ಬೀದರ್
2023ನೇ ಸಾಲಿನ ರಾಜ್ಯಮಟ್ಟದ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರಿಗೆ ಶನಿವಾರ ನೀಡಲಾಯಿತು.
ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ನೀಡುವ ಪ್ರಶಸ್ತಿಯು ₹50 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಫಲಕ ಒಳಗೊಂಡಿದೆ. ಪ್ರೊ. ಬಿ.ಎಸ್. ಬಿರಾದಾರ ಅವರು ಸ್ವಾಮೀಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಬಸವತತ್ವದ ಪ್ರಚಾರ, ಪ್ರಸಾರವೇ ನನ್ನ ಜೀವನದ ಗುರಿ. ಈ ಪ್ರಶಸ್ತಿಯನ್ನು ನನ್ನ ದೀಕ್ಷಾ ಗುರುಗಳಾದ ಚನ್ನಬಸವ ಪಟ್ಟದ್ದೇವರ ಪಾದಕ್ಕೆ ಸಮರ್ಪಿಸುತ್ತೇನೆ ಎಂದು ಹೇಳಿದರು. “ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ಬಸವತತ್ವದ ಪ್ರಚಾರಕ್ಕಾಗಿ ಶ್ರಮಿಸುತ್ತೇನೆ,” ಎಂದರು.
ಶ್ರೀಮಂತಿಕೆ ಇದ್ದರೂ ಮಾಗನೂರು ಬಸಪ್ಪನವರು ತಮ್ಮ ಮನೆಯ ಕೊಟ್ಟಿಗೆಯ ಸಗಣಿ ತೆಗೆದು, ಪ್ರಾತಃ ಕಾಲದಲ್ಲಿ ಬಸವಸ್ತೋತ್ರಗಳನ್ನು ಪಠಿಸಿ, ನಿತ್ಯ ಲಿಂಗಪೂಜೆ ಮಾಡುತ್ತಿದ್ದರು ಎಂದು ಹೇಳಿದರು.
ವೇದಿಕೆಯ ಮೇಲಿದ್ದ ಗಣ್ಯರು ಬಸವಲಿಂಗ ಪಟ್ಟದ್ದೇವರು ಹಾಗೂ ಮಾಗನೂರು ಬಸಪ್ಪ ಅವರು ಸಮಾಜಕ್ಕೆ ಕೊಟ್ಟಿರುವ ಕೊಡುಗೆಗಳನ್ನು ಸ್ಮರಿಸಿ ಮೆಚ್ಚುಗೆಯ ಮಾತುಗಳನ್ನು ಆಡಿದರು.