ಮನಸೆಳೆದ ದಲಿತ ಕುಟುಂಬದ ಬಸವತತ್ವದ ನಾಮಕರಣ ಕಾರ್ಯಕ್ರಮ

 ಮಸ್ಕಿ:

ಡಿಸೆಂಬರ್ 7 ರಂದು ಪಟ್ಟಣದಲ್ಲಿ ನಡೆದ ಬಸವೋತ್ಸವ ನಾಮಕರಣದ ಕಾರ್ಯಕ್ರಮ ನಿಜಕ್ಕೂ ಮನಮುಟ್ಟುವಂತ ಕಾರ್ಯಕ್ರಮ. ಅದೇನೂ ವಿಶೇಷ ಅಂತ ಅನಿಸಬಹುದು, ಆದರೆ ಹಿಂದೆ ಬದಲಾವಣೆಯ ಒಂದು ದೊಡ್ಡ ಸಂಘರ್ಷವೆ ಇದೆ.

ಬದಲಾವಣೆ ಎನ್ನುವುದು ಸಹಜ ಪ್ರಕ್ರಿಯೆ ಆದರೂ, ಮನಸ್ಸಿನಲ್ಲಿ ಆಗುವ ಬದಲಾವಣೆ ಅದು ಅಷ್ಟು ಸುಲಭದ ಮಾತಲ್ಲ. ಅಂತಹ ಬದಲಾವಣೆಗೆ ಸಾಕ್ಷಿಯಾಯಿತು ಈ ನಾಮಕರಣದ ಕಾರ್ಯಕ್ರಮ.

ಆಚರಣೆಗಳಿಲ್ಲದ ಧರ್ಮ ಸತ್ತ ಶವದಂತೆ, ಆಚರಣೆಗಳು ಧರ್ಮದ ಜೀವಾಳ. ಆದ್ದರಿಂದ ಲಿಂಗಾಯತದ ನಿಜಾಚರಣೆಗಳು ಸುಲುಭವಾಗಿ, ಸರಳವಾಗಿ ಆ ತತ್ವಗಳನ್ನು ಒಪ್ಪಿಕೊಂಡವರಿಗೆ ಸಿಗಬೇಕಾಗಿದೆ. ಅಂತಹ ಬಸವಣ್ಣನ ತತ್ವಗಳನ್ನು ಒಪ್ಪಿಕೊಂಡು ಅಪ್ಪಿಕೊಂಡ ಸಹೋದರ ಹನುಮೇಶ ಗುಂಡೂರು.

ಹನುಮೇಶ ಮೂಲತಃ ಲಿಂಗಾಯತ ಧರ್ಮದ ಗೋತ್ರ ಪುರುಷರಾದ ಮಾದಾರ ಚೆನ್ನಯ್ಯನ ಪರಂಪರೆಯವರು. ಇಂದಿನ ಹುಟ್ಟಿನಿಂದ ಜಾತಿ ಅಳೆಯುವ ವ್ಯವಸ್ಥೆಯಲ್ಲಿ, ಹುಟ್ಟಿನಿಂದ ಲಿಂಗಾಯತನಾಗಲಾರದೆ, ಬದುಕಿನಿಂದ ಲಿಂಗಾಯತನಾದ ಹನುಮೇಶನ ಆ ಬದಲಾವಣೆಯ ದಾರಿ ಮಾತ್ರ ತುಂಬಾ ಕ್ಲಿಷ್ಟಕರವಾಗಿತ್ತು.

ಜಾತಿಯಿಂದ ಲಿಂಗಾಯತರಾದವರು ಸಹ ಇಂದಿಗೂ ತಮ್ಮ ಮನೆಯ ಕಾರ್ಯಕ್ರಮಗಳನ್ನು ಬಸವತತ್ವದ ನಿಜಾಚರಣೆಯಲ್ಲಿ ಮಾಡಲು ಹಿಂಜರಿಯುವ ಈ ಕಾಲದಲ್ಲಿ, ಮಾದಿಗ ಸಮುದಾಯದ ಯುವಕನ ಈ ನಿಜಾಚರಣೆಯ ಬಸವೋತ್ಸವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ.

 ಹನುಮೇಶ ಮೊದಲಿನಿಂದಲೂ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಾ, ಸಮುದಾಯದ ಲಿಂಗಾಯತ ಸಂಸ್ಕಾರದಿಂದ ಮಾತ್ರ ಬದಲಾಗಲು ಸಾಧ್ಯ ಎಂದೂ ನಂಬಿದವರು. ಹಾಗಾಗಿ ಅವರ ಕಲ್ಯಾಣ ಮಹೋತ್ಸವ ಸಹ ಬಸವತತ್ವದ ನಿಜಾಚರಣೆಯಂತೆ ಆಯಿತು.

ಅಂದು ಆ ಕಲ್ಯಾಣ ಕಾರ್ಯಕ್ರಮವನ್ನು ಶ್ರೀ ಬಸವಪ್ರಭು ಸ್ವಾಮಿಗಳ ನೇತೃತ್ವದಲ್ಲಿ ವಿಜಯಲಕ್ಷ್ಮಿ ನಾರನಾಳ  ನಡೆಸಿಕೊಟ್ಟರು. ಅದು ಅವರ ಬದುಕಿನ ದೊಡ್ಡ ಹೆಜ್ಜೆಯಾಗಿದೆ.

ಇಂದಿಗೂ ಹುಟ್ಟಿನಿಂದ ಲಿಂಗಾಯತರಾದವರು ವೈದಿಕದ ಆಚರಣೆ ಬಿಟ್ಟು ಹೊರಬರಲಾಗದೆ ಅದರಲ್ಲಿ ತೇಲಾಡುವಾಗ, ಈ ಯುವಕನ ಈ ಹೆಜ್ಜೆ ತುಂಬಾ ಖುಷಿ. ಬಸವೋತ್ಸವದ ನಾಮಕರಣದ ಈ ಕಾರ್ಯಕ್ರಮವನ್ನು ಶಿಲ್ಪಾ ಉಮೇಶ ನಾರನಾಳ ಸಂವಿಧಾನ ಪೀಠಿಕೆ ಓದುವುದ ಮುಖಾಂತರ ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಅಬಕಾರಿ ಸಚಿವರಾದ ಮಾನ್ಯ ಆರ್. ಬಿ . ತಿಮ್ಮಾಪುರ ಮತ್ತು ಮಸ್ಕಿ ಶಾಸಕರಾದ ಬಸನಗೌಡ ತುರ್ವಿಹಾಳ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಲಿಂಗಾಯತದ ನಿಜಾಚರಣೆಯೊಂದಿಗೆ ವಚನಗಳ ಪಠಣ ಮಾಡುತ್ತಾ ಮಗುವಿಗೆ ವಿಭೂತಿ, ರುದ್ರಾಕ್ಷಿ ಧರಿಸಿ ಪುಷ್ಪಾರೋಹಣ ಮಾಡಿ  ‘ವಚನ್ ‘ ಎಂದೂ ನಾಮಕರಣ ಮಾಡಲಾಯಿತು.

ಇಂದು ಲಿಂಗಾಯತ ತತ್ವಗಳು ಮುಟ್ಟಬೇಕಾದ ಸ್ಥಳಕ್ಕೆ ಮುಟ್ಟುತ್ತಿವೆ. ಶ್ರೇಷ್ಠತೆಯ ಗುಂಗಿನಲ್ಲಿರುವ ಇಂದಿನ ಲಿಂಗಾಯತರು ಶ್ರಾವಣ ಮಾಸದ ಕಾರ್ಯಕ್ರಮ ಮಾಡಿದರೂ ತಮ್ಮ ತಮ್ಮ ಜಾತಿಯ ಮನೆ, ಓಣಿ ಬಿಟ್ಟು ಹೊರಗೆ ಬರಲಾರದ ಈ ವ್ಯವಸ್ಥೆಯಲ್ಲಿ ಶಿಲ್ಪಾ ನಾರನಾಳ ಈ ಕೆಲಸ  ಶ್ಲಾಘನೀಯವಾದುದು.

” ನುಡಿಯಲ್ಲಿ ಎಚ್ಚೆತ್ತು ನಡೆಯಲ್ಲಿ ತಪ್ಪಿದರೆ ಹಿಡಿದಿರ್ದ ಲಿಂಗ ಘಟಸರ್ಪ ” ಎನ್ನುವ ಶರಣರ ಎಚ್ಚರಿಕೆ ನುಡಿಯನ್ನು ಎಚ್ಚರದಿಂದ ಪಾಲಿಸಿದ್ದಾರೆ. ” ನುಡಿಗೆ ತಕ್ಕ ನಡೆ ಕಂಡಡೆ ಕೂಡಲ ಸಂಗಮದೇವನೊಳಗಿಪ್ಪನಯ್ಯಾ” ಎನ್ನುವಂತೆ ಬಸವ ತೋರಿದ ಹಾದಿಯಲ್ಲಿ ಸಾಗಿದ್ದಾರೆ.

ಹನುಮೇಶ ಈಗ ಹೈಕೋರ್ಟನಲ್ಲಿ ವಕೀಲರಾಗಿದ್ದು ಅವರೊಬ್ಬ ಬಸವಣ್ಣನ ಅನುಯಾಯಿಗಳಾಗಿ ತಮ್ಮ ಬದುಕಿನ ಪ್ರತಿಯೊಂದು ನಿರ್ಧಾರಗಳನ್ನು ಬಸವಣ್ಣನ ಆಶಯದಂತೆ ಮಾಡುತ್ತಿದ್ದಾರೆ. “ಜನ ಮೆಚ್ಚಿ ಶುದ್ದನಲ್ಲದೆ ಮನ ಮೆಚ್ಚಿ ಶುದ್ದನಲ್ಲವಯ್ಯಾ ” ಎನ್ನುವ ಈ ವ್ಯವಸ್ಥೆಯಲ್ಲಿ ಜನಮನ ಮೆಚ್ಚಿ ಶುದ್ದಿಯಾದ ಹನುಮೇಶ ಹೃದಯ ಶುದ್ದಿಯಾಗಿ ಬದುಕುತ್ತಿದ್ದಾರೆ.

ವೇದಿಕೆಯ ಮೇಲಿದ್ದ ಸಚಿವರಾದ ಆರ್.ಬಿ. ತಿಮ್ಮಾಪುರ ಸಹ ಮೆಚ್ಚುಗೆಯ ಮಾತುಗಳನ್ನಾಡಿ, ಸಮುದಾಯದಲ್ಲಿ ಇಂತಹ ಸಂಸ್ಕಾರದ ನಿಜಾಚರಣೆಗಳು ತುಂಬಾ ಅವಶ್ಯಕತೆ ಇದೆ. ಮಾದಿಗ ಸಮುದಾಯದ ಬದಲಾವಣೆಗೆ ಬಸವಣ್ಣ ಮತ್ತು ಶರಣರ ತತ್ವಗಳು ಬೇಕೆ ಬೇಕು ಎಂದರು.

ಒಂದು ಸಮುದಾಯದ ಆಚರಣೆಗಳು ಸಂಸ್ಕಾರಗಳು ಬದಲಾದರೆ ಮಾತ್ರ ಆ ಸಮುದಾಯ ಸಮಾಜದಲ್ಲಿ ತನ್ನದೊಂದು ಅಸ್ಥಿತ್ವ ಕಂಡುಕೊಳ್ಳುತ್ತೆ. ಇಂದು ಬಸವಣ್ಣ ಕೇರಿಗಳಿಗೆ ತಲುಪಬೇಕಿದೆ ಹಾಗಾಗಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಇಂತಹ ಹೆಜ್ಜೆ ಇಟ್ಟ ಸಹೋದರ ಹನುಮೇಶ ಗುಂಡೂರ ಅವರಿಗೆ ಪ್ರೀತಿಯ ಶರಣು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
2 Comments
  • ಶರಣಾರ್ಥಿಗಳು. ಇದೊಂದು ಮಾದರಿ ಕಾರ್ಯಕ್ರಮ. ಬಸವಣ್ಣ ಇಡೀ ಮಾನವಕುಲದ ಪ್ರತಿನಿಧಿ. ಲಿಂಗಾಯತರ ಗೋತ್ರ ಚೆನ್ನಯ್ಯನ ಗೋತ್ರ ಅನ್ನೋದನ್ನ ಮರೆಯುವಂತಿಲ್ಲ. ಕಾರ್ಯಕ್ರಮಗಳು ಆಡಂಬರಕ್ಕಿಂತ ಅರ್ಥಪೂರ್ಣವಾಗಿರಬೇಕು, ಅಲ್ಲಿ ಭಕ್ತಿ ಮತ್ತು ಭಾವಗಳ ಬೆಸುಗೆ ಇರಬೇಕು. ಈ ಕಾರ್ಯಕ್ರಮದಲ್ಲಿ ಅವು ಇವೆ. ಹಾಗಾಗಿ ಸುಂದರವಾಗಿ, ಹೃದಯ ಸ್ಪರ್ಶಿಯಾಗಿ ಮೂಡಿಬಂದಿದೆ. ನಾರಿನಾಳ ಕುಟುಂಬಕ್ಕೆ ಶರಣುಗಳು.

  • ನಿಜಕ್ಕೂ ಅನುಕರಣೀಯ ನಡೆ. ದಂಪತಿಗಳಿಗೆ ಶುಭಾಷಯಗಳು 🌹🙏

Leave a Reply

Your email address will not be published. Required fields are marked *