ಲಿಂಗಾಯತರು ವೈದಿಕಧರ್ಮದ ದಾಸರಾಗಿದ್ದಾರೆ: ಪಾಂಡೋಮಟ್ಟಿ ಶ್ರೀ

ನ್ಯಾಮತಿ

ಲಿಂಗಾಯತರಲ್ಲಿ ದುರ್ಗುಣಗಳು ಕಸದ ಗಿಡದಂತೆ ಬೆಳೆದು, ಅವರು ವೈದಿಕಧರ್ಮದ ದಾಸರಾಗಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತಮಠದ ಮಠದ ಡಾ. ಗುರುಬಸವ ಸ್ವಾಮೀಜಿ ಖೇದ ವ್ಯಕ್ತಪಡಿಸಿದರು.

ಅವರು ನ್ಯಾಮತಿ ಪಟ್ಟಣದ ಕಲ್ಯಾಣ ಮಂಟಪದಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಏರ್ಪಡಿಸಿದ್ದ ನಮ್ಮ ನಡೆ ಬಸವ ತತ್ವದ ಕಡೆ, ಬಸವ ಜ್ಯೋತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅನುಭಾವ ನೀಡಿದರು.

ಲಿಂಗಾಯತ ಧರ್ಮವು ವಿಶಿಷ್ಟ ಧರ್ಮವಾಗಿದ್ದು, ಅದಕ್ಕೆ ಬಸವಣ್ಣನವರು ನಿರಂತರ ದಾರಿದೀಪವಾಗಿದ್ದಾರೆ. ಅಲ್ಲದೇ ಅಸ್ಪೃಶ್ಯರಿಗೆ ಆಶಾ ಕಿರಣವಾದದ್ದು, ಮಹಿಳೆಯರಿಗೆ ಸಮಾನತೆಯನ್ನ ತಂದುಕೊಟ್ಟದ್ದು ಲಿಂಗಾಯತ ಧರ್ಮವಾಗಿದೆ. ಹಾಗಾಗಿ ಬಸವಣ್ಣನವರನ್ನು ನೆನೆಯದಿದ್ದರೆ ನಮಗೆ ಭವಿಷ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

890 ವರ್ಷಗಳ ಹಿಂದೆ ಕನ್ನಡ ಭಾಷೆಯನ್ನ ಬೆಳೆಸಿದ ಲಿಂಗಾಯತ ಕನ್ನಡ ಧರ್ಮವಾಗಿದೆ ಎಂದರು. ಜನಿವಾರ ಧರಿಸಲ್ಲ ಎಂದು 8ನೇ ವಯಸ್ಸಿಗೆ ಮನೆ ತೊರೆದು ಸಮಾಜದಲ್ಲಿ ಮುಂದೆ ಜಾತ್ಯಾತೀತ ವ್ಯಕ್ತಿಯಾಗಿ ಬಸವಣ್ಣನವರು ಮೆರೆದರು ಎಂದು ಸ್ವಾಮೀಜಿ ಹೇಳಿದರು.

ವಿಜಯಪುರದ ಶರಣಚಿಂತಕ ಡಾ. ಜೆ.ಎಸ್.ಪಾಟೀಲ, ಅಂದು ಜಾತಿ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ ಅಸಮಾನತೆ ತೀವ್ರವಾಗಿತ್ತು, ಅವುಗಳೆಲ್ಲವನ್ನು ತಮ್ಮ ಚಿಂತನೆಗಳ ಮೂಲಕ ಇತಿ ಶ್ರೀ ಹಾಡಿದವರು ಬಸವಣ್ಣನವರು. ಕಾಯಕ ಧರ್ಮ ತತ್ವದವರಾಗಿ ಪಂಚಾಂಗ ಹೇಳುವ ಜ್ಯೋತಿಷಿಗಳ ಬಳಿ ಲಿಂಗಾಯತರಾಗಿ ತೆರಳಬೇಡಿ ಎಂದು ಕರೆ ನೀಡಿದರು. ನೂರಾರು ದೇವರನ್ನು ಪೂಜಿಸುವವರು ಜಗ್ಗುಲಿ ಝಳ ಝಳ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.

ಪ್ರಾಧ್ಯಾಪಕಿ ಶರಣೆ ಗೀತಾ ಬಸವರಾಜ ಮಾತನಾಡಿ 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ 33 ಕೋಟಿ ದೇವರುಗಳಿವೆ. ಅಂದಿನ ವಚನಕಾರರು ಜನವಾಣಿಯನ್ನು ದೈವವಾಣಿಯಾಗಿಸಿದರು. ಪ್ರಸ್ತುತ ಬಸವ ಧರ್ಮವು ಸ್ವಾರ್ಥಕ್ಕೆ ಬಳಕೆಯಾಗದೆ ಸಮಾಜಮುಖಿಯಾಗಬೇಕಿದೆ ಎಂದರು.

ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾಧ್ಯಕ್ಷರಾದ ಶರಣ ಆವರಗೆರೆ ರುದ್ರಮನಿ, ಮಲೆಬೆನ್ನೂರು ಘಟಕದ ಶರಣ ನಾರೇಶಪ್ಪ, ನ್ಯಾಮತಿ ತಾಲೂಕು ಘಟಕದ ಗೌರವಾಧ್ಯಕ್ಷ ಶರಣ ಎಂ.ಜಿ. ಗುರು ನಂಜಪ್ಪಗೌಡ್ರು, ಅಧ್ಯಕ್ಷ ಶರಣ ಹೆಚ್. ಮಹೇಶ್ವರಪ್ಪ, ಉಪಾಧ್ಯಕ್ಷ ಶರಣ ಮೇಘರಾಜ, ಪದಾಧಿಕಾರಿ ಶರಣರಾದ ಬಸವರಾಜಪ್ಪ ದಾನಿಹಳ್ಳಿ, ವಿನಯ್, ಪಿ.ಜಿ. ನಾಗರಾಜ್,ಮಹೇಶ್, ನ್ಯಾಮತಿ ಜಯಣ್ಣ, ಶರಣೆ ಕವಿತಾ ಬಳೆಗಾರ, ಅಂಬಿಕಾ ಸುಭಾಷಚಂದ್ರ ಹಾಗೂ ನೂರಾರು ಶರಣ, ಶರಣೆಯರು ಹಾಜರಿದ್ದರು. ಮಲೆಬೆನ್ನೂರಿನ ಅಕ್ಕನ ಬಳಗ ಸೇವಾ ಸಂಸ್ಥೆಯ ಶರಣೆಯರು ವಚನ ಭಜನೆ ಹಾಡಿದರು.

Share This Article
Leave a comment

Leave a Reply

Your email address will not be published. Required fields are marked *