ಲಿಂಗಾಯತರ ಸುದ್ದಿ ಹಾಕದ ವಿಜಯವಾಣಿ ಯಾವ ರೀತಿಯ ಲಿಂಗಾಯತರ ಪತ್ರಿಕೆ

ಎಂ. ಎ. ಅರುಣ್
ಎಂ. ಎ. ಅರುಣ್

ವಿಜಯವಾಣಿ ಪಂಚಪೀಠಗಳ ಹೇಳಿಕೆಯನ್ನು ದೊಡ್ಡದಾಗಿ ಪ್ರಕಟಿಸುತ್ತದೆ. ಆದರೆ ಲಿಂಗಾಯತ ಮಠಾಧೀಶರ ಒಕ್ಕೂಟದ, ಜಾಗತಿಕ ಲಿಂಗಾಯತ ಮಹಾಸಭಾದ ಹೇಳಿಕೆಗಳನ್ನು ಕಡೆಗಣಿಸುತ್ತದೆ. ಕಾರಣವೇನು?

ಬೆಂಗಳೂರು

‘ವಿಜಯ ಕರ್ನಾಟಕ’ ನಿರ್ಮಿಸಿರುವ ಒಂದು ದಾಖಲೆಯನ್ನು ಬೇರೆ ಯಾವ ಪತ್ರಿಕೆಯೂ ಮುಟ್ಟಲು ಸಾಧ್ಯವಿಲ್ಲ.

ಶುರುವಾದ ಕೆಲವೇ ಸಮಯದಲ್ಲಿ ಇದು ಕರ್ನಾಟಕದ ನಂಬರ್ 1 ಪತ್ರಿಕೆಯಾಯಿತು. ಕೆಲವರು ಈ ಸಾಧನೆ ಒಂದೇ ವರ್ಷದಲ್ಲಿ ಆಯಿತು ಎನ್ನುತ್ತಾರೆ. ಇನ್ನೂ ಕೆಲವರು ಇದಾಗಲು ಎರಡು ಮೂರು ವರ್ಷ ತೆಗೆದುಕೊಂಡಿತು ಎನ್ನುತ್ತಾರೆ.

ಪತ್ರಿಕ್ಯೋದ್ಯಮ ಬಹಳ ಕಷ್ಟದ ಉದ್ಯಮ. ಒಂದು ಪತ್ರಿಕೆಗೆ ಒಗ್ಗಿ ಹೋಗಿರುವ ಓದುಗರು ಹೊಸ ಪತ್ರಿಕೆಯನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಅಂತಹದರಲ್ಲಿ ಒಂದು ಹೊಸ ಪತ್ರಿಕೆ ದಶಕಗಳಷ್ಟು ಹಳೆಯದಾದ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ದೊಡ್ಡ ಅಂತರದಲ್ಲಿ ನಂಬರ್ ಒನ್ ಆಗಿದ್ದು ನಿಜಕ್ಕೂ ಅಸಾಧಾರಣ ಸಂಗತಿ.

ಒಂದು ಹೊಸ ಪತ್ರಿಕೆ ದಶಕಗಳಷ್ಟು ಹಳೆಯದಾದ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ದೊಡ್ಡ ಅಂತರದಲ್ಲಿ ನಂಬರ್ ಒನ್ ಆಗಿದ್ದು ನಿಜಕ್ಕೂ ಅಸಾಧಾರಣ ಸಂಗತಿ.

‘ವಿಜಯ ಕರ್ನಾಟಕ’ ಈ ದಾಖಲೆ ನಿರ್ಮಿಸಿದ್ದು ಹೇಗೆ?

ಆರಂಭದ ದಿನಗಳಲ್ಲಿ ಅದರಲ್ಲಿ ಒಳ್ಳೆ ಪತ್ರಕರ್ತರು ಇದ್ದರು. ಪತ್ರಿಕೆ ಸ್ವಲ್ಪ ಚಿಗುರುತ್ತಿದ್ದ ಹಾಗೆಯೆ ಬೆನ್ನೆಲುಬಿದ್ದ ಹಾಗೂ ಉದ್ಯಮದಲ್ಲಿ ಎಲ್ಲರೂ ಗೌರವಿಸುತ್ತಿದ್ದ ಸಂಪಾದಕರಿಗೆ ಗೇಟ್ ಪಾಸ್ ನೀಡಿ ತಮ್ಮ ರಾಜಕೀಯ ಭವಿಷ್ಯಕ್ಕೆ ಹೊಂದುವ ವ್ಯಕ್ತಿಗೆ ಮಾಲೀಕರು ಹಾಲೆರೆದುದು ಈಗ ಹಳೆಯ ಸುದ್ದಿ.

ಎರಡನೆಯದಾಗಿ, ವಿಜಯ ಕರ್ನಾಟಕ ಬಂದಿದ್ದು ಸಾವಿರಾರು ಟ್ರಕ್ಕು, ಬಸ್ಸುಗಳಿದ್ದ ವಿ.ಆರ್.ಎಲ್ ಸಂಸ್ಥೆಯಿಂದ. ಇದಕ್ಕಿಂತ ಮುಂಚೆ ನಮ್ಮ ಹಳ್ಳಿಗಳಿಗೆ, ದೂರದ ಊರುಗಳಿಗೆ ಪತ್ರಿಕೆಗಳು ತಲುಪುತ್ತಿದ್ದುದ್ದು ಮದ್ಯಾಹ್ನ ಒಂದು ಗಂಟೆಗೆ. ವಿಜಯ ಕರ್ನಾಟಕ ತಂಡದವರು ಬಹಳ ಜಾಣ್ಮೆಯಿಂದ ರಾಜ್ಯದ ಆಯಕಟ್ಟಿನ ಯಾರಿಗೂ ಹೊಳೆಯದೇ ಇದ್ದ ಸ್ಥಳಗಳಲ್ಲಿ ಮುದ್ರಣ ಕೇಂದ್ರ ತೆರೆದರು. ತಮ್ಮ ಟ್ರಕ್ಕು, ಬಸ್ಸುಗಳನ್ನು ಬಳಸಿಕೊಂಡು ಕರ್ನಾಟಕದ ಮೂಲೆ ಮೂಲೆಗೂ ಬೆಳಗ್ಗೆ 7 ಗಂಟೆ ಒಳಗೆ ಪತ್ರಿಕೆ ತಲುಪುವ ಹಾಗೆ ನೋಡಿಕೊಂಡರು.

ವಿಜಯವಾಣಿಯನ್ನು ಲಿಂಗಾಯತರ ಪತ್ರಿಕೆಯೆಂದು ಬಣ್ಣಿಸಿ ಲಿಂಗಾಯತ ಮನೆಗಳಿಗೆ ತಲುಪಿಸುವ ಕಾರ್ಯ ನಡೆಯಿತ್ತೆನ್ನುವುದು ಉದ್ಯಮದ ಮಾತು.

ಮೂರನೆಯದಾಗಿ, ಬಹಳ ಮುಖ್ಯವಾಗಿ, ವಿಜಯ ಕರ್ನಾಟಕವನ್ನು ಲಿಂಗಾಯತರ ಪತ್ರಿಕೆಯೆಂದು ಮಾರಾಟ ಮಾಡಲಾಗಿತ್ತು. ಇದರ ಮಾಲೀಕರು ವಿಜಯ ಸಂಕೇಶ್ವರರು ಲಿಂಗಾಯತ ಸಮುದಾಯದ ಪ್ರತಿಷ್ಠಿತ ಉದ್ಯಮಿಯೆಂದು ಹೆಸರು ಮಾಡಿದ್ದರು. ಈ ಹಿನ್ನೆಲೆ ಬಳಸಿಕೊಂಡು ಇದನ್ನು ಲಿಂಗಾಯತರ ಪತ್ರಿಕೆಯೆಂದು ಬಣ್ಣಿಸಿ ಲಿಂಗಾಯತ ಮನೆಗಳಿಗೆ ತಲುಪಿಸುವ ಕಾರ್ಯ ನಡೆಯಿತ್ತೆನ್ನುವುದು ಉದ್ಯಮದ ಮಾತು. ಪತ್ರಿಕೆಯ ಜಾಹಿರಾತು, ಪ್ರಸಾರ ವಿಭಾಗಗಳಲ್ಲಿ ಬಹಳಷ್ಟು ಲಿಂಗಾಯತರು ಕೆಲಸ ಮಾಡುತ್ತಿದ್ದುದ್ದು ನೋಡಿದ್ದೇನೆ. ಪತ್ರಿಕೆಗೆ ಬಹಳಷ್ಟು ಲಿಂಗಾಯತ ಓದುಗರು ಇದ್ದಾರೆಂಬುದು ಕೂಡ ಉದ್ಯಮದ ಮಾತು.

ಮುಂದೆ ಕಾರಣಾಂತರದಿಂದ ಸಂಕೇಶ್ವರರು ಪತ್ರಿಕೆ ಮಾರಿದರು, ವಿಜಯವಾಣಿ ಶುರು ಮಾಡಿದರು. ವಿಜಯವಾಣಿ ಆರಂಭದಲ್ಲಿ ಕುಂಟುತ್ತಾ ಸಾಗುತ್ತಿತ್ತು. ಅದಕ್ಕೆ ಅದು ತಮ್ಮ ಪತ್ರಿಕೆ, ಲಿಂಗಾಯತರ ಪತ್ರಿಕೆ ಎಂದು ಸೂಕ್ಷವಾಗಿ ನೆನಪಿಸಲು ಸಂಕೇಶ್ವರರು ತಮ್ಮ ಫೋಟೋವನ್ನು ಪೇಪರಿನ ಮೊದಲ ಪುಟದ ಮೇಲುಗಡೆಯೇ ಹಾಕಿ ಬಹಳ ದಿನ ಮಾರಾಟ ಮಾಡಿದ್ದರು.

ವಿಜಯ ಸಂಕೇಶ್ವರರು ಪತ್ರಿಕ್ಯೋದಮದಲ್ಲಿ ಗಳಿಸಿರುವ ಯಶಸ್ಸಿಗೆ ಅವರು ಹುಟ್ಟಿದ ಸಮುದಾಯದ ಪಾತ್ರವಿದೆ. ಇದನ್ನು ಹೇಳಲು ಈ ದೀರ್ಘ ಪೀಠಿಕೆ ಹಾಕಿದ್ದು.

ವಿಜಯ ಸಂಕೇಶ್ವರರು ಪತ್ರಿಕ್ಯೋದಮದಲ್ಲಿ ಗಳಿಸಿರುವ ಯಶಸ್ಸಿಗೆ ಅವರು ಹುಟ್ಟಿದ ಸಮುದಾಯದ ಪಾತ್ರವಿದೆ.

ಇದಕ್ಕೆ ಪ್ರತಿಯಾಗಿ ಸಂಕೇಶ್ವರರು ತಮ್ಮ ಪತ್ರಿಕೆಗಳಲ್ಲಿ ಸಮುದಾಯಕ್ಕೆ ಏನು ನೀಡಿದ್ದಾರೆ ಎನ್ನುವುದೂ ಕೇಳಬೇಕಾದ ಮುಖ್ಯವಾದ ಪ್ರಶ್ನೆ. ತಮ್ಮ ಸಂಘ ಪರಿವಾರದ ಹಿನ್ನೆಲೆಯ ಬಗ್ಗೆ ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುವ ಇವರ ಪತ್ರಿಕೆ ಬಸವಣ್ಣನವರಿಂದ ದೊಡ್ಡ ಅಂತರ ಕಾಯ್ದುಕೊಂಡಿದೆ.

ವಿಜಯವಾಣಿಯ ಪುಟಗಳಲ್ಲಿ ವೈದಿಕ, ವೀರಶೈವ ಕಾರ್ಯಕ್ರಮ, ಚಿಂತನೆಗಳಿಗೆ ಪ್ರಾಶಸ್ತ್ಯ, ಬಸವ ತತ್ವದ ಸುಳಿವೂ ಸಿಗುವುದು ಕಷ್ಟ.

ವಿಜಯವಾಣಿಯ ಪುಟಗಳಲ್ಲಿ ವೈದಿಕ, ವೀರಶೈವ ಕಾರ್ಯಕ್ರಮ, ಚಿಂತನೆಗಳಿಗೆ ಪ್ರಾಶಸ್ತ್ಯ, ಬಸವ ತತ್ವದ ಸುಳಿವೂ ಸಿಗುವುದು ಕಷ್ಟ.

ಇದರ ಬಗ್ಗೆ ಮಾತನಾಡಿದಾಗ ಸಂಕೇಶ್ವರರು ಶುರು ಮಾಡಿದ್ದ ದಿಗ್ವಿಜಯ ಟಿವಿಯಲ್ಲಿ ಕೆಲಸ ಮಾಡಿದ್ದ ಪತ್ರಕರ್ತರೊಬ್ಬರು ಇದು ಮೊದಲಿನಿಂದಲೂ ಬಂದಿರುವುದೇ ಹೀಗೆ, ಈಗ ಕೆದಕಲು ಕಾರಣವೇನು, ಎಂದು ಕೇಳಿದರು.

ಕಾರಣವಿದೆ.

ನಾವೆಲ್ಲಾ ನೋಡುತ್ತಿರುವ ಹಾಗೆ ಲಿಂಗಾಯತರು ಇಂದು ತೀಕ್ಷ್ಣವಾದ ಸಂಘರ್ಷದ ಸನ್ನಿವೇಶದಲ್ಲಿದ್ದಾರೆ. ವಿವಿಧ ರೂಪಗಳಲ್ಲಿ ಕೆಣಕುತ್ತಿರುವ ವಚನ ದರ್ಶನ ಬಳಗವಿರಬಹುದು ಅಥವಾ ಪಂಚಪೀಠಗಳ ಬೇರೆ ಬೇರೆ ಬಣಗಳಿರಬಹುದು, ಇವರೆಲ್ಲಾ ಇಂದು ಲಿಂಗಾಯತರ ಬುಡಕ್ಕೆ ಕೈ ಹಾಕುವ ಪ್ರಯತ್ನದಲ್ಲಿದ್ದಾರೆ.

ಬೆಳೆಯುತ್ತಿರುವ ಈ ಸಂಘರ್ಷದಲ್ಲಿ ಬಹಳಷ್ಟು ಲಿಂಗಾಯತರು ಬೆಂಬಲಿಸುವ ಮಾಧ್ಯಮಗಳ ನಿಲುವು ಮುಖ್ಯವಾಗುತ್ತದೆ.

ಸ್ಪಷ್ಟವಾಗಿ, ನೇರವಾಗಿ ಹೇಳಬೇಕೆಂದರೆ ಲಿಂಗಾಯತ ಮುದ್ರೆಯಿರುವ ವಿಜಯವಾಣಿ ಲಿಂಗಾಯತ ಸುದ್ದಿಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸುವ, ವೀರಶೈವ ನಿಲುವುಗಳನ್ನು ಮಾತ್ರ ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಲಿಂಗಾಯತ ಮುದ್ರೆಯಿರುವ ವಿಜಯವಾಣಿ ಲಿಂಗಾಯತ ಸುದ್ದಿಗಳನ್ನು ವ್ಯವಸ್ಥಿತವಾಗಿ ನಿರ್ಲಕ್ಷಿಸುವ, ವೀರಶೈವ ನಿಲುವುಗಳನ್ನು ಮಾತ್ರ ಬಿಂಬಿಸುವ ಪ್ರಯತ್ನ ಮಾಡುತ್ತಿದೆ.

ಕಳೆದ 15 ದಿನಗಳ ಬೆಳವಣಿಗೆಗಳನ್ನು ಗಮನಿಸಿ.

ಮಾರ್ಚ್ 4

ರಂಭಾಪುರಿ ಮತ್ತು ಕೇದಾರ ಶ್ರೀಗಳು ಲಿಂಗಸೂಗೂರಿನಲ್ಲಿ ಸುದ್ದಿಘೋಷ್ಠಿ ನಡೆಸಿ ಮಿಥ್ಯ ಸತ್ಯ ಕಾರ್ಯಕ್ರಮದಲ್ಲಿ ವೀರಶೈವದ ವಿರುದ್ಧ ಬಂದ ಹೇಳಿಕೆಗಳನ್ನು ಖಂಡಿಸಿದರು.

ಇದು ಮಾರ್ಚ್ 5ರ ವಿಜಯವಾಣಿಯ ಬೆಂಗಳೂರು, ಹುಬ್ಬಳ್ಳಿ ಆವೃತ್ತಿಗಳಲ್ಲಿ 11ನೇ ಪುಟದಲ್ಲಿ ದೊಡ್ಡದಾಗಿ ಬಾಕ್ಸ್ ಐಟಂ ಮತ್ತು ಚಿತ್ರದ ಸಹಿತ ವರದಿಯಾಯಿತು.

ರಂಭಾಪುರಿ ಮತ್ತು ಕೇದಾರ ಶ್ರೀಗಳ ಹೇಳಿಕೆಯನ್ನು ವಿಜಯವಾಣಿ ದೊಡ್ಡದಾಗಿ ಪ್ರಕಟಿಸಿತು.

ಮಾರ್ಚ್ 9

ಮಿಕ್ಕ ಪಂಚಾಚಾರ್ಯರು ಜಂಟಿ ಹೇಳಿಕೆ ನೀಡಿ ಮಿಥ್ಯ ಸತ್ಯ ಕಾರ್ಯಕ್ರಮದಲ್ಲಿ ಬಂದ ಹೇಳಿಕೆಗಳನ್ನು ಖಂಡಿಸಿದರು.

ಇದು ಮಾರ್ಚ್ 10ರ ವಿಜಯವಾಣಿಯಲ್ಲಿ ಚಿತ್ರ ಸಮೇತ, ಬೆಂಗಳೂರು, ಹುಬ್ಬಳ್ಳಿ ಆವೃತ್ತಿಗಳಲ್ಲಿ ದೊಡ್ಡದಾಗಿ ಪ್ರಕಟವಾಯಿತು.

ಪ್ರಜಾವಾಣಿಯಂತಹ ಪತ್ರಿಕೆ ಜಂಟಿ ಹೇಳಿಕೆಯ ಮುಖ್ಯಾಂಶಗಳನ್ನು ಪ್ರಕಟಿಸಿದರೆ, ವಿಜಯ ವಾಣಿ ಹೇಳಿಕೆಯನ್ನು ಸಂಪೂರ್ಣವಾಗಿ ಪ್ರಕಟಿಸಿತು.

ಮಿಕ್ಕ ಪಂಚಪೀಠಗಳ ಹೇಳಿಕೆಯನ್ನು ವಿಜಯವಾಣಿ ದೊಡ್ಡದಾಗಿ ಪ್ರಕಟಿಸಿತು.

ಮಾರ್ಚ್ 11

ಲಿಂಗಾಯತರ ಮಠಾಧೀಶರ ಒಕ್ಕೂಟ ಪಂಚಪೀಠಗಳ ಹೇಳಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿತು. ಇದರ ಮೇಲೆ ವಿಜಯವಾಣಿ ಯಾವುದೇ ವರದಿ ಮಾಡದೇ, ಸಂಪೂರ್ಣವಾಗಿ ನಿರ್ಲಕ್ಷಿಸಿತು.

ಲಿಂಗಾಯತರ ಮಠಾಧೀಶರ ಒಕ್ಕೂಟ ಹೇಳಿಕೆಯನ್ನು
ವಿಜಯವಾಣಿ ಪ್ರಕಟಿಸಿಸಲಿಲ್ಲ.

ಮಾರ್ಚ್ 12

ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿಯಲ್ಲಿ ಒಂದು ಸುದ್ದಿಘೋಷ್ಠಿ ನಡೆಸಿ ಪಂಚಪೀಠಗಳಿಗೆ 17 ಅಂಶಗಳ ವಿವರವಾದ ಪ್ರತ್ಯುತ್ತರ ನೀಡಿತು. ಇದರಲ್ಲಿ ಒಂದು ಅಂಶವೂ ಸುದ್ದಿಯಾಗಲು ಅರ್ಹವೆಂದು ವಿಜಯವಾಣಿಯ ಸಂಪಾದಕರಿಗೆ ಅನಿಸಲಿಲ್ಲ. ಮತ್ತೆ ಲಿಂಗಾಯತ ಪರವಾಗಿ ಬಂದ ದೊಡ್ಡ ಪ್ರಕಟಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.

ಜಾಗತಿಕ ಲಿಂಗಾಯತ ಮಹಾಸಭಾದ ಹೇಳಿಕೆಯನ್ನು ವಿಜಯವಾಣಿ ಪ್ರಕಟಿಸಿಸಲಿಲ್ಲ.

ನಾನು ವಿಜಯವಾಣಿಯಂತಹ ಪತ್ರಿಕೆಗಳನ್ನು ಓದುವ ಸಾಹಸಕ್ಕೆ ಕೈ ಹಾಕಲು ಸಾಮಾನ್ಯವಾಗಿ ಹಿಂಜರಿಯುತ್ತೇನೆ. ಈ ವರದಿ ಬರೆಯಲು ಕಳೆದ ಎರಡು ವಾರಗಳ ಪುಟ ತಿರುವು ಹಾಕಿದೆಯಷ್ಟೆ. ಇಷ್ಟರಲ್ಲೇ ಈ ಪತ್ರಿಕೆಯ ಸ್ಪಷ್ಟವಾದ ಪಕ್ಷಪಾತ ಕಣ್ಣು ಕುಕ್ಕುವಂತೆ ಗೋಚರಿಸಿತು. ಯಾರಾದರೂ ಇನ್ನೂ ಆಳವಾಗಿ ಈ ಪತ್ರಿಕೆಯನ್ನು ವಿಶ್ಲೇಷಿಸಿದರೆ ಇಂತಹ ಇನ್ನೂ ಅನೇಕ ಅಂಶಗಳು ಹೊರಬರಬಹುದು.

ಇಲ್ಲಿ ಲಿಂಗಾಯತ ಸುದ್ದಿಗಳನ್ನು ಬಿಟ್ಟಿರುವುದು ಮಾತ್ರವಲ್ಲ, ವೀರಶೈವ ಪರ ಪ್ರಕಟವಾಗಿರುವ ಸುದ್ದಿಗಳ ದಾಟಿಯನ್ನೂ ಗಮನಿಸಬೇಕು. ವಿಜಯವಾಣಿಯ ವರದಿಗಳಲ್ಲಿ ಹಿರಿಯರಾದ ಗೊರುಚ ಅವರಿಗೆ ರಂಭಾಪುರಿ ಶ್ರೀಗಳು ಮಾಡಿದ ಅವಹೇಳನದ ಸುದ್ದಿಯಿಲ್ಲ. ಶಂಕರ ಬಿದರಿ ಜೀವ ಕೊಟ್ಟಾದರೂ ವೀರಶೈವವನ್ನು ಉಳಿಸಿಕೊಳ್ಳುತೇನೆ ಅನ್ನುವ ರೀತಿಯಲ್ಲಿ ಬಿಂಬಿತವಾಗಿದ್ದಾರೇ.

ವಿಜಯವಾಣಿಯ ಲಿಂಗಾಯತ ವಿರೋಧಿ ಧೋರಣೆಯ ಮೂಲವನ್ನು ಕೆದಕುತ್ತಾ ಹೋದರೆ ಕಾಣಿಸುವುದು ಸಂಕೇಶ್ವರರು. ಅವರೇ ಪತ್ರಿಕೆಯ ನಿಜವಾದ ಸಂಪಾದಕರು. ಅವರ ಹುಕುಂ ಅನ್ನು ನಿಷ್ಠವಾಗಿ ಪಾಲಿಸುವ ಕೆಲಸ ಮಾತ್ರ ಪತ್ರಿಕೆ ನಡೆಸುವ ಸಂಪಾದಕರು ಮಾಡುತ್ತಾರೆ.

ಬಹಳ ವರ್ಷಗಳ ಹಿಂದೆ ಬಸವ ತತ್ವದ ಪ್ರತಿಷ್ಠಿತ ಸ್ವಾಮೀಜಿಯವರೊಬ್ಬರ ಹತ್ತಿರ ಸಂಕೇಶ್ವರರಿಗೆ ಮನಸ್ತಾಪವಾಗಿತ್ತು. ಆ ವೈಯಕ್ತಿಕ ವೈಮನಸ್ಸನ್ನು ಇಡೀ ಸಮುದಾಯದ ವಿರುದ್ಧ ತಿರುಗಿಸಿದ್ದಾರೆ, ಎಂದು ಸಂಕೇಶ್ವರರನ್ನು ಹತ್ತಿರದಿಂದ ಬಲ್ಲವರೊಬ್ಬರು ಹೇಳಿದರು.

ಸಂಕೇಶ್ವರರಿಗೆ ಸಂಘ ಪರಿವಾರದ ಹಿನ್ನಲೆವಿರುವುದು ಮಾತ್ರವಲ್ಲ, ಅದರ ತತ್ವ ಸಿದ್ಧಾಂತಗಳಲ್ಲಿ ಅವರಿಗೆ ಆಳವಾದ ನಂಬಿಕೆಯಿದೆ. ಅಂತಹ ಮನಸ್ಥಿತಿ ಇರುವವರಿಗೆ ಬಸವ ತತ್ವ ಹೊಂದುವುದಿಲ್ಲ ಎನ್ನಲು ಇದು ಬಹಳ ಒಳ್ಳೆಯ ಉದಾಹರಣೆ, ಎಂದು ಹೇಳಿದರು.

ಬಿಜೆಪಿಯಲ್ಲಿರುವವರಿಗೆ ಸಂಘ ಪರಿವಾರದ ಧೋರಣೆಗಳನ್ನು ಪಾಲಿಸುವ ಅನಿವಾರ್ಯತೆಯೂ ಇದೆ. ಸಂಕೇಶ್ವರರು ಪ್ರಾದೇಶಿಕ ಪಕ್ಷ ಕಟ್ಟಿದಾಗ ಕೆಲವು ದಿನ ಜಾತ್ಯತೀತ ರಾಜಕಾರಣ ಮಾಡಲು ಪ್ರಯತ್ನಿಸಿದ್ದರು. ಆದರೆ ಚುನಾವಣೆಯಲ್ಲಿ ಅವರ ಠೇವಣಿಯೇ ಹೋದ ಮೇಲೆ ಲಿಂಗಾಯತರು ಕೈ ಕೊಟ್ಟರು ಎಂಬ ಸಿಟ್ಟಿರಬಹುದು.

ದಿಗ್ವಿಜಯ ಟಿವಿ ಪತ್ರಕರ್ತರು ಇಲ್ಲಿ ವಿಜಯವಾಣಿಗಿಂತಲೂ ಸಮಸ್ಯೆ ಕಾಣುತ್ತಿರುವುದು ಲಿಂಗಾಯತರಲ್ಲಿ ಎಂದು ಹೇಳಿದರು.

‘ಲಿಂಗಾಯತ ಪತ್ರಿಕೆ ಎಂದು ಗುರುತಿಸಿಕೊಳ್ಳುವ ಈ ಪತ್ರಿಕೆ ಮುಚ್ಚುಮರೆಯಿಲ್ಲದೆ ಲಿಂಗಾಯತರ ಧ್ವನಿಯನ್ನು ತುಳಿದುಹಾಕುತ್ತಿದೆ. ಇದನ್ನು ಪ್ರಶ್ನಿಸದೇ ಇರುವುದು ಲಿಂಗಾಯತರ ದಡ್ಡತನ ತೋರಿಸುತ್ತದೆ.

ಲಿಂಗಾಯತ ಪತ್ರಿಕೆ ಎಂದು ಗುರುತಿಸಿಕೊಳ್ಳುವ ಪತ್ರಿಕೆ ಲಿಂಗಾಯತರ ಧ್ವನಿಯನ್ನು ತುಳಿದುಹಾಕುತ್ತಿದೆ. ಇದನ್ನು ಪ್ರಶ್ನಿಸದೇ ಇರುವುದು ಲಿಂಗಾಯತರ ದಡ್ಡತನ ತೋರಿಸುತ್ತದೆ.

ಲಿಂಗಾಯತ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಾಧ್ಯಮ ವರದಿಗಳನ್ನು ಪ್ರತಿ ದಿನ ಗಮನಿಸಿ, ಪ್ರತಿಕ್ರಿಯಿಸಬೇಕು. ಅವುಗಳಲ್ಲಿ ಸಮಸ್ಯೆಯಿದ್ದರೆ ಸರಿ ಪಡಿಸಿಕೊಳ್ಳುವಂತೆ ಮಾಲೀಕರ, ಸಂಪಾದಕರ ಮೇಲೆ ತಕ್ಷಣ ಒತ್ತಡ ತರಬೇಕು.

ಅದಕ್ಕಿಂತ ಮುಖ್ಯವಾಗಿ ತಮಗಿರುವ ಎಲ್ಲ ವೇದಿಕೆಗಳನ್ನು ಬಳಸಿಕೊಂಡು ನಿರಂತರವಾಗಿ ಜನ ಜಾಗೃತಿ ಮೂಡಿಸಬೇಕು. ಎಲ್ಲಾ ಊರುಗಳಲ್ಲಿ ಒಂದಷ್ಟು ಲಿಂಗಾಯತರು ಓದುವುದನ್ನು ನಿಲ್ಲಿಸಿ ಪ್ರತಿಭಟಿಸಿದರೆ ಸಂಕೇಶ್ವರರಂತವರೂ ಬದಲಾಗುತ್ತಾರೆ.

ಈ ಸಮಸ್ಯೆ ವಿಜಯವಾಣಿ ಸೇರಿದಂತೆ ಬಹಳಷ್ಟು ಮಾಧ್ಯಮಗಳಲ್ಲಿ ಇದೆ. ನಿರಂತರ ಪ್ರಯತ್ನದಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯ,’ ಎಂದು ಹೇಳಿದರು.

(ಈ ವರದಿ ಬರೆಯಲು ವಿಜಯವಾಣಿಯ ಹುಬ್ಬಳ್ಳಿ ಮತ್ತು ಬೆಂಗಳೂರಿನ ಆವೃತ್ತಿಗಳ ಇ-ಪೇಪರ್ ನೋಡಲಾಯಿತು. ಇವು ವಿಜಯವಾಣಿಯ ಮುಖ್ಯ ಆವೃತ್ತಿಗಳೂ ಹೌದು.

ಮಿಕ್ಕ, ಸ್ಥಳೀಯ ಆವೃತ್ತಿಗಳ ಇ-ಪೇಪರ್ ಲಭ್ಯವಿಲ್ಲ. ಬೆಳಗಾವಿ, ಕಲಬುರಗಿ, ಬೀದರಿನ ಸ್ನೇಹಿತರು ಅಲ್ಲಿಯ ಸ್ಥಳೀಯ ಆವೃತ್ತಿಗಳಲ್ಲಿಯೂ ಜೆಎಲ್ಎಂ, ಲಿಂಗಾಯತ ಮಠಾಧೀಶರ ಒಕ್ಕೊಟದ ಸುದ್ದಿ ಪ್ರಕಟವಾಗಿಲ್ಲ ಎಂದು ಹೇಳಿದ್ದಾರೆ.)

ಬಸವ ಮೀಡಿಯಾ ವಾ ಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/GavGlyNxCLf7iBbDBH8P5b

Share This Article
7 Comments
  • ವಿಜಯವಾಣಿಯ ವಿಜಯಸಂಕೇಶ್ವರ್ ರವರು ಪ್ರಾರಂಭದಿಂದಲೂ ಲಿಂಗಾಯತ ವಿರೋದಿಯೇ ಆಗಿದ್ದಾರೆ. ಲಿಂಗಾಯತ ಸಮುದಾಯದ ಉದ್ಯಮಿಗಳೆಂದು ಲಿಂಗಾಯತರು ಅವರ ಪತ್ರಿಕೆಯನ್ನು ಕೊಂಡು ಓದಿದರು. ಇದರ ಲಾಭ ಪಡೆದ ವಿಜಯ್ ಸಂಕೇಶ್ವರ ರವರು ಲಿಂಗಾಯತ ಪರ ನಿಲ್ಲದಿರುವುದು ಶೋಚನೀಯ. ಈಗಲಾದರೂ ಲಿಂಗಾಯತ ಧರ್ಮದ ವಿಚಾರಗಳನ್ನ ಪ್ರಚಾರ ಮಾಡದಿದ್ದಲ್ಲಿ ಬಸವಾದಿಪ್ರಮಥರ ಶಾಪಕ್ಕೆ ಗುರಿಯಾಗುವುದಂತು ಗ್ಯಾರಂಟಿ

    • ಶರಣರೇ ನಾವು ಯಾರನ್ನು ಒತ್ತಾಯ ಮಾಡಿ ಹಾಕಿಸಬಾರದು ಅವರು ನಮ್ಮ ವಿರೋಧಿ ಗಳು ಅಂಥ ಗೊತ್ತಾದ ಕ್ಷಣ ಆ ಪತ್ರಿಕೆ ಯನ್ನು ಓದುವುದನ್ನು ನಿಲ್ಲಿಸುವುದು ಮತ್ತೋಂದು ಪತ್ರಿಕೆ ಯನ್ನು ಹಿಡಿದುಕೊಳ್ಳುವುದು ಅಷ್ಟೇ ,ಒಬ್ಬ ಧರ್ಮ ವಿರೋಧಿಗೆ ಬುದ್ಧಿ ಕಳಿಸುವುದು .ಮೊದಲು ಆಥಿ೯ಕವಾಗಿ ನಷ್ಟ ಉಂಟಾದಾರೆ ಸಾಕು ಅಲ್ಲವೇ ಒಂದೇ ದಿನ ಒಂದು ಲಕ್ಷ ಪತ್ರಿಕೆ ಕಡಿಮೆ ಆಯಿತು ಅಂದಾಗ ಆತನ ಮೈ ಬೆವರು ಪ್ರಾರಂಭ ಆಗುತ್ತದೆ ಈ ಕೆಲಸ ಮಾಡಬೇಕು ಅಷ್ಟೇ

  • Dalit janangakke serirua patrikke alla. Basavnna dalitarige linga dixe kottu lingavantrannagi madiruvru . lingayatrige alla. Lingayatre bere. Lingavntre bere. Edu tilkolli.

    – Basava raj nande bidar.

  • ಇಂದಿನಿಂದಲೇ ಲಿಂಗಾಯತರು ವಿಜಯವಾಣಿ ಪತ್ರಿಕೆಯನ್ನು ಕೊಳ್ಳುವುದನ್ನು ಓದುವುದನ್ನು ನಿಷೇಧಿಸಿರಿ, ಹೆಚ್ಚು ಹೆಚ್ಚು ಲಿಂಗಾಯತರಲ್ಲಿ ಜಾಗೃತಿ ಮೂಡಿಸಿ, ಲಿಂಗಾಯತ ವಿರೋಧಿ ಧರ್ಮ ವಿರೋಧಿ ವಿಜಯ ಸಂಕೇಶ್ವರರಿಗೆ ಬುದ್ದಿ ಕಲಿಸಲು ಇದೊಂದೇ ಮಾರ್ಗ, ವಿಜಯವಾಣಿ ಲಿಂಗಾಯತ ವಿರೋಧಿ ಪತ್ರಿಕೆ.

  • ಮೀಡಿಯಾ ಈಗ ವೈಧಿಕರ ಹಿಡಿತದಲ್ಲಿ ಇದೆ. ಅವೈದಿಕ ವಿಚಾರ ಹಾಗು ಪ್ರಚಾರವನ್ನು ಕ್ಷೀಣಗೊಳಿಸಿದ್ದಾರೆ. ಸತ್ಯ ಹೇಳಬೇಕೆಂದರೆ ಬಹುತೇಕ ಲಿಂಗಾಯತ ಧರ್ಮದ ವಿಚಾರಗಳು ಸೋಷಿಯಲ್ ಮೀಡಿಯಾ ಮುಖಾಂತರವೇ ಎಲ್ಲರಿಗು ತಲುಪಿ ಚರ್ಚೆಯಾಗುತ್ತಿರುವುದು. ಯಾವ ಪತ್ರಿಕೆ ನಮ್ಮ ವಿಷಯಗಳನ್ನು ಸರಿಯಾಗಿ ಪ್ರಸಾರ ಮಾಡದಿದ್ದರೆ ಅದನ್ನು ಕಡೆಗಣಿಸಿ. ನಮ್ಮನ್ನು ಬೆಂಬಲಿಸುತ್ತಿರುವ ಸೋಷಿಯಲ್ ಮೀಡಿಯಾಗಳು ಗಟ್ಟಿಗೊಳ್ಳಲು ಅಗತ್ಯ ನೆರವು ಹಾಗು ಪ್ರೋತ್ಸಾಹ ಕೊಡೋಣ.

  • ಗುರುಲಿಂಗಪ್ಪ ಹೊಗತಾಪುರ ಬೀದರಜಿಲೆ ಬೀದರ says:

    ವಿಜಯವಾಣಿ ಪತ್ರಿಕೆ ಸಂಪಾದಕರು ಹಣದಮದವೇರಿ ಶಡೆದುಕೊಳುತಿರುವವರು ಭವಿಷ್ ದಲ್ಲಿ ಕಲವೇ ಇವರಿಗೆ ಬುದ್ದಿ ಕಲಿಸುತ್ತದೆ. ದಿನಗಳು ಬೇಕಾಗಿಲ್ಲ.

  • ಇವರಿಗೆ ಇನ್ನು ಬುದ್ಧಿ ಕಲಿಸುತ್ತೆವೆ ಸ್ಲೋಲಿಯಾಗಿ

Leave a Reply

Your email address will not be published. Required fields are marked *