ಮಾದಾರ ಚನ್ನಯ್ಯ ಮತ್ತು ಇಂಗಳೇಶ್ವರ ಶ್ರೀಗಳ ಸ್ಮರಣೆ ಕಾರ್ಯಕ್ರಮ

ರಾಯಚೂರು:

ನಗರದ ಬಸವ ಕೇಂದ್ರದಲ್ಲಿ ಈಚೆಗೆ ಲಿಂಗೈಕ್ಯರಾದ ಇಂಗಳೇಶ್ವರ ವಿರಕ್ತಮಠದ ಪೂಜ್ಯ ಚನ್ನಬಸವ ಸ್ವಾಮಿಗಳಿಗೆ ನುಡಿ ನಮನ ಮತ್ತು 12ನೇ ಶತಮಾನದ ಮಾದಾರ ಚನ್ನಯ್ಯ ಶರಣರ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬಸವಾಸಕ್ತರು, ಹಿರಿಯರಾದ ಗಿರಿಜಾ ಶಂಕರ ಮಾತನಾಡಿ, ಪೂಜ್ಯ ಚನ್ನಬಸವ ಸ್ವಾಮಿಗಳು ಮಹಾನ್ ಸಾಧಕರಾಗಿದ್ದು, ಬಸವತತ್ವಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟರು.

ಅಥಣಿ ಶಿವಯೋಗಿಗಳ ನಿರ್ದೇಶನದಂತೆ ಇಂಗಳೇಶ್ವರ ಮಠದ ಅಧಿಕಾರ ಸ್ವೀಕರಿಸಿ, ವಿರಕ್ತಮಠದಲ್ಲಿ ವಚನ ಶಿಲಾಮಂಟಪವನ್ನು ಸ್ಥಾಪಿಸಿದರು.

ಬಸವತತ್ವ ಪ್ರಚಾರಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಉಳವಿಯಿಂದ ಬಸವ ಕಲ್ಯಾಣದವರೆಗೆ, ಬಸವಕಲ್ಯಾಣದಿಂದ ಬಸವನ ಬಾಗೇವಾಡಿವರೆಗೆ ಹೀಗೆ  ಅನೇಕ ಕಡೆ ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಕೈಕೊಂಡು ಬಸವ ತತ್ವವನ್ನು ಪ್ರಚಾರ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದರು.

ಆರಂಭದಲ್ಲಿ ಪೂಜ್ಯರ ಭಾವಚಿತ್ರಕ್ಕೆ ಗೌರವ ಪುಷ್ಪ ನಮನ ಅರ್ಪಿಸಲಾಯಿತು.

ಜಯಶ್ರೀ ಮಹಾಜನಶೆಟ್ಟಿ ಮಾದರ ಚೆನ್ನಯ್ಯ ಶರಣರ ಕುರಿತು ಮಾತನಾಡುತ್ತಾ, ಚೆನ್ನಯ್ಯನವರು ಬಸವಣ್ಣನವರಿಗಿಂತ ಹಿರಿಯ ಶರಣರು. ತಮಿಳುನಾಡಿನ ರಾಜಾ ಕರಿಕಾಳ ಚೋಳನ ಆಸ್ಥಾನದಲ್ಲಿ ಕುದುರೆಗಳಿಗೆ ಹುಲ್ಲನ್ನು ತರುವ ಕಾಯಕ ಮಾಡುತ್ತಾ ಅಪ್ರತಿಮ ಶಿವ ಭಕ್ತನಾಗಿದ್ದ. 60 ವರ್ಷಗಳವರೆಗೆ ಗುಪ್ತ ಭಕ್ತಿ ತಿಳಿಯದಾಗಿತ್ತು. ಶಿವನಿಗೆ ಅಂಬಲಿಯನ್ನು ಊಟ ಮಾಡಿಸಿದ ಮಾದರ ಚೆನ್ನಯ್ಯನ ಭಕ್ತಿಗೆ ಸ್ವತಃ ಕರಿಕಾಳಚೋಳನೆ ಚೆನ್ನಯ್ಯನವರಿಗೆ ತಲೆಬಾಗಿದನು.

ನಂತರ ಅವರು ಬಸವಣ್ಣನವರ ತತ್ವಗಳಿಗೆ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದರು. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಅಪ್ಪನೂ ನಮ್ಮ ಮಾದರ ಚೆನ್ನಯ್ಯವರೆಂದು ಉಲ್ಲೇಖಿಸಿದ್ದನ್ನು ಸ್ಮರಿಸಿದರು.

ಕೇಂದ್ರದ ಗೌರವಧ್ಯಕ್ಷರಾದ ಹರವಿ ನಾಗನಗೌಡರು 12ನೆಯ ಶತಮಾನದ ಶಿವಶರಣೆಯರ ಮಹೋತ್ಸವವನ್ನು ನಗರದ ಬಸವ ಕೇಂದ್ರದಲ್ಲಿ ಇದೇ ಡಿಸೆಂಬರ್ 20 ಮತ್ತು 21ರಂದು ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿ ಮಾಡಬೇಕು, ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ರಾಚನಗೌಡ ಕೋಳೂರು ವಹಿಸಿದ್ದರು. ಕಾರ್ಯಕ್ರಮದಲ್ಲಿ  ಮಹಾದೇವಪ್ಪ ಏಗನೂರ್, ನರಸಪ್ಪ ಪತೇಪುರ, ಮಲ್ಲಿಕಾರ್ಜುನ ಗುಡಿಮನಿ, ಅನ್ನಪೂರ್ಣ ಹರವಿ, ವನಜ ಗಿರಿಜಾಶಂಕರ, ಸುಪ್ರಿಯಾ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಡಾ. ಪ್ರಿಯಾಂಕಾ ಗದ್ವಾಲ್ ಅವರ ಮಕ್ಕಳ ವಚನ ಪಾಠಶಾಲೆ ನಡೆಯಿತು.

 ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ, ನಾಗೇಶಪ್ಪ, ಜಗದೇವಿ ಚನ್ನಬಸವ ನಡಸಿದರು. ಎಸ್. ಶಂಕರಗೌಡರು ಸ್ವಾಗತಿಸಿದರು, ಚನ್ನಬಸವ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿಸಿದರು, ಅಮರಪ್ಪ ಅಮೀನಗಡ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *