“ನಮ್ಮ ಮುಂದೆ ಆಗಾಗ ಕೆಲವು ಪ್ರಕರಣಗಳಿಗೆ ಶೀಘ್ರ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಅಯೋಧ್ಯಾ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲೂ ಇಂತಹದೇ ಸಮಸ್ಯೆ ಎದುರಾಗಿತ್ತು. ಮೂರು ತಿಂಗಳಿಗೂ ಅಧಿಕ ಸಮಯದಿಂದ ಈ ಪ್ರಕರಣದ ವಿಚಾರಣೆಯು ನನ್ನ ಮುಂದಿತ್ತು. ಪರಿಹಾರ ಮಾರ್ಗವನ್ನು ತೋರಿಸುವಂತೆ ನಾನು ದೇವರ ಮುಂದೆ ಪ್ರಾರ್ಥಿಸಿದ್ದೆ. ನಿಮಗೆ ನಂಬಿಕೆ ಇದ್ದಲ್ಲಿ ದೇವರು ಖಂಡಿತವಾಗಿಯೂ ದಾರಿ ತೋರಿಸಿಕೊಡುತ್ತಾನೆ.”
(-ಸಿಜೆಐ ಚಂದ್ರಚೂಡ್, ಪುಣೆ ಕಾರ್ಯಕ್ರಮವೊಂದರಲ್ಲಿ ಮಾತಾಡಿದ್ದು)
ಚೀಪ್ ಜಸ್ಟಿಸ್: ಶ್ರೀರಾಮಚಂದ್ರನ ಅಯೋಧ್ಯ ಪ್ರಕರಣಕ್ಕೆ ಒಂದು ತೀರ್ಮಾನ ಕೊಡು ಅಂತ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೆ.
ಶ್ರೀ ಸಾಮಾನ್ಯ: ಹೋ! ಹಾಗಾ ಮೈ ಲಾರ್ಡ್! ಹಂಗಾದರೆ ಅದು ಗೊಗೊಯ್ ಸಾಹೇಬರ ತೀರ್ಮಾನ ಅಲ್ಲ, ದೇವರು ತನಗೆ ತಾನೇ ಕೊಟ್ಟು ಕೊಂಡ ತೀರ್ಮಾನ ಅನ್ನಿ?
ಚೀಜ: ಹೌದೌದು. ಎಷ್ಟೋ ಕೇಸುಗಳಲ್ಲಿ ನಮಗೆ ತೀರ್ಮಾನ ಕೊಡಲು ಆಗುವುದಿಲ್ಲ. ಆಗ ನಾವು ದೇವರಿಗೆ ಕೈ ಮುಗಿದು ನೀನೇ ಒಂದು ತೀರ್ಮಾನ ಕೊಟ್ಟು ಬಿಡಪ್ಪಾ ಅಂತ ಕೇಳಿಕೊಳ್ಳುತ್ತೇವೆ.
ಶ್ರೀಸಾ: ಆದರೆ, ಆ ತೀರ್ಮಾನದ ನಂತರ ಗೊಗೊಯ್ ಗೆ ರಾಜ್ಯಸಭಾ ಪೀಠ ಸಿಕ್ಕಿತಲ್ಲಾ, ಅದು ಹೇಗೆ?
ಚೀಜ: ಅದು ದೇವರು ಕೊಟ್ಟ ಪ್ರಸಾದ.
ಶ್ರೀಸಾ: ಓಹ್…! ಅಂದ್ರೇ…ನಮ್ಮ ನ್ಯಾಯಂಗ ವ್ಯವಸ್ಥೆಗೆ ದೇವರೇ ಗತಿ ಅನ್ನಿ?
ಚೀಜ: ರಾಮರಾಜ್ಯದಲ್ಲಿ ಎಲ್ಲದಕ್ಕೂ ದೇವರೇ ಗತಿಯಲ್ಲವೇ? ನಾವೆಲ್ಲ ಏನಿದ್ದರೂ ಅವನ ಕೈಗೊಂಬೆಗಳಷ್ಟೇ.
ಶ್ರೀಸಾ: ನವಂಬರ್ ಹತ್ತರ ನಂತರ ಆ ದೇವರು ನಿಮಗೂ ಏನಾದರೂ ತೀರ್ಥ, ಪ್ರಸಾದವನ್ನು ಕರುಣಿಸಬಹುದಲ್ಲವೇ?
ಚೀಜ: ದೇವರು ಮನಸ್ಸು ಮಾಡಿದರೆ ಏನು ಅಸಾಧ್ಯ ಹೇಳಿ?