ಧಾರವಾಡ:
ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮಾನ್ಯಳ ಮರ್ಯಾದೆಗೇಡು ಹತ್ಯೆಯನ್ನು ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡದ ಜಿಲ್ಲಾ ಯುವ ಘಟಕ ತೀವ್ರವಾಗಿ ಖಂಡಿಸಿದೆ.
ಘಟಕದ ಪದಾಧಿಕಾರಿಗಳು ಈಚೆಗೆ ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ಭೇಟಿ ಕೊಟ್ಟು, ಸಂತ್ರಸ್ತರಿಗೆ ಧೈರ್ಯ ಹೇಳಿದ್ದಾರೆ.

ಭೇಟಿಯ ವೇಳೆ ಯುವ ಘಟಕದ ಅಧ್ಯಕ್ಷರಾದ ಸಿ. ಜಿ. ಪಾಟೀಲ ಮಾತನಾಡಿ, ಜಾತಿ ಕಾರಣಕ್ಕಾಗಿ ಹೆತ್ತ ಮಗಳಾದ ಮಾನ್ಯಳನ್ನು ಕೊಲೆ ಮಾಡಿದ ಘಟನೆಯಿಂದ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಇದನ್ನು ಮನುಷ್ಯರಾದ ನಾವೆಲ್ಲರೂ ಖಂಡಿಸಬೇಕಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಪತ್ನಿಯನ್ನು ಕಳೆದುಕೊಂಡ ನೊಂದ ವಿವೇಕಾನಂದ ದೊಡ್ಡಮನಿ ಹಾಗೂ ಅವರ ಕುಟುಂಬದ ಜತೆಗೆ ನಾವಿದ್ದೇವೆ.
ಈ ಹತ್ಯೆ ಇಡೀ ರಾಜ್ಯದ ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಜನರು ಜಾತಿ, ಮತ, ಪಕ್ಷಭೇದ ಮರೆತು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದರು.
ಇದೇ ವೇಳೆ ಅರುಣ ಮೂಡಿ ಮಾತನಾಡಿ, ನಮ್ಮ ಕರ್ನಾಟಕವು ಸಾಂಸ್ಕೃತಿಕವಾಗಿ, ವೈಚಾರಿಕವಾಗಿ, ಧಾರ್ಮಿಕವಾಗಿ ಹಲವಾರು ಮೌಲ್ಯಗಳನ್ನು ಒಳಗೊಂಡು ಅದನ್ನು ಪಾಲಿಸುವ ರಾಜ್ಯವಾಗಿದೆ.

ಈ ನಾಡಿನಲ್ಲಿ ಅನೇಕ ಶರಣರು, ಸಂತರು, ದಾಸರು, ಸಾಹಿತಿಗಳು, ಮಹನೀಯರು ಆಗಿ ಹೋಗಿದ್ದಾರೆ. ಸಂವಿಧಾನ ಬಂದು ಹಲವು ವರ್ಷಗಳು ಕಳೆದರೂ ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ದುಃಖಕರವಾದ ಸಂಗತಿ ಎಂದರು.
ಅಭಿಷೇಕ ಮಾತನಾಡಿ, ಬುದ್ಧ, ಬಸವಣ್ಣ, ಅಂಬೇಡ್ಕರ ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಸಮಾಜವು ಸಾಗಬೇಕಿತ್ತು. ಅದರ ವಿರುದ್ಧ ಮುಖ ಮಾಡಿರುವುದನ್ನು ಗಮನಿಸಿದರೆ, ನಾಗರಿಕ ಸಮಾಜಕ್ಕೆ ಧಕ್ಕೆ ತಂದಂತಾಗಿದೆ. ಈ ರೀತಿಯ ಘಟನೆಗಳಿಗೆ ಸರ್ಕಾರ, ಸಮಾಜ ತೀವ್ರ ಕಡಿವಾಣ ಹಾಕಬೇಕು ಎಂದು ಅಗ್ರಹಿಸಿದರು.
ಭೇಟಿಯ ಸಂದರ್ಭದಲ್ಲಿ ಭೀಮನಗೌಡ, ಗುರುರಾಜ ಅವರಾದಿ, ವಿರೂಪಾಕ್ಷ ಅಡರಕಟ್ಟಿ, ನಾಗರಾಜ ಕೊನ್ನೂರು ಮತ್ತಿತರ ಮುಖಂಡರು ಇದ್ದರು.
