ಬೆಂಗಳೂರು
ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಬುಧವಾರ ಉತ್ತರಿಸಿದ್ದಾರೆ.
ಕಾಂಗ್ರೆಸ್ ಪಕ್ಷವು 57 ಜನರಿಗೆ ಟಿಕೆಟ್ ಕೊಟ್ಟಿತ್ತು. ಇದರಲ್ಲಿ 34 ಜನ ಗೆದ್ದಿದ್ದಾರೆ. ಮೊನ್ನೆಯ ಸಭೆಗೆ ಇವರಲ್ಲಿ 28 ಜನ ಬಂದಿದ್ದರು. ಸಚಿವರ ಪೈಕಿ ಎಸ್.ಎಸ್.ಮಲ್ಲಿಕಾರ್ಜುನ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ. ಉಳಿದ ಎಲ್ಲ ಲಿಂಗಾಯತ ಸಚಿವರೂ ಬಂದಿದ್ದರು ಎಂದು ತಿಳಿಸಿದ್ದಾರೆ.
“ಇದರಲ್ಲಿ ನಾಯಕತ್ವದ ವಿಚಾರವಾಗಲಿ, ವೈಯಕ್ತಿಕ ಅಜೆಂಡಾಗಳಾಗಲಿ ಇರಲಿಲ್ಲ. ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸರ್ವೇ ಸಾಮಾನ್ಯ ಎಂದು ಹೇಳಿದರು.
ನಮ್ಮ ಸಮುದಾಯಕ್ಕೆ ಸರ್ಕಾರದ ನಾನಾ ಹಂತಗಳಲ್ಲಿ ಸಿಗಬೇಕಾದ ನ್ಯಾಯಬದ್ಧ ಪ್ರಾತಿನಿಧ್ಯ ಮುಂತಾದ ವಿಚಾರ ಕುರಿತು ಸಭೆಯಲ್ಲಿ ವಿಚಾರ ವಿನಿಮಯ ನಡೆಯಿತು.
ನಮ್ಮ ಸಮುದಾಯವು ಹೊಂದಿರುವ ಶಾಸಕರ ಸಂಖ್ಯೆಯು ನಮ್ಮ ಸಮುದಾಯ ಎಷ್ಟು ದೊಡ್ದದು ಎನ್ನುವುದನ್ನು ತೋರಿಸುತ್ತದೆ. ಜನಪ್ರತಿನಿಧಿಗಳಾದ ಮೇಲೆ ಸಮುದಾಯದ ಹಿತವನ್ನೂ ನೋಡಬೇಕಾಗುತ್ತದೆ,” ಎಂದು ಹೇಳಿದರು.
