ಬಸವಕಲ್ಯಾಣ
ಲಿಂಗಾಯತ ಧರ್ಮದ ಮೇಲೆ ಹೇಳಲಾರದಷ್ಟು ರೀತಿಯಲ್ಲಿ ದಾಳಿಯಾಗುತ್ತಿದೆ. ಬಸವಾದಿ ಪ್ರಮಥರ ವಚನಗಳನ್ನು ಹೇಳಲೂ ಜಿಗುಪ್ಪೆಗೆ ಒಳಪಡುವ ದುಸ್ಥಿತಿ ಬಂದಿದೆ, ಎಂದು ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ರವಿವಾರ ಹೇಳಿದರು.
ವಿಶ್ವಬಸವ ಧರ್ಮಟ್ರಸ್ಟ್ ಅನುಭವ ಮಂಟಪದಿಂದ ನಡೆಯುತ್ತಿರುವ 45ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವದಲ್ಲಿ ನಡೆದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಾಯಲ್ಲಿ ಬಸಪ್ಪ ಒಳಗಡೆ ನಾಗಪ್ಪ ಎನ್ನುವ ರೀತಿಯಲ್ಲಿ ಇರುವ ಮತೀಯವಾದಿ ಮಠಾಧೀಶರಿಂದ ಲಿಂಗಾಯತ ಧರ್ಮಕೆ ಭಾರಿ ಹಿನ್ನಡೆಯಾಗಿದೆ. ಬಸವ ಪರ ಚಿಂತನೆಯುಳ್ಳವರನ್ನು ಸಭೆಗಳಿಗೆ ಕರೆಸುವದಕ್ಕೂ ಇಂತಹ ಮತೀಯವಾದಿ ಮಠಾಧೀಶರು ಹಿಂದೇಟು ಹಾಕುತ್ತಿದ್ದಾರೆ.
ಇಂದು ಬಸವ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಅತ್ಯಂತ ಜರೂರಿದೆ. ಗುಡಿ ಗುಂಡಾರ ಕಟ್ಟಿ ಹೋಮ ಹವನ ಮಾಡಿಸಿ ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುವ ಯತ್ನವನ್ನು ಲಿಂಗಾಯತರು ಮಾಡಲಿಲ್ಲ.
ಇದು ಬಹಳ ಸಂಕ್ರಮಣದ ಕಾಲ. ಬಸವಣ್ಣನವರು ಹಲವಾರು ಸಮುದಾಯದ ಶರಣರನ್ನು ಸೇರಿಸಿ ಲಿಂಗಾಯತ ಧರ್ಮ ಕಟ್ಟಿದರು. ಈಗ ಆಯಾ ಸಮುದಾಯದ ಜನ ಅವರವರ ಶರಣರನ್ನು ಕೊಂಡೊಯ್ದು ಬಸವಣ್ಣನವರನ್ನು ಬಿಟ್ಟು ಬಿಟ್ಟಿದ್ದಾರೆ ಎಂದರು.
ಬಸವಣ್ಣನವರ ಕಲ್ಪನೆಯ ಪ್ರಜಾಪ್ರಭುತ್ವ ನೀಡುವ ಪಕ್ಷ ಹುಟ್ಟುವವರೆಗೆ ಈ ದೇಶಕ್ಕೆ ಭವ್ಯ ಭವಿಷ್ಯವಿಲ್ಲ ಎಂದು ನಿಜಗುಣಾನಂದ ಸ್ವಾಮಿಗಳು ತಿಳಿಸಿದರು.
ಕೂಡಲಸಂಗಮದ ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಮಹಾ ಜಗದ್ಗುರು ಮಾತೆ ಗಂಗಾದೇವಿ, ನಾಡೋಜ ಡಾ.ಬಸವಲಿಂಗ ಪಟ್ಟ ದೇವರು, ಶರಣ ಬಸವ ದೇವರು ಬೆಳದಿ ಶ್ರೀಗಳು, ಬಸವಾನಂದ ಸ್ವಾಮಿಗಳು ಗುರುಬಸವ ಪಟ್ಟ ದೇವರು, ಸಾಹಿತಿ ಸೋಮನಾಥ ಯಾಳವಾರ, ಪ್ರೊ. ಶಿವಶರಣಪ್ಪ ಹುಗ್ಗೆಪಾಟೀಲ್, ಕಾಂಗ್ರೆಸ್ ಮುಖಂಡ ಧನರಾಜ್ ತಾಳಂಪಳಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.