ಚಾಮರಾಜನಗರ
ಫೆಬ್ರವರಿ 25ರಿಂದ ಐದು ದಿನಗಳ ಕಾಲ ನಡೆಯಲಿರುವ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಟ್ಟಕ್ಕೆ ಲಕ್ಷಾಂತರ ಜನರು ಪಾದಯಾತ್ರೆಯ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
ಶುಕ್ರವಾರದಿಂದಲೇ ಬಾರೀ ಸಂಖ್ಯೆಯಲ್ಲಿ ಕನಕಪುರ, ರಾಮನಗರ, ಬಿಡದಿ, ಚನ್ನಪಟ್ಟಣ ಗ್ರಾಮದವರು ಕಾವೇರಿ ನದಿ ಸಂಗಮದ ಮೂಲಕ ಆಗಮಿಸುತ್ತಿದ್ದಾರೆ. ಇದಲ್ಲದೇ ಮಂಡ್ಯ ಜಿಲ್ಲೆಯ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ಮೂಲಕ ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ.

ಮಹದೇಶ್ವರಬೆಟ್ಟದ ಬೇಡಗಂಪಣ ಅರ್ಚಕರು ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕಾಗಿ ವಿಶೇಷ ರಥ ನಿರ್ಮಾಣ ಮಾಡಿದ್ದಾರೆ. ಬಿದಿರು ಹಾಗೂ ಉರಿಯ ಹಗ್ಗಗಳಿಂದ ರಥವನ್ನು ನಿರ್ಮಾಣ ಮಾಡಲಾಗಿದ್ದು, ವಸ್ತ್ರಧಾರಣೆ ನಡೆದಿದೆ. ಆಕರ್ಷಕವಾಗಿ ತೇರು ಕಂಗೊಳಿಸುತ್ತಿದೆ.
ದೇವಾಲಯ ಹಾಗೂ ಸುತ್ತಮುತ್ತ ಕಣ್ಮನಸೆಳೆಯುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈಗಾಗಲೇ ಜಾತ್ರೆ ಪ್ರಯುಕ್ತ ಕಾಲ್ನಡಿಗೆ ಹಾಗೂ ವಾಹನಗಳ ಮೂಲಕ ಬಂದಿರುವ ಭಕ್ತರು ದೇಗುಲದ ಪ್ರಾಂಗಣ, ಸಾಲೂರು ಬೃಹನ್ಮಠ ಹಾಗೂ ಇನ್ನಿತರ ಖಾಲಿ ಜಾಗಗಳಲ್ಲಿ ಬಿಡಾರ ಹೂಡಿದ್ದಾರೆ.
ಮಾರ್ಚ್ 1ರಂದು ಬೆಳಿಗ್ಗೆ 8.10 ರಿಂದ 8.45ರ ನಡುವಿನ ಅವಧಿಯಲ್ಲಿ ಶಿವರಾತ್ರಿ ಮಹಾರಥೋತ್ಸವ ಪ್ರಾರಂಭವಾಗಲಿದ್ದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.

ದೇವರ ಗುಡ್ಡರು, ಮಹದೇಶ್ವರ ಭಕ್ತರು ಕಂಸಾಳೆ ಬಾರಿಸುತ್ತಾ, ಯುವಕರು ತಮಟೆ ಬಾರಿಸುತ್ತ ಅಲ್ಲಲ್ಲಿ ಕುಣಿದು ಕುಪ್ಪಳಿಸುತ್ತಾ ಆಗಮಿಸುತ್ತಿದ್ದಾರೆ. ವಯೋವೃದ್ಧರು ಮಾದಪ್ಪನ ಹಾಡುಗಳನ್ನು ಹಾಡಿಕೊಂಡು ‘ಉಘೇ ಮಾದಪ್ಪ, ಉಘೇ ಮಾಯಕಾರ’ ಎಂದು ಘೋಷಣೆ ಕೂಗಿ ಭಕ್ತಿ ಭಾವದಿಂದ ತೆರಳುತ್ತಿರುವುದು ಸಾಮಾನ್ಯವಾಗಿದೆ.
ಅಗತ್ಯ ಸಿದ್ಧತೆ
ಐದು ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಲು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಕ್ತರಿಗೆ ವಿಶೇಷ ದಾಸೋಹ ವ್ಯವಸ್ಥೆ, ರಾಜಗೋಪುರದ ಮುಂಭಾಗ ಹಾಗೂ ಸರದಿ ಸಾಲಿನ ಕಡೆ ನೆರಳಿನ ವ್ಯವಸ್ಥೆ ಮಾಡಲಾಗಿದೆ.
ದರ್ಶನ ಮಾಡುವ ವೇಳೆ ಭಕ್ತರ ನೂಕ ನುಗ್ಗಲು ತಡೆಗಟ್ಟಲು ಹೆಚ್ಚುವರಿ ಸರತಿ ಸಾಲುಗಳನ್ನು ನಿರ್ಮಾಣ ಮಾಡಿ ಪ್ರಸಾದ ವಿನಿಯೋಗಕ್ಕೆ ಹೆಚ್ಚುವರಿ ಲಾಡು ಕೌಂಟರ್‌ಗಳನ್ನು ತೆರೆಯಲಾಗಿದೆ. ವಿವಿಧ ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ಮತ್ತು ಅಗತ್ಯ ಸೌಕರ್ಯ ಒದಗಿಸಲಾಗಿದೆ.

ವಿಶೇಷವಾಗಿ ಭಕ್ತರ ಅನುಕೂಲಕ್ಕಾಗಿ 500 ಬಸ್‌ಗಳು ಸಂಚಾರ ಮಾಡಲಿವೆ. ಜಾತ್ರೆಯ ಅವಧಿಯಲ್ಲಿ ಮಹದೇಶ್ವರಬೆಟ್ಟಕ್ಕೆ ದ್ವಿ-ಚಕ್ರ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ತಹಸೀಲ್ದಾರ್ ಮೊಕ್ಕಾಂ
ಕನಕಪುರ ತಹಸೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಕಂದಾಯ, ಅರಣ್ಯ, ಗ್ರಾಮ ಪಂಚಾಯಿತಿ, ಅಗ್ನಿಶಾಮಕ, ಪೊಲೀಸ್ ಇಲಾಖೆ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಿಬ್ಬಂದಿಗಳು ಸ್ಥಳದಲ್ಲಿಯೇ ಇದ್ದು ಅಗತ್ಯ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಇದಲ್ಲದೆ ನೀರಿನಲ್ಲಿ ನಡೆದುಕೊಂಡು ಹೋಗುವುದರಿಂದ ಯಾವುದೇ ಅನಾಹುತಗಳು ಸಂಭವಿಸದಿರಲಿ ಎಂಬ ಮುಂಜಾಗ್ರತೆಯಿಂದ ಎಸ್‌ಟಿಆರ್‌ಎಫ್, ಎನ್‌ಡಿಆರ್ ಎಫ್ ತಂಡದ ಸಿಬ್ಬಂದಿ ಬೊಮ್ಮಸಂದ್ರದ ಬಳಿಯೇ ಠಿಕಾಣಿ ಹೂಡಿದ್ದಾರೆ.

ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಬೊಮ್ಮಸಂದ್ರದಿಂದ ನದಿ ಮೂಲಕ ನಡೆದುಕೊಂಡು ಬರುತ್ತಿರುವ ಪಾದಯಾತ್ರಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಡ ಹಾಗೂ ಬಲಬದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ ಹಿಡಿದುಕೊಂಡಿದ್ದು ಮಧ್ಯದಲ್ಲಿ ಪಾದಯಾತ್ರಿಕರನ್ನು ಸುರಕ್ಷಿತವಾಗಿ ದಾಟಿಸುತ್ತಿದ್ದಾರೆ.
ನದಿ ನೀರಿನ ಹರಿವು ಕಡಿಮೆ
ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಿಕರು ಆಗಮಿಸುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾವೇರಿ ನದಿಯ ನೀರಿನ ಪ್ರಮಾಣ ಕಡಿಮೆ ಮಾಡುವುದು, ಆ ಮಾರ್ಗದಲ್ಲಿ ಕಾಡುಪ್ರಾಣಿಗಳಿಂದ ರಕ್ಷಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಮನಗರ ಜಿಲ್ಲಾಧಿಕಾರಿಗಳಿಗೆ ಜನವರಿ 28ರಂದು ಪತ್ರ ಬರೆದು ಸೂಚನೆ ನೀಡಿದ್ದರು.
