡಿದಂತೆಲ್ಲ ವೈದಿಕ ಸಮಾಜೋ-ಧಾರ್ಮಿಕ ವ್ಯವಸ್ಥೆಯನ್ನು, ಅದರಲ್ಲೂ ಬ್ರಾಹ್ಮಣ ಪಾರಮ್ಯವನ್ನು ದ್ವೇಷಿಸಲು ಪ್ರಾರಂಭಿಸಿದರು. ಇದಕ್ಕೆ ಅವರ ಅನೇಕ ವಚನಗಳೇ ಸಾಕ್ಷಿ. ತಮ್ಮ ಜನಿವಾರ ಕಿತ್ತು ಹಾಕುವ ಮೂಲಕ ಅವರೊಬ್ಬರೇ ವೇದಗಳ ಕರ್ಮಕಾಂಡದಿಂದ ಬಿಡುಗಡೆ ಹೊಂದಿದ್ದರು; ಲಿಂಗಾಯತ ಧರ್ಮ ಸ್ಥಾಪಿಸಿ ಕೆಳ ಜಾತಿಯವರನ್ನೂ ವೈದಿಕ ಧರ್ಮದಿಂದ ಬಿಡುಗಡೆ ಮಾಡಿದರು.
ಬಸವಣ್ಣ ಪ್ರಾಯಶಃ ಸಂಪ್ರದಾಯಸ್ಥ ಸಹೋದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಕ್ಕೆ ಅನೇಕ ಕಾರಣಗಳುಂಟು.
- ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ನಡೆಯುತ್ತಿದ್ದ ತತ್ವ ಮೀಮಾಂಸೆ, ಧರ್ಮ, ನೀತಿ, ಅನುಭಾವ, ಕಾಯಕ ಮತ್ತು ದಾಸೋಹ, ಜೀವನದ ಗುರಿ ಮುಂತಾದವುಗಳ ಚರ್ಚೆಯಲ್ಲಿ ಭಾಗವಹಿಸಲು ಮೇಲ್ಜಾತಿಯವರಿಗೂ, ಕೆಳಜಾತಿಯವರಿಗೂ ಅವಕಾಶ ಮಾಡಿಕೊಟ್ಟಿದ್ದರು. ಶೂದ್ರರಿಗೆ ಧರ್ಮ ಬೋಧಿಸಬಾರದು ಎಂಬ ಮನುವಿನ ಕಟ್ಟಳೆಗೆ ಇದು ವಿರುದ್ಧವಾಗಿತ್ತು.
- ಬಸವಣ್ಣನವರು ಶೂದ್ರ ಜಾತಿಯಲ್ಲಿ ಹುಟ್ಟಿದ್ದ ಅಲ್ಲಮಪ್ರಭುವನ್ನು ಅನುಭವ ಮಂಟಪದ ಅಧ್ಯಕ್ಷನನ್ನಾಗಿ ಮಾಡಿದರು.
- ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ, ಮುಂತಾದವರು ವೈದಿಕ ಧರ್ಮದ ಬಹುದೇವತಾವಾದ, ಜಾತಿತಾರತಮ್ಯ, ಯಜ್ಞಯಾಗಾದಿಗಳ ಆಚರಣೆ ಮತ್ತು ಸಮಾಜದ ಶ್ರೇಣೀಕರಣ ಇವುಗಳನ್ನು ಧೈರ್ಯದಿಂದಲೇ, ಮುಚ್ಚುಮರೆಯಿಲ್ಲದೆ ವಿರೋಧಿಸಿದರು. ಅಲ್ಲದೆ, ಅವರು ತಮ್ಮ ಅನುಯಾಯಿಗಳಿಗೆ ಅವೈದಿಕ ಧರ್ಮವಾದ ಲಿಂಗಾಯತ ಧರ್ಮದ ತತ್ವಗಳನ್ನು ಅನುಸರಿಸಲು ಮತ್ತು ಪ್ರಚಾರ ಮಾಡಲು ಹೇಳಿದರು. ಅವರ ಹೊಸ ಧಾರ್ಮಿಕ ಮತ್ತು ಸಮಾಜೋ-ದಾರ್ಶನಿಕ ಸಿದ್ಧಾಂತಗಳು ಕಲ್ಯಾಣದ ಜನರನ್ನೂ ಅಲ್ಲದೆ ಕರ್ನಾಟಕದ ಬಹಳಷ್ಟು ಜನರನ್ನು ಆಕರ್ಷಿಸಿದವು. ಅಲ್ಲದೆ, ಇವುಗಳಿಂದ ಆಕರ್ಷಿತರಾದ ಅಫಘಾನಿಸ್ತಾನ, ಕಾಶ್ಮೀರ, ಸೌರಾಷ್ಟ್ರ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಗಳಂತಹ ದೂರ ದೂರದ ಜನರೂ ಕಲ್ಯಾಣಕ್ಕೆ ಬಂದು ಬಸವಣ್ಣನವರನ್ನು ಭೇಟಿಯಾಗತೊಡಗಿದರು. ಇದು ಬಸವಣ್ಣನವರ ಜನಪ್ರಿಯತೆಯನ್ನೂ ಪ್ರಸಿದ್ಧಿಯನ್ನೂ ಹೆಚ್ಚಿಸಿತು. ಇದನ್ನು ಕಂಡ ಸಂಪ್ರದಾಯಸ್ಥ ಸಹೋದ್ಯೋಗಿಗಳು ಅವರನ್ನು ದ್ವೇಷಿಸತೊಡಗಿದರು.
- ಬಸವಣ್ಣ ಜಾತಿತಾರತಮ್ಯವನ್ನು ಕಡೆಗಾಣಿಸಲು ಪಣತೊಟ್ಟಿದ್ದರು. ಒಬ್ಬ ಬ್ರಾಹ್ಮಣ ಹುಡುಗಿಗೂ ಅಸ್ಪೃಶ್ಯ ಹುಡುಗನಿಗೂ ಲಗ್ನ ಮಾಡಿದರು. ದುರ್ಬೋಧನೆಗೂ ಒತ್ತಡಕ್ಕೂ ಒಳಗಾದ ಬಿಜ್ಜಳನು ಪ್ರಾಯಶಃ ಬಸವಣ್ಣನವರನ್ನು ಗಡೀಪಾರು ಮಾಡಿದನು; ಬ್ರಾಹ್ಮಣ ಹುಡುಗಿಯ ತಂದೆಯ ಮತ್ತು ಅಸ್ಪೃಶ್ಯ ಹುಡುಗನ ತಂದೆಯ ಕಣ್ಣುಗಳನ್ನು ಕೀಳಿಸಿ, ಅವರನ್ನು ಆನೆಯ ಕಾಲಿಗೆ ಕಟ್ಟಿ ನಗರದ ಬೀದಿಗಳಲ್ಲಿ ಅವರು ಸಾಯುವವರೆಗೂ ಎಳೆಸಿದನು. ಪ್ರಾಯಶಃ ಬಿಜ್ಜಳನ ವೈರಿಗಳು ಇದನ್ನು ಸಂತೋಷದಿಂದ ನೋಡುತ್ತಿದ್ದಿರಬೇಕು. ಇಂತಹ ಅವಕಾಶವನ್ನೇ ಕಾಯುತ್ತಿದ್ದ ಅವರು ಬಿಜ್ಜಳನನ್ನು ಕೊಲ್ಲಿಸಿದರಲ್ಲದೆ (ಕ್ರಿ.ಶ.1168) ಎಲ್ಲಾ ವಚನಕಾರರನ್ನು ಕಲ್ಯಾಣದಿಂದ ಓಡಿಸಿದರು. ಯಾವ ವಚನಕಾರರು ಎಲ್ಲಿ, ಯಾವಾಗ ಮತ್ತು ಹೇಗೆ ಮರಣ ಹೊಂದಿದರು ಎಂಬುದು ನಮಗೆ ಗೊತ್ತಿಲ್ಲ. ಪ್ರಾಯಶಃ ಬಸವಣ್ಣನವರು ಕೂಡಲಸಂಗಮದಲ್ಲಿ ಕ್ರಿ.ಶ.1167ರಲ್ಲಿ (ಬಿಜ್ಜಳನ ಕೊಲೆಗೆ ಮೊದಲು) ಲಿಂಗೈಕ್ಯರಾದರು.
ಚೆನ್ನಬಸವಣ್ಣ
ಬಸವಣ್ಣನವರ ಅಕ್ಕ, ನಾಗಮ್ಮನ ಏಕೈಕ ಪುತ್ರ ಚೆನ್ನಬಸವಣ್ಣನು ಬಸವಣ್ಣನವರ ಎಲ್ಲ ಯೋಜನೆಗಳನ್ನು, ಎಲ್ಲ ಕಾರ್ಯಗಳನ್ನು ಶಕ್ತಿಯುತವಾಗಿ ಬೆಂಬಲಿಸಿದವನು. ಬಸವಣ್ಣನವರಿಗೆ ಅವನಿಲ್ಲದೆ ತಮ್ಮ ಯೋಚನೆಗಳನ್ನು ಹೆಚ್ಚು ಪ್ರಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಸವಣ್ಣನವರ ಎಲ್ಲ ಅನುಯಾಯಿಗಳಿಗಿಂತ ಅವನು ಕಿರಿಯನಾಗಿದ್ದರೂ ವೇದ, ಉಪನಿಷತ್ತು, ಆಗಮ, ಪುರಾಣ, ಮತ್ತು ಶಾಸ್ತ್ರಗಳನ್ನು ತಿಳಿದವರಲ್ಲಿ ಅವನನ್ನು ಮೀರಿಸುವವರು ಯಾರೂ ಇರಲಿಲ್ಲ. ಬಸವಣ್ಣನವರ ಹೊಸ ಧರ್ಮವನ್ನೂ ಸಮಾಜ ದರ್ಶನವನ್ನೂ ಹೆಚ್ಚು ಪ್ರಚುರಪಡಿಸುವಲ್ಲಿ ಅವನ ಪಾತ್ರ ಬಹಳ ಹಿರಿದು.
ಚೆನ್ನಬಸವಣ್ಣ ನಾಲ್ಕು ಕಾರಣಗಳಿಗಾಗಿ ಮುಖ್ಯ ಎನಿಸಿಕೊಳ್ಳುತ್ತಾನೆ.
- ಬಸವಣ್ಣನವರ ಸಿದ್ಧಾಂತಗಳನ್ನು ಮತ್ತು ಆಚರಣೆಗಳನ್ನು ಸಮರ್ಥವಾಗಿ ಮಂಡಿಸುವಲ್ಲಿ ಮತ್ತು ವಿಚಾರಾತ್ಮಕವಾಗಿ ಬೆಂಬಲಿಸುವಲ್ಲಿ ಅವನೇ ಮೊದಲು.
- ಧರ್ಮಾಂತರ, ಭಕ್ತಿ, ಪೂಜೆ, ಪ್ರಸಾದ, ಮುಂತಾದ ವಿಷಯಗಳ ನಿಯಮಗಳನ್ನು ಮೊಟ್ಟಮೊದಲು ರೂಪಿಸಿದವನು ಅವನೇ.
- ಒಬ್ಬ ಆದರ್ಶಪ್ರಾಯನಾದ ಲಿಂಗಾಯತನು ಪಾಲಿಸಬೇಕಾದ ನೀತಿಗಳನ್ನು ರೂಪಿಸಿದವನು ಅವನೇ.
4 ಒಬ್ಬ ಆದರ್ಶಪ್ರಾಯನಾದ ಲಿಂಗಾಯತನು ಪಾಲಿಸಬೇಕಾದ ಸಾಮಾಜಿಕ ವರ್ತನೆಯ ನಿಯಮಗಳನ್ನು ರೂಪಿಸಿದವನು.
ಬಸವಣ್ಣನವರಂತೆ ಚೆನ್ನಬಸವಣ್ಣನು ಸಹ ಪ್ರಪಂಚ ತ್ಯಾಗವನ್ನು ಖಂಡಿಸಿದನು. ಒಬ್ಬ ಶರಣ ತನ್ನ ಸಾಮಾಜಿಕ ಹೊಣೆಗಳನ್ನು ನಿರ್ವಹಿಸುತ್ತಲೇ ಆಧ್ಯಾತ್ಮಿಕ ಜೀವನ ನಡೆಸಿ ಮೋಕ್ಷ ಪಡೆಯಲು ಸಾಧ್ಯ ಎಂಬ ಬಸವಣ್ಣನವರ ತತ್ವವನ್ನು ಅನುಮೋದಿಸಿದ. ಶರಣನ ಜೀವನಕ್ರಮ ಇತರರಿಗೆ ಪ್ರಿಯವಾಗದಿರಬಹುದು, ಆದರೆ ಶರಣರಿಗೆ ಇತರರ ಜೀವನಕ್ರಮ ಪ್ರಿಯವಾಗುವುದಿಲ್ಲ.
ಚೆನ್ನಬಸವಣ್ಣ ವಚನಗಳನ್ನೂ ಅಲ್ಲದೆ ಕರಣಹಸಿಗೆ ಎಂಬ ಗ್ರಂಥವನ್ನು ರಚಿಸಿದ್ದಾನೆ. ಇದು ಲಿಂಗಾಯತ ಧರ್ಮಕ್ಕೆ ಅವನು ನೀಡಿದ ವಿಶಿಷ್ಟ ಕೊಡುಗೆ. ಅದರಲ್ಲಿ ಅವನು ಮಾನವಶರೀರದ ಕುರಿತು ಚರ್ಚಿಸಿದ್ದಾನೆ. ಪಂಚಭೂತಗಳು, ದಶ ವಾಯುಗಳು, ಇಂದ್ರಿಯಗಳು, ಸಪ್ತಧಾತುಗಳು ಹೇಗೆ ವಿವಿಧ ರೀತಿಯಲ್ಲಿ ವರ್ತಿಸಿ ಮನುಷ್ಯನನ್ನು ಪ್ರಾಪಂಚಿಕನನ್ನಾಗಿ ಮಾಡುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾನೆ.
ಇದರ ಜ್ಞಾನವು ಸಾಧಕನಿಗೆ ಆವಶ್ಯಕ. ಸಮರ್ಥ ಗುರುವಿನಿಂದ ಅವನು ಇವುಗಳನ್ನು ನಿಯಂತ್ರಿಸಿ ಹೇಗೆ ಲಿಂಗಾಂಗ ಸಾಮರಸ್ಯವೆಂಬ ಪರಮ ಗುರಿ ಮುಟ್ಟಬಹುದು ಎಂಬುದನ್ನು ಕಲಿಯಬಹುದು. ಅಲ್ಲಮಪ್ರಭು ವಿವಿಧ ಕ್ಷೇತ್ರಗಳ ಪರ್ಯಟನೆಗೆಂದು 12 ವರ್ಷ ಕಾಲ ಕಲ್ಯಾಣದಿಂದ ನಿರ್ಗಮಿಸಿದಾಗ ಚೆನ್ನಬಸವಣ್ಣನನ್ನು ಅನುಭವ ಮಂಟಪದ ಅಧ್ಯಕ್ಷರನ್ನು ಮಾಡಲಾಯಿತು, ಏಕೆಂದರೆ ಅವನೂ ಅಲ್ಲಮನಂತೆ ಜ್ಞಾನ ಮತ್ತು ವಿವೇಚನೆಯಲ್ಲಿ ಅರ್ಹನೆನಿಸಿಕೊಂಡಿದ್ದನು. ಕಲ್ಯಾಣದ ಕ್ರಾಂತಿಯ ನಂತರ ಅವನು ಮತ್ತು ಅವನ ಸಹವಚನಕಾರರು ಉಳವಿ ಎಂಬ ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಊರಲ್ಲಿ ನೆಲೆಸಿದರು. ಅವನು ಅಲ್ಲಿಯೇ ಲಿಂಗೈಕ್ಯನಾಗಿರಬಹುದು. ಅವನು ಮತ್ತು ಅವನ ಸ್ನೇಹಿತರು ಕಲ್ಯಾಣದಿಂದ ಹೊರಡುವಾಗ ವಚನಕಟ್ಟುಗಳನ್ನು ವೈರಿಗಳಿಂದ ರಕ್ಷಿಸಲು ತೆಗೆದುಕೊಂಡು ಹೋಗಿರಬಹುದು.
ಅಲ್ಲಮ ಪ್ರಭು
ಜಗತ್ತಿನ ಪ್ರಥಮ ದರ್ಜೆಯ ಅನುಭಾವಿಗಳಲ್ಲಿ ಒಬ್ಬನೆಂದೂ ಶ್ರೇಷ್ಠ ವಚನಕಾರರಲ್ಲಿ ಒಬ್ಬರೆಂದೂ ಪರಿಗಣಿಸಲ್ಪಟ್ಟಿರುವ ಅಲ್ಲಮಪ್ರಭು ಹರಿಹರನ ಪ್ರಭುದೇವರ ರಗಳೆ ಮತ್ತು ಚಾಮರಸನ ಪ್ರಭುಲಿಂಗಲೀಲೆಗಳ ಕಥಾನಾಯಕ.
ಈಗ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಬಳ್ಳಿಗಾವಿ ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿದರು. ಅವರದು ನಟ್ಟುವ ಎಂಬ ಶೂದ್ರ ಜಾತಿ ಮತ್ತು ಅವರ ವೃತ್ತಿಯು ನೃತ್ಯವನ್ನು ಕಲಿಸುವುದು. ಅವರ ತಂದೆ ರಾಜವಂಶಕ್ಕೆ ನಾಟ್ಯ ಗುರುವಾಗಿದ್ದರು.
ವಂಶಪಾರಂಪರ್ಯಯಾಗಿ ಬಂದಿದ್ದ ನಾಟ್ಯಕ್ಕೆ ಪಕ್ಕವಾದ್ಯವಾಗಿದ್ದ ಮೃದಂಗ (ಮದ್ದಳೆ) ಬಾರಿಸುವ ಕಲೆಯನ್ನು ತಂದೆಯಿಂದ ಕಲಿತು ಅದರಲ್ಲಿ ಪರಿಣಿತರೂ ಆಗಿದ್ದರು. ಹರಿಹರ (ಕ್ರಿ.ಶ.1250) ಮತ್ತು ಚಾಮರಸರ (ಕ್ರಿ.ಶ. 1450) ಪ್ರಕಾರ ತರುಣ, ಸ್ಫುರದ್ರೂಪಿ ಆಗಿದ್ದ ಅಲ್ಲಮರು ಒಮ್ಮೆ ಬನವಾಸಿಯ ದೇವಸ್ಥಾನದಲ್ಲಿ ಮೃದಂಗ ಬಾರಿಸುತ್ತಿದ್ದಾಗ ಅದನ್ನು ಕೇಳಿದ ಒಬ್ಬ ನರ್ತಕಿ ಅದನ್ನು ಬಹುವಾಗಿ ಮೆಚ್ಚಿಕೊಂಡಳಲ್ಲದೆ, ಅವನನ್ನು ಪ್ರೀತಿಸತೊಡಗಿದಳು. ಹರಿಹರನ ಪ್ರಕಾರ ಆಕೆ ಒಬ್ಬ ಶ್ರೀಮಂತ ವರ್ತಕನ ಮಗಳು. ಆಕೆ ಕೆಲವು ಕಾಲ ಅಲ್ಲಮನೊಡನೆ ಬಾಳ್ವೆ ನಡೆಸಿದಳು ಮತ್ತು ಒಂದು ದಿನ ತೀವ್ರ ಜ್ವರದಿಂದ ತೀರಿಕೊಂಡಳು.
ದುಃಖ ತಾಳದ ಅಲ್ಲಮ ತನ್ನ ಜೀವನ ಇಲ್ಲಿಗೆ ಮುಗಿಯಿತೆಂದುಕೊಂಡು ಅಲೆಮಾರಿಯಾದರು. ಕೆಲ ದಿನಗಳ ನಂತರ ಅವರ ಲೌಕಿಕ ಪ್ರೇಮ ಆಧ್ಯಾತ್ಮಿಕ ಪ್ರೇಮವಾಗಿ ಪರಿವರ್ತಿತವಾಯಿತು. ಪ್ರಾಯಶಃ ಅನಿಮಿಷನು ಅಲ್ಲಮರಿಗೆ ಲಿಂಗ ದೀಕ್ಷೆ ನೀಡಿದ. ಅಲ್ಲಮರ ವಚನಗಳನ್ನು ನೋಡಿದರೆ ಅವರು ಯಾರೂ ಮುಟ್ಟದ ಆಧ್ಯಾತ್ಮಿಕ ಎತ್ತರವನ್ನು ಮುಟ್ಟಿದ್ದರು. ಪ್ರಾಯಶಃ ಬಸವಣ್ಣನವರನ್ನು ಭೇಟಿಯಾದಾಗ ಆಗಲೇ ಅವರೊಬ್ಬ ಘನ ಅನುಭಾವಿ ಎಂದು ಪ್ರಸಿದ್ಧನಾಗಿದ್ದರು.
ಚಾಮರಸನ ಪ್ರಕಾರ ನರ್ತಕಿಯು ಒಬ್ಬ ಸಾಮಂತನ ಮಗಳಾಗಿದ್ದಳು. ವಾಸ್ತವವಾಗಿ ಈ ನರ್ತಕಿಯು ತನ್ನ ಹಿಂದಿನ ಜನ್ಮದಲ್ಲಿ ಪಾರ್ವತಿಯ ತಾಮಸ ಅಂಶವಾದ ಮಾಯೆಯ ಸಂಕೇತವಾಗಿದ್ದಳು. ಆಕೆ ಪಾರ್ವತಿಯ ಆದೇಶದ ಮೇರೆಗೆ ಅಲ್ಲಮರನ್ನು ಪ್ರಾಪಂಚಿಕ ಸುಖಕ್ಕೆ ಆಕರ್ಷಿಸಲು ಭೂಮಿಗೆ ಬಂದವಳು. ಆದರೆ ಅಲ್ಲಮರು ಒಬ್ಬ ಪರಿಪೂರ್ಣ ಅನುಭಾವಿಯದುದರಿಂದ ಇಂತಹ ಆಕರ್ಷಣೆಗೆ ಒಳಪಡಲಿಲ್ಲ. ಚಾಮರಸನ ಪ್ರಕಾರ ಅಲ್ಲಮರಿಗೆ ಭೌತಿಕ ದೇಹವಿರಲಿಲ್ಲ, ಅವರದು ವ್ಯೋಮಕಾಯ. ಅಂದರೆ ಮಾಯೆಯು ಅವನನ್ನು ಅಪ್ಪಿದಾಗ ಅವಳಿಗೆ ಪುರುಷನನ್ನು ಅಪ್ಪಿದ ಸಂತೋಷವಾಗಲಿಲ್ಲ.
ಅಲ್ಲಮರು ಯಾಂತ್ರಿಕ, ಆಡಂಬರದ ಪೂಜೆಯನ್ನು ಖಂಡಿಸಿದರಲ್ಲದೆ, ಆಗಿನ ಜನರ ಧ್ಯಾನ, ಜೀವನವಿಧಾನ, ಮೋಕ್ಷ, ಸಾಧನಾಮಾರ್ಗ, ಪರಮಾತ್ಮ ಮುಂತಾದ ಪರಿಕಲ್ಪನೆಗಳನ್ನೂ ವಿಡಂಬಿಸಿದರು. ಅವುಗಳಿಂದ ಆಧ್ಯಾತ್ಮಿಕ ಜೀವನದ ಪರಮ ಗುರಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದು ಅವನ ನಿಲವಾಗಿತ್ತು. ಇದು ಅವರ ವಚನಗಳಿಂದ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಸಾಧಕರು ತಮ್ಮ ಜೀವನದ ಪರಮಗುರಿಯನ್ನು ತಪ್ಪಾಗಿ ಕಲ್ಪಿಸಿಕೊಂಡಾಗ, ಸಾಧನೆಯಲ್ಲಿ ತಪ್ಪು ಮಾಡಿದಾಗ, ಅವರನ್ನು ದಯೆಯಿಂದ ತಿದ್ದುವ ಘನ ಔದಾರ್ಯ ಅಲ್ಲಮರಿಗಿತ್ತು.
ಉದಾಹರಣೆಗೆ, ಜನಹಿತ ಕಾರ್ಯಗಳನ್ನು ಮಾಡುತ್ತಿದ್ದ ಸಿದ್ಧರಾಮನನ್ನು ನೋಡಿದ ಅಲ್ಲಮರು ಅವನ ಧ್ಯೇಯವು ಜನಹಿತ ಕಾರ್ಯಗಳ ಮೂಲಕ ಕೈಲಾಸ ಪದವಿ ಪಡೆಯುವುದು ಎಂದು ಗೊತ್ತಾದಾಗ, ಅಲ್ಲಮರಿಗೆ ಅವನ ಉದ್ದೇಶವೂ ಆ ಉದ್ದೇಶದಿಂದ ಮಾಡಿದ ಜನಹಿತ ಕಾರ್ಯಗಳೂ ಮೌಲ್ಯರಹಿತ ಎಂಬುದನ್ನು ತೋರಿಸಿಕೊಟ್ಟರು. ಸಿದ್ಧರಾಮನು ಸರಿಯಾದ ಗುರಿಯ ಬಗ್ಗೆ, ಅದನ್ನು ಸಾಧಿಸುವ ಬಗ್ಗೆ ಕಲ್ಯಾಣದ ಶರಣರಿಂದ ಕಲಿಯಲೆಂದು ಅವರನ್ನು ಕಲ್ಯಾಣಕ್ಕೆ ಕರೆದುಕೊಂಡು ಬಂದರು. ಕಲ್ಯಾಣದಲ್ಲಿ ಬಸವಣ್ಣನವರು ಮಾಡುತ್ತಿದ್ದ ಸಮಾಜೋ-ಧಾರ್ಮಿಕ ಸುಧಾರಣೆಗಳನ್ನು ಅವನು ಗಮನಿಸುತ್ತಿದ್ದನು.
ಅಲ್ಲಮಪ್ರಭು ಅನುಭವ ಮಂಟಪದ ಅಧ್ಯಕ್ಷರಾಗಿದ್ದಾಗ ಯಾವ ಜಾತಿತಾರತಮ್ಯವಾಗಲಿ ಲಿಂಗತಾರತಮ್ಯವಾಗಲಿ ಇಲ್ಲದೆ ಎಲ್ಲ ರೀತಿಯ ಜನರು ಅಲ್ಲಿ ಭಾಗವಹಿಸಿ ಆಧ್ಯಾತ್ಮಿಕ ವಿಷಯಗಳನ್ನು ಕುರಿತ ಚರ್ಚಿಸುತ್ತಿದ್ದರು.
ಅಲ್ಲಮರ ದರ್ಶನವನ್ನು ಹೀಗೆ ಸಂಗ್ರಹ ರೂಪದಲ್ಲಿ ಹೇಳಬಹುದು: ಪ್ರತಿಯೊಬ್ಬ ಜೀವಿಯೂ ಲಿಂಗ; ಆದರೆ ಮಾನವನು ತನ್ನ ಅವಿದ್ಯೆಯಿಂದಾಗಿ ತಾನು ಲಿಂಗದಿಂದ ಪ್ರತ್ಯೇಕವೆಂದು ಭ್ರಮಿಸಿ ದೈವವನ್ನು ಹೊರಗೆ ಕಾಣಲು ಪ್ರಯತ್ನಿಸುತ್ತಾನೆ. ಅವನು ಪ್ರಾಪಂಚಿಕ ಜೀವನ ನಡೆಸುವ ಮೂಲಕ ಅನೇಕ ಪುನರ್ಜನ್ಮಗಳನ್ನು ಪಡೆಯುತ್ತಾನೆ ಮತ್ತು ಪ್ರತಿ ಪುನರ್ಜನ್ಮದಲ್ಲಿಯೂ ಭವದುಃಖವನ್ನು ಅನುಭವಿಸುತ್ತಾನೆ. ಸಮರ್ಥ ಗುರುವಿನ ಉಪದೇಶದಿಂದ ಅವನು ತನ್ನ ಮೂಲ ಸ್ವರೂಪದ ಬಗೆಗೆ ಅರಿವನ್ನು ಪಡೆದು, ಗುರು ಉಪದೇಶಿಸಿದ ಮಾರ್ಗ ಅನುಸರಿಸಿದರೆ ನಿತ್ಯಮುಕ್ತ ಜೀವನವನ್ನು ನಡೆಸಬಹುದು. ವಾಸ್ತವವಾಗಿ ತಾನು ಲಿಂಗ ಎಂಬ ಅರಿವೇ ನಿಜವಾದ ಗುರು.
ಸಿದ್ಧರಾಮ
ಒಬ್ಬ ವ್ಯಕ್ತಿ ತನ್ನ ಸ್ವಪ್ರಯತ್ನದಿಂದ ಆಧ್ಯಾತ್ಮಿಕ ಶೃಂಗವನ್ನು ಏರಿ ಶ್ರೇಷ್ಠ ಶಿವಯೋಗಿ ಎನಿಸಿಕೊಂಡರೆ ನಮ್ಮ ಪ್ರಾಚೀನ ಕನ್ನಡ ಕವಿಗಳಿಗೆ ಅವನು ಪವಾಡ ಪುರುಷನಾಗಿಯೂ ಶಿವನ ಮಣಿಹವನ್ನು ಪೂರೈಸಲು ಭೂಮಿಗೆ ಬಂದ ಅವತಾರ ಪುರುಷನಾಗಿಯೂ ಕಾಣುತ್ತಾನೆ. ಈ ಕವಿಗಳು ತಮ್ಮ ಕಾವ್ಯ ಕೌಶಲವನ್ನು ಪ್ರದರ್ಶಿಸಲು ಅವನ ಜೀವನಕ್ಕೆ ಪವಾಡಗಳ ಸರಮಾಲೆಯನ್ನೇ ಜೋಡಿಸುತ್ತಾರೆ. ಇದು ಇತರ ಎಲ್ಲ ಶಿವಯೋಗಿಗಳಿಗೂ ಅನ್ವಯಿಸಿದಂತೆ ಧೂಳಿ ಮಾಕಾಳನೆಂಬ ಒಬ್ಬ ಕುರುಬರ ಹುಡುಗನಾಗಿ ಅನಂತರ ‘ಯೋಗಿಗಳ ಯೋಗಿ, ಮಹಾಶಿವಯೋಗಿ’ ಎಂದು ಪ್ರಸಿದ್ಧರಾದ ಸಿದ್ಧರಾಮರಿಗೂ ಅನ್ವಯಿಸುತ್ತದೆ. ಇದರಿಂದಾಗಿ ನಾವು ಸಿದ್ಧರಾಮರ ಜೀವನ ಚರಿತ್ರೆಯಲ್ಲಿ ಚಾರಿತ್ರಿಕ ಅಂಶಗಳಿಗಿಂತ ಹೆಚ್ಚಾಗಿ ಉತ್ಪ್ರೇಕ್ಷೆಗಳು, ಅಸಹಜ ವರ್ಣನೆಗಳು ಮತ್ತು ಪವಾಡಗಳನ್ನು ಕಾಣಬೇಕಾಗಿ ಬಂದಿದೆ.
ಸೊನ್ನಲಿಗೆ(ಈಗಿನ ಸೋಲಾಪುರ)ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿದ್ಧರಾಮರ ಬಗೆಗೆ 20 ಶಿಲಾ ಶಾಸನಗಳು ಸಿಕ್ಕಿವೆ. ಇದರಿಂದ ಅವರು ಸೊನ್ನಲಿಗೆಯಲ್ಲಿ 12ನೆಯ ಶತಮಾನದ ಆದಿ ಭಾಗದಲ್ಲಿ ಹುಟ್ಟಿರಬೇಕೆಂದೂ ಅಲ್ಲಿಯೇ ಬಹುಕಾಲ ಜೀವಿಸಿರಬೇಕೆಂದೂ ತೀರ್ಮಾನಿಸಬಹುದು. 850 ವರ್ಷಗಳ ಹಿಂದೆ ಸೊನ್ನಲಿಗೆ ಅಚ್ಚ ಕನ್ನಡ ಪ್ರದೇಶವಾಗಿದ್ದು ಈಗ ಮರಾಠಿಗರಿಂದ ತುಂಬಿರುವ ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿದೆ. ಮುದ್ದು ಗೌಡ ಮತ್ತು ಸುಗ್ಗವ್ವೆಯರ ಕೂಸಾದ ಸಿದ್ಧರಾಮ ಕುಡಿಯ ಜಾತಿಗೆ ಸೇರಿದವರು. ಈ ದಂಪತಿಗೆ ಬಹಳ ಕಾಲ ಬಹಳ ವರ್ಷಗಳವರೆಗೆ ಮಕ್ಕಳೇ ಆಗಿರಲಿಲ್ಲ. ರೇವಣಸಿದ್ಧನೆಂಬ ಯೋಗಿ ಆಕಸ್ಮಿಕವಾಗಿ ಸೊನ್ನಲಿಗೆಗೆ ಬಂದು, ಕೆಲ ದಿನಗಳಲ್ಲಿಯೇ ದಂಪತಿಗಳಿಗೆ ಒಬ್ಬ ಪ್ರಸಿದ್ಧ ಯೋಗಿಯಾಗುವ ಮಗ ಹುಟ್ಟುತ್ತಾನೆಂದು ಮುನ್ನುಡಿದು ಅವನಿಗೆ ಸಿದ್ಧರಾಮನೆಂದು ಹೆಸರಿಡಲು ಸೂಚಿಸುತ್ತಾನೆ. ಸೊನ್ನಲಿಗೆಯೂ ಮುಂದೆ ಒಂದು ಪ್ರಸಿದ್ಧ ತೀರ್ಥಕ್ಷೇತ್ರವಾಗುತ್ತದೆ ಎಂದು ಮುನ್ನುಡಿಯುತ್ತಾನೆ.
ರೇವಣಸಿದ್ಧ ಹೇಳಿದಂತೆ ಸುಗ್ಗವ್ವೆ ಒಂದು ಗಂಡು ಮಗುವನ್ನು ಹೆತ್ತಳು. ದಂಪತಿಗಳು ತಮ್ಮ ಮನೆದೇವರು ಧೂಳಿ ಮಾಕಾಳ ಎಂದು ಹೆಸರಿಟ್ಟರು. ಆದರೆ ಧೂಳಿ ಮಾಕಾಳಎಂದು ಕರೆದರೆ ಯಾವ ಪ್ರತಿಕ್ರಿಯೆ ತೋರಿಸದ ಮಗು, ಸಿದ್ಧರಾಮ ಎಂದು ಕರೆದರೆ ತಕ್ಷಣವೇ ಪ್ರತಿಕ್ರಿಯಿಸುತ್ತಿತ್ತು. ವಿಚಿತ್ರವೆಂದರೆ, ಆ ಮಗು ಅಳುತ್ತಿರಲಿಲ್ಲ, ನಗುತ್ತಿರಲಿಲ್ಲ, ಮಾತಾಡುತ್ತಿರಲಿಲ್ಲ – ತಂದೆ ತಾಯಿಗಳಿಗೆ ಮುದ ನೀಡುವ ಯಾವ ಕ್ರಿಯೆಗಳನ್ನೂ ಅದು ಮಾಡುತ್ತಿರಲಿಲ್ಲ.
ಮಗನು ದಡ್ಡನೆಂದೂ ಬೇರೆ ಯಾವ ಕೆಲಸ ಮಾಡಲೂ ಅಯೋಗ್ಯನೆಂದೂ ತೀರ್ಮಾನಿಸಿದ ಮುದ್ದು ಗೌಡನು ಸಿದ್ಧರಾಮನನ್ನು ದನ ಕಾಯಲು ಹಾಕಿದನು. ಬೆಳಗಿನ ಉಪಾಹಾರದ ನಂತರ ಹುಡುಗನು ದನಗಳನ್ನು ಹತ್ತಿರವಿದ್ದ ಕಾಡಿಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ಕಾಡಿನಲ್ಲಿ ಒಂದು ಕೊಳದ ಹತ್ತಿರವಿದ್ದ ಮರದ ಕೆಳಗೆ ಲಿಂಗವೂ ಸುತ್ತಮುತ್ತ ಹೂಬಳ್ಳಿಗಳೂ ಇರುವುದನ್ನು ಗಮನಿಸಿದ. ಶಿವಭಕ್ತಿ ಅವನ ರಕ್ತದಲ್ಲಿಯೇ ಇತ್ತು. ಅಂದಿನಿಂದ ಪ್ರತಿದಿನವೂ ದನಗಳನ್ನು ಮೇಯಲು ಬಿಟ್ಟು ಸಿದ್ಧರಾಮನು ಲಿಂಗಪೂಜೆಯಲ್ಲಿ ನಿರತನಾಗುತ್ತಿದ್ದನು.
ಒಂದು ಕಥೆ ಪ್ರಕಾರ ಒಂದು ದಿನ ಸಿದ್ಧರಾಮ ದೈನಂದಿನ ಕಾರ್ಯಕ್ರಮದಲ್ಲಿ ನಿರತನಾಗಿದ್ದಾಗ ಶ್ರೀಶೈಲದ ಮಲ್ಲಿಕಾರ್ಜುನ ಮಲ್ಲಯ್ಯನೆಂಬ ಜಂಗಮನ ವೇಷದಲ್ಲಿ ಕಾಣಿಸಿಕೊಂಡು ತನಗೆ ಮಜ್ಜಿಗೆ ಬೆರೆಸಿದ ಅಂಬಲಿ ಬೇಕೆಂದು ಕೇಳಿದ. ಅಂಬಲಿಯನ್ನು ತರಲು ಮನೆಗೆ ಓಡಿದ ಸಿದ್ಧರಾಮ ಅಂಬಲಿಯೊಂದಿಗೆ ಹಿಂದಿರುಗಿದಾಗ ಮಲ್ಲಯ್ಯ ಅಲ್ಲಿ ಕಾಣಲಿಲ್ಲ. ಅವನ ಹೆಸರು ಹಿಡಿದು ಗಟ್ಟಿಯಾಗಿ ಕೂಗತೊಡಗಿದ ಸಿದ್ಧರಾಮ. ಅವನ ಆರ್ತ ಕರೆ ಕೇಳಿಸಿಕೊಂಡ ಶ್ರೀಶೈಲಕ್ಕೆ ಹೋಗುತ್ತಿದ್ದ ಯಾತ್ರಾರ್ಥಿಗಳು ಕರುಣೆಯಿಂದ ‘ನೀನು ನಮ್ಮ ಜೊತೆಯಲ್ಲಿ ಬಂದರೆ ಮಲ್ಲಯ್ಯನನ್ನು ತೋರಿಸುತ್ತೇವೆ’ ಎಂದರು. ಅವರ ಜೊತೆ ಹೋದ ಸಿದ್ಧರಾಮನಿಗೆ ಅವರು ಗುಡಿಯಲ್ಲಿದ್ದ ಸ್ಥಾವರ ಲಿಂಗ ತೋರಿಸಿದಾಗ ಅವನಿಗೆ ಅತೀವ ನಿರಾಶೆಯಾಯಿತು (ಲಿಂಗವು ಸ್ಥಾವರ ಲಿಂಗವಲ್ಲ ಎಂಬ ಸಾಂಕೇತಿಕ ಸೂಚನೆ ಇಲ್ಲಿದೆ). ಅನಂತರ ಸಿದ್ಧರಾಮ ಮಲ್ಲಯ್ಯನನ್ನು ಹೊಲಗದ್ದೆಗಳಲ್ಲಿ ಹಳ್ಳಕೊಳ್ಳಗಳಲ್ಲಿ ಹುಡುಕಿ ಸೋತ. ಮಲ್ಲಯ್ಯನನ್ನು ಕಾಣಲಾರೆನೆಂದು ಖಚಿತವಾದಾಗ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಅಲ್ಲಿಯೇ ಇದ್ದ ಕಮರಿಯೊಂದಕ್ಕೆ ಜಿಗಿದ. ಸುದೈವದಿಂದ ಮಲ್ಲಯ್ಯ (ಮಲ್ಲಿಕಾರ್ಜುನ) ಅವನನ್ನು ರಕ್ಷಿಸಿದನಲ್ಲದೆ ಅವನಿಗೆ ಸೊನ್ನಲಿಗೆಗೆ ಹಿಂದಿರುಗಬೇಕೆಂದೂ ಅನಂತರ ತಾನೂ ಅಲ್ಲಿಗೆ ಬರುವೆನೆಂದು ಭರವಸೆ ನೀಡಿದ.
ಸಿದ್ಧರಾಮ ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಆಗಮಗಳನ್ನು ತನ್ನ ಅನೇಕ ವಚನಗಳಲ್ಲಿ ಉದ್ಧರಿಸಿದ್ದಾನೆ. ಪ್ರಾಯಶಃ ಅವನು ಶ್ರೀಶೈಲದಿಂದ ಹಿಂದಿರುಗಿದ ಮೇಲೆ ಅವುಗಳನ್ನು ಅಭ್ಯಸಿಸಿರಬಹುದು.
ಶ್ರೀಶೈಲದಿಂದ ಹಿಂದಿರುಗಿದ ಮೇಲೆ ಸಿದ್ಧರಾಮ ತನ್ನ ಅಣ್ಣ ಬೊಮ್ಮಯ್ಯನ ಸಹಾಯದಿಂದ ಮಲ್ಲಿಕಾರ್ಜುನನಿಗೆಂದು ಒಂದು ದೇವಸ್ಥಾನ ಕಟ್ಟಿಸಿದ. ಸೊನ್ನಲಿಗೆಯ ಭಾಗದಿಂದ ದೂರದ ಶ್ರೀಶೈಲಕ್ಕೆ ಹೋಗುವ ಯಾತ್ರಾರ್ಥಿಗಳ ಕಷ್ಟವನ್ನು ತಪ್ಪಿಸುವ ಉದ್ದೇಶ ಅವನದಾಗಿತ್ತು. ಆ ದೇವಸ್ಥಾನದ ಪೌಳಿಯಲ್ಲಿ ಇತರ ಸಣ್ಣ ಸಣ್ಣ ದೇವಾಲಯಗಳನ್ನು ಕಟ್ಟಿಸಿ, ಅವುಗಳಲ್ಲಿ ಇತರ ದೈವಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿದನು. ಅಲ್ಲದೆ ಈ ದೇವಾಲಯಗಳಲ್ಲಿ ನಡೆಯಬೇಕಾಗಿದ್ದ ವೈದಿಕ ಯಜ್ಞ ಯಾಗಾದಿಗಳ ಮತ್ತಿತರ ಕರ್ಮಗಳ ಖರ್ಚಿಗಾಗಿ ಆರ್ಥಿಕ ಮತ್ತು ಇತರ ವ್ಯವಸ್ಥೆಯನ್ನು ಮಾಡಿದನು. ಇದರಿಂದ ಸಿದ್ಧರಾಮ ಒಬ್ಬ ವೈದಿಕ ಬಹುದೇವತಾವಾದಿಯಾಗಿದ್ದ ಎಂಬುದು ಸ್ಪಷ್ಟವಾಗುತ್ತದೆ.
ಸಿದ್ಧರಾಮ ಎಲ್ಲ ಜೀವಿಗಳಿಗೂ ಕಲ್ಯಾಣ ಮಾಡಲು ತೀರ್ಮಾನಿಸಿದ್ದರು. ದಾನವಾಗಿ ಎಮ್ಮೆ, ಹಸು, ವಸ್ತ್ರ, ಆಹಾರ, ಭೂಮಿ ಇತ್ಯಾದಿಗಳನ್ನು ಕೊಡುತ್ತಿದ್ದರು. ರಸ್ತೆ ನಿರ್ಮಾಣ ಮಾಡುವುದು, ಅರವಟ್ಟಿಗೆಗಳನ್ನು ಸ್ಥಾಪಿಸುವುದು, ಪ್ರಯಾಣಿಕರಿಗೂ ಯಾತ್ರಾರ್ಥಿಗಳಿಗೂ ಛತ್ರ ಕಟ್ಟಿಸುವುದು, ಪಶುಪಕ್ಷಿಗಳಿಗೆ ಕೆರೆಕಟ್ಟೆ ಕಟ್ಟಿಸುವುದು ಮುಂತಾದ ಪರೋಪಕಾರಗಳಲ್ಲಿ ತೊಡಗಿಸಿಕೊಂಡಿದ್ದರು.
ಸಿದ್ಧರಾಮ ಒಬ್ಬ ಮಹಾನ್ ಯೋಗಿಯಾಗಿದ್ದರು. ಶಿವನು ‘ನೀನು ಭೂಲೋಕದಲ್ಲಿ ಹುಟ್ಟಿ ಜನರ ಭವದುಃಖವನ್ನು ಕಮ್ಮಿ ಮಾಡು’ ಎಂದು ಹೇಳಿಕಳುಹಿಸಿದ್ದನೆಂದು ಅವರೇ ಹೇಳಿಕೊಳ್ಳುತ್ತಾರೆ. ಇದು ದೇವರ ಆದೇಶ ಎಂಬುದನ್ನು ಕಡೆಗಣಿಸಿದರೂ ಅವರು ಎಲ್ಲ ಜೀವಿಗಳಿಗೂ ದಯಾಪರರಾಗಿದ್ದರು ಎಂಬುದಂತೂ ನಿಶ್ಚಿತ. ಅವರ ಯೋಗವು ಭಕ್ತಿ, ಕರ್ಮ ಮತ್ತು ಜ್ಞಾನಗಳ ಮಿಶ್ರಣವಾಗಿತ್ತು. ಈ ಯೋಗದ ಅಂತಿಮ ಉದ್ದೇಶ ಏನಾಗಿತ್ತು? ಅವರು ತಮ್ಮ ವಚನ ಒಂದರಲ್ಲಿ “ನಿಮ್ಮ ಪೂಜಿಸಿದವರಿಗೆ ಸಂಪದಾದಿ ಮಹದೈಶ್ವರ್ಯ ತಪ್ಪದು ನೋಡಾ” ಎನ್ನುತ್ತಾರೆ. ಇದರಿಂದ ಅವರ ಭಕ್ತಿಯೂ ಜನಹಿತ ಕಾರ್ಯವೂ ಸ್ವಾರ್ಥ ಉದ್ದೇಶಗಳಿಂದ ಕೂಡಿದ್ದವು ಎಂಬುದು ಸ್ಪಷ್ಟವಾಗುತ್ತದೆ. ದೇವಸ್ಥಾನದಲ್ಲಿ ಸ್ವಾರ್ಥ ಉದ್ದೇಶಗಳಿಂದ ಕೂಡಿದ ಯಜ್ಞ ಯಾಗಾದಿಗಳನ್ನು ಮಾಡಿಸುತ್ತಿದ್ದರು ಎಂಬುದು ನಮ್ಮ ತೀರ್ಮಾನವನ್ನು ಪುಷ್ಟೀಕರಿಸುತ್ತದೆ. ತನ್ನ ಭಕ್ತಿ ಮತ್ತು ಜನಹಿತ ಕಾರ್ಯಗಳಿಂದ ಪುಣ್ಯವನ್ನು ಸಂಪಾದಿಸಿ ಕೈಲಾಸಕ್ಕೆ ಹೋಗಬೇಕೆಂಬುದು ಅವರ ಉದ್ದೇಶವಾಗಿತ್ತು.
ಅಲ್ಲಮರು ಉತ್ತರ ಭಾರತ ಪರ್ಯಟನೆ ಮಾಡಿ ಹಿಂದಿರುಗುವಾಗ ಮಾರ್ಗಮಧ್ಯದಲ್ಲಿ ಸಿದ್ಧರಾಮರನ್ನು ಭೇಟಿಯಾಗಿ ಅವರ ಸಾಧನ ಮಾರ್ಗ ಮತ್ತು ಜೀವನದ ಉದ್ದೇಶ ತಿಳಿದುಕೊಂಡು ಅವರ ಜೀವನದ ಉದ್ದೇಶ ಮತ್ತಷ್ಟು ಉನ್ನತವಾಗಲಿ ಮತ್ತು ಸೂಕ್ತ ಸಾಧನೆ ಮಾಡಲಿ ಎಂಬ ಕಳಕಳಿಯಿಂದ ಅವರನ್ನು ಕಲ್ಯಾಣಕ್ಕೆ ಕರೆತರುತ್ತಾರೆ. ಕಲ್ಯಾಣಕ್ಕೆ ಬಂದ ಮೇಲೆ ಸಿದ್ಧರಾಮರು ಲಿಂಗಾಯತಕ್ಕೆ ಧರ್ಮಾಂತರಗೊಂಡು ಅಲ್ಲಿನ ಶರಣರಿಂದ ಹೊಸ ವಿಚಾರಗಳನ್ನೂ ಆದರ್ಶಗಳನ್ನೂ ಕಲಿಯುತ್ತಾರೆ. ವೈದಿಕ ಕರ್ಮಾಚರಣೆಗಳನ್ನು ತ್ಯಜಿಸುತ್ತಾರೆ. ಮೋಕ್ಷವೆಂದರೆ ಸತ್ತ ನಂತರ ಕೈಲಾಸದಲ್ಲಿ ಜೀವನವನ್ನು ಮುಂದುವರಿಸುವುದು ಎಂಬ ಹಳೆ ನಂಬಿಕೆಯನ್ನು ಕೈಬಿಟ್ಟು, ಮೋಕ್ಷವೆಂದರೆ ಲಿಂಗದಲ್ಲಿ ಒಂದಾಗುವುದು ಮತ್ತು ಲಿಂಗದೊಡನೆ ಸಮರಸ ಜೀವನ ನಡೆಸುವುದು ಎಂಬ ಲಿಂಗಾಯತರ ಜೀವನ್ಮುಕ್ತಿ ಸಿದ್ಧಾಂತವನ್ನು ಒಪ್ಪಿಕೊಂಡರು. ಅವನಿಗೆ ವಿದೇಹ ಮುಕ್ತಿಗಿಂತ ಲಿಂಗಾಯತರ ಜೀವನ್ಮುಕ್ತಿ ಸಿದ್ಧಾಂತವು ಹೆಚ್ಚು ವೈಚಾರಿಕವೆನಿಸಿತು. ಅಷ್ಟೇ ಅಲ್ಲ, ಕೈಲಾಸವು ಒಂದು ಹಾಳು ಬೆಟ್ಟವೆಂದೂ ಅದರಲ್ಲಿರುವ ಶಿವ ಒಬ್ಬ ದಡ್ಡನೆಂದೂ ಹೇಳುತ್ತಾರೆ. ತಾನು ಆಚರಿಸುತ್ತಿದ್ದ ಆಚರಣೆಗಳು ವೈಚಾರಿಕವಲ್ಲ, ಕೇವಲ ವಿಶ್ವಾಸದಿಂದ ಕೂಡಿದ್ದವೆಂದು ಗೊತ್ತಾಗಿ, ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ. ವೇದಗಳ ಕರ್ಮಕಾಂಡದಿಂದ ದೂರ ಬಂದಿರುವುದು ಅವರ ವಚನಗಳಿಂದ ವ್ಯಕ್ತವಾಗುತ್ತದೆ. ದುರಾದೃಷ್ಟವಶಾತ್, ಸಿದ್ಧರಾಮಚಾರಿತ್ರ್ಯವನ್ನು ಬರೆದಿರುವ ರಾಘವಾಂಕನು ಸಿದ್ಧರಾಮರು ಕಲ್ಯಾಣದಿಂದ ಸೊನ್ನಲಿಗೆಗೆ ಹಿಂದಿರುಗಿದ ನಂತರವೂ ಒಬ್ಬ ಕಟ್ಟಾ ವೈದಿಕ ಬಹುದೇವತಾರಾಧಕನೂ ಕರ್ಮವಾದಿಯೂ ಆಗಿದ್ದರೆಂದು ಹೇಳುತ್ತಾನೆ.
ಅಕ್ಕಮಹಾದೇವಿ
ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿರುವ ಉಡುತಡಿ ಎಂಬ ಹಳ್ಳಿ ಅಕ್ಕ ಮಹಾದೇವಿಯ ಹುಟ್ಟೂರು. ಆಧ್ಯಾತ್ಮಿಕ ಪರಿಸರದಲ್ಲಿಯೇ ಬೆಳೆದ ಅವಳಿಗೆ ಚಿಕ್ಕಂದಿನಲ್ಲಿಯೇ ಶಿವನನ್ನಲ್ಲದೆ ಮತ್ತಾರನ್ನೂ ಮದುವೆಯಾಗಬಾರದೆಂದು ನಿಶ್ಚಯಿಸಿದ್ದಳು. 16ನೆಯ ವಯಸ್ಸಿನಲ್ಲಿ ಆಕೆ ಒಬ್ಬ ಸುಂದರ ತರುಣಿಯಾಗಿದ್ದಳು. ಒಂದು ದಿನ ಜೈನ ರಾಜ ಕೌಶಿಕ ಆಕೆಯನ್ನು ನೋಡಿ ಆಕೆಯ ಸೌಂದರ್ಯಕ್ಕೆ ಎಷ್ಟು ಮರುಳಾದನೆಂದರೆ ತಕ್ಷಣವೇ ಆಕೆಯನ್ನು ಮದುವೆಯಾಗಲು ನಿಶ್ಚಯಿಸಿದ. ಆದರೆ ಆಕೆ ಅವನ ಕೋರಿಕೆಯನ್ನು ತಿರಸ್ಕರಿಸಿದಳು. ಇದರಿಂದ ದುಷ್ಪರಿಣಾಮಗಳು ಆಗಬಹುದು ಎಂದು ಹೆದರಿದ ಆಕೆಯ ತಂದೆ ತಾಯಿ ರಾಜನ ಕೋರಿಕೆ ಒಪ್ಪಿಕೊಳ್ಳುವಂತೆ ಆಕೆಗೆ ಬುದ್ಧಿವಾದ ಹೇಳಿದರು. ಮಹಾದೇವಿಗೆ ಇದು ಸರಿ ಎನಿಸಿ ಒಪ್ಪಿಕೊಂಡಳು.
ಆದರೆ ಒಪ್ಪಿಕೊಳ್ಳುವ ಮೊದಲು ಒಂದು ನಿಬಂಧನೆ ಮಂಡಿಸಿದಳು. ಮದುವೆಯಾದ ನಂತರ ಅವನು ಅವಳ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಡ್ಡ ಬರಬಾರದು; ಒಂದು ವೇಳೆ ಅದಕ್ಕೆ ವಿರುದ್ಧವಾಗಿ ವರ್ತಿಸಿದರೆ ವಿವಾಹ ಜೀವನವು ವಿಚ್ಛೇದನದಲ್ಲಿ ಅಂತ್ಯವಾಗುವುದೆಂಬುದೇ ಆ ನಿಬಂಧನೆ. ಅವಳ ಸೌಂದರ್ಯದಿಂದ ಹುಚ್ಚನಾಗಿದ್ದ ರಾಜನು ಆಕೆಯ ನಿಬಂಧನೆಗೆ ಒಪ್ಪಿದನು. ಆದರೆ ಕಾಮುಕನಾಗಿದ್ದ ಅವನಿಗೆ ಅವಳ ಸೌಂದರ್ಯವನ್ನು ಸವಿಯುವ ಭರದಲ್ಲಿ ಅನೇಕ ಸಲ ಅವಳ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅಡ್ಡ ಬರಬೇಕಾಯಿತು.
ಇದರಿಂದ ಬೇಸರಗೊಂಡ ಅಕ್ಕ ಮಹಾದೇವಿ ಒಂದು ದಿನ ತನ್ನ ಬೆಲೆ ಬಾಳುವ ವಸ್ತ್ರ ಮತ್ತು ಆಭರಣಗಳನ್ನು ತೆಗೆದಿಟ್ಟು ಕೇವಲ ಒಂದು ಕಂಬಳಿ ಹೊದೆದುಕೊಂಡು ಅರಮನೆಯಿಂದ ಹೊರಬಿದ್ದಳು. ಅವಳು ಕೇಶಾಂಬರಿಯಾಗಿದ್ದಳು ಎಂದು ಕವಿಗಳು ವರ್ಣಿಸುತ್ತಾರೆ. ಆದರೆ ಕೇಶಾಂಬರ ಎಂಬ ಶಬ್ದವು ಒರಟಾದ ಕಂಬಳಿಗೂ ಅನ್ವಯಿಸುತ್ತದೆ ಎಂಬುದನ್ನು ಮರೆತ ಕವಿಗಳು ಅವಳು ಕೇವಲ ತಲೆಗೂದಲಿನಿಂದ ತನ್ನ ಮೈ ಮುಚ್ಚಿಕೊಂಡಿದ್ದಳು ಎನ್ನುತ್ತಾರೆ. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಕಂಬಳಿ ಸನ್ಯಾಸದ ಸಂಕೇತ ಎಂಬುದು ಪ್ರಸಿದ್ಧವಾಗಿದೆ.
ಹರಿಹರನು ತನ್ನ ಮಹಾದೇವಿಯಕ್ಕಗಳ ರಗಳೆಯಲ್ಲಿ ಮಹಾದೇವಿಯು ತನ್ನ ಕರಸ್ಥಲದ ಲಿಂಗವನ್ನು ಪೂಜಿಸುತ್ತಿದ್ದಳು ಎಂದರೂ ಪ್ರಾಯಶಃ ಅವಳ ಶಿವಧರ್ಮವು ಬಸವಣ್ಣ ಬೋಧಿಸಿದ ಲಿಂಗಾಯತ ಧರ್ಮಕ್ಕಿಂತ ಭಿನ್ನವಾಗಿತ್ತು. ಅವಳು ಲಿಂಗ ಧರಿಸಿರಲಿಲ್ಲ. ಕಲ್ಯಾಣಕ್ಕೆ ಬಂದ ನಂತರ ಅಕ್ಕ ಮಹಾದೇವಿ ಬಸವಣ್ಣನವರ ಮತ್ತು ಇತರ ಶರಣರ ಪ್ರಭಾವದಿಂದ ಲಿಂಗಾಯತ ಧರ್ಮವನ್ನು ಮತ್ತು ಅದರ ಸಹಜ ನಿಲುವಿನ ಅಗಾಧತೆಯನ್ನು ಕಣ್ಣಿಂದ ಕಂಡು ಎಲ್ಲ ಶರಣರ ಮಗುವಾಗಿ ಬೆಳೆದೆ ಎಂದು ತನ್ನ ಆಧ್ಯಾತ್ಮಿಕ ಪಯಣದ ಗತಿಯನ್ನು ನಿರ್ದೇಶಿಸುತ್ತಾಳೆ. ಆಕೆ ಲಿಂಗವನ್ನು ಚೆನ್ನಮಲ್ಲಿಕಾರ್ಜುನ ಎಂದು ಕರೆಯುತ್ತಿದ್ದಳು. ಇತರ ಶರಣರಂತೆ ಆಕೆಯೂ ಸಹ ಸಮಾಜವನ್ನು ದೂರೀಕರಿಸಿ ಕಾಡಿನಲ್ಲಿ ವಾಸಿಸುವ ಸನ್ಯಾಸವನ್ನು ಒಪ್ಪುವುದಿಲ್ಲ. ಶೂನ್ಯಸಂಪಾದನೆಕಾರರ ಪ್ರಕಾರ ಆಕೆ ಶ್ರೀಶೈಲಕ್ಕೆ ಹೋಗಿ ತನ್ನ ಉಳಿದ ಜೀವನವನ್ನೆಲ್ಲ ಅಲ್ಲಿಯೇ ಕಳೆದಳು.
ತೋಂಟದ ಸಿದ್ಧಲಿಂಗ ಶಿವಯೋಗಿ
ಬಸವೋತ್ತರ ವಚನ ಸಾಹಿತ್ಯದಲ್ಲಿ ತೋಂಟದ ಸಿದ್ಧಲಿಂಗ ಶಿವಯೋಗಿಗಳದು ಒಂದು ದೊಡ್ಡ ಹೆಸರು. ಇದಕ್ಕೆ ಮೂರು ಕಾರಣಗಳಿವೆ: ಬಸವಣ್ಣನವರ ಮಣಿಹವನ್ನು ಮುಂದುವರಿಸುವಲ್ಲಿ ಅವರು ಅತ್ಯಾಸಕ್ತರಾಗಿದ್ದರು. ಸುಮಾರು 250 ವರ್ಷಗಳ ನಂತರ ವಚನ ರಚನೆಗೆ ಪುನರುಜ್ಜೀವನ ನೀಡಿದರು. ಬಸವದರ್ಶನವನ್ನು ದಕ್ಷಿಣ ಕರ್ನಾಟಕದಲ್ಲಿ ಪ್ರಚಾರ ಮಾಡಿದವರಲ್ಲಿ ಅವರೇ ಮೊದಲಿಗರು. ಆದರೆ ಅಂತಹ ಮಹಾತ್ಮರ ಚರಿತ್ರೆಯು ಮಸಕು ಮಸಕಾಗಿದೆ.
ಅವರು ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯಲ್ಲಿ ಜನಿಸಿದರೆಂಬುದು ಖಚಿತ. ಆದರೆ ಅವರ ಜನ್ಮ ದಿನಾಂಕ, ತಂದೆ ತಾಯಿ, ಬಾಲ್ಯ ಇತ್ಯಾದಿಗಳ ವಿವರ ಇನ್ನೂ ಕತ್ತಲೆಯಲ್ಲಿಯೇ ಇದೆ. ಅವರು ಬಾಲ್ಯದಲ್ಲಿಯೇ ಹರದನಹಳ್ಳಿಯ ಮಠಾಧ್ಯಕ್ಷರಾಗಿದ್ದ ಗೋಸಲ ಚೆನ್ನಬಸವೇಶ್ವರರನ್ನು ಭೇಟಿ ಮಾಡಿದರು. ಆ ಸ್ವಾಮಿಗಳು ಬಾಲಕನನ್ನು ‘ಸಿದ್ಧಲಿಂಗ’ ಎಂಬ ಹೊಸ ಹೆಸರಿಟ್ಟು ತಮ್ಮ ಮಠದ ಉತ್ತರಾಧಿಕಾರಿ ಎಂದು ನಿಯಮಿಸಿದರು. ಅವರೇ ಬಾಲಕ ಸಿದ್ಧಲಿಂಗನಿಗೆ ವೇದ, ಉಪನಿಷತ್ತು, ಪುರಾಣ, ಆಗಮ ಇತ್ಯಾದಿಗಳನ್ನು ಕಲಿಸಿರಬಹುದು.
ಅನಂತರ ಸಿದ್ಧಲಿಂಗರು ಒಬ್ಬ ದೊಡ್ಡ ಶಿವಯೋಗಿಯಾದರಲ್ಲದೆ ‘ತೋಂಟದ ಸಿದ್ಧಲಿಂಗ ಶಿವಯೋಗಿ’ ಎಂದೂ ‘ಎಡೆಯೂರು ಸಿದ್ಧಲಿಂಗ’ ಎಂದೂ ಪ್ರಸಿದ್ಧರಾದರು. ಒಮ್ಮೆ ಶಿಷ್ಯರೊಂದಿಗೆ ಸಂಚರಿಸುತ್ತಿರುವಾಗ ತುಮಕೂರು ಜಿಲ್ಲೆಯ ಕೆಗ್ಗೆರೆ ಎಂಬಲ್ಲಿ ತಮ್ಮ ಶಿಷ್ಯನ ತೆಂಗಿನ ತೋಟದಲ್ಲಿ ಉಳಿದುಕೊಂಡರು. ಅವರನ್ನು ಔಪಚಾರಿಕವಾಗಿ ಊರೊಳಗೆ ಸ್ವಾಗತಿಸಬೇಕಿತ್ತು. ಅಷ್ಟರಲ್ಲಿ ಒಂದು ಸಣ್ಣ ಯುದ್ಧ ಪ್ರಾರಂಭವಾಗಿ ಊರಿನ ಜನರೆಲ್ಲಾ ಓಡಿ ಹೋದರು. ಸುಮಾರು ಆರು ತಿಂಗಳ ನಂತರ ಅವರು ಹಿಂದಿರುಗಿದಾಗ ಇನ್ನೂ ಧ್ಯಾನಸ್ಥರಾಗಿದ್ದ ಸಿದ್ಧಲಿಂಗರ ಮೇಲೆ ಹುತ್ತ ಬೆಳೆದಿತ್ತು. ಆಗಿನಿಂದ ಅವರು ತೋಂಟದ ಸಿದ್ಧಲಿಂಗ ಎಂದು ಪ್ರಸಿದ್ಧರಾದರು. ಅವರಿಗೆ ಸುಮಾರು 700 ಜನ ಶಿಷ್ಯರು ದೊರಕಿದರು. ಅವರೊಡನೆ ಸಿದ್ಧಲಿಂಗರು ದಕ್ಷಿಣ ಮತ್ತು ಉತ್ತರ ಭಾರತದ ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿದರು. ತಮ್ಮ ಮುಪ್ಪಿನಲ್ಲಿ ಎಡೆಯೂರಿನಲ್ಲಿ ನೆಲೆಸಿದರು ಮತ್ತು ಅಲ್ಲಿಯೇ ಲಿಂಗೈಕ್ಯರಾದುದರಿಂದ ಅವರು ಎಡೆಯೂರು ಸಿದ್ಧಲಿಂಗ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾರೆ.
ಶಿವಯೋಗಿಯಾಗಿಯೂ ವಚನಕಾರರಾಗಿಯೂ ಅವರು ಅನೇಕ ಶಿಷ್ಯರನ್ನು ಸಂಪಾದಿಸಿದ್ದರು. ಅವರಲ್ಲಿ ಕೆಲವರು ಸಿದ್ಧಲಿಂಗರ ಬಗ್ಗೆ ಶ್ಲಾಘನಾತ್ಮಕ ಗ್ರಂಥಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಶಾಂತೇಶನ ಸಿದ್ಧೇಶ್ವರ ಪುರಾಣ (1561) ಮತ್ತು ಸುವ್ವಿ ಮಲ್ಲನ ಸಿದ್ಧೇಶ್ವರ ಸಾಂಗತ್ಯ (1600) ಮುಖ್ಯವಾದವು. ಇದರಿಂದ ಸಿದ್ಧಲಿಂಗರು ಸುಮಾರು 1475 ರಿಂದ ಹಿಡಿದು 16ನೇ ಶತಮಾನದ ಅರ್ಧ ಭಾಗದವರೆಗೂ ಜೀವಿಸಿದ್ದರೆಂದು ತರ್ಕಿಸಲು ಸಾಧ್ಯವಾಗುತ್ತದೆ.
ಸಿದ್ಧಲಿಂಗರು ‘ಮಹಾಲಿಂಗ ಗುರು ಶಿವ ಸಿದ್ಧೇಶ್ವರ ಪ್ರಭು’ ಎಂಬ ಅಂಕಿತವಿರುವ 701 ವಚನಗಳನ್ನು ತಮ್ಮ ಷಟ್‍ಸ್ಥಲ ಜ್ಞಾನ ಸಾರಾಮೃತದಲ್ಲಿ ಬರೆದಿದ್ದಾರೆ. ವಿಶ್ವಶಾಸ್ತ್ರದ ಬಗೆಗೆ ಅವರು ಬರೆದಷ್ಟು ವಚನಗಳನ್ನು ಮತ್ತಾರು ಬರೆದಿಲ್ಲ.
ಈ ಪ್ರಸಿದ್ಧ ವಚನಕಾರರಲ್ಲದೆ ಇನ್ನೂ ಸುಮಾರು 35 ವಚನಕಾರ್ತಿಯರೂ ಸೇರಿದಂತೆ, ಸುಮಾರು 350 ಜನ ವಚನಕಾರರಿದ್ದಾರೆ. ಅವರಲ್ಲಿ ಗಮನ ಸೆಳೆಯುವ ಪ್ರಮುಖ ವಚನಕಾರರೆಂದರೆ ಅಂಬಿಗರ ಚೌಡಯ್ಯ, ಮೋಳಿಗೆ ಮಾರಯ್ಯ, ಜೇಡರ ದಾಸಿಮಯ್ಯ, ಮಧುವಯ್ಯ, ಉರಿಲಿಂಗ ದೇವ ಮತ್ತು ಅವನ ಶಿಷ್ಯ ಉರಿಲಿಂಗಪೆದ್ದಿ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ನುಲಿಯ ಚಂದಯ್ಯ, ಷಣ್ಮುಖಸ್ವಾಮಿ, ಅಸ್ಪೃಶ್ಯರಾದ ಮಾದಾರ ಚೆನ್ನಯ್ಯ ಮತ್ತು ವಚನಕಾರ್ತಿಯರಾದ ಸತ್ಯಕ್ಕ, ಅಕ್ಕಮ್ಮ, ಮೋಳಿಗೆ ಮಹಾದೇವಿ, ನೀಲಾಂಬಿಕೆ ಮುಂತಾದವರು.
ಅವರ ವಚನಗಳಲ್ಲಿ ಬಸವಣ್ಣ ಅಥವಾ ಅಲ್ಲಮಪ್ರಭುವಿನ ವಚನಗಳಲ್ಲಿನ ಕಾವ್ಯ ಸೌಂದರ್ಯ ಕಾಣದಿರಬಹುದು. ಆದರೂ ಅವು ಒಂದು ವಿಶಿಷ್ಟ ಕಾರಣಕ್ಕಾಗಿ ಪ್ರಸ್ತುತವೆನಿಸುತ್ತವೆ. ಕೆಳ ಜಾತಿಯ ವಚನಕಾರರು ಮತ್ತು ವಚನಕಾರ್ತಿಯರು ತಮಗೆ ಅನ್ಯಾಯ ಎಸಗಿದ್ದ ಸಂಪ್ರದಾಯದ ವಿರುದ್ಧ ಧೈರ್ಯವಾಗಿ, ಸ್ಪಷ್ಟವಾಗಿ ಮತ್ತು ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಪ್ರತಿಭಟಿಸುವ ವಚನಗಳನ್ನು ಬರೆದರು. ಅವರಲ್ಲಿ ಕೆಲವರು ತಮ್ಮದೇ ಆದ ಸೈದ್ಧಾಂತಿಕ ಕಾಣಿಕೆಯನ್ನು ಕೊಟ್ಟಿದ್ದಾರೆ. ಅವರಲ್ಲಿ ಕೆಲವರನ್ನು ಉದಾಹರಿಸಬಹುದು.
ಬಸವಣ್ಣನವರ ಕಾಯಕ-ದಾಸೋಹ ಸಿದ್ಧಾಂತವು ಶೂನ್ಯ ಸಂಪಾದನೆಕಾರರಿಂದ ಮತ್ತಷ್ಟು ವಿಕಾಸಗೊಂಡಿತು. ವ್ರತ, ಶೀಲ, ನೇಮಗಳ ಆಚರಣೆಯು ನಿಜವಾದ ಧರ್ಮವಲ್ಲವೆಂದೂ ನಿಜವಾದ ಧರ್ಮವನ್ನು ಅವುಗಳಿಲ್ಲದೆಯೂ ಆಚರಿಸಬಹುದು ಎಂಬ ಬಸವಣ್ಣನವರ ಸಿದ್ಧಾಂತವನ್ನು ಅಕ್ಕಮ್ಮ ಎಂಬ ವಚನಕಾರ್ತಿಯು ಮುಂದುವರಿಸಿದಳು. ಹಿರಿಯ ಸಮಕಾಲೀನ ಜೇಡರ ದಾಸಿಮಯ್ಯನು ಹೆಂಗಸು ಮತ್ತು ಗಂಡಸರ ಮಧ್ಯೆ ಆತ್ಮದಲ್ಲಿ ಏನೂ ವ್ಯತ್ಯಾಸವಿಲ್ಲ, ವ್ಯತ್ಯಾಸವಿರುವುದು ಕೇವಲ ದೇಹದಲ್ಲಿ, ಎಂದನು.
ಬ್ರಾಹ್ಮಣನು ತೊಡುವ ಜನಿವಾರವೂ ಅಸ್ಪೃಶ್ಯನು ಹಿಡಿದಿರುವ ದಂಡವೂ ಅವರ ಸಹಜ ಲಕ್ಷಣವಾಗಿರದೆ ಕೇವಲ ಆಗಂತುಕ ಗುಣವಾಗಿದೆ, ಆದುದರಿಂದ ಮನುಷ್ಯ-ಮನುಷ್ಯರ ನಡುವೆ ಮಾಡುವ ತಾರತಮ್ಯವೂ ದೈವಕೃತವಲ್ಲ, ಮಾನವ ಕೃತ ಮತ್ತು ಅವೈಚಾರಿಕ. ಮಡಿವಾಳ ಮಾಚಯ್ಯ ಕೇವಲ ಲಿಂಗಾಯತರ ಬಟ್ಟೆಯನ್ನಷ್ಟೇ ತೊಳೆಯುತ್ತಿದ್ದ, ಭವಿಯೆಂಬ ಕಾರಣಕ್ಕೆ ಬಿಜ್ಜಳ ರಾಜನ ಬಟ್ಟೆಗಳನ್ನು ತೊಳೆಯಲು ನಿರಾಕರಿಸಿದನು. ಅಂಬಿಗರ ಚೌಡಯ್ಯನ ಪ್ರಕಾರ ಶಿವನನ್ನು ಮಾನವ ರೂಪದಲ್ಲಿ ಅಥವಾ ಪುರಾಣಗಳ ವರ್ಣನೆಯಂತೆ ಕಲ್ಪಿಸಿಕೊಳ್ಳುವುದು ಮೂರ್ಖತನ. ಪೂಜೆಯ ಹೆಸರಿನಲ್ಲಿ ನೀರು, ಹೂವು, ಮುಂತಾದವುಗಳನ್ನು ಅರ್ಪಿಸುವುದರ ಹೊರತು ಮತ್ತೇನನ್ನೂ ತ್ಯಾಗ ಮಾಡದ ಜನರನ್ನು ಅವನು ಖಂಡಿಸಿದನು.
ಮೋಳಿಗೆ ಮಾರಯ್ಯ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದು ನೆಲೆಸಿದ; ಅವನು ರಾಜಭೋಗವನ್ನು ತ್ಯಜಿಸಿ ಬಡತನವನ್ನು, ಪ್ರಾಪಂಚಿಕತೆಯನ್ನು ತ್ಯಜಿಸಿ ಆಧ್ಯಾತ್ಮಿಕ ಜೀವನವನ್ನು ಸ್ವಇಚ್ಛೆಯಿಂದ ಸ್ವೀಕರಿಸಿ, ಸೌದೆ ಮಾರಿ ಜೀವನ ನಡೆಸಲು ಇಚ್ಚಿಸಿದ. ರಾಮಣ್ಣ ಎಂಬ ತುರುಗಾಹಿಯು, ಮೇಲ್ನೋಟಕ್ಕೆ ಸರಳವೆಂದು ಕಾಣುವ, ಆದರೆ ಬಹಳ ಅರ್ಥಗರ್ಭಿತವಾಗಿರುವ ವಚನಗಳನ್ನು ಬರೆದಿದ್ದಾನೆ. ಅವನು ಕೇವಲ ಒಬ್ಬ ತುರುಗಾಹಿ ಎಂಬುದು 12ನೇ ಶತಮಾನದ ಶರಣರು ಜನರನ್ನು ವಿದ್ಯಾವಂತರನ್ನಾಗಿ ಮಾಡಲು ಪ್ರಯತ್ನಿಸಿದ್ದರು ಎಂಬುದನ್ನು ತೋರಿಸುತ್ತದೆ.
ಮಧುವರಸ (ಮಧುವಯ್ಯ) ಎಂಬ ಬ್ರಾಹ್ಮಣನು ಲಿಂಗಾಯತನಾಗಿ ಧರ್ಮಾಂತರಗೊಂಡಿದ್ದ. ಅವನು ಲಿಂಗಾಯತನಾಗಿ ಧರ್ಮಾಂತರಗೊಂಡಿದ್ದ ಅಸ್ಪೃಶ್ಯನ ಒಬ್ಬನ ಮಗನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡುವ ಧೈರ್ಯ ತೋರಿಸಿದ. ಉರಿಲಿಂಗ ದೇವರು ಶಿವಭಕ್ತಿ ಹೇಗಿರಬೇಕೆಂದರೆ ಸ್ತ್ರೀ ಒಬ್ಬಳು ತನ್ನ ಗಂಡನು ದೂರವಿದ್ದಾಗ ವಿರಹ ತಾಪದಿಂದ ನರಳುವಂತೆ ಸಾಧಕನು ಶಿವನನ್ನು ಪ್ರೀತಿಸಬೇಕು, ಎನ್ನುತ್ತಾನೆ. ಉರಿಲಿಂಗ ದೇವರ ಶಿಷ್ಯನಾದ ಉರಿಲಿಂಗಪೆದ್ದಿ ಎಂಬ ಅಸ್ಪೃಶ್ಯನು ಅನಂತರ ಲಿಂಗಾಯತನಾಗಿ ವಚನಗಳನ್ನು ಬರೆದಿದ್ದಾನೆ. ಅವನ ವಚನಗಳಲ್ಲಿ ಇರುವಷ್ಟು ಸಂಸ್ಕೃತ ಶ್ಲೋಕಗಳು ಮತ್ತಾರ ವಚನಗಳಲ್ಲಿಯೂ ಕಾಣುವುದಿಲ್ಲ. ಬ್ರಾಹ್ಮಣರು ಶೂದ್ರರಿಗೂ ಅಸ್ಪೃಶ್ಯರಿಗೂ ಸಂಸ್ಕೃತ ಕಲಿಸಲು ನಿರಾಕರಿಸಿದಾಗ ಉರಿಲಿಂಗ ದೇವರು ತನ್ನ ಅಸ್ಪೃಶ್ಯ ಶಿಷ್ಯನನ್ನು ಸಂಸ್ಕೃತ ಸಾಹಿತ್ಯದಲ್ಲಿ ಪರಿಣತನನ್ನಾಗಿ ಮಾಡಿದ ಧೈರ್ಯ ಶ್ಲಾಘನೀಯ.
ಉರಿಲಿಂಗಪೆದ್ದಿಯು ಸಂಸ್ಕೃತ ಶ್ಲೋಕಗಳನ್ನು ಬ್ರಾಹ್ಮಣರ ವಿರುದ್ಧ ದ್ವೇಷದಿಂದಲೋ ಎಂಬಂತೆ ಉದ್ಧರಿಸುತ್ತಾನೆ. ಮಾದಾರ ಧೂಳಯ್ಯ ಮತ್ತು ನುಲಿಯ ಚಂದಯ್ಯ ತಮ್ಮ ತಮ್ಮ ಕಾಯಕಗಳನ್ನು ಭಕ್ತಿಯೆಂದು ಪರಿಗಣಿಸುತ್ತಾರೆ. ಅವರ ನಿಷ್ಠೆ ಎಷ್ಟು ಅಚಲವಾಗಿದೆ ಎಂದರೆ ಅವರ ಪ್ರಕಾರ ಶಿವನೇ ಎದುರಿಗೆ ಬಂದು ನಿಂತರೂ ತಮ್ಮ ಕಾಯಕವನ್ನು ನಿಲ್ಲಿಸಲಾರರು!
ಭಾರತೀಯ ಸಂಪ್ರದಾಯವು ಸ್ತ್ರೀಯರನ್ನು ಕಡೆಗಣಿಸಿತ್ತು. ಆಕೆ ರಜಸ್ಸೂತಕಕ್ಕೂ ಜನನಸೂತಕಕ್ಕ್ಕೂ ಒಳಗಾಗುತ್ತಾಳೆ ಎಂಬ ಕಾರಣಕ್ಕೆ ಆಕೆಗೆ ಧಾರ್ಮಿಕ ಕರ್ಮಗಳನ್ನು ಮಾಡುವ ಅಧಿಕಾರವನ್ನು ನಿರಾಕರಿಸಲಾಗಿತ್ತು. ಅಲ್ಲದೆ ಅನೇಕ ಸಲ ಸ್ತ್ರೀಯನ್ನು ಮಾಯೆ ಎಂದು ಪರಿಗಣಿಸಲಾಗಿತ್ತು. ಬಸವಣ್ಣನವರು ಸ್ತ್ರೀಯರಿಗೆ ಪ್ರತಿಭಟನಾ ಧ್ವನಿಯನ್ನು ಕರುಣಿಸಿದರು. ಅವರ ಕಾಲದಲ್ಲಿ 35 ಜನ ವಚನಕಾರ್ತಿಯರು 1349 ವಚನಗಳನ್ನು ಬರೆದರು. ವಚನಕಾರ್ತಿಯೊಬ್ಬಳು ‘ಹೊನ್ನ ಬಿಟ್ಟು ಲಿಂಗವಂ ಒಲಿಸ ಬೇಕೆಂದರು; ಹೊನ್ನಿಂಗೆಯೂ ಲಿಂಗಕ್ಕೂ ವಿರುದ್ಧವೆ? ಹೆಣ್ಣ ಬಿಟ್ಟು ಲಿಂಗವಂ ಒಲಿಸಬೇಕೆಂಬರು; ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ? …” ಎಂದು ಕೇಳುವ ಧೈರ್ಯ ಮಾಡಿದಳು. ಹೆಣ್ಣು ಹೊನ್ನು ಮಣ್ಣು ಆಧ್ಯಾತ್ಮಿಕ ಮಾರ್ಗದಲ್ಲಿರುವ ಅಡ್ಡಿಗಳು ಎಂಬ ಸಾಂಪ್ರದಾಯಿಕ ನಂಬಿಕೆಯನ್ನು ಧೈರ್ಯವಾಗಿ ತಳ್ಳಿ ಹಾಕಿದಳು. ಮುಕ್ತಾಯಕ್ಕನು ಅಲ್ಲಮನ ವಿವೇಕವನ್ನೂ ಆಧ್ಯಾತ್ಮಿಕ ಆಳವನ್ನೂ ಪರೀಕ್ಷಿಸುವ ಧೈರ್ಯ ಮಾಡಿದಳು.
ಬಸವಣ್ಣನವರ ವಿಚಾರಪತ್ನಿಯಾದ ನೀಲಾಂಬಿಕೆಯು ತಾನು ಮತ್ತು ಬಸವಣ್ಣ ಪರಸ್ಪರರಿಗೆ ಮಕ್ಕಳು ಎಂದಳು. ಹಡಪದ ಅಪ್ಪಣ್ಣನ ಹೆಂಡತಿ ಲಿಂಗಮ್ಮನ ಪ್ರಕಾರ ಕೈಲಾಸಕ್ಕೂ ಮರ್ತ್ಯಕ್ಕೂ ವ್ಯತ್ಯಾಸವಿಲ್ಲ. ಬೀದಿಯಲ್ಲಿ ಬಿದ್ದ ವಸ್ತುಗಳು, ಆಭರಣಗಳು ಅಥವಾ ಹಣವನ್ನು ಎತ್ತಿಕೊಳ್ಳುವುದಿಲ್ಲ ಎಂದೂ ಲಂಚವನ್ನು ಸ್ವೀಕರಿಸುವುದಿಲ್ಲ ಎಂದೂ ಸತ್ಯಕ್ಕ ಪ್ರತಿಜ್ಞೆ ಮಾಡುತ್ತಾಳೆ. ಅಮುಗೆ ರಾಯಮ್ಮನೂ ಅಕ್ಕಮ್ಮನೂ ಸನ್ಯಾಸಿ ವೇಷದ ಜಂಗಮರು ಪ್ರಾಪಂಚಿಕತೆ ಮುಚ್ಚಿಕೊಳ್ಳಲು ಲಾಂಛನಧಾರಿಗಳಾಗಿದ್ದಾರೆ ಎಂದು ವಿಡಂಬಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಚನ ರಚನೆಯು ಕೇವಲ ಪುರುಷರ ಅಧಿಕಾರ ಮಾತ್ರವಲ್ಲ, ಅದು ಸ್ತ್ರೀಯರಿಗೂ ಇತ್ತು ಎಂಬುದನ್ನು ಅವರು ಸಾಧಿಸಿ ತೋರಿಸಿದರು.
ಕೆಲವು ಸಂದರ್ಭಗಳಲ್ಲಿ ಕೆಳಜಾತಿಯವರ ವಚನಗಳಲ್ಲಿನ ಭಾಷೆಯು ಬಹಳ ಕಠೋರವಾಗಿದೆ. ಸಿಟ್ಟಿನಿಂದ ಸಂಪ್ರದಾಯದ ವಿರುದ್ಧವಾಗಿ ಬರೆದ ಅನಕ್ಷರಸ್ಥ ವಚನಕಾರರ ಭಾಷೆ ಬಹಳ ಸುಸಂಸ್ಕೃತವಾಗಿರಬೇಕೆಂದು ನಿರೀಕ್ಷಿಸುವುದು ತಪ್ಪು. ಆದರೂ ನಾವು ಒಂದು ಗಮನಾರ್ಹ ವಿಷಯವನ್ನು ಕಾಣಬಹುದು. ಅದೆಂದರೆ: ಬಸವಣ್ಣನವರ ಚಳುವಳಿಯಲ್ಲಿ ಅವರು ಕುರಿಗಳಂತೆ ಭಾಗವಹಿಸದೆ ಆಗಿನ ಸಂದರ್ಭವನ್ನೂ ತಮ್ಮ ಪಾತ್ರದ ಆವಶ್ಯಕತೆಯನ್ನೂ ತಮ್ಮ ಹೊಣೆಯನ್ನೂ ಅರಿತು ಭಾಗವಹಿಸಿದರು.
ಇದರಿಂದ ವ್ಯಕ್ತವಾಗುವ ಅಂಶವೆಂದರೆ: ವಚನಗಳನ್ನು ಅವಲಂಬಿಸದೆಯೆ ನಾವು ಲಿಂಗಾಯತ ಧರ್ಮದ ತತ್ವಶಾಸ್ತ್ರೀಯ ಮತ್ತು ಧಾರ್ಮಿಕ ಸಿದ್ಧಾಂತಗಳನ್ನು ತಿಳಿದುಕೊಳ್ಳಲು ಬರುವುದಿಲ್ಲ.
(ಕೃಪೆ – ಬಯಲು – www.bayalu.co.in)