ಬ್ರಿಟಿಷರಿಂದ ಸ್ವಾತಂತ್ರ‍್ಯಗಳಿಸುವಾಗ ಸಾಧಿಸಲಾಗದ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಸಂಘಪರಿವಾರ 2014ರಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಆಡಳಿತಾವಧಿಯಲ್ಲಿ ಸಾಧಿಸುವ ಹರಸಾಹಸ ಮಾಡುತ್ತಿದೆ
ಬೆಂಗಳೂರು
ಜನವರಿ 2025ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ವಿಶೇಷವಾಗಿ ಆಹ್ವಾನಿಸಲು RSS ನಿರ್ಧರಿಸಿದೆ. ಇದಕ್ಕೆ ಶರಣತತ್ವ ಚಿಂತಕ ಹೆಚ್.ಎಂ. ಸೋಮಶೇಖರಪ್ಪ ಅವರ ಪ್ರತಿಕ್ರಿಯೆ.
- ಕುಂಭಮೇಳದ ವಿಶೇಷ ಆಹ್ವಾನದ ಉದ್ದೇಶವೇನು?
ಕುಂಭಮೇಳವು ಪುರಾಣದ ಒಂದು ಕಥೆಯಾಗಿದ್ದು, ಅಸಮಾನತೆಯ ಮತ್ತು ಶೋಷಣೆಯ ಹಿನ್ನೆಲೆ ಹೊಂದಿದೆ. ಇಂತಹ ಪುರಾಣಗಳಲ್ಲಿ ಲಿಂಗಾಯತ ಧರ್ಮೀಯರು ನಂಬಿಕೆ ಹೊಂದಿಲ್ಲ. ಸಮಸಮಾಜದ ಗುರಿಯನ್ನು ಹೊಂದಿ ಸಾಮಾಜಿಕ ಬದಲಾವಣೆಯ ಆಶಯಗಳೊಂದಿಗೆ ಹುಟ್ಟಿದ ಬಸವತತ್ವ ಪ್ರಣೀತ ಲಿಂಗಾಯತ ಧರ್ಮೀಯರು ಇಲ್ಲಿಯವರೆಗೂ ಕುಂಭಮೇಳದಲ್ಲಿ ಭಾಗವಹಿಸಿಲ್ಲ.
ಲಿಂಗಾಯತರು ಸಂಘಪರಿವಾರ ಸೃಷ್ಠಿಯ ಹಿಂದೂಗಳಲ್ಲ. ಹಿಂದೂ ನಾವೆಲ್ಲಾ ಒಂದು ಅನ್ನುವುದಕ್ಕೆ ಇದನ್ನು ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬೇಕು. ಬ್ರಿಟಿಷರಿಂದ ಸ್ವಾತಂತ್ರ‍್ಯಗಳಿಸುವಾಗ ಸಾಧಿಸಲಾಗದ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಸಂಘಪರಿವಾರ 2014ರಿಂದ ಬಹುತ್ವ ಭಾರತದ ರಾಜಕೀಯ ಆಡಳಿತದ ಚುಕ್ಕಾಣಿ ಹಿಡಿದಿರುವ ತನ್ನ ರಾಜಕೀಯ ಅಂಗಸಂಸ್ಥೆಯಾದ ಬಿಜೆಪಿಯ ಆಡಳಿತಾವಧಿಯಲ್ಲಿ ಸಾಧಿಸುವ ಹರಸಾಹಸ ಮಾಡುತ್ತಿದೆ.
ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಸಮಾನತೆಯನ್ನು ಸಾಧಿಸುವ ಬದಲಾಗಿ ವೇದಾಗಮಗಳ ಹಿನ್ನೆಲೆಯ ಶ್ರೇಣೀಕೃತ ಸಮಾಜದ ಕಲ್ಪನೆ ಮತ್ತು ತತ್ವಗಳನ್ನು ಆಧಾರವಾಗಿಟ್ಟುಕೊಂಡಿರುವ “ಹಿಂದೂ ರಾಷ್ಟ್ರ” ಸ್ಥಾಪನೆಯ ಗುರಿ ಸಾಧಿಸಲು ಸಂಘಪರಿವಾರವು ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಲಿಂಗಾಯತ ಧರ್ಮೀಯರು ನಾವು ಹಿಂದೂ ಧರ್ಮದ ಭಾಗವಲ್ಲವೆಂದೂ ಬೇರೆ ಧರ್ಮಗಳಿಗೆ ಕೊಟ್ಟಿರುವಂತೆ ಲಿಂಗಾಯತ ಧರ್ಮಕ್ಕೂ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೊಡಬೇಕೆಂದು ಹೋರಾಟ ಪ್ರಾರಂಭಸಿದ್ದಾರೆ.
ಜೊತೆಗೆ, 2013ರಿಂದ 2018ರವರೆಗೆ ಆಡಳಿತದಲ್ಲಿದ್ದ ಕರ್ನಾಟಕ ಸರಕಾರವು ಆಯೋಗವೊಂದನ್ನು ನೇಮಿಸಿ ಅದರ ಶಿಫಾರಸ್ಸಿನ ಮೇರೆಗೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೊಡಬೇಕೆಂದು ಶಿಫಾರಸ್ಸನ್ನೂ ಕೂಡ ಮಾಡಿದೆ. ಇದರೊಟ್ಟಿಗೆ ಈಗ ಆಡಳಿತದಲ್ಲಿರುವ ಸರಕಾರವು ಶರಣ ಕ್ರಾಂತಿಯ ನೇತಾರ ಮತ್ತು ಲಿಂಗಾಯತ ಧರ್ಮದ ಸಂಸ್ಥಾಪಕ ಬಸವಣ್ಣನವರನ್ನ ರಾಜ್ಯದ “ಸಾಂಸ್ಕೃತಿಕ ನಾಯಕ” ಎಂದು ಘೋಷಣೆ ಮಾಡಿದೆ.
ಮೇಲಿನ ಬೆಳವಣಿಗೆಗಳು ಹಿಂದೂ ರಾಷ್ಟ್ರ ಸ್ಥಾಪನೆಯ ಗುರಿಹೊಂದಿರುವ ಸಂಘಪರಿವಾರದ ಕಾರ್ಯಸೂಚಿಗೆ ವಿರುದ್ಧವಾಗಿದೆ. ಆದ್ದರಿಂದ ಶತಾಯ ಗತಾಯ ಲಿಂಗಾಯತ ಧರ್ಮೀಯರನ್ನು ಹಿಂದೂ ಧರ್ಮದ ತೆಕ್ಕೆಯಿಂದ ಹೊರಹೋಗದಂತೆ ನೋಡಿಕೊಳ್ಳುವ ಸಂಚನ್ನು ಅದು ರೂಪಿಸುತ್ತಿದೆ.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ದೇಶದ ಆಯ್ದ ಸ್ಥಳಗಳಲ್ಲಿ “ವಚನ ದರ್ಶನ” ಪುಸ್ತಕದ ಬಿಡುಗಡೆ, ಆಯ್ದ ವಿಶ್ವವಿದ್ಯಾಲಯಗಳಲ್ಲಿ ಲಿಂಗಾಯತ ಧರ್ಮವು ವೇದಾಗಮಗಳ ಮುಂದುವರಿದ ಭಾಗವಾಗಿದ್ದು ಅದು ಹಿಂದೂ ಧರ್ಮದ ಭಾಗವೇ ಆಗಿದೆ ಎಂಬ ವಿಷಯಗಳ ಮೇಲೆ ವಿಚಾರ ಸಂಕಿರಣಗಳು, ಆರೆಸ್ಸೆಸ್ಸಿನ ವಿದ್ಯಾರ್ಥಿ ಸಹಸಂಸ್ಥೆಯಾದ ವಿದ್ಯಾರ್ಥಿ ಪರಿಷತ್ತಿನಿಂದ ಕಾಲೇಜುಗಳಲ್ಲಿ “ಇಷ್ಟಲಿಂಗ ದೀಕ್ಷೆ”, ಶರಣರ ಸಂಸ್ಕೃತಿಯ ಮೇಲೆ ಚಲನಚಿತ್ರಗಳು ಹೀಗೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದೆ.
ಅದರ ಮುಂದುವರಿದ ಸಂಚಿನ ಭಾಗವಾಗಿ ಧಾರ್ಮಿಕ ಮುಖಂಡರಗಳ ನೇತೃತ್ವದಲ್ಲಿ ನಡೆಯುವ ಕುಂಭಮೇಳಕ್ಕೆ ಲಿಂಗಾಯತರನ್ನು ಆಹ್ವಾನಿಸಿ ಹಿಂದೂ ಧರ್ಮದ ಭಾಗವನ್ನಾಗಿ ತೋರಿಸುವ ಹುನ್ನಾರ ಅಡಗಿದೆ. ಲಿಂಗಾಯತ ಧರ್ಮವು ಹಿಂದೂ ಧರ್ಮದ ಅಂಗ ಎಂದು ತೋರಿಸುವ ಮತ್ತು ಲಿಂಗಾಯತ ಧರ್ಮೀಯರ ಮನಃಪರಿವರ್ತನೆಯ ಭಾಗವಾಗಿ ಇಂತಹ ಆಹ್ವಾನ ಕೊಡುವ ನಿರ್ಧಾರವನ್ನು ಆರೆಸ್ಸೆಸ್ಸ್ ತೆಗೆದುಕೊಂಡಿದೆ. ಇಷ್ಟೂ ವರ್ಷಗಳಲ್ಲಿ ಇಲ್ಲದಿದ್ದ ಈ ಅಹ್ವಾನದ ಹಿಂದಿನ ಗುಟ್ಟು ಮತ್ತು ಘನ ಉದ್ದೇಶ ಇಷ್ಟೆ. ಈ ಉದ್ದೇಶ ಲಿಂಗಾಯತರಿಗೆ ಅರ್ಥವಾಗಬೇಕಿದೆ.
2.ಲಿಂಗಾಯತರಿಗೆ ವಿಶೇಷ ಆಹ್ವಾನ ಯಾವ ರೂಪದಲ್ಲಿ ಯಾರಿಗೆ ಬರುತ್ತದೆ?
ಇದನ್ನು ಆರೆಸ್ಸೆಸ್ಸಿನ ಪ್ರಮುಖರು ಮತ್ತು ಚಿಂತಕರ ಚಾವಡಿ (Think tank) ಸದಸ್ಯರುಗಳೇ ಹೇಳಬೇಕು. ಏಕೆಂದರೆ ಅವರುಗಳು ಕಾರ್ಯಾಚರಿಸುವ ವಿಧಾನ ಊಹಿಸುವುದು ಅಷ್ಟೊಂದು ಸುಲಭ ಸಾಧ್ಯವಲ್ಲ. ಬಹುಷಃ ವೇದ, ಉಪನಿಷತ್ತು, ಆಗಮ, ಪುರಾಣ, ಶೃತಿ, ಸ್ಮೃತಿ ಮುಂತಾದವುಗಳಲ್ಲಿ ಜೊತೆಗೆ ಬಹುದೇವತಾ ಆರಾಧನೆಗಳಲ್ಲಿ ನಂಬಿಕೆಯಿಟ್ಟು ಮತ್ತು ನಾವು ಹಿಂದೂ ಧರ್ಮದ ಭಾಗವೆಂದೇ ಹೇಳಿಕೊಳ್ಳುವ ವೀರಶೈವ ಮಠಾಧಿಪತಿಗಳು, ವೀರಶೈವ ಮಠಾಧಿಪತಿಗಳ ಪ್ರಭಾವಕ್ಕೆ ಒಳಗಾಗಿರುವ ಲಿಂಗಾಯತ ಮಠಾಧಿಪತಿಗಳು, ವೀರಶೈವ ಲಿಂಗಾಯತ ಎಂಬ ಗೊಂದಲಗಳಲ್ಲಿರುವ ಸಮಾಜದ ಮುಖಂಡರುಗಳು, ಸಂಘ ಪರಿವಾರದ ತೆಕ್ಕೆಯಲ್ಲಿರುವ ಮುಖಂಡರುಗಳು, ಬಿಜೆಪಿ ಪಕ್ಷದಲ್ಲಿರುವ ವೀರಶೈವ ಮತ್ತು ಲಿಂಗಾಯತ ಮುಖಂಡರುಗಳು ಇವರೇ ಮುಂತಾದವರುಗಳ ಮೂಲಕ ಆಹ್ವಾನ ಬರಬಹುದು.
ಇವರೆಲ್ಲರಿಗೂ ಲಿಂಗಾಯತ ಸಮುದಾಯವನ್ನು ಈ ನಿಟ್ಟಿನಲ್ಲಿ ಒಗ್ಗೂಡಿಸಲು ಮತ್ತು ಭಾಗವಹಿಸುವಂತೆ ಪ್ರೇರೇಪಿಸಲು ಕಾರ್ಯಪ್ರವೃತ್ತರಾಗಲು ಆರೆಸ್ಸೆಸ್ಸ್ ಸೂಚನೆಯನ್ನು ಕೊಡಬಹುದು. ಜೊತೆಗೆ, ಅದ್ಭುತವಾದ ಮತ್ತು ವಿಶಾಲವಾದ ಸಾಮಾಜಿಕ ಜಾಲತಾಣದ ಜಾಲಬಂಧದ (network) ಮೂಲಕ ವ್ಯಾಪಕ ಪ್ರಚಾರವನ್ನು ಕೊಡುವುದರ ಮೂಲಕವೂ ಲಿಂಗಾಯತ ಸಮುದಾಯವನ್ನು ಭಾಗವಹಿಸುವಂತೆ ಪ್ರೇರೇಪಿಸಬಹುದು.
ಅಷ್ಟೇ ಏಕೆ ಭಾಗವಹಿಸದಿದ್ದರೆ ಅವರಲ್ಲಿ ಅದ್ಭುತವಾದ ಅವಕಾಶದಿಂದ ವಂಚಿತರಾಗುತ್ತೇವೆ ಮತ್ತು ಅದರಿಂದ ದೊರೆಯುವ ಪುಣ್ಯದಿಂದ ವಂಚಿತರಾಗುತ್ತೇವೆ ಎಂಬ ಭಯವನ್ನೂ ಹುಟ್ಟಿಸಬಹುದು.
- ಇದಕ್ಕೆ ಲಿಂಗಾಯತ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು?
ಲಿಂಗಾಯತ ಸಮೂದಾಯಕ್ಕೆ ಕುಂಭಮೇಳವು ನಮ್ಮ ಸಂಸ್ಕೃತಿಯ ಭಾಗವಲ್ಲವೆಂಬ ಅರಿವನ್ನು ಬಸವತತ್ವ ಪ್ರಣೀತ ಲಿಂಗಾಯತ ಮಠಾಧೀಶರುಗಳು, ಸಂಘಸಂಸ್ಥೆಗಳು, ಸಮಾಜದ ಮುಖಂಡರುಗಳು, ರಾಜಕೀಯ ಮುಖಂಡರುಗಳು ಮೂಡಿಸಬೇಕು. ಗೊಂದಲದಲ್ಲಿರುವ ಮತ್ತು ವೀರಶೈವ/ಹಿಂದುತ್ವದ ಪ್ರಭಾವಕ್ಕೆ ಒಳಗಾಗಿರುವ ಲಿಂಗಾಯತ ಮಠಾಧೀಶರುಗಳಿಗೂ ಅರಿವನ್ನು ಮೂಡಿಸಬೇಕು, ಜೊತೆಗೆ, ಹಾಗೇನಾದರೂ ಭಾಗವಹಿಸುವ ಆಸಕ್ತಿಯಿದ್ದಲ್ಲಿ ಲಿಂಗಾಯತ ಮಠಗಳನ್ನು ತೊರೆಯುವಂತೆ ಒತ್ತಡ ಹೇರಬೇಕು. ಒಟ್ಟಾರೆಯಾಗಿ ಹೇಳಬೇಕೆಂದರೆ ಆರೆಸ್ಸೆಸ್ಸ್ ಹೆಣೆದಿರುವ “ಹಿಂದೂ ನಾವೆಲ್ಲಾ ಒಂದು” ಎಂಬ ಜಾಲದ ಭಾಗವಾಗಿರುವ ಕುಂಭಮೇಳದಲ್ಲಿ ಲಿಂಗಾಯತರು ಭಾಗವಹಿಸದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ.
- ನಿಮ್ಮ ವೈಯುಕ್ತಿಕ ಪ್ರತಿಕ್ರಿಯೆ ಏನು? ನೀವು ಏನು ಮಾಡುತ್ತೀರಿ?
ಯಾವುದೇ ಕಾರಣಕ್ಕೂ ಶರಣ ಸಂಸ್ಕೃತಿಯ ಆಶಯಗಳಿಗೆ ವಿರುದ್ಧವಾದ ಹಿನ್ನೆಲೆಯಿರುವ ಕುಂಭಮೇಳ ಆಚರಣೆಯಲ್ಲಿ ಲಿಂಗಾಯತ ಸಮಾಜ ಭಾಗವಹಿಸಬಾರದು ಮತ್ತು ಹಾಗೇನಾದರೂ ಸಂಘಪರಿವಾರದ ಈ ಜಾಲಕ್ಕೆ ಸಿಲುಕಿ ಭಾಗವಹಿಸಿದ್ದೇ ಆದಲ್ಲಿ ಲಿಂಗಾಯತ ಧರ್ಮದ ವಿನಾಶಕ್ಕೆ ಲಿಂಗಾಯತರೇ ಕಾರಣವಾಗುತ್ತಾರೆ ಅನ್ನುವುದು ನನ್ನ ಬಲವಾದ ಅನಿಸಿಕೆ.
ಕುಂಭಮೇಳದಲ್ಲಿ ಲಿಂಗಾಯತ ಸಮುದಾಯವು ಏಕೆ ಭಾಗವಹಿಸಬಾರದು ಎಂದು ಅರಿವು ಮತ್ತು ಜಾಗೃತಿ ಮೂಡಿಸಲು ಬರಹಗಳು, ವೇದಿಕೆಗಳಲ್ಲಿ ಭಾಷಣ ಮತ್ತು ಚರ್ಚೆಗಳಿಗೆ ತಂಡವೊಂದನ್ನು ರಚಿಸಿಕೊಂಡು ಮಠಾಧೀಶರುಗಳು ಹಾಗೂ ಸಮಾಜದ ಮುಖಂಡರುಗಳು ಮತ್ತು ರಾಜಕೀಯ ಮುಖಂಡರುಗಳ ಜೊತೆ ಸಂವಾದಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬಹುದು.
ಸರ್ ನಿಮ್ಮ ಚಿಂತನೆ ಸರಿಯಾಗಿದೆ ನಿಮ್ಮ ಚಿಂತನೆಯನ್ನು ಎಲ್ಲಾ ಲಿಂಗಾಯತ ಮಠಾಧೀಶರು ಮತ್ತು ಲಿಂಗಾಯತ ಸಂಘ ಸಂಸ್ಥೆಗಳು ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ.
I agree fully with your think ing and whole heartily support.
ನಿಮ್ಮ ಚಿಂತನೆ ಸ್ಪಷ್ಟವಾಗಿ ಮೂಡಿಬಂದಿದೆ ಇದನ್ನು ನಾನಂತೂ ನನ್ನ ಇತಿಮಿತಿಯಲ್ಲಿ ಪಾಲಿಸುವೆ ಹಾಗೆಯೇ ಇತರರಲ್ಲಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತರುವ ಇಂತಹ ಮೋಸಗಾರಿಕೆಗೆ ಬಲಿಯಾಗದಿರಿ ಎಂದು ಬೇಡಿಕೊಳ್ಳುವೆ.
Sir. It is eye opening write-up. Let us together organise a programme similar to that of Aathmavalokana in December either in Bengaluru Or any other place. It has to be stoped.