ಚಳ್ಳಕೆರೆ:
ತಾಲ್ಲೂಕಿನ ಹಿರೇಹಳ್ಳಿಯಲ್ಲಿ ಶುಕ್ರವಾರ ರಾಷ್ಟ್ರೀಯ ಬಸವದಳದ ವತಿಯಿಂದ ಪೂಜ್ಯ ಮಾತೆ ಮಹಾದೇವಿ ಅವರ 80ನೆಯ ಹುಟ್ಟುಹಬ್ಬ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬಸವ ಗುರುಪೂಜೆ, ಪ್ರಾರ್ಥನೆಯ ನಂತರ ಪ್ರಾಸ್ತವಿಕವಾಗಿ ಪ್ರತಿಭಾ ಅವರು ಮಾತನಾಡುತ್ತ, ಪೂಜ್ಯ ಮಾತಾಜಿಯವರ ಮಾರ್ಗದರ್ಶನದಿಂದ ನಮ್ಮ ಗ್ರಾಮದ ಬಸವ ಭವನದಲ್ಲಿ ಪ್ರತಿನಿತ್ಯ ಸಾಮೂಹಿಕ ಪ್ರಾರ್ಥನೆ, ಪೂಜೆ ನಡೆದುಕೊಂಡು ಬರುತ್ತಿರುವುದಲ್ಲದೆ, ನಮ್ಮೆಲ್ಲರಿಗೂ ಲಿಂಗಾಯತ ಧರ್ಮ ಸಂಸ್ಕಾರ ಸಿಗಲು ಸಾಧ್ಯವಾಗಿದೆ.
ಮಾತಾಜಿಯವರು ಲಿಂಗಾಯತ ಧರ್ಮದ ಪುನಃರುತ್ಥಾನಕರು. ಅವರು ಬಸವ ಕಾರುಣ್ಯದಿಂದ ಅವತರಿಸಿ ಜಗದ್ಗುರುಗಳಾದರು. ಗುರು ಕಾರುಣ್ಯದಿಂದ ನಾವುಗಳು ಸಂಸ್ಕಾರವಂತರಾದೆವು ಎಂದು ನುಡಿನಮನ ಸಲ್ಲಿಸಿದರು.

ರಾಬದಳದ ಜಿಲ್ಲಾ ಅಧ್ಯಕ್ಷರಾದ ವೆಂಕಟೇಶರೆಡ್ಡಿ ಲಿಂಗಾಯತ ಮಾತನಾಡಿ, ಮಾತಾಜಿಯವರ ಹುಟ್ಟು, ಜನಸಾಮಾನ್ಯರ ಬದುಕಿಗೆ ಸತ್ಯದ ಅರಿವನ್ನು ಮೂಡಿಸಿ ಅಜ್ಞಾನದ ಮೌಢ್ಯ ಗಳನ್ನು ಬದಿಗೊತ್ತುವಂತೆ ಮಾಡಿತು.
ಅವರ ದಿಟ್ಟ ನಿಲುವಿನಿಂದಾಗಿ ಲಿಂಗಾಯತ ಧರ್ಮದ ಏಕದೇವೋಪಾಸನೆಗೆ ನಮ್ಮನ್ನೆಲ್ಲ ಕರೆತಂದಿತು. ಸತ್ಯದ ನಿಲುವಿಗೆ ಎದೆಗೊಟ್ಟುನಿಲ್ಲುತ್ತಿದ್ದ ಮಾತಾಜಿಯವರು ನಮಗೆ ಪ್ರವಚನದ ಮೂಲಕ ಅಮೃತವನ್ನು ಉಣಿಸಿದರು ಎಂದರು.

ರೇಣುಕಾಪುರದ ಅಮರೇಶ ಮಾತನಾಡಿ, ಗುರುವಿನಿಂದ ಅರಿವನ್ನು ಪಡೆದು ಅದನ್ನು ಆಚಾರದಲ್ಲಿ ಕಾರ್ಯರೂಪಕ್ಕೆ ತರಬೇಕಾದರೆ ನಾವು ಮಾತಾಜಿಯವರ ಅಣತಿಯಂತೆ ಪ್ರತಿನಿತ್ಯ ಇಷ್ಟಲಿಂಗಪೂಜೆ ಮಾಡಿದರೆ ಮಾತ್ರ ಪ್ರಜ್ಞಾವಂತರು, ಧರ್ಮವಂತರು ಆಗಬಹುದು ಎಂದರು.
ವಚನ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಯಶೋದಮ್ಮ ಯರ್ರಿಸ್ವಾಮಿ ಅನ್ನದಾಸೋಹ ಸೇವೆ ಮಾಡಿದರು. ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.
