ಲಂಡನ್ ಬಸವ ಪುತ್ತಳಿ ಬಳಿ ಗ್ರಂಥಾಲಯ ಆರಂಭಿಸಿ: ಸಾಣೇಹಳ್ಳಿ ಶ್ರೀ

ಬಸವ ಮೀಡಿಯಾ
ಬಸವ ಮೀಡಿಯಾ

ಲಂಡನ್

ಮಹಾತ್ಮ ಬಸವಣ್ಣನವರು ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂದು ಸಾರಿದವರು. ಆದ್ದರಿಂದ ಅವರ ಪ್ರತಿಮೆಗಳ ಜೊತೆಗೆ ಅವರು ಬಿಟ್ಟು ಹೋದ ಮೌಲ್ಯಗಳನ್ನು ಪಾಲಿಸುವ ಅಗತ್ಯವಿದೆ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶ್ರೀಗಳು ಅಭಿಪ್ರಾಯ ಪಟ್ಟರು.

ಅವರು ಇಂಗ್ಲೆಂಡ್ ದೇಶದ ಲಂಡನ್‌ನಲ್ಲಿ ಸ್ಥಾಪಿತವಾಗಿರುವ ಬಸವಣ್ಣನವರ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದರು. ‌ಸಮಾನತೆ, ಸಾಮಾಜಿಕ ನ್ಯಾಯ, ಸ್ತ್ರೀ ಸ್ವಾತಂತ್ರ್ಯ ಹಾಗೂ ಸ್ವಚ್ಛ ರಾಜಕೀಯ ರೂವಾರಿಗಳಾದ ಬಸವಣ್ಣನವರು ಜಗತ್ತಿನ ಮೊಟ್ಟಮೊದಲ ಸಂಸತ್ ಸ್ಥಾಪಕರು ಎಂಬುದನ್ನು ಜಗತ್ತು ಹೆಚ್ಚು ಅರ್ಥ ಮಾಡಿಕೊಳ್ಳಲು ಈ ಪ್ರತಿಮೆಯ ಸ್ಥಾಪನೆ ಪ್ರೇರಣೆಯಾಗಿದೆ.

ಈ ಪ್ರದೇಶದಲ್ಲಿ ಬಸವಾದಿ ಶರಣರ ತತ್ವಗಳನ್ನು ಅರ್ಥಮಾಡಿಕೊಳ್ಳಲು ಪೂರಕವಾಗುವ ಗ್ರಂಥಾಲಯ ಪ್ರಾರಂಭಿಸಿ ತತ್ವ ಪ್ರಚಾರ ಮಾಡಬೇಕು, ಶರಣರು ‌ವಚನಗಳ ಮೂಲಕ ತಮ್ಮ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ, ಅವುಗಳ ಆಚರಣೆಯ ಹೊಣೆ ನಮ್ಮದಾಗಿದೆ ಇಂತಹ ಅವಕಾಶ ಕಲ್ಪಿಸಿದ ಡಾ. ನೀರಜ್ ಪಾಟೀಲ ಅಭಿನಂದನಾರ್ಹರು ಎಂದರು.‌

ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಜಿ ಸಚಿವರು, ಶಾಸಕರೂ ಆದ ಉಮಾಶ್ರೀ ಅವರು ಬಸವಣ್ಣನವರು ಮಹಿಳೆಯರಿಗೆ ಆತ್ಮ ಬಲ ತುಂಬಿದ ಮೊಟ್ಟಮೊದಲ ಧಾರ್ಮಿಕ ನಾಯಕರು, ಅವರು ಕೇವಲ ಲಿಂಗಾಯತ ಧರ್ಮಕ್ಕೆ ಸೇರದ ವಿಶ್ವಮಾನವರಾಗಿದ್ದಾರೆ. ನಮ್ಮ ಸರಕಾರದ ಕಾಲದಲ್ಲಿ ಲಂಡನ್ ಪ್ರತಿಮೆ ಸ್ಥಾಪಿತವಾಗಿರುವುದು ಹೆಮ್ಮೆಯ ವಿಷಯ. ಕರ್ನಾಟಕ ಸರ್ಕಾರ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಬಸವಣ್ಣನವರ ವ್ಯಕ್ತಿತ್ವಕ್ಕೆ ಮೆರುಗು ತಂದಿದೆ ಎಂದರು.

ಸಾಹಿತಿ, ವಚನ ಟಿವಿ ಸಂಸ್ಥಾಪಕ ಪ್ರೊ. ಸಿದ್ದು ಯಾಪಲಪರವಿ ಅವರು ಮಾತನಾಡಿ, ಬಸವಣ್ಣನವರ ಹಿರಿಮೆ ಜಗದ ತುಂಬ ವ್ಯಾಪಿಸಲು ಲಂಡನ್ ಪ್ರತಿಮೆ ಒಂದು ರೂಪವಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ವರನ್ನು ಸ್ವಾಗತಿಸಿದ ಲ್ಯಾಂಬತ್ ಬಸವ ಪ್ರತಿಷ್ಟಾನದ ಅಧ್ಯಕ್ಷರಾದ ಡಾ. ನೀರಜ್ ಪಾಟೀಲ ಅವರು ಮಾತನಾಡಿ, ಬಸವತತ್ವದ ಜಾಗತಿಕ ಪ್ರಸ್ತುತತೆ ಸಾರ್ಥಕವಾಗಿದೆ, ಈ ಪ್ರತಿಮೆ ಸ್ಥಾಪನೆಯಿಂದ ನನಗೆ ಆತ್ಮತೃಪ್ತಿ ಲಭಿಸಿದೆ. ಪ್ರತಿಯೊಬ್ಬ ಪ್ರವಾಸಿಗರು ಲಂಡನ್ನಿಗೆ ಬಂದಾಗ ಇಲ್ಲಿಗೆ ಬಂದು ಬಸವಣ್ಣನವರ ಕುರಿತು ವಿಶೇಷ ಒಲವು ಮೂಡಿಸಿಕೊಳ್ಳುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ, ಮುಂದಿನ ಬಸವಜಯಂತಿಗೆ ಪೂಜ್ಯ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳವರನ್ನು ನೀರಜ್ ಪಾಟೀಲ ಅವರು ಆಹ್ವಾನಿಸಿ ಮನವಿ ಪತ್ರವನ್ನು ಸಹ ನೀಡಿದರು.

ರಾಷ್ಟ್ರೀಯ ಬಸವ ಪ್ರತಿಷ್ಟಾನದ ಅಧ್ಯಕ್ಷ, ಟಿಸಿಎಸ್ ಡ್ರೀಮ್ ಹಾಲಿಡೇಸ್ ಸ್ಥಾಪಕರಾದ ಎಸ್.ಎಂ. ಸುರೇಶ್, ಬೆಳಗಾವಿ ಜಿಲ್ಲೆಯ ಜಾಗತಿಕ ಲಿಂಗಾಯತ ಸಭಾದ ಅಧ್ಯಕ್ಷರಾದ ಬಸವರಾಜ ರೊಟ್ಟಿ, ಸಾಹಿತಿ ಬಿ.ಆರ್. ಪೋಲಿಸಪಾಟೀಲ, ಅಶೋಕ ಮಳಗಲಿ ಹಾಗೂ ನೂರಾರು ಲಂಡನ್ ಪ್ರವಾಸಿಗರು ಸರಳ ಸಮಾರಂಭಕ್ಕೆ ಸಾಕ್ಷಿಯಾದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FYCnBXoFfiK0GH4dAJvoia/

Share This Article
Leave a comment

Leave a Reply

Your email address will not be published. Required fields are marked *