ಬೆಂಗಳೂರು
ದಾವಣಗೆರೆ ನಗರದ ಪ್ರಮುಖ ಉದ್ಯಮಿಗಳು, ಶಿಕ್ಷಣ ಪ್ರೇಮಿಗಳು, ರಾಜಕಾರಣಿಗಳು, ಕೊಡುಗೈ ದಾನಿಗಳು, ಸಮಾಜಸೇವಕರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಶಾಮನೂರು ಶಿವಶಂಕರಪ್ಪ ಅವರು ಬಸವಣ್ಣನವರ ಅನುಯಾಯಿಗಳು ಆಗಿದ್ದರು.
ದಾವಣಗೆರೆ ನಗರದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧಿವೇಶನದಲ್ಲಿ ‘ವೀರಶೈವ ಲಿಂಗಾಯತರು ಹಿಂದುಗಳಲ್ಲ’ ಎಂದು ನಿರ್ಣಯ ತೆಗೆದುಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು.
ಹಾಗೆಯೇ ಜಾತಿ ಸಮೀಕ್ಷೆ ಸಂದರ್ಭದಲ್ಲಿ ವೀರಶೈವ ಲಿಂಗಾಯತರು ಧರ್ಮದ ಕಾಲಂನಲ್ಲಿ ಇತರೆ ಎಂದು ಬರೆಸಲು ಕರೆಕೊಟ್ಟಿದ್ದರು.
ಹಾಗೆಯೇ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಮತ್ತು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಪ್ರಮುಖ ಕಾರಣೀಕರ್ತರಾಗಿದ್ದರು.
ಹೀಗೆ ಸಾಧ್ಯವಾದಾಗಲೆಲ್ಲ ತಮಗೆ ತಿಳಿದಿರುವ ಜ್ಞಾನಕ್ಕೆ ತಕ್ಕಂತೆ ಬಸವ ತತ್ವ ಪ್ರಚಾರವನ್ನು ಮಾಡಿದ್ದರು.
ಒಂದು ಸಂದರ್ಶನದಲ್ಲಿ ಅವರು ನಾವು ಹಿಂದುತ್ವದವರಲ್ಲ ನಾವು ಬಸವ ತತ್ವದವರು ಎಂದು ಗಟ್ಟಿಯಾಗಿ ಹೇಳಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇಂಥಹ ಮಹಾನ್ ಚೇತನ ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿದ್ದಾರೆ. ಅವರಿಗೆ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅತ್ಯಂತ ಗೌರವದಿಂದ ಸಂತಾಪ ಸೂಚಿಸುತ್ತದೆ.
