‘ಡಾ. ಕಲಬುರ್ಗಿ ಹತ್ಯೆ ಒಂದು ಪರಂಪರೆಯ, ಅಸ್ಮಿತೆಯ ಹತ್ಯೆ’

ಚಿಕ್ಕಮಗಳೂರಿನಲ್ಲಿ ಯಶಸ್ವಿಯಾಗಿ ನಡೆದ ಕಲಬುರ್ಗಿ ಚಿಂತನಾ ಶಿಬಿರ

ಚಿಕ್ಕಮಗಳೂರು

ಬಸವ ಮೀಡಿಯಾ ಮತ್ತು ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಆಯೋಜಿಸಿದ್ದ ಮೊದಲ ಕಲಬುರ್ಗಿ ಚಿಂತನಾ ಶಿಬಿರ ಸೆಪ್ಟೆಂಬರ್ 5ರಂದು ಚಿಕ್ಕಮಗಳೂರಿನ ಬಸವತತ್ವ ಪೀಠದಲ್ಲಿ ನಡೆಯಿತು.

ಶಿಬಿರದಲ್ಲಿ ಡಾ ಕಲಬುರ್ಗಿಯವರ ಸಂಶೋಧನೆ, ಲಿಂಗಾಯತ ಧರ್ಮಕ್ಕೆ ಅವರ ಕೊಡುಗೆ ಹಾಗೂ ಸ್ಥಳೀಯ ಶರಣ ಪರಂಪರೆಯ ಮೇಲೆ ವಿಶೇಷ ಉಪನ್ಯಾಸಗಳ ಜೊತೆಗೆ ಅನೇಕ ವಿದ್ವಾಂಸರು, ಹೋರಾಟಗಾರರು ತಮ್ಮ ಚಿಂತನೆ ಹಂಚಿಕೊಂಡರು.

ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್, ಬಸವತತ್ವ ಪೀಠಗಳ ಸಹಯೋಗದಲ್ಲಿ ಕಾರ್ಯಕ್ರಮ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು.

ಸಭೆಯ ಆರಂಭದಲ್ಲಿ ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರಿಗೆ ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಾಸ್ತಾವಿಕ ನುಡಿಗಳನ್ನು ನುಡಿದ ಡಾ. ಹೆಚ್. ಎಂ. ಸೋಮಶೇಖರಪ್ಪ ಅವರು “ನಾನು ಕಲಬುರ್ಗಿ” ಎಂಬ ಸಂಪಾದಿತ ಕೃತಿಯಲ್ಲಿ ಡಾ. ಮೀನಾಕ್ಷಿ ಬಾಳಿಯವರು ಎತ್ತಿರುವ ಈ ಕೆಳಗಿನ ಪ್ರಶ್ನೆಗಳನ್ನು ಸಭಿಕರ ಮುಂದಿಟ್ಟರು:

ಪಿಕ್ನಿಕ್ ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು
ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು?

ಬಾಗಿದ ತಲೆ ಮುಗಿದ ಕೈಯಾಗಿರಿಸಯ್ಯಾ ಎಂಬಂತೆ ಸರಳ ಸಜ್ಜನಿಕೆಯ ಮನುಷ್ಯರಾಗಿದ್ದ ಕಲಬುರ್ಗಿಯವರನ್ನು ಪಿಸ್ತೂಲು ಹಣೆಗೆ ಹಚ್ಚಿ ಭ್ರೂಮಧ್ಯಕ್ಕೆ ಗುರಿಯಿಟ್ಟು ಹೊಡೆಯುವಷ್ಟು ಕ್ರೌರ್ಯವನ್ನು ಮೆರೆದಿದ್ದಾರೂ ಏಕೆ? ಕಲಬುರ್ಗಿ ಉಗ್ರವಾದಿ ಹೋರಾಟಗಾರರಾಗಿದ್ದರೇ? ಇಲ್ಲ. ಅಥವಾ ಅಧಿಕಾರಕ್ಕಾಗಿ ಕುತಂತ್ರ ನಡೆಸಿದ ರಾಜಕಾರಣಿಯಾಗಿದ್ದರೇ? ಇಲ್ಲ. ಧನ ಸಂಪತ್ತು ಇತ್ಯಾದಿ ಭೌತಿಕ ದೇಶಕ್ಕಾಗಿ ಯಾರನ್ನಾದರೂ ಪೀಡಿಸಿದವರಾಗಿದ್ದರೇ? ಇಲ್ಲ. ಶಾಸನಗಳು, ಹಸ್ತಪ್ರತಿಗಳು, ಪುಸ್ತಕ, ಪೆನ್ನು, ವ್ಯಾಸಂಗ ಬಿಟ್ಟು ಒಂದಿಂಚೂ ಆಚೆ ಈಚೆ ಸುಳಿದಾಡಿರದ ಉದ್ದ ಮೂಗಿನ, ಸಪೂರ ದೇಹದ, ಹಿಡಿಯಷ್ಟು ಮಾಂಸ ಖಂಡ ಹೊಂದಿದ ಈ ಮನುಷ್ಯನನ್ನು ಬೆಳ್ಳಂಬೆಳಗಿನ ಜಾವದಲ್ಲಿ ಹಾಗೇ ಸುಮ್ಮನೆ ಪಿಕ್ನಿಕ್ ಗೆ ಬಂದಷ್ಟು ಸರಳವಾಗಿ ಬಂದು ಹೊಡೆದು ಹೋದರಲ್ಲ! ಅದು ಹೇಗೆ ಸಾಧ್ಯವಾಯಿತು?

ಕಲಬುರ್ಗಿ ಚಿಂತನಾ ಸಭೆಯ ಸ್ಥಳೀಯ ಆಯೋಜಕರೂ ಮತ್ತು “ಕರ್ನಾಟಕದ ವೀರಶೈವ ಮಠಗಳು” ಎಂಬ ಬೃಹತ್ ಕೃತಿ ರಚನಾಕಾರರೂ ಆಗಿರುವ ಚಂದ್ರಶೇಖರ್ ನಾರಾಯಣಪುರ ಇವರು ಮೊದಲಿಗೆ “ಸ್ಥಳೀಯ ಶರಣ ಪರಂಪರೆ” ಎಂಬ ವಿಷಯದ ಬಗ್ಗೆ ಮಾತನಾಡಿದರು. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಗೆ ಹನ್ನೆರಡನೇ ಶತಮಾನದಲ್ಲಿ ವಚನಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ/ ದೇಶಾದ್ಯಂತ ಹರಿದು ಹಂಚಿಹೋಗಿದ್ದ ಶರಣರಲ್ಲಿ ಬಸವಣ್ಣನವರ ಅಕ್ಕ ಅಕ್ಕನಾಗಮ್ಮ ತರೀಕೆರೆಗೆ ಬಂದು ನೆಲಸಿ ಅಲ್ಲಿಯೇ ಐಕ್ಯರಾಗಿರುವ ಮತ್ತು ನುಲಿಯ ಚಂದಯ್ಯನವರು ತರೀಕೆರೆ, ಹತ್ತಿರದ ನಂದಿ ಗ್ರಾಮ, ಕೆಮ್ಮಣ್ಣು ಗುಂಡಿಯ ಪ್ರದೇಶಗಳಲ್ಲಿ ಸಂಚರಿಸಿ ಅದೇ ತಾಲೂಕಿನ ನುಲೇನೂರು ಎಂಬ ಗ್ರಾಮದಲ್ಲಿ ಐಕ್ಯರಾಗಿರುವ ಐತಿಹ್ಯಗಳ ಬಗ್ಗೆ ಮಾತನಾಡುತ್ತಾ ಚಿಕ್ಕಮಗಳೂರು ಪ್ರದೇಶಕ್ಕೂ ಹನ್ನೆರಡನೇ ಶತಮಾನದ ಶರಣ ಚಳವಳಿಗೂ ಐತಿಹಾಸಿಕ ಸಂಬಂಧಗಳಿವೆ, ಎಂದು ಅಭಿಪ್ರಾಯಪಟ್ಟರು.

ಚಿಕ್ಕಮಗಳೂರು ಪ್ರದೇಶಕ್ಕೂ ಹನ್ನೆರಡನೇ ಶತಮಾನದ ಶರಣ ಚಳವಳಿಗೂ ಐತಿಹಾಸಿಕ ಸಂಬಂಧಗಳಿವೆ

ಡಾ. ಕಲಬುರ್ಗಿಯವರ ವಿದ್ಯಾರ್ಥಿಯೂ ಆಗಿರುವ ತುಮಕೂರು ವಿಶ್ವವಿದ್ಯಾಲಯದ ಡಾ. ಗೀತಾ ವಸಂತ್ ಅವರು ಕಲಬುರ್ಗಿಯವರ ಬದುಕು, ಬರಹ, ಸಂಶೋಧನೆಗಳ ಬಗ್ಗೆ ವಿವರವಾಗಿ ಮಾತನಾಡಿದರು. ಸಂಶೋಧನೆ ನಡೆಸುವಲ್ಲಿ ಮುಂಚಿನಿಂದಲೂ ಪ್ರಚಲಿತದಲ್ಲಿದ್ದ ಸಿದ್ಧ ಮಾರ್ಗಗಳನ್ನು ಬಿಟ್ಟು, ಬಹುಮುಖಿ ಜ್ಞಾನ ಮಾರ್ಗವನ್ನು ಅನುಸರಿಸುವ ಮೂಲಕ ಅವರು ನಡೆದದ್ದೇ ಮಾರ್ಗ ಎನ್ನುವ ರೀತಿಯಲ್ಲಿ ಅವರು ತಮ್ಮ ಸಂಶೋಧನೆಯನ್ನು ಮಾರ್ಗ ಎನ್ನುವ ಹೆಸರಿನಲ್ಲಿಯೇ ಪ್ರಕಟಿಸಿದರು. ಕರ್ನಾಟಕ ಮತ್ತು ಕನ್ನಡ ಬರೀ ಭಾಷೆಯಲ್ಲ, ಅದರೊಳಗೆ ಜೀವನ ಸಂಸ್ಕೃತಿಯಿದೆ, ಅದನ್ನು ಶೋಧಿಸುವ ಕೆಲಸವನ್ನು ಮಾಡಬೇಕೆಂದು ಹೇಳುತ್ತಿದ್ದ ಅವರು ಅದನ್ನು ಮಾಡಿ ತೋರಿಸಿದರು. ಅವರು ತಮ್ಮ ಸಂಶೋಧನೆಯಲ್ಲಿ ಎಂದೂ ಪೂರ್ವಾಗ್ರಹಪೀಡಿತರಾಗಿ ಕೆಲಸ ಮಾಡಿದವರಲ್ಲ, ಬದಲಾಗಿ ನಿಸ್ವಾರ್ಥವಾಗಿ ಸತ್ಯ ಶೋಧನೆಯಲ್ಲಿ ತೊಡಗಿಸಿಕೊಂಡವರು.

ಅವರ ಸಂಶೋಧನೆ ಯಾವಾಗಲೂ ಪರಿವರ್ತನಾಶೀಲ ಮತ್ತು ಚಲನಶೀಲವಾದುದು, ಅವರು ಅದನ್ನು ವ್ರತನಿಸ್ಥೆಯ ಸನ್ಯಾಸಿಯಂತೆ ಮಾಡಿದವರು ಮತ್ತು ಅತಿ ಸೂಕ್ಷ್ಮಮತಿಯಾಗಿದ್ದರು. ಸಮಾಜೋ ಧಾರ್ಮಿಕ ಸಂಶೋಧನೆ ಅವರ ಕ್ಷೇತ್ರವಾಗಿತ್ತು. ಕನ್ನಡ ಮತ್ತು ಬಸವಣ್ಣ ನನ್ನ ಆಸಕ್ತಿಯಾಗಿತ್ತು ಅವೆರಡೂ ನನ್ನ ವ್ಯಕ್ತಿತ್ವವನ್ನು ರೂಪಿಸಿದವು ಎಂದು ಹೇಳುತ್ತಿದ್ದರು. ತಪ್ಪು ಚರಿತ್ರೆಯನ್ನು ವಿರೋಧಿಸುವುದೂ ಒಂದು ಸಂಶೋಧನೆ ಎಂದು ಅಂದುಕೊಂಡಿದ್ದವರು ಡಾ. ಕಲಬುರ್ಗಿ. ಭಾರತದಂತಹ ಭಾವನಿಷ್ಟ ರಾಷ್ಟ್ರದಲ್ಲಿ ಸಂಶೋಧನೆ ಅಷ್ಟೊಂದು ಸುಲಭವಲ್ಲ ಎಂದು ತಮ್ಮ ಅಭಿಪ್ರಾಯ ಹೊಂದಿದ್ದರು ಮತ್ತು ಅದಕ್ಕಾಗಿ ಶಿಲುಬೆಗೇರಬೇಕಾಯ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮತ್ತು ಬಸವಣ್ಣ ನನ್ನ ಆಸಕ್ತಿಯಾಗಿತ್ತು, ಅವೆರಡೂ ನನ್ನ ವ್ಯಕ್ತಿತ್ವವನ್ನು ರೂಪಿಸಿದವು ಎಂದು ಹೇಳುತ್ತಿದ್ದರು.

ಕಲಬುರ್ಗಿಯವರು ಕುಲಪತಿಗಳಾಗಿದ್ದ ಸಮಯದಲ್ಲಿ ಪ್ರಾಧ್ಯಾಪಕರಾಗಿದ್ದ ನಿವೃತ್ತ ಪ್ರೊಫೆಸರ್ ಡಾ. ಚಂದ್ರಶೇಖರ್ ಅವರು ಲಿಂಗಾಯತ ಧರ್ಮಕ್ಕೆ ಡಾ. ಕಲಬುರ್ಗಿ ಅವರ ಕೊಡುಗೆ ಎಂಬ ವಿಷಯವನ್ನು ಮಂಡಿಸುತ್ತಾ, ಕಲಬುರ್ಗಿ ಅವರಂತಹ ಒಬ್ಬ ದೊಡ್ಡ ಚಿಂತಕನ ಹತ್ಯೆಯಾದಾಗ ಸಮಾಜದಲ್ಲಿ ಮತ್ತು ಲಿಂಗಾಯತ ಧರ್ಮೀಯರಿಂದ ನಿರೀಕ್ಷಿಸಿದಷ್ಟು ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಲಿಲ್ಲ ಅನ್ನುವದು ಸಮಾಜ ಎತ್ತ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತಿದೆ ಮತ್ತು ಹೆದರಿಕೆ ಹುಟ್ಟಿಸುತ್ತಿದೆ. ಸಾವಿರಾರು ಶಾಸನ, ಸಾವಿರಾರು ಹಸ್ತಪ್ರತಿಗಳು, ನಾಮವಿಜ್ಞಾನಕ್ಕೆ ಸಂಬಂಧಿದ ಸಂಶೋಧನೆ ಕೈಗೊಂಡವರು, ಲಿಂಗಾಯತ ಅನ್ನುವ ಸಮಾನತೆಯ ಪರ್ಯಾಯ ಹೆಸರು ಎನ್ನುವುದನ್ನು ತೋರಿಸಿದವರು.

ಒಬ್ಬ ದೊಡ್ಡ ಚಿಂತಕನ ಹತ್ಯೆಯಾದಾಗ ಸಮಾಜದಲ್ಲಿ
ನಿರೀಕ್ಷಿಸಿದಷ್ಟು ಪ್ರತಿರೋಧ ವ್ಯಕ್ತವಾಗಲಿಲ್ಲ

“ಅಂಬಲಿ ಮತ್ತು ಕಂಬಳಿ ನನ್ನ ಆಸ್ತಿ, ಉಳಿದದ್ದೆಲ್ಲ ಜಾಸ್ತಿ” ಅನ್ನುವ ಅಭಿಪ್ರಾಯ ಹೊಂದಿ ಬದುಕಿದವರು ಕಲಬುರ್ಗಿ. ಸಮಾಜದಲ್ಲಿ ಅಂಚಿಗೆ ದೂಡಲ್ಪಟ್ಟವರನ್ನು ಲಿಂಗಾಯತ ಸಮಾಜ ಅಪ್ಪಿಕೊಳ್ಳಬೇಕು ಎನ್ನುವ ಅಭಿಪ್ರಾಯ ಹೊಂದಿದ್ದ ಅವರು ಗುರು, ಲಿಂಗ ಜಂಗಮ, ಕಾಯಕ ಮತ್ತು ದಾಸೋಹ ತತ್ವದಂತೆ ಬದುಕಿದವರು. ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿದ್ದವರು, ಲಿಂಗಾಯತ ಧರ್ಮಕ್ಕೆ ಅಸ್ಮಿತೆಯನ್ನು ತಂದುಕೊಟ್ಟವರು. ಹನ್ನೆರಡನೇ ಶತಮಾನದಲ್ಲಿ ಹೊಸದಾದ ಲಿಂಗಾಯತ ಧರ್ಮ ಬಸವಣ್ಣನವರ ನೇತೃತ್ವದಲ್ಲಿ ಉದಯವಾಯಿತು ಎಂದು ಪ್ರತಿಪಾದಿಸಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ ಬಲವಾದ ಅಭಿಪ್ರಾಯ ಉಳ್ಳವರಾಗಿದ್ದರು. ದ್ವೇಷದ ಮತ್ತು ನಿಂದನೆಯ ಭಾಷೆಯನ್ನು ವಿರೋಧಿಸಿದವರು. 850 ಸಂಶೋಧನಾ ಲೇಖನ, 150 ಕ್ಕೂ ಹೆಚ್ಚು ಪುಸ್ತಕಗಳು ಅವರ ಕೆಲಸ. ಜೊತೆಗೆ ಲಿಂಗಾಯತ ಧರ್ಮಕ್ಕೆ ಅಸ್ಮಿತೆ ತಂದು ಕೊಟ್ಟವರು ಕಲಬುರ್ಗಿ, ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ನಾಯಕ ರಾಧಾಕೃಷ್ಣ ಅವರು ಮಾತನಾಡಿ, ಕಲಬುರ್ಗಿಯವರ ವಿಚಾರಗಳ ತುಡಿತದಲ್ಲಿಯೇ ನಾನು ಬದುಕುತ್ತಿದ್ದೇನೆ ಎಂದು ಹೇಳುತ್ತಾ ಕಲಬುರ್ಗಿಯವರ ಹತ್ಯೆಯಾದಾಗ ಎಂಟು ದಿನಗಳ ಕಾಲ ಪೂರ್ಣ ನಿದ್ರೆ ಮಾಡಲಿಲ್ಲ ಎಂದು ಭಾವುಕರಾದರು. ಸತ್ಯವಂತರನ್ನು ಇಲ್ಲವಾಗಿಸಿದ್ದು ಸಮಾಜದ ದುರಂತ. ಸರ್ವರ ಸುಖವನ್ನು ಬಯಸಿದ ವ್ಯಕ್ತಿಯನ್ನು ಕೊಂದವರು ನಿಜಕ್ಕೂ ಸಮಾನತೆಯ ವಿರೋಧಿಗಳು. ಗೌರಿ ಲಂಕೇಶ್ ಅವರನ್ನೂ ಮುಗಿಸಿದ ಜನ ಈ ಸಮಾಜದವರು. ಜಾತಿಯನ್ನು ಹೇರಿರುವ ಮೇಲ್ಜಾತಿಯ ಮಾನಸಿಕತೆಯನ್ನು ವಿರೋಧಿಸಿದವರನ್ನು ಇವರು ಸಹಿಸಿಕೊಳ್ಳುವುದಿಲ್ಲ ಮತ್ತು ಇಲ್ಲವಾಗಿಸುತ್ತಾರೆ. ಬಸವಣ್ಣನವರು 900 ವರ್ಷಗಳ ಹಿಂದೆ ಮಾಡಿದ ಸಾಮಾಜಿಕ ಬದಲಾವಣೆಯ ಕೆಲಸವನ್ನು ನಾವು ಇಂದು ಮಾಡಲಿಕ್ಕೆ ಆಗುತ್ತಿಲ್ಲ.

ಗಣಪತಿಯ ಹುಟ್ಟಿನ ಹಿಂದಿನ ಸತ್ಯವನ್ನು ನಾವು ಕೇಳಬಾರದೇ? ಇನ್ನು ನಾವುಗಳು ಬಾಯಿ ಮುಚ್ಚಿ ಕೂರುವ ಕಾಲ ಮುಗಿಯಿತು, ನಾವು ಸತ್ಯವನ್ನು ಹೇಳುವ ಮೂಲಕ ಕಲಬುರ್ಗಿಯವರಿಗೆ ಗೌರವ ಸಲ್ಲಿಸಬೇಕಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು. ಈಗಲಾದರೂ ಎಲ್ಲರೂ ಸೇರಿ ಸಮಾಜವನ್ನು ಬದಲಾವಣೆ ಮಾಡಿ ಬಸವಣ್ಣನವರ ಕನಸಗಳನ್ನು ನನಸು ಮಾಡುವ ಕಾಲ ಬಂದಿದೆ ಎಂದರು. ಇದು ಎಲ್ಲರನ್ನೂ ಚಿಂತನೆಗೆ ಹಚ್ಚುವ ತುಂಬಾ ಅದ್ಭುತವಾದ ಕಾರ್ಯಕ್ರಮ ಎಂದು ಅಭಿಪ್ರಾಯ ಪಡುತ್ತಾ ಇಂತಹ ಕಾರ್ಯಕ್ರಮಗಳನ್ನು ಮಠಗಳಲ್ಲಿ ಮಾಡುವುದರ ಬದಲಾಗಿ ನಮ್ಮ ಕೇರಿಗಳಲ್ಲಿ, ಸಮಾಜದಲ್ಲಿ ಕಡೆಗಣಿಸಿದವರ ಮಧ್ಯೆ ಮಾಡಬೇಕು, ಎಂದು ಅಭಿಪ್ರಾಯ ಹಂಚಿಕೊಂಡರು.

ಗಣಪತಿಯ ಹುಟ್ಟಿನ ಹಿಂದಿನ ಸತ್ಯವನ್ನು ನಾವು
ಕೇಳಬಾರದೇ? ನಾವುಗಳು ಬಾಯಿ ಮುಚ್ಚಿ ಕೂರುವ ಕಾಲ ಮುಗಿಯಿತು

ಪ್ರಾಂಶುಪಾಲರಾದ ಜಗದೀಶವರು ಮಾತನಾಡಿ, ನಾನೂ ಕಲಬುರ್ಗಿ ವಿದ್ಯಾರ್ಥಿ. ನನ್ನ ಗುರುಗಳಾಗಿದ್ದರು ಎನ್ನುವುದು ನನ್ನ ಭಾಗ್ಯವಾಗಿತ್ತು. ನನ್ನ ಊರಿಗೆ ಬಂದು ಅದಕ್ಕೆ ಸಂಬಂಧಪಟ್ಟ ಶಾಸನಗಳ ವಿವರಗಳನ್ನು ಒದಗಿಸಿ ನನ್ನ ಸಂಶೋಧನೆಗೆ ಸಹಾಯ ಮಾಡಿದವರು, ಎಂದು ನೆನೆದರು.

ಸಭೆಯಲ್ಲಿ ಭಾಗವಹಿಸಿದ ಕರುಣಾನಿಧಿ ಅವರು ಸ್ವಯಂ ಪ್ರೇರಿತರಾಗಿ ತಾವು ಬಸವಣ್ಣನವರನ್ನು ಕುರಿತು ಬರೆದಿದ್ದ ಕವನವನ್ನು ವಾಚಿಸಿದರು.

ಸಭೆಯ ಕೊನೆಯಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ, ಕಲಬುರ್ಗಿಯವರ ಹತ್ಯೆ ಬರೀ ಒಬ್ಬ ವ್ಯಕ್ತಿಯ ಹತ್ಯೆಯಾಗಿರಲಿಲ್ಲ ಬದಲಾಗಿ ಸ್ಥಾಪಿತ ಹಿತಾಸಕ್ತಿಗಳು ಹೊಸ ವ್ಯವಸ್ಥೆಯ ಬಗ್ಗೆ ಮತ್ತು ಪರ್ಯಾಯ ಪರಂಪರೆಗಳ ಬಗ್ಗೆ ಮಾತನಾಡುವವರಿಗೆ ಕೊಟ್ಟ ಸಂದೇಶವಾಗಿತ್ತು ಎಂದು ಅಭಿಪ್ರಾಯಿಸಿದರು. ಹಾಗಾಗಿ ನಾವು ಅದನ್ನು ಒಂದು ಪರಂಪರೆಯ ಹತ್ಯೆ ಮತ್ತು ಅಸ್ಮಿತೆಯ ಹತ್ಯೆಯಾಗಿಯೇ ನೋಡಬೇಕು. ಸುಳ್ಳುಗಳನ್ನು ಬಯಲು ಮಾಡಿದವರು ಕಲಬುರ್ಗಿ. ಲಿಂಗಾಯತ ಪರಂಪರೆಯಲ್ಲಿ ನುಸುಳಿದ ಸುಳ್ಳುಗಳನ್ನು ತೋರಿಸಿಕೊಟ್ಟವರು ಕಲಬುರ್ಗಿ ಎಂದು ಹೇಳುತ್ತಾ ಅವರ ಕಾಣಿಕೆ ದೊಡ್ದದು ಎಂದರು. ಕಲಬುರ್ಗಿಯವರನ್ನು ದೈಹಿಕವಾಗಿ ಹತ್ಯೆ ಮಾಡಿರಬಹುದು ಆದರೆ ನಮ್ಮ ಮಧ್ಯೆ ಅವರ ಚಿಂತನೆಗಳ ಮೂಲಕ ಬದುಕಿದ್ದಾರೆ, ಎಂದು ಅಭಿಪ್ರಾಯಪಟ್ಟರು.

ಇದನ್ನು ನಾವು ಒಂದು ಪರಂಪರೆಯ, ಅಸ್ಮಿತೆಯ
ಹತ್ಯೆಯಾಗಿಯೇ ನೋಡಬೇಕು.

ದಾಸ ಸಾಹಿತ್ಯದ ಸಂಗ್ರಹ, ಆದಿಲಶಾಹಿ ಸಾಹಿತ್ಯ ಕೊಟ್ಟವರು ಅವರು, ಕನ್ನಡದ ವಿಶಿಷ್ಟತೆಯನ್ನು ಇಡೀ ಸಮಾಜಕ್ಕೆ ಕೊಡುಗೆ ಕೊಟ್ಟವರು ಕಲಬುರ್ಗಿ, ಅವರನ್ನು ಮತೀಯವಾಗಿ ಮತ್ತು ಒಂದೇ ಧರ್ಮಕ್ಕೆ ಸೀಮಿತವಾಗಿ ನೋಡಬಾರದು ಎನ್ನುವ ಸಂದೇಶವನ್ನು ಕೊಟ್ಟರು. ವಚನ ಸಾಹಿತ್ಯಕ್ಕಿಂತ ಮೊದಲು ಸಾಹಿತ್ಯದ ರೀತಿ ಹೇಗಿತ್ತು ನಂತರ ಹೀಗಾಯ್ತು ಎಂದು ನೋಡಿದರೆ ವಚನಗಳ ಕಾಣಿಕೆ ಏನು ಮತ್ತು ಎಷ್ಟೆಂದು ತಿಳಿಯುತ್ತದೆ ಎನ್ನುತ್ತಾ ವಚನಗಳನಂತರ ಸಾಹಿತ್ಯದ ವಿಸ್ತರಣೆ ಅತ್ಯದ್ಭುತವಾಗಿ ಮುಂದುವರಿಯಿತು ಎಂದು ತಿಳಿಸುತ್ತಾ, ಜಡವಾಗಿದ್ದ ಪರಂಪರೆಯನ್ನು ಚಲನಶೀಲಗೊಳಿಸಿದ್ದು ವಚನ ಸಾಹಿತ್ಯ ಎಂದು ಅಭಿಪ್ರಾಯಪಟ್ಟರು.

ಅಲ್ಲದೆ ಬಸವ ಪರಂಪರೆ ಬರೀ ಬೌದ್ಧಿಕ ಪರಂಪರೆಯಾಗದೇ ಆಚರಣೆಯಾಗಬೇಕು ಎಂದು ಕಲಬುರ್ಗಿಯವರು ಒತ್ತಾಯಿಸುತ್ತಿದ್ದರು ಎಂದು ತಿಳಿಸಿದರು. ಕಲಬುರ್ಗಿಯವರು ಎಲ್.ಜಿ ಹಾವನೂರರ ಕೈಪಿಡಿಯನ್ನು ಲಂಡನ್ನಿನಿಂದ ತರಿಸಿಕೊಡಿ ಎಂದು ನನ್ನಲ್ಲಿ ವೈಯುಕ್ತಿಕವಾಗಿ ಕೇಳಿದ್ದರು, ಅದನ್ನು ಇಂಗ್ಲೆಂಡಿನಿಂದ ತರಿಸಿ ಅವರಿಗೆ ತಲುಪಿಸುವಷ್ಟರಲ್ಲಿ ಅವರು ಇಲ್ಲವಾಗಿದ್ದರು ಎಂದು ಭಾವುಕರಾದರು. ಒಬ್ಬ ಮನುಷ್ಯ ಮಾಡಲು ಸಾಧ್ಯವೇ ಅನ್ನುವಷ್ಟು ಕೆಲಸ ಮಾಡಿದ್ದಾರೆ ಹಾಗಾಗಿ, ಕಲಬುರ್ಗಿಯವರ ಸಾವು ಒಂದು ಪರಂಪರೆಯ ಸಾವು ಎಂದೇ ಭಾಸವಾಗುತ್ತದೆ, ಎಂದರು.

ಸಭೆಯ ಕೊನೆಗೆ ಡಾ. ಕಲಬುರ್ಗಿಯವರ ಚಿಂತನೆಗಳೊಟ್ಟಿಗೆ ಎಲ್ಲರ ಮನಸ್ಸಿನಲ್ಲಿ ಪ್ರಮುಖವಾದ ಪ್ರಶ್ನೆಯೊಂದು ಸುಳಿದಾಡಿತು ಅದೇನೆಂದರೆ, “ವಿಚಾರದ ಮೂಲಕ ಪ್ರತ್ಯುತ್ತರ ನೀಡಲಾರದ ಹೀನ ಮನಸ್ಸುಗಳು ಕಲಬುರ್ಗಿಯವರಂತೆಯೇ ಹಲವಾರು ಶ್ರೇಷ್ಠ ಚಿಂತಕರಾದ ಡಾ. ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಹಾಗೂ ಗೌರಿ ಲಂಕೇಶ್ ಅವರುಗಳನ್ನೂ ಅದೇ ಸಮಯದಲ್ಲಿ ಹತ್ಯೆ ಮಾಡಿದವು. ಆದರೆ ಇವರೆಲ್ಲರ ಹತ್ಯೆ ನಡೆದು ಒಂದು ದಶಕಕ್ಕೂ ಅಧಿಕ ಅವಧಿ ಕಳೆದರೂ ಕೊಲೆಗಾರರ ಸುಳುಹು ದೊರೆತಿಲ್ಲ ಎನ್ನುವುದು ಹಂತಕ ವ್ಯವಸ್ಥೆಯ ಬೇರುಗಳು ಎಷ್ಟು ಆಳದ ತನಕ ಇಳಿದಿವೆ ಎನ್ನಲು ಸಾಕ್ಷಿಯಾಗಿವೆ ಮತ್ತು ಗಾಬರಿ ಹುಟ್ಟಿಸುವ ವಿಷಯಗಳಾಗಿವೆ”.

ಇದೇ ಕಾರ್ಯಕ್ರಮದಲ್ಲಿ “ಬಸವ ಮೀಡಿಯಾ” ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಅದರ ನೆನಪಿಗಾಗಿ ಆಯ್ದ ಬರಹಗಳ/ವರದಿಗಳ ಸಂಪಾದಿತ ಕೃತಿ -” ಬೆಸ್ಟ್ ಆಫ್ ಬಸವ ಮೀಡಿಯಾ” ಪುಸ್ತಕವನ್ನು ಹೊರತಂದಿದ್ದು ಅದನ್ನು ಚಿಕ್ಕಮಗಳೂರಿನ ಈ ಸಭೆಯಲ್ಲಿ ಬಿಡುಗಡೆ ಮತ್ತು ಮಾರಾಟ ಮಾಡಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BC3ULQcPxmhAhKS4XV9R1G

ಓ ಅಣ್ಣ ಬಸವಣ್ಣ

ಬಾ ಬಾರಯ್ಯ ಬಸವ
ಪೊರೆಯೆ ಬಸವಳಿದ ಈ ಜಗವ
ಮತ್ತೆ ಅವತರಿಸು ಬಾರಣ್ಣ
ಓ ಅಣ್ಣ ಬಸವಣ್ಣ

ಕಟ್ಟುಪಾಡುಗಳ ಕಳಚಿ
ಗೊಡ್ಡು ಸಂಪ್ರದಾಯಗಳ ಸರಿಸಿ
ಹುಸಿ ಮಡಿವಂತಿಕೆಯ ಗುಡಿಸಿ
ಎದೆಯಂಗಳವ ಸಾರಿಸಿ
ಪ್ರೀತಿ ಮಂತ್ರವ ಪಠಿಸಿ
ಜಗದ ಜ್ಯೋತಿ ನೀನಾದೆ
ಓ ಅಣ್ಣ ಬಸವಣ್ಣ

ಅನುಭವ ಮಂಟಪ ಕಟ್ಟಿ
ಜನರ ಅಂತರಾಳವ ತಟ್ಟಿ
ಕೊಳಕು ಮನಗಳ ಕುಟ್ಟಿ
ಬೋಧಿಸಿ ಮನುಜ ಮತ
ನೀನಾದೆ ಜಗದ ಪಿತ, ಸುತ
ಓ ಅಣ್ಣ ಬಸವಣ್ಣ

ಸಹಿದಾದರು ವರ್ಣ ಸಂಕರ
ಪುರೋಹಿತಶಾಹಿಗಳಾದರು ಯಮಕಿಂಕರ
ಪಡೆದರು ನಿನ್ನ ತಲೆದಂಡ
ಅಮರಾದವ ನೀನಯ್ಯ
ಓ ಅಣ್ಣ ಬಸವಣ್ಣ

ನಾನಿರುವೆ ನಿನ್ನ ಜೊತೆಯಲ್ಲಿ
ನನ್ನಂತೆ ಇಹರು ಕೋಟಿ ಕೋಟಿ
ನಿನಗೆ ನೀನೇ ಸಾಟಿ
ಬಾರಯ್ಯ ಮತ್ತೊಮ್ಮೆ
ಪೊರೆಯೆ ಬಸವಳಿದ ಈ ಜಗವ
ಓ ಅಣ್ಣ ಬಸವಣ್ಣ

(ಕಲಬುರ್ಗಿ ಚಿಂತನಾ ಶಿಬಿರದಲ್ಲಿ ಚಿಕ್ಕಮಗಳೂರಿನ ಚಿಂತಕ ಕರುಣಾನಿಧಿ ಸಿ. ಹೆಚ್. ಬಸವಣ್ಣನವರ ಮೇಲೆ ರಚಿಸಿ ಹಾಡಿದ ಕವನ.)

Share This Article
Leave a comment

Leave a Reply

Your email address will not be published. Required fields are marked *