ಕಲ್ಬುರ್ಗಿ, ಗೌರಿ ಹತ್ಯೆ ಆರೋಪಿಗಳನ್ನು ಸನ್ಮಾನಿಸುವ ಸಂಘಟನೆಗಳನ್ನು ತಾಲಿಬಾನ್, ಆಲ್ ಖೈದಾ ಮಾದರಿ ಉಗ್ರಗಾಮಿ ಸಂಘಟನೆಗಳೆಂದು ಸರಕಾರ ಘೋಷಿಸಬೇಕು
ಬಸವ ಕಲ್ಯಾಣ
ಎಂ ಎಂ ಕಲ್ಬುರ್ಗಿ, ಗೌರಿ ಲಂಕೇಶ್ ಹತ್ಯೆ ಆರೋಪಿಗಳಿಗೆ ಸನ್ಮಾನ ಮಾಡುವ ವಿಕೃತ, ಉಗ್ರಗಾಮಿ ಸಂಘಟನೆಗಳ ಪ್ರಭಾವಕ್ಕೆ ಲಿಂಗಾಯತ ಹುಡುಗರು ಸಿಲುಕಿಕೊಂಡಿರುವ ಬಗ್ಗೆ ಆಳಂದದಲ್ಲಿನ ಡಾ. ಸಿದ್ದಲಿಂಗ ಮಹಾಸ್ವಾಮಿಗಳ ಅನುಭವ ಮಂಟಪದ ಕೊರಣೇಶ್ವರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ನಡೆದ 23ನೇ ಕಲ್ಯಾಣ ಪರ್ವದ ಚಿಂತನಾ ಘೋಷ್ಠಿಯಲ್ಲಿ ಶನಿವಾರ ಮಾತನಾಡುತ್ತ ಕೆಲವು ರಾಜಕೀಯ ಪಕ್ಷಗಳ ಧಾರ್ಮಿಕ ಸಂಘಟನೆಗಳ ಪ್ರಭಾವದಿಂದ ಲಿಂಗಾಯತ ಹುಡುಗರು ತಮ್ಮತನವನ್ನು ಮರೆತಿದ್ದಾರೆ ಎಂದು ಹೇಳಿದರು.
ಶರಣರು ಕಟ್ಟಿ ಬೆಳಸಿದ ಲಿಂಗಾಯತ ಧರ್ಮವನ್ನು ಸಂರಕ್ಷಿಸಲು ಕೂಡ ನಾವು ವಿಫಲರಾಗುತ್ತಿದ್ದೇವೆ. ವಚನ ದರ್ಶನ ಪುಸ್ತಕ, ಶರಣರ ಶಕ್ತಿ ಚಿತ್ರದ ಹಿಂದಿನ ಪ್ರಯತ್ನಗಳು ತೋರಿಸುವಂತೆ ಲಿಂಗಾಯತ ಧರ್ಮದ ಮೇಲೆ ದುಷ್ಟ ಶಕ್ತಿಗಳ ಸವಾರಿ ನಡೆಯುತ್ತಿದೆ.
ಲಿಂಗಾಯತ ಹುಡುಗರು ಇಂದು ತಮ್ಮ ಧರ್ಮದಿಂದ ವಿಮುಖಗೊಂಡು ತಮ್ಮ ಶಕ್ತಿಯನ್ನ ತಮ್ಮದೇ ಧರ್ಮದ ನಾಶಕ್ಕೆ ಬಳಸುತ್ತಿದ್ದಾರೆ.
ಒಬ್ಬೊಬ್ಬ ಯುವಕನು ಒಂದೊಂದು ಕ್ಷಿಪಣಿ (missile) ಇದ್ದಂತೆ. ಆದರೆ ಇಂದು ಈ ಕ್ಷಿಪಣಿಗಳು ದಿಕ್ಕು ತಪ್ಪಿ misguided missiles ಆಗಿವೆ.
ಯಾವ ಗುರಿ ಮುಟ್ಟಬೇಕು ಅನ್ನುವ ಅರಿವಿಲ್ಲದೆ ನಮ್ಮ ಕ್ಷಿಪಣಿಗಳು ನಮ್ಮ ಸಮಾಜದ ವಿರುದ್ಧವೇ ಬಳಕೆಯಾಗುತ್ತಿರುವುದು ಬಹಳ ದುಃಖದ ಸಂಗತಿ ಎಂದರು.
ಕಲ್ಬುರ್ಗಿ, ಗೌರಿ ಹತ್ಯೆ ಮರೆಯಬಾರದು. ಅವರನ್ನು ಹತ್ಯೆ ಮಾಡಿದ ವಿಚಾರಧಾರೆಯನ್ನು ಎಂದೂ ಪ್ರೋತ್ಸಾಹಿಸಬಾರದು. ಅವರ ಹತ್ಯೆಯ ಆರೋಪಿಗಳನ್ನು, ಸನ್ಮಾನಿಸುವ ಸಂಘಟನೆಗಳನ್ನು ತಾಲಿಬಾನ್, ಅಲ ಖೈದಾ ಮಾದರಿ ಉಗ್ರಗಾಮಿ ಸಂಘಟನೆಗಳೆಂದು ಸರಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.